India vs Sri Lanka 2nd T20: ಕೃನಾಲ್ ಪಾಂಡ್ಯ ಸ್ಥಾನದಲ್ಲಿ ಕನ್ನಡಿಗನಿಗೆ ಸಿಗಲಿದೆ ಚಾನ್ಸ್​?

TV9 Digital Desk

| Edited By: Zahir Yusuf

Updated on: Jul 27, 2021 | 10:27 PM

India vs Sri Lanka 2nd T20: ಮೂರನೇ ಏಕದಿನ ಪಂದ್ಯದ ಮೂಲಕ ನಿತೀಶ್ ರಾಣಾ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಎಡಗೈ ದಾಂಡಿಗ ಕೇವಲ 7 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

India vs Sri Lanka 2nd T20: ಕೃನಾಲ್ ಪಾಂಡ್ಯ ಸ್ಥಾನದಲ್ಲಿ ಕನ್ನಡಿಗನಿಗೆ ಸಿಗಲಿದೆ ಚಾನ್ಸ್​?
Krunal Pandya

ಭಾರತ-ಶ್ರೀಲಂಕಾ ನಡುವಿನ ಟಿ20 ಸರಣಿಯ 2ನೇ ಪಂದ್ಯ ಕೊರೋನಾಂತಕದಿಂದ ಮುಂದೂಡಲ್ಪಟ್ಟಿದೆ. ಟೀಮ್ ಇಂಡಿಯಾದ ಆಲ್ ರೌಂಡರ್ ಕೃನಾಲ್ ಪಾಂಡ್ಯಗೆ ಕೋವಿಡ್ ಪಾಸಿಟಿವ್ ಆಗಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ನಡೆಯಬೇಕಿದ್ದ 2ನೇ ಟಿ20 ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಗಿದೆ. ಅಷ್ಟೇ ಅಲ್ಲದೆ ಉಭಯ ತಂಡಗಳ ಆಟಗಾರರನ್ನು ಐಸೋಲೇಷನ್​ಗೆ ಒಳಪಡಿಸಲಾಗಿದೆ. ಪಂದ್ಯಕ್ಕೂ ಮುನ್ನ ನಡೆಸಿದ ರ್ಯಾಪಿಡ್ ಅ್ಯಂಟಿ ಜೆನ್ ಟೆಸ್ಟ್​ನಲ್ಲಿ ಕೃನಾಲ್ ಪಾಂಡ್ಯ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ. ಇದೀಗ ಟೀಮ್ ಇಂಡಿಯಾದ ಎಲ್ಲಾ ಆಟಗಾರರನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಆರ್‌ಟಿ-ಪಿಸಿಆರ್ ಪರೀಕ್ಷೆಗಳಲ್ಲಿ ಆಟಗಾರರ ಕೊರೋನಾ ಫಲಿತಾಂಶ ನೆಗೆಟಿವ್ ಬಂದರೆ ಸರಣಿಯ ಉಳಿದಿರುವ ಎರಡು ಪಂದ್ಯಗಳನ್ನು ಬುಧವಾರ ಮತ್ತು ಗುರುವಾರ ಬ್ಯಾಕ್ ಟು ಬ್ಯಾಕ್ ನಡೆಸಲು ನಿರ್ಧರಿಸಲಾಗಿದೆ.

ಇತ್ತ ಕೊರೋನಾ ಸೋಂಕಿಗೆ ಒಳಗಾಗಿರುವ ಕಾರಣ 2ನೇ ಟಿ20 ಪಂದ್ಯಕ್ಕೆ ಕೃನಾಲ್ ಪಾಂಡ್ಯ ಅಲಭ್ಯರಾಗುವುದು ಬಹುತೇಕ ಖಚಿತ. ಹೀಗಾಗಿ ಅವರ ಸ್ಥಾನದಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬ ಚರ್ಚೆಗಳು ಶುರುವಾಗಿದೆ. ಈ ಪಟ್ಟಿಯಲ್ಲಿ ಮೂವರು ಆಟಗಾರರ ಹೆಸರು ಮುಂಚೂಣಿಯಲ್ಲಿದ್ದು, ಅದರಲ್ಲಿ ಕನ್ನಡಿಗ ಕೂಡ ಇರುವುದು ವಿಶೇಷ. ಅವರುಗಳು ಯಾರೆಂದರೆ…

ನಿತೀಶ್ ರಾಣಾ: ಮೂರನೇ ಏಕದಿನ ಪಂದ್ಯದ ಮೂಲಕ ನಿತೀಶ್ ರಾಣಾ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಎಡಗೈ ದಾಂಡಿಗ ಕೇವಲ 7 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು ಮೂರು ಓವರ್​ಗಳನ್ನು ಎಸೆದರೂ ವಿಕೆಟ್ ಸಿಕ್ಕಿರಲಿಲ್ಲ. ಇದಾಗ್ಯೂ ಟಿ20 ಕ್ರಿಕೆಟ್​ನಲ್ಲಿ ರಾಣಾ ಉತ್ತಮ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಇದಕ್ಕೆ ಸಾಕ್ಷಿಯೇ ಐಪಿಎಲ್​ನಲ್ಲಿನ ಅಬ್ಬರ ಕೋಲ್ಕತಾ ನೈಟ್ ರೈಡರ್ಸ್‌ ಪರ ಆಡುತ್ತಿರುವ ರಾಣಾ ಈ ಬಾರಿಯ ಐಪಿಎಲ್​ನ ಮೊದಲಾರ್ಧದಲ್ಲಿ 80 ಮತ್ತು 57 ರನ್ ಬಾರಿಸಿ ಮಿಂಚಿದ್ದರು. ಹೀಗಾಗಿ ಕೃನಾಲ್ ಪಾಂಡ್ಯ ಸ್ಥಾನದಲ್ಲಿ ಅಂತಿಮ ಓವರ್​ಗಳಲ್ಲಿನ ಬಿಗ್ ಹಿಟ್ಟರ್​ ಆಗಿ ರಾಣಾ ಅವರನ್ನು ಟೀಮ್ ಇಂಡಿಯಾ ಕಣಕ್ಕಿಳಿಸಬಹುದು.

ರಾಹುಲ್ ಚಹರ್: ಕೃನಾಲ್ ಪಾಂಡ್ಯರ ಅವರ ಸ್ಥಾನದಲ್ಲಿ ಲೆಗ್ ಸ್ಪಿನ್ನರ್​ನ ಕಣಕ್ಕಿಳಿಸಲು ಬಯಸಿದರೆ ರಾಹುಲ್ ಚಹರ್​ಗೆ ಅವಕಾಶ ಸಿಗಲಿದೆ. ಏಕೆಂದರೆ 3ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಚಹರ್3 ವಿಕೆಟ್ ಉರುಳಿಸಿ ಮಿಂಚಿದ್ದರು. ಅಷ್ಟೇ ಅಲ್ಲದೆ ಈ ಬಾರಿ ಮುಂಬೈ ಇಂಡಿಯನ್ಸ್ ಪರ 7 ಪಂದ್ಯಗಳಿಂದ 11 ವಿಕೆಟ್ ಪಡೆದಿದ್ದರು. ಹೀಗಾಗಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್​ ಆಲ್​ರೌಂಡರ್ ಸ್ಥಾನದಲ್ಲಿ ಸ್ಪಿನ್ನರ್​ಗೆ ಅವಕಾಶ ನೀಡಲು ಮುಂದಾದರೆ ಚಹರ್​ಗೆ ಸ್ಥಾನ ಲಭಿಸಲಿದೆ.

ಕೃಷ್ಣಪ್ಪ ಗೌತಮ್: ಕರ್ನಾಟಕದ ಆಲ್​​ರೌಂಡರ್ ಕೃಷ್ಣಪ್ಪ ಗೌತಮ್ ಕೂಡ ಟೀಮ್ ಇಂಡಿಯಾ ಟಿ20 ಪರ ಪದಾರ್ಪಣೆ ಮಾಡುವ ಸಾಧ್ಯತೆಯಿದೆ. ಆಫ್-ಸ್ಪಿನ್ನಿಂಗ್ ಆಲ್‌ರೌಂಡರ್ ಆಗಿರುವ ಗೌತಮ್ ಚೊಚ್ಚಲ ಏಕದಿನ ಪಂದ್ಯದಲ್ಲಿ 2 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಇದಾಗ್ಯೂ ಬೌಲಿಂಗ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡಿ 1 ವಿಕೆಟ್ ಪಡೆದಿದ್ದರು. ಆರ್​. ಪ್ರೇಮದಾಸ ಮೈದಾನದ ಪಿಚ್​ ಸ್ಪಿನ್​ ಬೌಲಿಂಗ್​ಗೆ ಸಹಕಾರಿಯಾಗಿದ್ದು, ಹೀಗಾಗಿ ಕೃನಾಲ್ ಪಾಂಡ್ಯ ಅವರ ಸ್ಥಾನದಲ್ಲಿ ಸಂಪೂರ್ಣ ಆಲ್​ರೌಂಡರ್ ಆಗಿ ಕೃಷ್ಣಪ್ಪ ಗೌತಮ್ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: Dhananjay: ಡೇಂಜರಸ್ ಡಾಲಿ ಇಸ್ ಬ್ಯಾಕ್: ಹೊಸ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

ಇದನ್ನೂ ಓದಿ: Rahul Dravid: ಶ್ರೀಲಂಕಾ ನಾಯಕನ ಜೊತೆ ರಾಹುಲ್ ದ್ರಾವಿಡ್ ಮಾತನಾಡಿದ್ದೇನು? ಇಲ್ಲಿದೆ ಉತ್ತರ

( India vs Sri Lanka 2nd T20: Who Can Replace Krunal Pandya In The T20 Series )

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada