ಹೀಗೆ ಮಾಡಿದ್ರೆ ಗೆಲ್ಲಬಹುದಿತ್ತು… ಸೋಲಿಗೆ ಕಾರಣ ತಿಳಿಸಿದ ವಿಂಡೀಸ್ ನಾಯಕ!
ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ನಲ್ಲೇ ಗೆದ್ದು ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 19.1 ಓವರ್‌ಗಳಲ್ಲಿ 172 ರನ್ ಕಲೆಹಾಕಿತು. ಈ ಗುರಿಯನ್ನು ಟೀಮ್ ಇಂಡಿಯಾ ಕೇವಲ 14.4 ಓವರ್‌ಗಳಲ್ಲಿ ಚೇಸ್ ಮಾಡಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

ಭಾರತದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅನುಭವಿಸಿದ ಸೋಲಿನ ಬಳಿಕ ವೆಸ್ಟ್ ಇಂಡೀಸ್ ತಂಡದ ನಾಯಕ ಶಾಯ್ ಹೋಪ್ ತಮ್ಮ ತಂಡದ ತಪ್ಪುಗಳನ್ನು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಪಂದ್ಯದ ಮುಕ್ತಾಯದ ನಂತರ ಮಾತನಾಡಿದ ಅವರು, ಬ್ಯಾಟಿಂಗ್‌ನ ಕೊನೆಯ ಓವರ್‌ಗಳಲ್ಲಿ ನಿರೀಕ್ಷಿತ ರನ್ ಗಳಿಸಲು ವಿಫಲವಾಗಿದ್ದೇ ಸೋಲಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಿದ್ದಾರೆ.
ಅಂತಿಮ ಓವರ್ಗಳ ವೇಳೆ ಗೊಂದಲ:
ಮೊದಲ ಪವರ್‌ಪ್ಲೇ ನಂತರ ಪಂದ್ಯದಲ್ಲಿ ಏನಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ಶಾಯ್ ಹೋಪ್, “ಪಂದ್ಯದ ಸೋಲಿಗೆ ಹಲವು ಕಾರಣಗಳನ್ನು ಹುಡುಕಬಹುದು. ಆದರೆ ನಾವು ಅಂತಿಮ ಓವರ್ಗಳ ವೇಳೆ ಅಗತ್ಯವಿದ್ದಷ್ಟು ರನ್‌ಗಳನ್ನು ಗಳಿಸಲಿಲ್ಲ. ನಮ್ಮ ಬ್ಯಾಟಿಂಗ್ ಶೈಲಿ ಕೊಂಚ ಗೊಂದಲದಿಂದ ಕೂಡಿತ್ತು. ನಾವು ಅತಿಯಾದ ಆಕ್ರಮಣಕಾರಿ ಆಟಕ್ಕೆ ಮುಂದಾದೆವು” ಎಂದು ಬೇಸರ ವ್ಯಕ್ತಪಡಿಸಿದರು.
ಹೀಗೆ ಮಾಡಿದ್ರೆ ಗೆಲ್ಲಬಹುದಿತ್ತು!
ಭಾರತದ ಪಿಚ್‌ಗಳಲ್ಲಿ ಪಂದ್ಯ ಗೆಲ್ಲುವ ಕುರಿತು ಮಾತನಾಡಿದ ವಿಂಡೀಸ್ ನಾಯಕ, “ಭಾರತದಲ್ಲಿ ಆಡುವಾಗ ಮೊದಲು ಬ್ಯಾಟಿಂಗ್ ಮಾಡಿ ದೊಡ್ಡ ಮೊತ್ತವನ್ನು ಬೋರ್ಡ್ ಮೇಲೆ ಹಾಕಬೇಕಾಗುತ್ತದೆ. ಇಲ್ಲಿ ಎರಡನೇ ಇನಿಂಗ್ಸ್ನಲ್ಲಿ ಬೌಲಿಂಗ್ ಮಾಡುವುದು ಕಷ್ಟ. ಚೇಸಿಂಗ್ ವೇಳೆ ಮೈದಾನದ ಇಬ್ಬನಿ ಮತ್ತು ಪಿಚ್‌ನ ವರ್ತನೆ ಬ್ಯಾಟಿಂಗ್‌ಗೆ ಮತ್ತಷ್ಟು ಪೂರಕವಾಗುತ್ತದೆ. ಆದ್ದರಿಂದ ನೀವು ನಿರೀಕ್ಷಿಸುವುದಕ್ಕಿಂತ ಕನಿಷ್ಠ 20 ರಿಂದ 30 ರನ್‌ಗಳ ಹೆಚ್ಚುವರಿ ಕಲೆಹಾಕಲೇಬೇಕು. ಇಂದು ನಮ್ಮ ಬಳಿ ಆ ರನ್‌ಗಳು ಇರಲಿಲ್ಲ. ನಾವು ಹೆಚ್ಚುವರಿ ರನ್‌ಗಳನ್ನು ಟಾರ್ಗೆಟ್ ಮಾಡಿ ಆಡಿದಿದ್ರೆ ಗೆಲ್ಲಬಹುದಿತ್ತು ಎಂದರು.
ತಂಡದ ಸಂಯೋಜನೆ ಮತ್ತು ಬೌಲಿಂಗ್ ರಣತಂತ್ರ:
ತಂಡದಲ್ಲಿ ಆಲ್‌ರೌಂಡರ್‌ಗಳ ಕೊರತೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಹೆಚ್ಚಿನ ಆಲ್‌ರೌಂಡರ್‌ಗಳು ಬೌಲಿಂಗ್ ಮಾಡಲು ಲಭ್ಯವಿದ್ದರೆ ಉತ್ತಮ ಬೌಲಿಂಗ್ ಆಯ್ಕೆಗಳು ಸಿಗುತ್ತವೆ. ಆದರೆ ಇಂದಿನ ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ನಾವು ಲಭ್ಯವಿದ್ದ ಸಂಯೋಜನೆಯೊಂದಿಗೇ ಕಣಕ್ಕಿಳಿಯಬೇಕಾಯಿತು. ಸ್ಪಿನ್ನರ್‌ಗಳನ್ನು ತಡವಾಗಿ ಬಳಸಿದ್ದರ ಹಿಂದೆ ಒಂದು ಯೋಜನೆ ಇತ್ತು. ರೋಸ್ಟನ್ ಚೇಸ್ ಅವರನ್ನು ಮಧ್ಯದ ಓವರ್‌ಗಳಲ್ಲಿ ಬಳಸಿ ವಿಕೆಟ್ ಪಡೆಯುವ ಆಲೋಚನೆ ನಮ್ಮದಾಗಿತ್ತು, ಆದರೆ ದುರದೃಷ್ಟವಶಾತ್ ಅದು ವರ್ಕೌಟ್ ಆಗಲಿಲ್ಲ. ಇಂದು ಭಾರತ ನಮ್ಮಗಿಂತ ಅತ್ಯುತ್ತಮ ಕ್ರಿಕೆಟ್ ಆಡಿತು” ಎಂದು ಭಾರತದ ಪ್ರದರ್ಶನವನ್ನು ಶ್ಲಾಘಿಸಿದರು.
ಭಾರತದಲ್ಲಿ ಬ್ಯಾಟಿಂಗ್ ಮಾಡುವುದೆಂದರೆ ಇಷ್ಟ!
ತಮ್ಮ ವೈಯಕ್ತಿಕ ಬ್ಯಾಟಿಂಗ್ ಫಾರ್ಮ್ ಕುರಿತು ಮಾತನಾಡಿದ ಶಾಯ್ ಹೋಪ್, “ನನಗೆ ಭಾರತದಲ್ಲಿ ಬ್ಯಾಟಿಂಗ್ ಮಾಡುವುದೆಂದರೆ ತುಂಬಾ ಇಷ್ಟ. ಇಲ್ಲಿ ಬಂದು ಕ್ರಿಕೆಟ್ ಆಡಲು ಸಿಗುವ ಪ್ರತಿಯೊಂದು ಅವಕಾಶವೂ ನನಗೆ ಯಾವಾಗಲೂ ಅತೀವ ಸಂತೋಷವನ್ನು ನೀಡುತ್ತದೆ” ಎಂದು ಭಾರತದ ಮೇಲಿರುವ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿರಾಟ್ ಕೊಹ್ಲಿ ದಾಖಲೆ ಉಡೀಸ್: ಹೊಸ ಇತಿಹಾಸ ಬರೆದ ಶ್ರೇಯಸ್ ಅಯ್ಯರ್
ಒಟ್ಟಾರೆಯಾಗಿ ಶ್ರೇಯಸ್ ಅಯ್ಯರ್ ಅವರ ಅಬ್ಬರದ ಶತಕದ ನೆರವಿನಿಂದ ಭಾರತ ಭರ್ಜರಿ ಜಯ ಸಾಧಿಸಿದರೆ, ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ತಮ್ಮ ಬೌಲಿಂಗ್ ರಣತಂತ್ರ ಮತ್ತು ಬ್ಯಾಟಿಂಗ್ ವೈಫಲ್ಯಗಳನ್ನು ಆತ್ಮಾವಲೋಕನ ಮಾಡಿಕೊಂಡಿದ್ದು, ಮುಂದಿನ ಪಂದ್ಯಗಳಲ್ಲಿ ಬಲಿಷ್ಠವಾಗಿ ಪುನರಾಗಮನ ಮಾಡುವ ವಿಶ್ವಾಸದಲ್ಲಿದ್ದಾರೆ.




