AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WI vs SA: 7 ಭರ್ಜರಿ ಸಿಕ್ಸ್​: ಪೂರನ್ ಸಿಡಿಲಬ್ಬರಕ್ಕೆ ಸೋತ ಆಫ್ರಿಕಾ

West Indies vs South Africa, 1st T20I: ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್​ನಲ್ಲಿ ಸೌತ್ ಆಫ್ರಿಕಾ ತಂಡ ಸೋತಿದೆ. ಇನ್ನು 2ನೇ ಪಂದ್ಯವು ಭಾನುವಾರ ನಡೆಯಲಿದ್ದು, ಈ ಮ್ಯಾಚ್ ಸೌತ್ ಆಫ್ರಿಕಾ ಪಾಲಿಗೆ ನಿರ್ಣಾಯಕ. ಹಾಗೆಯೇ ಮೂರನೇ ಟಿ20 ಪಂದ್ಯವು ಮಂಗಳವಾರ ಜರುಗಲಿದೆ.

WI vs SA: 7 ಭರ್ಜರಿ ಸಿಕ್ಸ್​: ಪೂರನ್ ಸಿಡಿಲಬ್ಬರಕ್ಕೆ ಸೋತ ಆಫ್ರಿಕಾ
Pooran
ಝಾಹಿರ್ ಯೂಸುಫ್
|

Updated on: Aug 24, 2024 | 8:01 AM

Share

ಟ್ರಿನಿಡಾಡ್​ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರೋವ್​ಮನ್ ಪೊವೆಲ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು.

ಆರಂಭಿಕರಾದ ರಿಕೆಲ್ಟನ್ (4) ಹಾಗೂ ರೀಝ ಹೆಂಡ್ರಿಕ್ಸ್ (4) ಬೇಗನೆ ಔಟಾದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಐಡೆನ್ ಮಾರ್ಕ್ರಾಮ್ 14 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳದಿ ಟ್ರಿಸ್ಟನ್ ಸ್ಟಬ್ಸ್ ಸಿಡಿಲಬ್ಬರದ ಬ್ಯಾಟಿಂಗ್​ನೊಂದಿಗೆ ಗಮನ ಸೆಳೆದರು.

ಸ್ಪೋಟಕ ಇನಿಂಗ್ಸ್ ಆಡಿದ ಸ್ಟಬ್ಸ್ 42 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 76 ರನ್ ಚಚ್ಚಿದರು. ಈ ಮೂಲಕ 15 ಓವರ್​ಗಳಲ್ಲಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಅಂತಿಮ ಹಂತದಲ್ಲಿ ಪ್ಯಾಟ್ರಿಕ್ ಕ್ರುಗರ್ 44 ರನ್​ಗಳ ಕೊಡುಗೆ ನೀಡುವ ಮೂಲಕ ಸೌತ್ ಆಫ್ರಿಕಾ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿತು.

ಪೂರನ್ ಪವರ್​ಗೆ ಎದುರಾಳಿ ತತ್ತರ:

175 ರನ್​ಗಳ ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕರಾದ ಅಲಿಕ್ ಅಥನಾಝ್ ಹಾಗೂ ಶಾಯ್ ಹೋಪ್ ಅತ್ಯುತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 84 ರನ್​ಗಳ ಜೊತೆಯಾಟವಾಡಿದ ಬಳಿಕ ಅಥನಾಝ್ (40) ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ 36 ಎಸೆತಗಳಲ್ಲಿ 51 ರನ್​ ಬಾರಿಸಿ ಶಾಯ್ ಹೋಪ್ ಕೂಡ ವಿಕೆಟ್ ಕೈಚೆಲ್ಲಿದರು.

ಈ ಹಂತದಲ್ಲಿ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ ತಮ್ಮ ಸಿಡಿಲಬ್ಬರ ಶುರು ಮಾಡಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಪೂರನ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್​ಗಳ ಸುರಿಮಳೆಗೈದರು.

ಅಲ್ಲದೆ ಕೇವಲ 26 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ ಪೂರನ್ ಅಜೇಯ 65 ರನ್​ ಬಾರಿಸಿದರು. ಈ ಮೂಲಕ 17.5 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ವೆಸ್ಟ್ ಇಂಡೀಸ್ ತಂಡ ಗುರಿ ತಲುಪಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಶಾಯ್ ಹೋಪ್ , ಅಲಿಕ್ ಅಥಾನಾಝ್ , ನಿಕೋಲಸ್ ಪೂರನ್ (ವಿಕೆಟ್ ಕೀಪರ್) , ರೋಸ್ಟನ್ ಚೇಸ್ , ರೋವ್​ಮನ್ ಪೊವೆಲ್ (ನಾಯಕ) , ಶೆರ್ಫೇನ್ ರುದರ್ಫೋರ್ಡ್ , ರೊಮಾರಿಯೋ ಶೆಫರ್ಡ್ , ಅಕೇಲ್ ಹೋಸೇನ್ , ಗುಡಾಕೇಶ್ ಮೋಟಿ , ಮ್ಯಾಥ್ಯೂ ಫೋರ್ಡ್ , ಶಮರ್ ಜೋಸೆಫ್.

ಇದನ್ನೂ ಓದಿ: IPL 2025: ಧೋನಿ RCB ತಂಡದ ನಾಯಕರಾಗಿದ್ದರೆ 3 ಟ್ರೋಫಿ ಗೆದ್ದಿರುತ್ತಿತ್ತು..!

ಸೌತ್ ಆಫ್ರಿಕಾ ಪ್ಲೇಯಿಂಗ್ 11: ರೀಝ ಹೆಂಡ್ರಿಕ್ಸ್ , ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್) , ಐಡೆನ್ ಮಾರ್ಕ್ರಾಮ್ (ನಾಯಕ) , ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ , ಟ್ರಿಸ್ಟನ್ ಸ್ಟಬ್ಸ್ , ಡೊನೊವನ್ ಫೆರೆರಾ , ಪ್ಯಾಟ್ರಿಕ್ ಕ್ರುಗರ್ , ಜಾರ್ನ್ ಫೋರ್ಚುಯಿನ್ , ಒಟ್ನೀಲ್ ಬಾರ್ಟ್‌ಮ್ಯಾನ್ , ನಾಂಡ್ರೆ ಬರ್ಗರ್ , ಕ್ವೆನಾ ಮಫಕಾ.