Glenn Maxwell: ಗ್ಲೆನ್ ಮ್ಯಾಕ್ಸ್ವೆಲ್ಗೆ ಶೇ.25 ರಷ್ಟು ದಂಡ, ಒಂದು ಪಾಯಿಂಟ್
IPL 2025 PBKS vs CSK: ಚಂಡೀಗಢ್ನ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 219 ರನ್ ಕಲೆಹಾಕಿದರೆ, ಈ ಗುರಿಯನ್ನು ಚೇಸ್ ಮಾಡಿದ ಸಿಎಸ್‌ಕೆ 201 ರನ್ ಮಾತ್ರ ಗಳಿಸಿತು.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ 2025 ರ 22ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಅವರ ವರ್ತನೆಗೆ ಮ್ಯಾಚ್ ರೆಫರಿ ದಂಡದ ಶಿಕ್ಷೆ ವಿಧಿಸಿದ್ದಾರೆ. ಈ ಪಂದ್ಯದ ವೇಳೆ ಅನುಚಿತವಾಗಿ ವರ್ತಿಸಿದ್ದ ಮ್ಯಾಕ್ಸ್ವೆಲ್ಗೆ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಲಾಗಿದೆ. ಅಲ್ಲದೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಿದ್ದಾರೆ.
ಐಪಿಎಲ್ ಬಿಡುಗಡೆ ಮಾಡಿದ ಮಾಧ್ಯಮ ವರದಿ ಪ್ರಕಾರ, ಪಂದ್ಯದ ವೇಳೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮ್ಯಾಕ್ಸ್‌ವೆಲ್ ಈ ಶಿಕ್ಷೆಯನ್ನು ನೀಡಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಮ್ಯಾಕ್ಸಿ ಕೆಲ ನಿಯಮಗಳನ್ನು ಉಲ್ಲಂಘಿಸಿದ್ದ್ದು, ಹೀಗಾಗಿ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ಹಾಗೂ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಿರುವುದಾಗಿ ತಿಳಿಸಿದ್ದಾರೆ.
ಈ ಘಟನೆಯ ನಂತರ, ಗ್ಲೆನ್ ಮ್ಯಾಕ್ಸ್‌ವೆಲ್ ಲೆವೆಲ್ 1 ಅಪರಾಧವನ್ನು ಮತ್ತು ನೀತಿ ಸಂಹಿತೆ 2.2 ಅನ್ನು ಉಲ್ಲಂಘಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ಇದು ಪಂದ್ಯಗಳ ಸಮಯದಲ್ಲಿ ಫಿಕ್ಸ್ಚರ್‌ಗಳು ಮತ್ತು ಫಿಟ್ಟಿಂಗ್‌ಗಳ ದುರುಪಯೋಗಕ್ಕೆ ಸಂಬಂಧಿಸಿದ್ದಾಗಿದ್ದು, ಹೀಗಾಗಿ ಮ್ಯಾಚ್ ರೆಫರಿ ಮ್ಯಾಕ್ಸ್‌ವೆಲ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲೂ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟ್ನಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಕ್ಸ್‌ವೆಲ್ ಅವರನ್ನು ಕೇವಲ 1 ರನ್ಗೆ ಔಟ್ ಮಾಡುವಲ್ಲಿ ಸಿಎಸ್‌ಕೆ ತಂಡದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಯಶಸ್ವಿಯಾಗಿದ್ದರು. ಇದಾಗ್ಯೂ ಬೌಲಿಂಗ್ ಮೂಲಕ ಗ್ಲೆನ್ ಮ್ಯಾಕ್ಸ್‌ವೆಲ್ ಪಂಜಾಬ್ ಕಿಂಗ್ಸ್ ತಂಡದ ಗೆಲುವಿಗೆ ಕೊಡುಗೆ ನೀಡಿದ್ದಾರೆ.
ಎರಡು ಓವರ್ಗಳನ್ನು ಎಸೆದಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 11 ರನ್ ನೀಡುವ ಮೂಲಕ ರಚಿನ್ ರವೀಂದ್ರ ಅವರ ವಿಕೆಟ್ ಪಡೆದಿದ್ದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದರು.
ಇನ್ನು ಈ ಪಂದ್ಯದ ಬಗ್ಗೆ ಹೇಳುವುದಾದರೆ, ಪಂಜಾಬ್ ಕಿಂಗ್ಸ್ ತಂಡವು ಸಿಎಸ್‌ಕೆ ತಂಡವನ್ನು 18 ರನ್‌ಗಳಿಂದ ಮಣಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಪರ ಪ್ರಿಯಾಂಶ್ ಆರ್ಯ (103) ಭರ್ಜರಿ ಶತಕ ಸಿಡಿಸಿದ್ದರು.
ಇದನ್ನೂ ಓದಿ: IPL 2025: ಗೆಲುವಿನ ಬೆನ್ನಲ್ಲೇ RCB ನಾಯಕ ರಜತ್ ಪಾಟಿದಾರ್ಗೆ ದಂಡ ವಿಧಿಸಿದ ಬಿಸಿಸಿಐ
ಈ ಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 219 ರನ್ ಗಳಿಸಿತು . ಇದಕ್ಕೆ ಉತ್ತರವಾಗಿ ಸಿಎಸ್‌ಕೆ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 201 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡವು ಸಿಎಸ್‌ಕೆ ವಿರುದ್ಧ ಗೆಲುವು ದಾಖಲಿಸಿದೆ.