World Cup 2025: 12-0.. ಪಾಕಿಸ್ತಾನದ ವಿರುದ್ಧ ಅಜೇಯ ಓಟ ಮುಂದುವರೆಸಿದ ಭಾರತ
India Women Beat Pakistan by 88 Runs: ಕೊಲಂಬೊದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ವನಿತಾ ಕ್ರಿಕೆಟ್ ತಂಡ ಪಾಕಿಸ್ತಾನವನ್ನು 88 ರನ್‌ಗಳಿಂದ ಭರ್ಜರಿಯಾಗಿ ಮಣಿಸಿದೆ. ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಟೀಮ್ ಇಂಡಿಯಾ 247 ರನ್ ಗಳಿಸಿ, ಪಾಕ್ ತಂಡವನ್ನು 159 ರನ್‌ಗಳಿಗೆ ಆಲೌಟ್ ಮಾಡಿತು. ಇದು ಪಾಕಿಸ್ತಾನದ ವಿರುದ್ಧ ಭಾರತದ 12ನೇ ಸತತ ಗೆಲುವಾಗಿದ್ದು, ಟೂರ್ನಿಯಲ್ಲಿ ಭಾರತದ ಅಜೇಯ ಓಟವನ್ನು ಮುಂದುವರೆಸಿದೆ.

ಅಕ್ಟೋಬರ್ 5 ರ ಭಾನುವಾರ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್‌ನ ಆರನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ಮುಖಾಮುಖಿಯಾಗಿದ್ದವು. ಈ ಪಂದ್ಯದವನ್ನು ಹರ್ಮನ್‌ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಭಾರತ ವನಿತಾ ಪಡೆ ಬರೋಬ್ಬರಿ 88 ರನ್‌ಗಳಿಂದ ಗೆದ್ದುಕೊಂಡಿತು. ಈ ಮೂಲಕ ಟೀಂ ಇಂಡಿಯಾ, ಪಾಕಿಸ್ತಾನದ ವಿರುದ್ಧ ತನ್ನ ಅಜೇಯ ಓಟವನ್ನು ಮುಂದುವರೆಸಿತು. ಇದು ಪಾಕಿಸ್ತಾನದ ವಿರುದ್ಧ ಭಾರತದ ಸತತ 12ನೇ ಜಯವಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 247 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಪೂರ್ಣ 50 ಓವರ್ಗಳನ್ನು ಆಡಲು ಸಾಧ್ಯವಾಗದೆ 43 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು ಕೇವಲ 159 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದರೆ, ಇತ್ತ ಪಾಕಿಸ್ತಾನ ಸತತ 2ನೇ ಸೋಲಿಗೆ ಕೊರಳೊಡ್ಡಿತು.
ಭಾರತಕ್ಕೆ ಕಳಪೆ ಆರಂಭ
ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಬ್ಯಾಟಿಂಗ್ ಮಾಡಿದ ಭಾರತ ತಂಡ 50 ಓವರ್‌ಗಳಲ್ಲಿ 247 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಅಷ್ಟೇನೂ ಉತ್ತಮವಾಗಿರಲಿಲ್ಲ, ಯಾವುದೇ ಆಟಗಾರ್ತಿಗೆ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ. ಹರ್ಲೀನ್ ಡಿಯೋಲ್ ಭಾರತ ಪರ ಅತಿ ಹೆಚ್ಚು 46 ರನ್ ಗಳಿಸಿದರು. ಅವರು 65 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು.
ಕೊನೆಯಲ್ಲಿ ಮಿಂಚಿದ ರಿಚಾ ಘೋಷ್
ಹರ್ಲೀನ್ ಜೊತೆಗೆ, ಜೆಮಿಮಾ ರೊಡ್ರಿಗಸ್ 32, ಪ್ರತೀಕಾ ರಾವಲ್ 31, ಸ್ಮೃತಿ ಮಂಧಾನ 23, ದೀಪ್ತಿ ಶರ್ಮಾ 25, ಸ್ನೇಹ ರಾಣಾ 20, ನಾಯಕಿ ಹರ್ಮನ್‌ಪ್ರೀತ್ ಕೌರ್ 19, ಕ್ರಾಂತಿ ಗೌರ್ 8, ಮತ್ತು ಶ್ರೀ ಚಾರ್ನಿ 1 ರನ್ ಗಳಿಸಿದರು. ರಿಚಾ ಘೋಷ್ 20 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಸೇರಿದಂತೆ 35 ರನ್ ಗಳಿಸಿ ಅಜೇಯರಾಗುಳಿದರು. ಪಾಕಿಸ್ತಾನ ಪರ ಡಯಾನಾ ಬೇಗ್ ನಾಲ್ಕು ವಿಕೆಟ್ ಪಡೆದರೆ, ಸಾದಿಯಾ ಇಕ್ಬಾಲ್ ಮತ್ತು ನಾಯಕಿ ಫಾತಿಮಾ ಸನಾ ತಲಾ ಎರಡು ವಿಕೆಟ್ ಪಡೆದರು. ರಮೀನ್ ಶಮಿಮ್ ಮತ್ತು ನಶ್ರಾ ಸಂಧು ತಲಾ ಒಂದು ವಿಕೆಟ್ ಪಡೆದರು.
World Cup 2025: ಪಿಚ್ ತುಂಬ ಆವರಿಸಿದ ಹೊಗೆ; 15 ನಿಮಿಷ ನಿಂತ ಭಾರತ- ಪಾಕ್ ಪಂದ್ಯ
ಪಾಕ್ ಪರ ಏಕಾಂಗಿ ಹೋರಾಟ ನೀಡಿದ ಸಿದ್ರಾ
247 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಮಹಿಳಾ ತಂಡವು ಕಳಪೆ ಆರಂಭವನ್ನು ಕಂಡಿತು. ಕೇವಲ 26 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಸಿದ್ರಾ ಅಮೀನ್ ಮತ್ತು ನಟಾಲಿಯಾ ಪರ್ವೇಜ್ ನಾಲ್ಕನೇ ವಿಕೆಟ್‌ಗೆ 69 ರನ್‌ಗಳನ್ನು ಸೇರಿಸುವ ಮೂಲಕ ತಂಡದ ಇನ್ನಿಂಗ್ಸ್ಗೆ ಜೀವ ತುಂಬಲು ಪ್ರಯತ್ನಿಸಿದರು. ಆದರೆ ನಟಾಲಿಯಾ ಔಟಾದ ನಂತರ ಪಾಕಿಸ್ತಾನದ ಇನ್ನಿಂಗ್ಸ್ ಸಂಪೂರ್ಣವಾಗಿ ಕುಸಿಯಿತು. ಪಾಕ್ ಪರ ಏಕಾಂಗಿ ಹೋರಾಟ ನೀಡಿದ ಸಿದ್ರಾ ಅಮೀನ್ 106 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್‌ಗಳೊಂದಿಗೆ 81 ರನ್ ಗಳಿಸಿದರು.
ಉಳಿದವರಿಂದ ಯಾವುದೇ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರಲಿಲ್ಲ. ಹೀಗಾಗಿ ಇಡೀ ತಂಡವು 43 ಓವರ್‌ಗಳಲ್ಲಿ 159 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿತು. ಟೀಮ್ ಇಂಡಿಯಾ ಪರ, ಕ್ರಾಂತಿ ಗೌಡ್ 10 ಓವರ್‌ಗಳಲ್ಲಿ ಮೂರು ಮೇಡನ್ ಸೇರಿದಂತೆ ಕೇವಲ 20 ರನ್‌ಗಳಿಗೆ ಮೂರು ವಿಕೆಟ್ ಪಡೆದರು. ಕ್ರಾಂತಿ ಗೌಡ್ ಜೊತೆಗೆ ದೀಪ್ತಿ ಶರ್ಮಾ ಕೂಡ ಮೂರು ವಿಕೆಟ್‌ಗಳನ್ನು ಪಡೆದರು . ಸ್ನೇಹ್ ರಾಣಾ ಎರಡು ವಿಕೆಟ್‌ಗಳನ್ನು ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:54 pm, Sun, 5 October 25




