IPL 2025: ನಾವು ಅಂದುಕೊಂಡಂತೆ ಏನೂ ನಡೆದಿಲ್ಲ, ಅದಕ್ಕೆ ಗೆಲ್ತಿರಲಿಲ್ಲ: ಧೋನಿ
IPL 2025 CSK vs LSG: ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 166 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 19.3 ಓವರ್‌ಗಳಲ್ಲಿ ಗೆಲುವಿನ ಗುರಿ ಮುಟ್ಟಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 30ನೇ ಪಂದ್ಯದ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಗೆಲುವಿನ ಲಯಕ್ಕೆ ಮರಳಿದೆ. ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ರಿಷಭ್ ಪಂತ್ (63) ಅರ್ಧಶತಕದ ನೆರವಿನೊಂದಿಗೆ 20 ಓವರ್‌ಗಳಲ್ಲಿ 166 ರನ್ ಕಲೆಹಾಕಿತು.
167 ರನ್ಗಳ ಸ್ಪರ್ಧಾತ್ಮಕ ಗುರಿ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 19.3 ಓವರ್‌ಗಳಲ್ಲಿ 166 ರನ್ ಬಾರಿಸಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ವಿಶೇಷ ಎಂದರೆ ಇದು ಈ ಸೀಸನ್ನಲ್ಲಿನ ಸಿಎಸ್ಕೆ ತಂಡ 2ನೇ ಗೆಲುವು. ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸತತ 5 ಪಂದ್ಯಗಳಲ್ಲಿ ಸೋಲನುಭವಿಸಿತ್ತು.
ಈ ಗೆಲುವಿನ ಬಳಿಕ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, ಈ ಗೆಲುವು ಖುಷಿ ಕೊಟ್ಟಿದೆ. ದುರದೃಷ್ಟವಶಾತ್ ನಾವು ಕೊನೆಯ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಈ ಗೆಲುವು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇದು ಕಠಿಣ ಪಂದ್ಯವಾಗಿತ್ತು ಮತ್ತು ಗೆದ್ದಿದ್ದಕ್ಕೆ ನನಗೆ ಸಂತೋಷವಾಗಿದೆ. ಅಲ್ಲದೆ ಈ ಜಯದೊಂದಿಗೆ ತಂಡವು ಲಯವನ್ನು ಮರಳುತ್ತದೆ ಎಂಬ ವಿಶ್ವಾಸವಿದೆ ಎಂದರು.
ಇನ್ನು ಈ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ತವರು ಮೈದಾನವಾದ ಚೆಪಾಕ್ ಕ್ರೀಡಾಂಗಣದಲ್ಲಿ ಮೂರು ಸೋಲುಗಳನ್ನು ಅನುಭವಿಸಿದೆ. ತಂಡದ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ತವರಿನ ಉತ್ತಮ ಪ್ರದರ್ಶನ ನಿಡಲು ಪರದಾಡುತ್ತಿದ್ದಾರೆ.
ಈ ಬಗ್ಗೆ ಕೇಳಿದಾಗ, ಹಿಂದಿನ ಪಂದ್ಯಗಳಲ್ಲಿ, ನಾವು ಮೊದಲ ಆರು ಓವರ್‌ಗಳಲ್ಲಿ ಬೌಲಿಂಗ್ ಮಾಡುವಾಗ ಕಷ್ಟಪಟ್ಟ್ಟಿರುವುದು ನಿಜ. ಆದರೆ ಮಧ್ಯದ ಓವರ್‌ಗಳಲ್ಲಿ ಮತ್ತೆ ಕಂಬ್ಯಾಕ್ ಮಾಡಿದ್ದೆವು. ಬ್ಯಾಟರ್ಗಳು ಸಹ, ನಾವು ಬಯಸಿದ ಆರಂಭವನ್ನು ಪಡೆಯುತ್ತಿರಲಿಲ್ಲ. ನಾವು ಅಂದುಕೊಂಡಂತೆ ಏನೂ ಸಹ ನಡೆಯುತ್ತಿರಲಿಲ್ಲ. ಅದಕ್ಕೆ ಗೆಲುವು ನಮ್ಮದಾಗಿರಲಿಲ್ಲ. ಬಹುಶಃ ಚೆನ್ನೈ ಪಿಚ್ ಇದಕ್ಕೆ ಕಾರಣ ಇರಬಹುದು. ಭವಿಷ್ಯದಲ್ಲಿ ನಾವು ಉತ್ತಮ ವಿಕೆಟ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆ ಎಂಬ ನಂಬಿಕೆಯಿದೆ ಎಂದು ಧೋನಿ ಹೇಳಿದ್ದಾರೆ.
ಇನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿದ ಧೋನಿ, ಮೊದಲ ಆರು ಓವರ್‌ಗಳಲ್ಲಿ ನಮಗೆ ಹೆಚ್ಚಿನ ಬೌಲರ್‌ಗಳು ಬೇಕಾಗಿದ್ದರು. ಆದರೆ ಪವರ್ಪ್ಲೇನಲ್ಲಿ ಅಶ್ವಿನ್ ಅವರಿಂದ 2 ಓವರ್ಗಳನ್ನು ಬೌಲಿಂಗ್ ಮಾಡಿಸುವುದರಿಂದ ಅವರು ಒತ್ತಡಕ್ಕೆ ಒಳಗಾಗುತ್ತಿದ್ದರು. ಇದಕ್ಕಾಗಿಯೇ ನಾವು ಬೌಲಿಂಗ್‌ನಲ್ಲಿ ಬದಲಾವಣೆಗಳನ್ನು ಮಾಡಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಮೋಸದಾಟದ ಡೌಟ್… ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಇದೀಗ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಉತ್ತಮ ಗೆಲುವು ದಾಖಲಿಸಿರುವ ಕಾರಣ, ಮುಂದಿನ ಪಂದ್ಯಗಳಲ್ಲೂ ಸಿಎಸ್ಕೆ ಕಡೆಯಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಬಹುದು. ಈ ಮೂಲಕ ಉಳಿದ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ದಾಖಲಿಸುವ ವಿಶ್ವಾಸವಿದೆ ಎಂದು ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.