ಬ್ಯಾಟರೂ ಅಲ್ಲ, ಬೌಲರೂ ಅಲ್ಲ… ಸೋಲಿಗೆ ಧೋನಿ ದೂರಿದ್ದು ಯಾರನ್ನ ಗೊತ್ತೇ..!
IPL 2025 CSK vs PBKS: ಇಂಡಿಯನ್ ಪ್ರೀಮಿಯರ್ ಲೀಗ್ನ 49ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 19.2 ಓವರ್ಗಳಲ್ಲಿ 190 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡ 19.4 ಓವರ್ಗಳಲ್ಲಿ 194 ರನ್ ಬಾರಿಸಿ 6 ವಿಕೆಟ್ಗಳ ಗೆಲುವು ದಾಖಲಿಸಿದೆ.

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2025) 49ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಸಿಎಸ್ಕೆ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಸ್ಯಾಮ್ ಕರನ್ 47 ಎಸೆತಗಳಲ್ಲಿ 88 ರನ್ ಬಾರಿಸಿದ್ದರು. ಈ ಸ್ಪೋಟಕ ಬ್ಯಾಟಿಂಗ್ ನೆರವಿನೊಂದಿಗೆ ಸಿಎಸ್ಕೆ ತಂಡವು 190 ರನ್ ಕಲೆಹಾಕಿತು.
191 ರನ್ಗಳ ಗುರಿ ಪಡೆದ ಪಂಜಾಬ್ ಕಿಂಗ್ಸ್ ತಂಡದ ಪರ ಪ್ರಭ್ಸಿಮ್ರಾನ್ ಸಿಂಗ್ 54 ರನ್ ಬಾರಿಸಿದರೆ, ನಾಯಕ ಶ್ರೇಯಸ್ ಅಯ್ಯರ್ 72 ರನ್ ಚಚ್ಚಿದರು. ಈ ಮೂಲಕ ಪಂಜಾಬ್ ಪಡೆ 19.4 ಓವರ್ಗಳಲ್ಲಿ 190 ರನ್ ಬಾರಿಸಿ 6 ವಿಕೆಟ್ಗಳ ಗೆಲುವು ದಾಖಲಿಸಿತು. ಈ ಸೋಲಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ.
ಈ ಸೋಲಿನ ಬಳಿಕ ಮಾತನಾಡಿದ ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಈ ಪಂದ್ಯದಲ್ಲಿ ನಾವು ಚೆನ್ನಾಗಿ ಆಡಿದ್ದೆವು. ಅದರಲ್ಲೂ ನಮ್ಮ ಬ್ಯಾಟಿಂಗ್ ಉತ್ತಮವಾಗಿತ್ತು. ಇದೇ ಮೊದಲ ಬಾರಿಗೆ ನಾವು ಸಾಕಷ್ಟು ರನ್ಗಳಿಸಲು ಯಶಸ್ವಿಯಾದೆವು.
ಆದರೆ ಇದು ಉತ್ತಮ ಸ್ಕೋರ್ ಆಗಿತ್ತೇ ಎಂದು ಕೇಳಿದರೆ, ಖಂಡಿತವಾಗಿಯೂ ಅಲ್ಲ. ಅಂತಿಮ ಹಂತದಲ್ಲಿ ಸ್ಕೋರ್ಗಳಿಸುವಲ್ಲಿ ನಾವು ಎಡವಿದೆವು. ಕೊನೆಯ ಓವರ್ಗಳ ವೇಳೆ ಮತ್ತಷ್ಟು ರನ್ಗಳಿಸಿದ್ದರೆ ಉತ್ತಮ ಪೈಪೋಟಿ ನೀಡಬಹುದಿತ್ತು ಎಂದು ಧೋನಿ ಹೇಳಿದ್ದಾರೆ.
ನಮ್ಮ ಪರ ಡೆವಾಲ್ಡ್ ಬ್ರೆವಿಸ್ ಮತ್ತು ಸ್ಯಾಮ್ ಕರನ್ ಉತ್ತಮ ಜೊತೆಯಾಟ ಪ್ರದರ್ಶಿಸಿದ್ದರು. ಆದರೆ ಕೊನೆಯ 4 ಎಸೆತಗಳಿರುವಾಗಲೇ ನಾವು ಆಲೌಟ್ ಆಗಿದ್ದು ದುಬಾರಿಯಾಯಿತು. ಅಂತಿಮ ಹಂತದಲ್ಲಿ ನಾಲ್ವರು ಬ್ಯಾಟರ್ಗಳು ವಿಕೆಟ್ ಒಪ್ಪಿಸಿದ್ದು ಸ್ಕೋರ್ ಕಡಿಮೆಯಾಗುವಂತೆ ಮಾಡಿತು.
ಇದಾಗ್ಯೂ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದ್ದವು. ಹೀಗಾಗಿ ಬೌಲರ್ಗಳಿಂದ ಉತ್ತಮ ಪೈಪೋಟಿ ನಿರೀಕ್ಷಿಸಿದ್ದೆವು. ಆದರೆ ನಮ್ಮ ಫೀಲ್ಡರ್ಗಳು ಮಾಡಿದ ತಪ್ಪಿನಿಂದಾಗಿ ಸೋಲನುಭವಿಸಬೇಕಾಯಿತು. ನಾವು ಕೈ ಬಿಟ್ಟ ಕೆಲ ಕ್ಯಾಚ್ಗಳು ಇಡೀ ಪಂದ್ಯದ ಮೇಲೆ ಪರಿಣಾಮ ಬೀರಿತು. ಕೈಚೆಲ್ಲಿದ ಕ್ಯಾಚ್ಗಳಿಂದಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ಸೋಲನುಭವಿಸಬೇಕಾಯಿತು ಎಂದು ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: 11 ಫೋರ್, 3 ಸಿಕ್ಸ್: ಕೊನೆಗೂ ಶತಕ ಪೂರೈಸಿದ ಗ್ಲೆನ್ ಮ್ಯಾಕ್ಸ್ವೆಲ್
ಒಟ್ಟಿನಲ್ಲಿ ಈವರೆಗೆ 10 ಪಂದ್ಯಗಳನ್ನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು 8 ಮ್ಯಾಚ್ಗಳಲ್ಲಿ ಸೋಲನುಭವಿಸುವ ಮೂಲಕ ಐಪಿಎಲ್ ಸೀಸನ್-18ರ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. ಇದರೊಂದಿಗೆ ಈ ಬಾರಿ ಟ್ರೋಫಿ ಗೆಲ್ಲಬೇಕೆಂಬ ಸಿಎಸ್ಕೆ ತಂಡದ ಕನಸು ಕೂಡ ಕಮರಿದೆ.




