SRH vs MI: ನಮ್ಮ ಗೆಲುವಿನ ಸೀಕ್ರೆಟ್ ಏನೆಂದರೆ….!
IPL 2025: ಮುಂಬೈ ಇಂಡಿಯನ್ಸ್ (Mumbai Indians) ತಂಡವು ಬ್ಯಾಕ್ ಟು ಬ್ಯಾಕ್ ಗೆಲುವುಗಳ ಮೂಲಕ ಇದೀಗ ಐಪಿಎಲ್ 2025ರ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಇನ್ನೂ 5 ಪಂದ್ಯಗಳಿದ್ದು, ಈ ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದರೆ ಪ್ಲೇಆಫ್ಗೆ ಪ್ರವೇಶಿಸಬಹುದು.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 41ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡವು ಜಯ ಸಾಧಿಸಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಸನ್ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 143 ರನ್ ಕಲೆಹಾಕಿತು.
ಈ ಸುಲಭ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ (70) ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು 15.4 ಓವರ್ಗಳಲ್ಲಿ 146 ರನ್ ಬಾರಿಸಿ 7 ವಿಕೆಟ್ಗಳ ಗೆಲುವು ದಾಖಲಿಸಿದೆ.
ಈ ಗೆಲುವಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಈ ಜಯವು ನಿಜಕ್ಕೂ ಖುಷಿ ಕೊಟ್ಟಿದೆ. ತಂಡವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ನೋಡಿ ಸಂತೋಷವಾಯಿತು. ಎಲ್ಲಾ ಆಟಗಾರರು ಫಾರ್ಮ್‌ನಲ್ಲಿರುವಾಗ, ನಾವು ಪ್ರಾಬಲ್ಯ ಸಾಧಿಸುತ್ತೇವೆ. ಇದುವೇ ನಮ್ಮ ಗೆಲುವಿನ ಸೀಕ್ರೆಟ್ ಎಂದಿದ್ದಾರೆ.
ಇನ್ನು ದೀಪಕ್ ಚಹರ್ ಮತ್ತು ಟ್ರೆಂಟ್ ಬೌಲ್ಟ್ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹೀಗೆ ಪ್ರತಿಯೊಬ್ಬರು ಉತ್ತಮ ಪ್ರದರ್ಶನ ನೀಡಿದರೆ ಗೆಲುವು ಸುಲಭ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ಇದೇ ವೇಳೆ ದೀಪಕ್ ಚಹರ್ಗೆ ಸತತ 4 ಓವರ್ಗಳನ್ನು ನೀಡಿರುವ ಬಗ್ಗೆ ಕೇಳಿದಾಗ, ಕೆಲ ಬಾರಿ ಪರಿಸ್ಥಿತಿಗೆ ಅನುಗುಣವಾಗಿ ನಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅನೇಕ ವಿಷಯಗಳನ್ನು ಮುಂಚಿತವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಅವರು ಪವರ್‌ಪ್ಲೇನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದರು. ಹೀಗಾಗಿ ಓವರ್ ಅನ್ನು ನಿಲ್ಲಿಸಲು ಯಾವುದೇ ಕಾರಣವಿರಲಿಲ್ಲ. ಹೀಗಾಗಿ ಅವರಿಂದಲೇ ಬ್ಯಾಕ್ ಟು ಬ್ಯಾಕ್ ಓವರ್ಗಳನ್ನು ಹಾಕಿಸಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿಯಲ್ಲಿ ನನ್ನ ದೇಶದ ಕೈವಾಡವಿದೆ: ಪಾಕ್ ಕ್ರಿಕೆಟಿಗನ ಹೇಳಿಕೆ..!
ಸದ್ಯ ಆಡಿರುವ 9 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿರುವ ಮುಂಬೈ ಇಂಡಿಯನ್ಸ್ ತಂಡವು ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಇನ್ನುಳಿದ 5 ಮ್ಯಾಚ್ಗಳಲ್ಲಿ ಮುಂಬೈ ಪಡೆ 3 ಗೆಲುವು ದಾಖಲಿಸಿದರೆ, ಪ್ಲೇಆಫ್ಗೆ ಪ್ರವೇಶಿಸುವುದು ಬಹುತೇಕ ಖಚಿತವಾಗಲಿದೆ. ಹೀಗಾಗಿ ಇದೇ ಪ್ರದರ್ಶನ ಮುಂದುವರೆಸಿದರೆ ಹಾರ್ದಿಕ್ ಪಾಂಡ್ಯ ಪಡೆಯನ್ನು ಪ್ಲೇಆಫ್ನಲ್ಲೂ ಎದುರು ನೋಡಬಹುದು.
Published On - 10:25 am, Thu, 24 April 25