ಕ್ರಿಕೆಟ್ ಲೋಕಕ್ಕೂ ಕಾಲಿಟ್ಟ ಹೆಮ್ಮಾರಿ ಕೊರೊನಾ!
ಕೊರೊನಾ.. ಕೊರೊನಾ.. ಕೊರೊನಾ.. ತನ್ನ ಕಬಂಧ ಬಾಹುಗಳಿಂದ ಇಡೀ ಜಗತ್ತನ್ನೇ ಗಡ ಗಡ ನಡುಗಿಸುತ್ತಿರೋ ವೈರಸ್. ಈ ಕೊರೊನಾ ವೈರಸ್ ಎಷ್ಟು ಅಪಾಯಕಾರಿಯಾಗಿದೆ ಅಂದ್ರೆ, ಇದರ ಹೊಡೆತಕ್ಕೆ ಎಲ್ಲಾ ರಂಗವೂ ಅಕ್ಷರಷಃ ತತ್ತರಿಸಿ ಹೋಗಿದೆ. ಆದ್ರೀಗ ಕೊರೋನಾ ಅನ್ನೋ ಭೂತ ಕ್ರೀಡಾಕ್ಷೇತ್ರಕ್ಕೂ ವಕ್ಕರಿಸಿಕೊಂಡಿದ್ದು, ಜಾಗತಿಕ ಮಟ್ಟದ ಕ್ರೀಡಾಕೂಟಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ. ಕೊರೊನಾ ವೈರಸ್ ಎಫೆಕ್ಟ್ ಕ್ರೀಡಾ ಜಗತ್ತನ್ನ ಯಾವ ಮಟ್ಟಿಗೆ ಅಲ್ಲೋಲ ಕಲ್ಲೋಲ ಮಾಡಿದೆ ಅಂದ್ರೆ, ಈ ವರ್ಷ ಜಪಾನ್ನ ಟೋಕಿಯೋದಲ್ಲಿ ನಡೆಯೋ ಒಲಿಂಪಿಕ್ಸ್ಗೂ ಕಂಟಕ […]
ಕೊರೊನಾ.. ಕೊರೊನಾ.. ಕೊರೊನಾ.. ತನ್ನ ಕಬಂಧ ಬಾಹುಗಳಿಂದ ಇಡೀ ಜಗತ್ತನ್ನೇ ಗಡ ಗಡ ನಡುಗಿಸುತ್ತಿರೋ ವೈರಸ್. ಈ ಕೊರೊನಾ ವೈರಸ್ ಎಷ್ಟು ಅಪಾಯಕಾರಿಯಾಗಿದೆ ಅಂದ್ರೆ, ಇದರ ಹೊಡೆತಕ್ಕೆ ಎಲ್ಲಾ ರಂಗವೂ ಅಕ್ಷರಷಃ ತತ್ತರಿಸಿ ಹೋಗಿದೆ. ಆದ್ರೀಗ ಕೊರೋನಾ ಅನ್ನೋ ಭೂತ ಕ್ರೀಡಾಕ್ಷೇತ್ರಕ್ಕೂ ವಕ್ಕರಿಸಿಕೊಂಡಿದ್ದು, ಜಾಗತಿಕ ಮಟ್ಟದ ಕ್ರೀಡಾಕೂಟಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ.
ಕೊರೊನಾ ವೈರಸ್ ಎಫೆಕ್ಟ್ ಕ್ರೀಡಾ ಜಗತ್ತನ್ನ ಯಾವ ಮಟ್ಟಿಗೆ ಅಲ್ಲೋಲ ಕಲ್ಲೋಲ ಮಾಡಿದೆ ಅಂದ್ರೆ, ಈ ವರ್ಷ ಜಪಾನ್ನ ಟೋಕಿಯೋದಲ್ಲಿ ನಡೆಯೋ ಒಲಿಂಪಿಕ್ಸ್ಗೂ ಕಂಟಕ ತಂದಿಟ್ಟಿದೆ. ವಿಶ್ವದ ಎಲ್ಲಾ ಕ್ರೀಡಾಪಟುಗಳು ಪಾಲ್ಗೊಳ್ಳೋ ಈ ಮಹಾ ಕ್ರೀಡಾಕೂಟವನ್ನ ಜಪಾನ್ನಿಂದ ಮುಂದೂಡೋ ಬಗ್ಗೆ ಮತ್ತು ಬೇರೆಡೆ ಸ್ಥಳಾಂತರಿಸೋ ಬಗ್ಗೆ ಚರ್ಚೆ ಶುರುವಾಗಿದೆ. ಯಾಕಂದ್ರೆ ಜಪಾನ್ನಲ್ಲೂ ಕೊರೊನಾ ವೈರಸ್ ಆರ್ಭಟ ಜೋರಾಗಿದ್ದು, ಯಾವ ದೇಶವೂ ತಮ್ಮ ಕ್ರೀಡಾಪಟುಗಳನ್ನ ಟೋಕಿಯೋಗೆ ಕಳುಹಿಸಿಕೊಡೋದಕ್ಕೆ ತಯಾರಿಲ್ಲ.
ಜಂಟಲ್ಮೆನ್ ಗೇಮ್ಗೂ ಎಂಟ್ರಿ ಕೊಟ್ಟ ಕೊರೊನಾ ಭೀತಿ! ಈಗಾಗಲೇ ಕೊರೊನಾ ಎಂಟ್ರಿ ಕೊಟ್ಟಿರೋ ದೇಶಗಳಲ್ಲೆಲ್ಲಾ ಕ್ರೀಡಾಕೂಟವನ್ನೂ ಮುಂದೂಡಲಾಗ್ತಿದೆ. ಆದ್ರೀಗ ಈ ಕೊರೊನಾ ಭೀತಿ ಜಂಟಲ್ಮೆನ್ ಗೇಮ್ ಕ್ರಿಕೆಟ್ಗೂ ಎಂಟ್ರಿ ಕೊಟ್ಟಿದೆ. ಅರೇ ಇದೇನಿದು ಕೊರೊನಾ ಭೀತಿ ಕ್ರಿಕೆಟಿಗರಿಗೆ ಶುರುವಾಗಿದ್ಯಾ ಅಂತಾ ಆಶ್ಚರ್ಯ ಪಡಬೇಡಿ. ಅದ್ಹೇಗೆ ಅನ್ನೋದನ್ನ ಇಲ್ಲಿ ಓದಿ.
ಕೊರೊನಾ ಭೂತಕ್ಕೆ ಬೆಚ್ಚಿ ಬಿದ್ದಿದ್ದಾರೆ ಇಂಗ್ಲೆಂಡ್ ಕ್ರಿಕೆಟಿಗರು! ನಿಜ.. ಇಂಗ್ಲೆಂಡ್ ಕ್ರಿಕೆಟಗರು ಈ ಕೊರೊನಾ ವೈರಸ್ಗೆ ಬೆಚ್ಚಿ ಬಿದ್ದಿದ್ದಾರೆ. ಯಾವ ಮಟ್ಟಿಗೆ ಅಂದ್ರೆ ಆಟಗಾರರು ಪರಸ್ಪರ ಕೈ ಕುಲುಕೋದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಎಲ್ಲಿ ಏನಾಗುತ್ತೋ ಅನ್ನೋ ಭಯ ಇಂಗ್ಲೆಂಡ್ ಕ್ರಿಕೆಟಿಗರನ್ನ ಕಾಡೋದಕ್ಕೆ ಶುರುಮಾಡಿದೆ. ಹೀಗಾಗಿ ಮೈದಾನದಲ್ಲಿರೋ ಪ್ರತಿ ಕ್ಷಣವನ್ನೂ ಆಂಗ್ಲರು ಎಚ್ಚರಿಕೆಯಿಂದ ಮತ್ತು ಮುಂಜಾಗ್ರತಾ ಕ್ರಮಗಳಿಂದಲೇ ಕಳೆಯುತ್ತಿದ್ದಾರೆ.
ಶ್ರೀಲಂಕಾ ಪ್ರವಾಸದಲ್ಲಿ ಕೈ ಕುಲುಕೋದಿಲ್ಲ ರೂಟ್ ಪಡೆ! ಇದೇ ತಿಂಗಳ 7ಕ್ಕೆ ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಲಂಕಾದಲ್ಲಿ ಇಂಗ್ಲೆಂಡ್ ಆಟಗಾರರು ಶ್ರೀಲಂಕಾ ಕ್ರಿಕೆಟಿಗರನ್ನ ತಬ್ಬಿಕೊಂಡು ಚೆನ್ನಾಗಿ ಆಡಿದ್ರಿ ಅಂತಾ ಹೇಳೊದಿರಲಿ. ಲಂಕಾ ಕ್ರಿಕೆಟಿಗರ ಕೈ ಕುಲುಕೋದಕ್ಕೂ ಮುಂದಾಗೋದಿಲ್ಲ. ಈ ವಿಚಾರವನ್ನ ಸ್ವತಃ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಬಾಯ್ಬಿಟ್ಟಿದ್ದಾರೆ.
ನಾವು ಕೈ ಕುಲುಕೋದಿಲ್ಲ. ‘‘ ಈ ಬಾರಿ ಶ್ರೀಲಂಕಾ ಪ್ರವಾಸದಲ್ಲಿ ನಾವು ಪರಸ್ಪರ ಕೈ ಕುಲುಕೋದಕ್ಕೆ ಹೋಗೋದಿಲ್ಲ. ಅದರ ಬದಲು ಮುಷ್ಟಿ ಗುದ್ದು ನೀಡುತ್ತೇವೆ. ನಮ್ಮ ಕೈಗಳನ್ನು ಆಗಾಗ ತೊಳೆದುಕೊಳ್ಳುತ್ತೇವೆ ಹಾಗೂ ಬ್ಯಾಕ್ಟೀರಿಯಾ ನಿರೋಧಕ ಜೆಲ್ಗಳನ್ನ ಬಳಸುತ್ತೇವೆ.’’ -ಜೋ ರೂಟ್, ಇಂಗ್ಲೆಂಡ್ ತಂಡದ ನಾಯಕ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಹೇಳಿದ ಮಾತುಗಳಿವು. ಕೊರೊನಾ ವೈರಸ್ ಭೀತಿಗೆ, ಇಂಗ್ಲೆಂಡ್ ಕ್ರಿಕೆಟಿಗರು ಹ್ಯಾಂಡ್ ಶೇಕ್ ಮಾಡೋದಕ್ಕೂ ಹಿಂದೇಟು ಹಾಕ್ತಿದ್ದಾರೆ. ಯಾಕಂದ್ರೆ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ, ಇಂಗ್ಲೆಂಡ್ ಕ್ರಿಕೆಟಿಗರಿಗೆ ಅನುಮಾನಸ್ಪದ ಸೋಂಕು ಅಟ್ಯಾಕ್ ಮಾಡಿತ್ತು.
ಒಟ್ಟು 10 ಕ್ರಿಕೆಟಿಗರು ಮತ್ತು ನಾಲ್ಕು ಮಂದಿ ಸಹಾಯಕ ಸಿಬ್ಬಂದಿಗಳು ಮಿಸ್ಟ್ರಿ ವೈರಸ್ ಅಟ್ಯಾಕ್ನಿಂದ ಅನಾರೋಗ್ಯಕ್ಕೆ ತುತ್ತಾಗಿದ್ರು. ಆದ್ರೆ ಆದಷ್ಟು ಬೇಗ ಚೇತರಿಸಿಕೊಂಡ ರೂಟ್ ಪಡೆ, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಗೆದ್ದು ತವರಿಗೆ ವಾಪಸ್ ಆಗಿತ್ತು. ಇದು ಇಂಗ್ಲೆಂಡ್ ಕ್ರಿಕೆಟಿಗರಿಗೆ ಕೊರೊನಾ ವೈರಸ್ ಬಗ್ಗೆ ಇನ್ನಿಲ್ಲದ ಭಯ ಹುಟ್ಟುವ ಹಾಗೇ ಮಾಡಿದೆ.
ದೂರ ದೂರವಿರುತ್ತೇವೆ. ‘‘ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆದ ಬೆಳವಣಿಗೆಯ ನಂತರ ನಮ್ಮ ಆಟಗಾರರು ತಮ್ಮಲ್ಲಿ ಕನಿಷ್ಟ ಸಂಪರ್ಕ ಸಾಧಿಸಲು ನಿರ್ಧರಿಸಿದ್ದಾರೆ. ಇದರಿಂದ ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳು ಪರಸ್ಪರ ಹರಡುವುದನ್ನ ತಡೆಗಟ್ಟಬಹುದು.’’ -ಜೋ ರೂಟ್, ಇಂಗ್ಲೆಂಡ್ ತಂಡದ ನಾಯಕ
ಜೋ ರೂಟ್ ಹೇಳಿರೋದ್ರಲ್ಲಿ ಯಾವುದೇ ತಪ್ಪಿಲ್ಲ.. ಯಾಕಂದ್ರೆ ಕೊರೊನಾ ಈಗಾಗಲೇ ವಿಶ್ವವ್ಯಾಪಿ ವ್ಯಾಪಿಸೋದಕ್ಕೆ ಶುರುಮಾಡಿದ್ದು, ನಮ್ಮ ಭಾರತದಲ್ಲೂ ತನ್ನ ಕುರುಹನ್ನ ತೋರಿಸೋಕೆ ಶುರುಮಾಡಿದೆ. ಇನ್ನು ಶ್ರೀಲಂಕಾದಲ್ಲೂ ಒಬ್ಬರಿಗೆ ಕೊರೊನಾ ವೈರಸ್ ತಗುಲಿರೋದು ಪತ್ತೆಯಾಗಿದೆ. ಹೀಗಾಗಿ ಇಂಗ್ಲೆಂಡ್ ಕ್ರಿಕೆಟಿಗರಂತೆ ಲಂಕಾ ಕ್ರಿಕೆಟಿಗರು ಕೊರೊನಾ ಭೀತಿಯಿಂದ ಹ್ಯಾಂಡ್ ಶೇಕ್ ಮಾಡೋದಕ್ಕೆ ಹಿಂದೇಟು ಹಾಕಿದ್ರೂ ಆಶ್ಚರ್ಯವೇನಿಲ್ಲ.
ಕೊರೊನಾ ಭೀತಿ.. ದುಬೈನಲ್ಲಿ ಐಸಿಸಿ ಸಭೆಗೆ ಹೋಗದ ಗಂಗೂಲಿ! ಇನ್ನು ಈ ವರ್ಷದ ಏಷ್ಯಾ ಕಪ್ ದುಬೈನಲ್ಲಿ ನೆಡಯಲಿದೆ ಎಂದಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ನಿನ್ನೆ ದುಬೈನಲ್ಲಿ ನಡೆಯಬೇಕಿದ್ದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಬೇಕಿತ್ತು. ಆದ್ರೆ ಕೊರೊನಾ ವೈರಸ್ ಭೀತಿಯಿಂದಾಗಿ ದಾದಾ ದುಬೈ ಪ್ರಯಾಣವನ್ನ ರದ್ದು ಮಾಡಿದ್ದಾರೆ. ಯಾಕಂದ್ರೆ ದುಬೈನಲ್ಲಿ ಈಗಾಗಲೇ 730 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ. ಹೀಗಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯನ್ನ ಈ ತಿಂಗಳ ಅಂತ್ಯಕ್ಕೆ ಮುಂದೂಡಲಾಗಿದೆ.
ಬ್ಯಾಕಾಂಕ್ನಲ್ಲಿ ಎಸಿಸಿ ಟಿಟ್ವೆಂಟಿ ಟೂರ್ನಿ ರದ್ದು! ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಬ್ಯಾಂಕಾಕ್ನಲ್ಲಿ ಆಯೋಜಿಸಿದ್ದ ಈಸ್ಟರ್ನ್ ರಿಜಿನಿಲ್ ಟಿಟ್ವೆಂಟಿ ಟೂರ್ನಿಯಲ್ಲಿ ಪಾಲ್ಗೊಳ್ಳೋದಕ್ಕೆ ಭೂತಾನ್, ಮಯನ್ಮಾರ್ ಮತ್ತು ಚೀನಾ ತಂಡಗಳು ಹಿಂದೆ ಸರಿದಿವೆ. ಚೀನಾ ಎಂಟ್ರಿಗೆ ಬ್ಯಾಂಕಾಕ್ ಅನುಮತಿ ನೀಡಿಲ್ಲ. ಆದ್ರೆ ಭೂತಾನ್ ಮತ್ತು ಮಯನ್ಮಾರ್ ತಂಡಗಳು ಕೊರೊನಾ ವೈರಸ್ ಭೀತಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ ಏಷ್ಯಾಕಪ್ಗೆ ನಡೆಯಬೇಕಿದ್ದ ಅರ್ಹತಾ ಪಂದ್ಯಗಳು ಮುಂದಕ್ಕೆ ಹೋಗಲಿದೆ.
ಥಾಯ್ಲೆಂಡ್ ಪ್ರವಾಸದಿಂದ ಹಿಂದೆ ಸರಿದ ಐರ್ಲೆಂಡ್ ಆಟಗಾರ್ತಿಯರು: 2021 ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಅರ್ಹತಾ ಪಂದ್ಯಗಳು ಥಾಯ್ಲೆಂಡ್ನಲ್ಲಿ ನಡೆಯಲಿದೆ. ಆದ್ರೆ ಥಾಯ್ಲೆಂಡ್ನಲ್ಲೂ ಕೊರೊನಾ ಕೊರೆಯುವ ಚಳಿಯಂತೆ ಕಾಡ್ತಿದೆ. ಹೀಗಾಗಿ ಐರ್ಲೆಂಡ್ ಮಹಿಳಾ ಕ್ರಿಕೆಟಿಗರು ಕೊರೊನಾ ವೈರಸ್ ಭೀತಿಯಿಂದ ಥಾಯ್ಲೆಂಡ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಮಹಿಳಾ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಮುಂದೂಡಲಾಗಿದೆ.
ಕೇವಲ ಕ್ರಿಕೆಟಿಗರಷ್ಟೇ ಕೊರೊನಾ ವೈರಸ್ಗೆ ಭಯ ಬಿದ್ದಿಲ್ಲ.. 29ನೇ ಆವೃತ್ತಿ ಅಜ್ಲಾನ್ ಶಾ ಹಾಕಿ ಟೂರ್ನಿ ಮಲೇಷ್ಯಾದಲ್ಲಿ ನಡೆಯಬೇಕಿತ್ತು. ಆದರೆ ಆ ದೇಶದಲ್ಲೂ ಕೊರೊನಾ ತೀವ್ರಗೊಂಡಿದೆ. ಹೀಗಾಗಿ ಆಟಗಾರರ ಸುರಕ್ಷತೆಯನ್ನು ಗಮನಿಸಿ ಈ ಟೂರ್ನಿಯನ್ನ ಮುಂದೂಡಲಾಗಿದೆ.
ಇನ್ನು ಮಲೇಷ್ಯಾದ ಕೌಲಾಲಂಪುರದಲ್ಲಿ ಮಾ. 25ರಿಂದ 29ರ ವರೆಗೆ ಏಷ್ಯಾ ತಂಡಗಳ ಸ್ಕ್ವಾಷ್ ಟೂರ್ನಿ ನಡೆಯಬೇಕಿತ್ತು. ಸ್ವತಃ ಜಪಾನ್ ಅಥ್ಲೆಟಿಕ್ಸ್ ಒಕ್ಕೂಟದ ಮನವಿ ಮೇರೆಗೆ ಈ ಸ್ಪರ್ಧೆಯನ್ನು ರದ್ದು ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಹೀಗೆ ಕೊರೊನಾ ಭೂತದಿಂದಾಗಿ ದಿನೇ ದಿನೇ ಒಂದಲ್ಲಾ ಒಂದು ಟೂರ್ನಿಗಳು ರದ್ದಾಗ್ತಿವೆ. ಇಲ್ಲಾ ಮುಂದೂಡಲಾಗ್ತಿದೆ. ಒಟ್ನಲ್ಲಿ ಕ್ರೀಡಾಕೂಟಕ್ಕೂ ಕೊರೊನಾ ಕಂಟಕವಾಗಿ ಕಾಡೋದಕ್ಕೆ ಶುರುಮಾಡಿದೆ.
Published On - 10:24 am, Wed, 4 March 20