ನಿವೃತ್ತಿ ಬೆನ್ನಲ್ಲೇ ಬಿಗ್ ಆಫರ್: ವಿದೇಶಿ ತಂಡದ ಪರ ಕಣಕ್ಕಿಳಿಯಲಿದ್ದಾರಾ ವಿರಾಟ್ ಕೊಹ್ಲಿ
Virat Kohli retires: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಟಿ20 ಹಾಗೂ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. 2024ರ ಟಿ20 ವಿಶ್ವಕಪ್ ಫೈನಲ್ ಬೆನ್ನಲ್ಲೇ ಚುಟುಕು ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ವಿರಾಟ್ ಕೊಹ್ಲಿ ಇದೀಗ ಟೆಸ್ಟ್ ಕ್ರಿಕೆಟ್ಗೂ ಗುಡ್ ಬೈ ಹೇಳಿದ್ದಾರೆ. ಈ ನಿವೃತ್ತಿ ಬೆನ್ನಲ್ಲೇ ಇದೀಗ ಕೊಹ್ಲಿಗೆ ಇಂಗ್ಲೆಂಡ್ನಿಂದ ಬಿಗ್ ಆಫರ್ವೊಂದು ಸಿಕ್ಕಿದೆ.

ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಬಿಗ್ ಆಫರ್ವೊಂದು ಬಂದಿದೆ. ಅದು ಸಹ ಇಂಗ್ಲೆಂಡ್ನಿಂದ ಎಂಬುದು ವಿಶೇಷ. ದೀರ್ಘಾವಧಿ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿಯನ್ನು ಕೌಂಟಿ ಕ್ರಿಕೆಟ್ನಲ್ಲಿ ಕಣಕ್ಕಿಳಿಸಲು ಮಿಡ್ಲ್‌ಸೆಕ್ಸ್ ಕ್ಲಬ್ ಮುಂದಾಗಿದೆ.
ವಿರಾಟ್ ಕೊಹ್ಲಿ ಈ ಪೀಳಿಗೆಯ ಅತ್ಯಂತ ಪ್ರತಿಮಾರೂಪದ ಆಟಗಾರ. ಆದರಿಂದ ಅವರನ್ನು ನಮ್ಮ ಕ್ಲಬ್ ಪರ ಕಣಕ್ಕಿಳಿಸಲು ನಾವು ಉತ್ಸುಕರಾಗಿದ್ದೇವೆ. ಇದಕ್ಕಾಗಿ ಮಾತುಕತೆ ನಡೆಸಲು ಆಸಕ್ತರಾಗಿದ್ದೇವೆ ಎಂದು ಮಿಡ್ಲ್‌ಸೆಕ್ಸ್ ಕ್ರಿಕೆಟ್ ನಿರ್ದೇಶಕ ಅಲನ್ ಕೋಲ್ಮನ್ ದಿ ಗಾರ್ಡಿಯನ್‌ಗೆ ತಿಳಿಸಿದ್ದಾರೆ.
ದಿ ಗಾರ್ಡಿಯನ್ ವರದಿ ಪ್ರಕಾರ, ವಿರಾಟ್ ಕೊಹ್ಲಿಯನ್ನು ಕೌಂಟಿ ಕ್ರಿಕೆಟ್ಗೆ ಕರೆತರುವ ವೆಚ್ಚವನ್ನು ಹಂಚಿಕೊಳ್ಳಲು ಮಿಡ್ಲ್‌ಸೆಕ್ಸ್ ಅಧಿಕಾರಿಗಳು ಇಚ್ಛೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೊಹ್ಲಿ ಜೊತೆ ಮೊದಲಿಗೆ ಮಾತುಕತೆ ನಡೆಯಲಿದ್ದು, ಈ ವೇಳೆ ಅವರ ಡಿಮ್ಯಾಂಡ್ಗಳನ್ನು ಆಲಿಸಿ, ಬಿಗ್ ಆಫರ್ ನೀಡುವ ಸಾಧ್ಯತೆಯಿದೆ.
ಅತ್ತ ಬಿಡುವಿನ ಅವಧಿಯಲ್ಲಿ ಲಂಡನ್ನಲ್ಲಿ ಕಾಣಿಸಿಕೊಳ್ಳುವ ವಿರಾಟ್ ಕೊಹ್ಲಿ ಮಿಡ್ಲ್‌ಸೆಕ್ಸ್ ಕ್ಲಬ್ ಜೊತೆ ಒಪ್ಪಂದ ಮಾಡಿಕೊಂಡರೂ ಅಚ್ಚರಿಪಡಬೇಕಿಲ್ಲ. ಏಕೆಂದರೆ ಈ ವರ್ಷ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಪರ ಆಡಲಿರುವುದು ಕೇವಲ 9 ಪಂದ್ಯಗಳನ್ನು ಮಾತ್ರ.
ಅಂದರೆ ಟಿ20 ಹಾಗೂ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ ಏಕದಿನ ಸರಣಿಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಈ ವರ್ಷ ಬಾಂಗ್ಲಾದೇಶ್, ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ತಲಾ 3 ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದ್ದಾರೆ.
ಈ ಮೂರು ಸರಣಿಗಳನ್ನು ಹೊರತುಪಡಿಸಿದರೆ, ವಿರಾಟ್ ಕೊಹ್ಲಿ ಸಂಪೂರ್ಣ ಫ್ರೀ ಆಗಿರಲಿದ್ದಾರೆ. ಹೀಗಾಗಿ ಕಿಂಗ್ ಕೊಹ್ಲಿ ಬಿಡುವಿನ ವೇಳೆ ಕೌಂಟಿ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದೇ ಈಗ ಕುತೂಹಲ.
ಒಟ್ಟಿನಲ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಟ್ ಕೊಹ್ಲಿ ನಿವೃತ್ತಿ ಘೋಷಿಸುತ್ತಿದ್ದಂತೆ, ಕೌಂಟಿ ಕ್ರಿಕೆಟ್ನಲ್ಲಿ ಕಿಂಗ್ ಕೊಹ್ಲಿಯನ್ನು ಪರಿಚಯಿಸಲು ಮಿಡ್ಲ್‌ಸೆಕ್ಸ್ ಕ್ಲಬ್ ಮುಂದಾಗಿದೆ. ಈ ಮೂಲಕ ಕೌಂಟಿ ಚಾಂಪಿಯನ್ಶಿಪ್ ಅನ್ನು ವಿಶ್ವ ಕ್ರಿಕೆಟ್ನ ಕೇಂದ್ರ ಬಿಂದುವಾಗಿಸಲು ಎಂಸಿಸಿ ಪ್ಲ್ಯಾನ್ ರೂಪಿಸಿದೆ.
ಇದನ್ನೂ ಓದಿ: 18 ವರ್ಷಗಳಲ್ಲಿ 18 ನಾಯಕರನ್ನು ಕಣಕ್ಕಿಳಿಸಿದ ಪಂಜಾಬ್ ಕಿಂಗ್ಸ್
ಈ ಪ್ಲ್ಯಾನ್ ಯಶಸ್ವಿಯಾಗಲಿದೆಯಾ? ಅದರಂತೆ ವಿರಾಟ್ ಕೊಹ್ಲಿ ಮಿಡ್ಲ್‌ಸೆಕ್ಸ್ ಪರ ಕೌಂಟಿ ಕ್ರಿಕೆಟ್ ಆಡಲಿದ್ದಾರಾ? ಎಂಬ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗುವ ನಿರೀಕ್ಷೆಯಿದೆ.
