3 ಪಂದ್ಯಗಳಲ್ಲೂ ವಿಶ್ರಾಂತಿ… ರೆಸ್ಟ್ನಲ್ಲೇ ಕಾಲ ಕಳೆಯುತ್ತಿರುವ ಬುಮ್ರಾ
Jasprit Bumrah: ಭಾರತ ತಂಡವು 7 ತಿಂಗಳುಗಳ ಬಳಿಕ ಏಕದಿನ ಸರಣಿ ಆಡುತ್ತಿದೆ. ಅದು ಕೂಡ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ. ಆದರೆ ಈ ಸರಣಿಯಿಂದ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹೊರಗುಳಿದಿದ್ದಾರೆ. ಅಂದರೆ ಮೂರು ಪಂದ್ಯಗಳಿಂದ ಜಸ್ಪ್ರೀತ್ ಬುಮ್ರಾ ವಿಶ್ರಾಂತಿ ಪಡೆದಿದ್ದು, ಟಿ20 ಸರಣಿಯಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋಲನುಭವಿಸಿದೆ. ಈ ಸೋಲಿಗೆ ಭಾರತ ತಂಡದ ಕಳಪೆ ಬ್ಯಾಟಿಂಗ್ ಕಾರಣ ಎನ್ನಬಹುದು. ಇದಾಗ್ಯೂ ಬೌಲಿಂಗ್ ವಿಭಾಗದಲ್ಲೂ ಭಾರತೀಯರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಆಸೀಸ್ ವೇಗಿಗಳು ಕರಾರುವಾಕ್ ದಾಳಿ ಸಂಘಟಿಸಿದ ಪರ್ತ್ ಪಿಚ್ನಲ್ಲಿ ಟೀಮ್ ಇಂಡಿಯಾ ಬೌಲರ್ಗಳು ದುಬಾರಿಯಾದರು. ಇದರ ನಡುವೆ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ಅಂದರೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಕಾಣಿಸಿಕೊಂಡಿರಲಿಲ್ಲ. ಬದಲಾಗಿ ಹರ್ಷಿತ್ ರಾಣಾ ಕಣಕ್ಕಿಳಿದಿದ್ದರು. ಇತ್ತ ಬುಮ್ರಾ ಯಾಕೆ ಆಡಿಲ್ಲ ಎಂಬ ಪ್ರಶ್ನಗೆ ಉತ್ತರ ವಿಶ್ರಾಂತಿ. ಅಂದರೆ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ವೇಳೆ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ.
ವಿಶ್ರಾಂತಿಯಲ್ಲೇ ಕಾಲ ಕಳೆಯುತ್ತಿರುವ ಬುಮ್ರಾ:
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ವೇಳೆ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಇದಾದ ಬಳಿಕ ಬುಮ್ರಾ ಟೀಮ್ ಇಂಡಿಯಾ ಪರ ಸತತ ಪಂದ್ಯಗಳನ್ನಾಡಿಲ್ಲ ಎಂಬುದೇ ವಿಶೇಷ. ಅಂದರೆ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದ ಬುಮ್ರಾ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ಕಂಬ್ಯಾಕ್ ಮಾಡಿದ್ದರು.
ಆದರೆ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬುಮ್ರಾ ಆಡಿದ್ದು ಕೇವಲ ಮೂರು ಮ್ಯಾಚ್ಗಳನ್ನು ಮಾತ್ರ. ಆ ಬಳಿಕ ಏಷ್ಯಾಕಪ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆಯೂ 2 ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ.
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಂಡಿದ್ದ ಬುಮ್ರಾ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ ಎಂಬುದೇ ಸತ್ಯ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಇದಕ್ಕೆ ಕಾರಣ ವಿಶ್ರಾಂತಿ.
ಅಂದರೆ ಜಸ್ಪ್ರೀತ್ ಬುಮ್ರಾ ಪ್ರಮುಖ ಸರಣಿಗಳ ವಿಶ್ರಾಂತಿ ಪಡೆಯುತ್ತಿರುವುದು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಇಂಗ್ಲೆಂಡ್ ವಿರುದ್ಧದ 2 ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ಬುಮ್ರಾ ಇದೀಗ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ.
ಇನ್ನು ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೂಲಕ ಕಂಬ್ಯಾಕ್ ಮಾಡಲಿದ್ದಾರೆ. ಇದಾಗ್ಯೂ ಅವರು ಎಲ್ಲಾ ಐದು ಮ್ಯಾಚ್ಗಳನ್ನು ಆಡುತ್ತಾರಾ ಎಂಬುದರ ಬಗ್ಗೆ ಖಚಿತತೆ ಇಲ್ಲ.
ಇತ್ತ ಸದಾ ವಿಶ್ರಾಂತಿಯಲ್ಲೇ ಕಳೆಯುತ್ತಿರುವ ಜಸ್ಪ್ರೀತ್ ಬುಮ್ರಾ ಅವರಿಂದ ಮೊನಚಿನ ದಾಳಿ ಕಂಡು ಬರುತ್ತಿಲ್ಲ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಇದಕ್ಕೆ ಸಾಕ್ಷಿ ಏಷ್ಯಾಕಪ್ನಲ್ಲಿ ಅವರು 5 ಮ್ಯಾಚ್ಗಳಿಂದ ಪಡೆದಿರುವುದು ಕೇವಲ 7 ವಿಕೆಟ್ಗಳು ಮಾತ್ರ. ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲೂ 2 ಪಂದ್ಯಗಳಿಂದ ಕೇವಲ 4 ವಿಕೆಟ್ ಮಾತ್ರ ಕಬಳಿಸಿದ್ದರು.
ಇದನ್ನೂ ಓದಿ: ಸಿಕ್ಸ್ ಸಿಡಿಸಿಯೇ ಭರ್ಜರಿ ದಾಖಲೆ ಬರೆದ ಫಿಲ್ ಸಾಲ್ಟ್
ಇದೀಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿರುವ ಜಸ್ಪ್ರೀತ್ ಬುಮ್ರಾ ಟಿ20 ಸರಣಿಯಲ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
