Ranji Trophy: ಬಲಿಷ್ಠ ಮುಂಬೈ ಮಣಿಸಿ ಸೆಮಿಫೈನಲ್ಗೇರಿದ ಕರ್ನಾಟಕ
Karnataka Dominates Mumbai in Ranji QF: ರಣಜಿ ಟ್ರೋಫಿ 2025-26 ಕ್ವಾರ್ಟರ್ ಫೈನಲ್‌ನಲ್ಲಿ ಬಲಿಷ್ಠ ಮುಂಬೈ ತಂಡವನ್ನು ರೋಚಕವಾಗಿ ಮಣಿಸಿದ ಕರ್ನಾಟಕ, ಸೆಮಿಫೈನಲ್ ಪ್ರವೇಶಿಸಿದೆ. ಮುಂಬೈ ನೀಡಿದ 326 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ 6 ವಿಕೆಟ್‌ಗಳ ಗೆಲುವು ಸಾಧಿಸಿತು. ಕೆಎಲ್ ರಾಹುಲ್ ಭರ್ಜರಿ 130 ರನ್ ಹಾಗೂ ಆರ್. ಸ್ಮರಣ್ ಅಜೇಯ 83 ರನ್‌ಗಳ ಕೊಡುಗೆ ನೀಡುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು.

ಮುಂಬೈನ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಹಾಗೂ ಮುಂಬೈ (Karnataka vs Mumbai) ನಡುವಿನ ರಣಜಿ ಟ್ರೋಫಿ 2025-26 ರ ಕ್ವಾರ್ಟರ್ ಫೈನಲ್ (Ranji Trophy 2025-26 quarterfina) ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಮಣಿಸಿದ ಕರ್ನಾಟಕ ತಂಡ ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಗೆಲುವಿಗೆ ಮುಂಬೈ ನೀಡಿದ 326 ರನ್‌ಗಳ ಗುರಿಯನ್ನು ಕರ್ನಾಟಕ ತಂಡ 6 ವಿಕೆಟ್‌ಗಳ ನಷ್ಟಕ್ಕೆ ನಾಲ್ಕನೇ ದಿನದಾಟದ ಎರಡನೇ ಸೆಷನ್ನಲ್ಲಿ ಬೆನ್ನಟ್ಟುವ ಮೂಲಕ ಜಯದ ನಗೆ ಬೀರಿತು. ಕರ್ನಾಟಕ ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಅನುಭವಿ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ (KL Rahul) 130 ರನ್‌ಗಳ ಇನ್ನಿಂಗ್ಸ್ ಆಡಿದರು. ರಾಹುಲ್ಗೆ ಸಾಥ್ ನೀಡಿದ ಆರ್. ಸ್ಮರಣ್ ಕೂಡ ಅಜೇಯ 83 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
120 ರನ್ಗಳಿಗೆ ಮುಂಬೈ ಆಲೌಟ್
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಕರ್ನಾಟಕದ ಕರಾರುವಕ್ಕಾದ ದಾಳಿಗೆ ತತ್ತರಿಸಿ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 120 ರನ್ಗಳಿಗೆ ಆಲೌಟ್ ಆಯಿತು. ತಂಡದ ಪರ ಅಖಿಲ್ ಹೆರ್ವಾಡ್ಕರ್ 60 ರನ್‌ಗಳ ಇನ್ನಿಂಗ್ಸ್ ಆಡಿದನ್ನು ಬಿಟ್ಟರೆ ಉಳಿದ ಬ್ಯಾಟ್ಸ್ಮನ್ಗಳು ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ. ಇತ್ತ ಕರ್ನಾಟಕ ಪರ ವಿದ್ವತ್ ಕಾವೇರಪ್ಪ, ಪ್ರಸಿದ್ಧ್ ಕೃಷ್ಣ ಹಾಗೂ ಶ್ರೇಯಸ್ ಗೋಪಾಲ್ ತಲಾ 3 ವಿಕೆಟ್ ಪಡೆದರು.
92 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಆಡಿದ ಮಯಾಂಕ್
ಮುಂಬೈ ತಂಡವನ್ನು 120 ರನ್ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕಕ್ಕೂ ದೊಡ್ಡ ಮೊತ್ತವನ್ನು ಪೆರಿಸಲು ಸಾಧ್ಯವಾಗಲಿಲ್ಲ. ತಂಡದ ಅಗ್ರ ಮೂವರು ಬ್ಯಾಟ್ಸ್ಮನ್ಗಳು ಎರಡಂಕಿ ಮೊತ್ತ ದಾಟಿದನ್ನು ಬಿಟ್ಟರೆ ಉಳಿದವರೆಲ್ಲ ಒಂದಂಕಿಗೆ ಸುಸ್ತಾದರು. ಆದಾಗ್ಯೂ ತಂಡದ ಪರ ಸ್ಮರಣೀಯ ಇನ್ನಿಂಗ್ಸ್ ಆಡಿದ ಮಯಾಂಕ್ ಅಗರ್ವಾಲ್ 92 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಮೊದಲ ಇನ್ನಿಂಗ್ಸ್ನಲ್ಲಿ ತಂಡಕ್ಕೆ 53 ರನ್‌ಗಳ ಮುನ್ನಡೆ ತಂದುಕೊಟ್ಟರು. ಅಂತಿಮವಾಗಿ ಕರ್ನಾಟಕ 173 ರನ್ಗಳಿಗೆ ಆಲೌಟ್ ಆಯಿತು.
325 ರನ್‌ಗಳ ಗುರಿ ನೀಡಿದ ಮುಂಬೈ
ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 120 ರನ್ಗಳಿಗೆ ಆಲೌಟ್ ಆಗಿದ್ದ ಮುಂಬೈ ತಂಡ ಎರಡನೇ ಇನ್ನಿಂಗ್ಸ್ನಲ್ಲಿ ಭರ್ಜರಿ ಪ್ರದರ್ಶನ ನೀಡಿ 377 ರನ್ ಕಲೆಹಾಕಿತು. ತಂಡದ ಪರ ಆಕಾಶ್ ಆನಂದ್ 70 ರನ್‌ಗಳ ಇನ್ನಿಂಗ್ಸ್ ಆಡಿದರೆ, ಉಳಿದ ಆಟಗಾರರು ಕೂಡ ಉಪಯುಕ್ತ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಗೆಲುವಿಗೆ 325 ರನ್‌ಗಳ ಗುರಿ ಬೆನ್ನಟ್ಟಿದ ಕರ್ನಾಟಕ 4ನೇ ದಿನದಾಟದಂದು ಜಯದ ನಗೆ ಬೀರಿತು.
Ranji Trophy 2025: ರಣಜಿ ಅಂಗಳದಲ್ಲಿ ಚೊಚ್ಚಲ ದ್ವಿಶತಕ ಬಾರಿಸಿದ ರಜತ್ ಪಾಟಿದರ್
ಗೆಲುವಿನ ಶತಕ ಬಾರಿಸಿದ ರಾಹುಲ್
ತಂಡದ ಪರ ಅನುಭವಿ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದ 25ನೇ ಶತಕವನ್ನು ಬಾರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. 147 ಎಸೆತಗಳಲ್ಲಿ 13 ಬೌಂಡರಿ ಸಹಿತ ಶತಕ ಬಾರಿಸಿದ ರಾಹುಲ್ ಆ ಬಳಿಕವೂ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ತಂಡವನ್ನು 250 ರನ್‌ಗಳ ಗಡಿ ದಾಟಿಸಿದರು. ರಾಹುಲ್ಗೆ ಸಾಥ್ ನೀಡಿದ ಸ್ಮರಣ್ ಕೂಡ 123 ಎಸೆತಗಳಲ್ಲಿ 11 ಬೌಂಡರಿ ಸಹಿತ ಅಜೇಯ 83 ರನ್ ಬಾರಿಸಿ ತಂಡದ ಗೆಲುವಿಗೆ ನೆರವಾದರು. ಕೊನೆಯಲ್ಲಿ ವಿದ್ಯಾದರ್ ಪಾಟೀಲ್ ಕೂಡ 31 ರನ್‌ಗಳ ಅಜೇಯ ಕಾಣಿಕೆ ನೀಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:42 pm, Mon, 9 February 26
