ನಿವೃತ್ತಿಯಾಗದ ರೋಹಿತ್ ಶರ್ಮಾ: ತೂಗುಯ್ಯಾಲೆಯಲ್ಲಿ ಹಿಟ್ಮ್ಯಾನ್ ಭವಿಷ್ಯ
Rohit Sharma: ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ ಮುಂದುವರೆದರೂ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ. ಏಕೆಂದರೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಹಿಟ್ಮ್ಯಾನ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಅಲ್ಲದೆ ಭವಿಷ್ಯದ ದೃಷ್ಟಿಯಿಂದ ಭಾರತ ಹೊಸ ಟೆಸ್ಟ್ ತಂಡವನ್ನು ಸಹ ಕಟ್ಟಬೇಕಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಹೊರಬಿದ್ದರೂ ಅಚ್ಚರಿಪಡಬೇಕಿಲ್ಲ.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸದ್ಯಕ್ಕಂತು ನಿವೃತ್ತಿಯಾಗುತ್ತಿಲ್ಲ ಎಂದು ಖಂಡತುಂಡವಾಗಿ ಹೇಳಿದ್ದಾರೆ. ಇದುವೇ ಈಗ ಬಿಸಿಸಿಐ ಆಯ್ಕೆ ಸಮಿತಿಯ ಚಿಂತೆ ಹೆಚ್ಚಿಸಿದೆ. ಏಕೆಂದರೆ 37 ವರ್ಷದ ಹಿಟ್ಮ್ಯಾನ್ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ನಿವೃತ್ತಿ ಘೋಷಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಈ ನಿರೀಕ್ಷೆಯನ್ನು ರೋಹಿತ್ ಶರ್ಮಾ ಹುಸಿಗೊಳಿಸಿದ್ದಾರೆ. ಅಲ್ಲದೆ ಟೀಮ್ ಇಂಡಿಯಾದಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.
ಇತ್ತ ವೈಟ್ ಬಾಲ್ನಲ್ಲಿ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಿದರೂ, ರೆಡ್ ಬಾಲ್ ಕ್ರಿಕೆಟ್ನಲ್ಲಿ ಅವರ ಪ್ರದರ್ಶನ ಅಷ್ಟಕಷ್ಟೇ. ಇದಕ್ಕೆ ಸಾಕ್ಷಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅವರು ಕಲೆಹಾಕಿರುವ ಒಟ್ಟು ರನ್ಗಳು.
ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯಲ್ಲಿ ರೋಹಿತ್ ಶರ್ಮಾ 5 ಇನಿಂಗ್ಸ್ಗಳಲ್ಲಿ ಕಲೆಹಾಕಿದ್ದು ಕೇವಲ 31 ರನ್ಗಳು. ಅಂದರೆ ಟೀಮ್ ಇಂಡಿಯಾ ನಾಯಕ ಕೇವಲ 6.20 ಸರಾಸರಿಯಲ್ಲಿ ಮಾತ್ರ ರನ್ ಗಳಿಸಿದ್ದರು. ಹೀಗಾಗಿ ಹಿಟ್ಮ್ಯಾನ್ ಅವರನ್ನು ಟೆಸ್ಟ್ ತಂಡದಿಂದ ಕೈ ಬಿಡಲಿದ್ದಾರೆ ಎನ್ನಲಾಗಿತ್ತು. ಆದರೀಗ ಸದ್ಯಕ್ಕಂತು ನಿವೃತ್ತಿ ನೀಡಲ್ಲ ಎನ್ನುವ ಮೂಲಕ ರೋಹಿತ್ ಶರ್ಮಾ ಅಚ್ಚರಿ ಮೂಡಿಸಿದ್ದಾರೆ.
ಇತ್ತ ಟೀಮ್ ಇಂಡಿಯಾ ತನ್ನ ಮುಂದಿನ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಗಳನ್ನಾಡಬೇಕಿದೆ. ಇದಕ್ಕಾಗಿ ಬಲಿಷ್ಠ ಬಳಗವನ್ನು ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಆಯ್ಕೆ ಸಮಿತಿ ಮುಂದಿದೆ. ಈ ಸರಣಿಗಾಗಿ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಬೇಕಾ ಅಥವಾ ಬೇಡವಾ ಎಂಬುದೇ ಈಗ ದೊಡ್ಡ ಚಿಂತೆ.
ಏಕೆಂದರೆ ಕಳೆದ ಸರಣಿಯಲ್ಲಿನ ರೋಹಿತ್ ಶರ್ಮಾ ಅವರ ಪ್ರದರ್ಶನವನ್ನು ಪರಿಗಣಿಸಿದರೆ ಅವರನ್ನು ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡುವಂತಿಲ್ಲ. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಕಾರಣ ಭಾರತ ತಂಡದ ನಾಯಕನನ್ನು ಬದಲಿಸುವಂತಿಲ್ಲ. ಇದೇ ಕಾರಣದಿಂದಾಗಿ ಇದೀಗ ಬಿಸಿಸಿಐ ಆಯ್ಕೆ ಸಮಿತಿ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ.
ಹೀಗಾಗಿ ರೋಹಿತ್ ಶರ್ಮಾ ಅವರ ಟೆಸ್ಟ್ ಭವಿಷ್ಯದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಐಪಿಎಲ್ ಮುಗಿಯುವರೆಗೂ ಕಾದು ನೋಡಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಸದ್ಯಕ್ಕಂತು ರೋಹಿತ್ ಶರ್ಮಾ ಅವರ ಟೆಸ್ಟ್ ಭವಿಷ್ಯ ತೂಗುಯ್ಯಾಲೆಯಲ್ಲಿರುವುದು ಸ್ಪಷ್ಟ. ಇದಾಗ್ಯೂ 37 ವರ್ಷದ ಹಿಟ್ಮ್ಯಾನ್ಗೆ ಇಂಗ್ಲೆಂಡ್ ವಿರುದ್ಧದ ಪ್ರತಿಷ್ಠಿತ ಸರಣಿಯಲ್ಲಿ ಮತ್ತೊಂದು ಅವಕಾಶ ನೀಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಮುಂದಿನ ವಿಶ್ವಕಪ್ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಲ್ಲ..!
ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:
- ಜೂನ್ 20: ಮೊದಲ ಟೆಸ್ಟ್, ಲೀಡ್ಸ್
- ಜುಲೈ 2: ಎರಡನೇ ಟೆಸ್ಟ್, ಬರ್ಮಿಂಗ್ಹ್ಯಾಮ್
- ಜುಲೈ 10: ಮೂರನೇ ಟೆಸ್ಟ್, ಲಾರ್ಡ್ಸ್
- ಜುಲೈ 23: ನಾಲ್ಕನೇ ಟೆಸ್ಟ್, ಮ್ಯಾಂಚೆಸ್ಟರ್
- ಜುಲೈ 31: ಐದನೇ ಟೆಸ್ಟ್, ಲಂಡನ್