WTC Final Scenario: ಡ್ರಾದತ್ತ ಇಂಡೋ-ಆಸೀಸ್ ಪಂದ್ಯ: WTC ಫೈನಲ್ಗೇರುತ್ತಾ ಭಾರತ?
WTC Final Scenario: ಈ ಮ್ಯಾಚ್ ಡ್ರಾನಲ್ಲಿ ಅಂತ್ಯಗೊಂಡರೆ ಟೀಮ್ ಇಂಡಿಯಾ ಪಾಲಿಗೆ ಹಿನ್ನಡೆಯಾಗಲಿದೆ. ಅಂದರೆ ಈ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ನೇರ ಅರ್ಹತೆ ಪಡೆಯಲಿದೆ.
India vs Australia 4th Test: ಅಹಮದಾಬಾದ್ನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4 ಪಂದ್ಯವು ಡ್ರಾದತ್ತ ಸಾಗಿದೆ. ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡವು 480 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ 571 ರನ್ ಪೇರಿಸಿದೆ. ಇದೀಗ 4ನೇ ದಿನದಾಟ ಕೂಡ ಅಂತ್ಯವಾಗಿದೆ. ಇನ್ನು ಉಳಿದಿರುವುದು ಕೇವಲ ಒಂದು ದಿನದಾಟ ಮಾತ್ರ. ಇದರೊಳಗೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ತಂಡವನ್ನು ಆಲೌಟ್ ಮಾಡಿ, ಕಡಿಮೆ ಗುರಿ ಪಡೆದರೆ ಮಾತ್ರ ಈ ಪಂದ್ಯವನ್ನು ಗೆಲ್ಲಬಹುದು. ಇಲ್ಲದಿದ್ದರೆ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಳ್ಳುವುದು ಬಹುತೇಕ ಖಚಿತ.
ಇತ್ತ ಈ ಮ್ಯಾಚ್ ಡ್ರಾನಲ್ಲಿ ಅಂತ್ಯಗೊಂಡರೆ ಟೀಮ್ ಇಂಡಿಯಾ ಪಾಲಿಗೆ ಹಿನ್ನಡೆಯಾಗಲಿದೆ. ಅಂದರೆ ಈ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ನೇರ ಅರ್ಹತೆ ಪಡೆಯಲಿದೆ. ಒಂದು ವೇಳೆ ಡ್ರಾ ಆದರೆ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ನಡುವಣ ಟೆಸ್ಟ್ ಸರಣಿಯ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ.
ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಟೇಬಲ್ನಲ್ಲಿ ಆಸ್ಟ್ರೇಲಿಯಾ ತಂಡವು ಶೇ. 68.52 ರಷ್ಟು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಅಲ್ಲದೆ ಈಗಾಗಲೇ ಫೈನಲ್ಗೆ ಅರ್ಹತೆಯನ್ನೂ ಕೂಡ ಪಡೆದುಕೊಂಡಿದೆ. ಇನ್ನು ದ್ವಿತೀಯ ಸ್ಥಾನದಲ್ಲಿರುವ ಟೀಮ್ ಇಂಡಿಯಾ ಶೇ. 60.29 ರಷ್ಟು ಪಾಯಿಂಟ್ ಹೊಂದಿದೆ. ಹಾಗೆಯೇ ಶೇ. 55.56 ಪಾಯಿಂಟ್ಗಳೊಂದಿಗೆ ಶ್ರೀಲಂಕಾ ತಂಡವು ಮೂರನೇ ಸ್ಥಾನದಲ್ಲಿದೆ.
ಇದನ್ನೂ ಓದಿ: Virat Kohli: 186 ರನ್ ಸಿಡಿಸಿ ಹಿಟ್ಮ್ಯಾನ್ನ ಹಿಂದಿಕ್ಕಿದ ಕಿಂಗ್ ಕೊಹ್ಲಿ
ಇಲ್ಲಿ ಡಬ್ಲ್ಯೂಟಿಸಿ ಫೈನಲ್ಗೇರಲು ಭಾರತ ಹಾಗೂ ಶ್ರೀಲಂಕಾ ನಡುವೆ ಪೈಪೋಟಿ ಏರ್ಪಟ್ಟಿದೆ. ಒಂದು ವೇಳೆ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೆ ಟೀಮ್ ಇಂಡಿಯಾದ ಪಾಯಿಂಟ್ 58.7 ಕ್ಕೆ ಇಳಿಯಲಿದೆ. ಇದರಿಂದ ಶ್ರೀಲಂಕಾಗೆ ಫೈನಲ್ಗೇರುವ ಅವಕಾಶ ಹೆಚ್ಚಾಗಲಿದೆ.
ಏಕೆಂದರೆ ಶೇ. 55.56 ಪಾಯಿಂಟ್ ಹೊಂದಿರುವ ಶ್ರೀಲಂಕಾ ತಂಡವು ನ್ಯೂಜಿಲೆಂಡ್ ವಿರುದ್ಧದ 2 ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಂಡರೆ ಶೇ. 61.1 ಅಂಕಗಳನ್ನು ಪಡೆಯಲಿದೆ. ಈ ಮೂಲಕ ಟೀಮ್ ಇಂಡಿಯಾವನ್ನು ಹಿಂದಿಕ್ಕಿ ಶ್ರೀಲಂಕಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಬಹುದು.
ನ್ಯೂಜಿಲೆಂಡ್ ಕೈಯಲ್ಲಿದೆ ಟೀಮ್ ಇಂಡಿಯಾ ಭವಿಷ್ಯ:
ಪ್ರಸ್ತುತ ನಡೆಯುತ್ತಿರುವ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವು ಶ್ರೀಲಂಕಾವನ್ನು ಒಂದು ಪಂದ್ಯದಲ್ಲಿ ಮಣಿಸಿದರೆ, ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯಲಿದೆ. ಏಕೆಂದರೆ ಶ್ರೀಲಂಕಾ ಒಂದು ಪಂದ್ಯವನ್ನು ಮಾತ್ರ ಗೆದ್ದರೆ, ಅವರ ಪಾಯಿಂಟ್ ಶೇ. 57.58 ಇರಲಿದೆ.
ಇತ್ತ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೆ ಟೀಮ್ ಇಂಡಿಯಾದ ಪಾಯಿಂಟ್ ಶೇ. 58.7 ಆಗಲಿದೆ. ಇದರಿಂದ ಭಾರತ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರುವ ಅವಕಾಶ ಇರಲಿದೆ.
ಹೀಗಾಗಿ ನ್ಯೂಜಿಲೆಂಡ್ ತಂಡವು ಶ್ರೀಲಂಕಾ ವಿರುದ್ಧ ಒಂದು ಪಂದ್ಯದಲ್ಲಿ ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಅರ್ಹತೆ ಖಚಿತವಾಗಲಿದೆ. ಹೀಗಾಗಿಯೇ ಪ್ರಸ್ತುತ ಸನ್ನಿವೇಶದಲ್ಲಿ ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಭವಿಷ್ಯ ನ್ಯೂಜಿಲೆಂಡ್ ತಂಡದ ಕೈಯಲ್ಲಿದೆ ಎನ್ನಬಹುದು.
ಭಾರತ ತಂಡ ಕೊನೆಯ ಪಂದ್ಯ ಗೆದ್ದರೆ?
ಅಹಮದಾಬಾದ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಪವಾಡ ನಡೆದು ಟೀಮ್ ಇಂಡಿಯಾ ಗೆದ್ದರೆ ವಿಶ್ವ ಟೆಸ್ಟ್ ಚಾಂಪಿಯನ್ನ ಫೈನಲ್ಗೆ ನೇರ ಅರ್ಹತೆ ಪಡೆಯಲಿದೆ. ಏಕೆಂದರೆ ಈ ಒಂದು ಗೆಲುವು ಟೀಮ್ ಇಂಡಿಯಾದ ಪಾಯಿಂಟ್ ಅನ್ನು ಶೇ. 62.5 ಕ್ಕೆ ತಂದು ನಿಲ್ಲಿಸಲಿದೆ. ಇತ್ತ ಶ್ರೀಲಂಕಾ ನ್ಯೂಜಿಲೆಂಡ್ ವಿರುದ್ಧದ 2 ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಂಡರೂ ಶೇ. 61.1 ಅಂಕಗಳನ್ನು ಮಾತ್ರ ಪಡೆಯಲಿದೆ.
ಆದರೆ ಇದೀಗ ಭಾರತ-ಆಸ್ಟ್ರೇಲಿಯಾ ನಡುವಣ ಕೊನೆಯ ಟೆಸ್ಟ್ ಪಂದ್ಯವು ಡ್ರಾದತ್ತ ಮುಖ ಮಾಡಿರುವುದು ಸ್ಪಷ್ಟ. ಹೀಗಾಗಿ ಈ ಪಂದ್ಯವು ಡ್ರಾನಲ್ಲಿ ಕೊನೆಗೊಂಡರೆ, ಭಾರತದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಅರ್ಹತೆ ನ್ಯೂಜಿಲೆಂಡ್-ಶ್ರೀಲಂಕಾ ನಡುವಣ ಟೆಸ್ಟ್ ಸರಣಿಯ ಫಲಿತಾಂಶದ ಮೇಲೆ ಅವಲಂಭಿತವಾಗಿರಲಿದೆ.