IPL 2025: ಅವರೊಬ್ಬರು ಇದ್ದರೆ ಸಾಕು, ಚಿಂತೆಯೇ ಇಲ್ಲ: ರಜತ್ ಪಾಟಿದಾರ್
IPL 2025 KKR vs RCB: ಐಪಿಎಲ್ ಸೀಸನ್ 18 ರ ಮೊದಲ ಪಂದ್ಯದಲ್ಲೇ ಆರ್ಸಿಬಿ ತಂಡ ಅಮೋಘ ಗೆಲುವು ದಾಖಲಿಸಿದೆ. ಅದು ಕೂಡ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 7 ವಿಕೆಟ್ಗಳಿಂದ ಮಣಿಸುವ ಮೂಲಕ. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಪಾಯಿಂಟ್ ಖಾತೆ ತೆರೆದಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಮೊದಲ ಪಂದ್ಯದಲ್ಲಿ ಆರ್ಸಿಬಿ ತಂಡ ಭರ್ಜರಿ ಜಯ ಸಾಧಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿತು.
175 ರನ್ಗಳ ಕಠಿಣ ಗುರಿ ಬೆನ್ನತ್ತಿದ ಆರ್ಸಿಬಿ ಪರ ಆರಂಭಿಕರಾದ ಫಿಲ್ ಸಾಲ್ಟ್ (56) ಹಾಗೂ ವಿರಾಟ್ ಕೊಹ್ಲಿ (59) ಸ್ಪೋಟಕ ಅರ್ಧಶತಕ ಬಾರಿಸಿದರು. ಈ ಅರ್ಧಶತಕಗಳ ನೆರವಿನೊಂದಿಗೆ ಆರ್ಸಿಬಿ ತಂಡವು ಕೇವಲ 16.2 ಓವರ್ಗಳಲ್ಲಿ 177 ರನ್ ಬಾರಿಸಿ 7 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು.
ಈ ಗೆಲುವಿನ ಬಳಿಕ ಮಾತನಾಡಿದ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ಗೆಲುವಿನ ಸಂಪೂರ್ಣ ಶ್ರೇಯಸ್ಸನ್ನು ಬೌಲರ್ಗಳಿಗೆ ನೀಡಿದರು. ನಿಜವಾಗಿಯೂ ಇದು ನಾಯಕನಾಗಿ ನನ್ನ ಮೊದಲ ಪಂದ್ಯವಾಗಿದ್ದರಿಂದ ಒತ್ತಡವಿತ್ತು. ಆದರೆ ಆರ್ಸಿಬಿ ಗೆಲುವಿನೊಂದಿಗೆ ನನ್ನ ಪಾಲಿಗೆ ಒಳ್ಳೆಯ ದಿನವಾಗಿ ಮಾರ್ಪಟ್ಟಿದೆ.
ನಾವು ಹೀಗೆ ಗೆಲ್ಲುವುದನ್ನು ಮುಂದುವರಿಸಿದರೆ, ಅದು ಒಳ್ಳೆಯ ದಿನವಾಗಿರುತ್ತದೆ. ಹೀಗಾಗಿ ಈ ಗೆಲುವಿನ ಲಯ ಮುಂದುವರೆಸುವ ವಿಶ್ವಾಸವಿದೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಸುಯಶ್ ಶರ್ಮಾ ಅವರನ್ನು ಕಣಕ್ಕಿಳಿಸಿದ ಬಗ್ಗೆ ಮಾತನಾಡಿದ ರಜತ್, ಸುಯಶ್ ಅವರು ರನ್ ನೀಡುವುದರಲ್ಲಿ ನನಗೆ ಯಾವುದೇ ಅಭ್ಯಂತರವಿಲ್ಲ. ಏಕೆಂದರೆ ಅವರು ನಮ್ಮ ಪ್ರಮುಖ ವಿಕೆಟ್ ಟೇಕಿಂಗ್ ಬೌಲರ್. ಹಾಗಾಗಿ ನಾನು ಅವರನ್ನು ಬೆಂಬಲಿಸಿದೆ.
ಇಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ಕೃನಾಲ್ ಪಾಂಡ್ಯ ಹಾಗೂ ಸುಯಶ್ ಶರ್ಮಾ. ಈ ಎಲ್ಲಾ ಕ್ರೆಡಿಟ್ ಇಬ್ಬರಿಗೆ ಸಲ್ಲುತ್ತದೆ. 13 ಓವರ್‌ಗಳಿಂದ ಇಬ್ಬರೂ ಬೌಲರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡಿದರು. ಅವರು ತಮ್ಮ ಧೈರ್ಯ ಮತ್ತು ದೃಢನಿಶ್ಚಯವನ್ನು ತೋರಿಸಿದರು. ರನ್ಗಳಿಕೆಯ ನಡುವೆ ವಿಕೆಟ್ ಪಡೆಯುವ ಅವರ ಮನಸ್ಥಿತಿ ನಿಜವಾಗಿಯೂ ಅದ್ಭುತವಾಗಿತ್ತು ಎಂದು ರಜತ್ ಪಾಟಿದಾರ್ ಆರ್ಸಿಬಿ ಸ್ಪಿನ್ನರ್ಗಳನ್ನು ಹಾಡಿಹೊಗಳಿದರು.
ಇದನ್ನೂ ಓದಿ: IPL 2025: RCB ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಗಾಯಾಳು
ಇನ್ನು ವಿರಾಟ್ ಕೊಹ್ಲಿ ಅವರಂತಹ ಆಟಗಾರ ಜೊತೆಗಿದ್ದಾಗ, ಚಿಂತಿಸುವ ಅಗತ್ಯವಿಲ್ಲ. ಅವರು ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಅವರಿಂದ ಕಲಿಯಲು ಇದು ನನಗೆ ಉತ್ತಮ ಅವಕಾಶ. ಹೀಗಾಗಿ ಮೊದಲ ಪಂದ್ಯದಲ್ಲಿ ನಾನು ನಿರ್ಭಿತಿಯಿಂದ ತಂಡವನ್ನು ಮುನ್ನಡೆಸಲು ಸಾಧ್ಯವಾಗಿದೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.