Azadi Ka Amrit Mahotsav: ಸ್ವತಂತ್ರ್ಯದ ಬಳಿಕ ಅಥ್ಲೆಟಿಕ್ಸ್‌ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಕ್ರೀಡಾಪಟುಗಳಿವರು
Azadi Ka Amrit Mahotsav: ಮಿಲ್ಖಾ ಸಿಂಗ್ ಅಥ್ಲೇಟಿಕ್ಸ್ನಲ್ಲಿ ಪದಕ ಗೆದ್ದಿದ್ದಕ್ಕಾಗಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಇಡೀ ದೇಶಕ್ಕೆ ಒಂದು ದಿನ ರಜೆ ಘೋಷಿಸಿದ್ದರು.
ಭಾರತಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆ ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ (Azadi ka Amrit Mahotsav)ವನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸ್ವಾತಂತ್ರ್ಯದ ಬಳಿಕ ಭಾರತ ಕ್ರೀಡೆಯಲ್ಲಿ ನಡೆದು ಬಂದ ಹಾದಿ ರೋಚಕವಾಗಿದೆ. ಅದರಲ್ಲೂ ಅಥ್ಲೆಟಿಕ್ಸ್ನಲ್ಲಿ ಇಂದು ಭಾರತ ಸಾಧಿಸಿರುವ ಮೈಲಿಗಲ್ಲಿಗೆ ಹಲವು ವರ್ಷಗಳ ಹಿಂದೆ ಅಡಿಪಾಯ ಹಾಕಿದ ಹಲವು ದಿಗ್ಗಜರುಗಳನ್ನು ಇಲ್ಲಿ ನೆನೆಯಬೇಕಿದೆ. ಅಂತಹವರಲ್ಲಿ ಫ್ಲೈಯಿಂಗ್ ಸಿಖ್ಖ್ ಖ್ಯಾತಿಯ ಮಿಲ್ಕಾ ಸಿಂಗ್ ಕೂಡ ಒಬ್ಬರು. ಮಿಲ್ಖಾ ಸಿಂಗ್ ಅಥ್ಲೆಟಿಕ್ಸ್ನಲ್ಲಿ ಪದಕ ಗೆದ್ದಿದ್ದಕ್ಕಾಗಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಇಡೀ ದೇಶಕ್ಕೆ ಒಂದು ದಿನ ರಜೆ ಘೋಷಿಸಿದ್ದರು.
ಈ ಚಿನ್ನದಿಂದ ಇಲ್ಲಿಯವರೆಗೆ, ಸ್ವತಂತ್ರ ಭಾರತದಲ್ಲಿ, ಕೆಲವೇ ಸಂದರ್ಭಗಳಲ್ಲಿ ಅಥ್ಲೆಟಿಕ್ಸ್‌ನಲ್ಲಿ ದೊಡ್ಡ ಪದಕಗಳು ಬಂದಿವೆ. ಕಳೆದ ವರ್ಷ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಅವರ ಚಿನ್ನವು ಭಾರತೀಯ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ಪದಕವಾಗಿದೆ.
1. 1958ರಲ್ಲಿ ಕಾರ್ಡಿಫ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಿಲ್ಕಾ ಸಿಂಗ್ 46.71 ಸೆಕೆಂಡುಗಳಲ್ಲಿ 440 ಗಜ ಓಟವನ್ನು ಪೂರ್ಣಗೊಳಿಸಿದರು. ಅತ್ಯಂತ ಸಮೀಪದಿಂದ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸ್ವಾತಂತ್ರ್ಯದ ನಂತರ ಪ್ರಮುಖ ಬಹು-ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ.
2. ಜಮೈಕಾದ ಕಿಂಗ್‌ಸ್ಟನ್‌ನಲ್ಲಿ ನಡೆದ 1966 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪ್ರವೀಣ್ ಕುಮಾರ್ ಸೋಬ್ತಿ ಹ್ಯಾಮರ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಬೆಳ್ಳಿ ಪದಕವು ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಎರಡನೇ ಪದಕವಾಗಿದೆ. ಮಹಾಭಾರತ ಟಿವಿ ಶೋನಲ್ಲಿ ಪ್ರವೀಣ್ ಸೋಬ್ತಿ ‘ಭೀಮ’ನ ಪಾತ್ರವನ್ನು ನಿರ್ವಹಿಸಿದ್ದಾರೆ ಎಂಬುದನ್ನು ಇಲ್ಲಿ ನೆನೆಯಬೇಕಾದ ವಿಚಾರವಾಗಿದೆ.
3. ಮೊಹಿಂದರ್ ಸಿಂಗ್ ಗಿಲ್ ಅವರು 1970 ಮತ್ತು 1974 ರ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಸತತ ಟ್ರಿಪಲ್ ಜಂಪ್‌ನಲ್ಲಿ ಪದಕಗಳನ್ನು ಗೆದ್ದರು. 1970 ರಲ್ಲಿ ಕಂಚಿನ ಪದಕ ಮತ್ತು 1974 ರಲ್ಲಿ ಬೆಳ್ಳಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದು ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾರತದ ಮೂರನೇ ಮತ್ತು ನಾಲ್ಕನೇ ಪದಕಗಳಾಗಿವೆ.
4. ಪ್ಯಾರಿಸ್‌ನಲ್ಲಿ ನಡೆದ 2003 ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅಂಜು ಬಾಬಿ ಜಾರ್ಜ್ ಕಂಚು ಗೆದ್ದಿದ್ದರು. 6.70 ಮೀಟರ್ ಜಿಗಿತದೊಂದಿಗೆ ಮೂರನೇ ಸ್ಥಾನ ಪಡೆದು, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯರೊಬ್ಬರು ಗೆದ್ದ ಮೊದಲ ಪದಕ ಇದಾಗಿದೆ.
5. 2006 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ, ಭಾರತದ ಮಹಿಳಾ ರಿಲೇ ತಂಡವು ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. ರಾಜ್ವಿಂದರ್ ಕೌರ್, ಚಿತ್ರಾ ಸೋನಮ್, ಮಂಜೀತ್ ಕೌರ್ ಮತ್ತು ಪಿಂಕಿ ಪ್ರಮಾಣಿಕ್ ಅವರ ಕ್ವಾರ್ಟೆಟ್ 4*400 ಮೀಟರ್ ರಿಲೇಯ ಚಿನ್ನವನ್ನು ಅತ್ಯಂತ ಸಮೀಪದಿಂದ ಕಳೆದುಕೊಂಡಿತು. ಇದರ ನಂತರ, ನವದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ 2010 ರಲ್ಲಿ, ಸಿನಿ ಜೋಸ್, ಅಶ್ವಿನಿ ಅಖುಂಜಿ, ಮನ್‌ದೀಪ್ ಕೌರ್ ಮತ್ತು ಜೌನಾ ಮುರ್ಮು ಅವರೊಂದಿಗೆ ಚಿತ್ರಾ ಮತ್ತು ಮಂಜೀತ್ ಭಾರತಕ್ಕೆ 4 * 400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದು ಮಿಲ್ಕಾ ಸಿಂಗ್ ನಂತರ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಎರಡನೇ ಪ್ರಮುಖ ಚಿನ್ನದ ಪದಕವಾಗಿದೆ.
6. ನವದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ 2010 ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಅತಿದೊಡ್ಡ ಸಾಧನೆಯಾಗಿದೆ. ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಅಥ್ಲೆಟಿಕ್ಸ್‌ನಲ್ಲಿ 12 ಪದಕಗಳನ್ನು ಗೆದ್ದಿತ್ತು. ಇದರಲ್ಲಿ 2 ಚಿನ್ನ, 3 ಬೆಳ್ಳಿ ಮತ್ತು 7 ಕಂಚು ಸೇರಿದೆ. ಈ ಪಂದ್ಯಗಳ ನಂತರ, ಭಾರತೀಯ ಆಟಗಾರರು ಅಥ್ಲೆಟಿಕ್ಸ್‌ನಲ್ಲಿ ಸ್ಥಿರವಾಗಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
7. ನೀರಜ್ ಚೋಪ್ರಾ ಅವರು ಟೋಕಿಯೊದಲ್ಲಿ 2020 ರ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದರು. ಸ್ವಾತಂತ್ರ್ಯದ ನಂತರ ಒಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್ ಗೆದ್ದ ಮೊದಲ ಪದಕ ಇದಾಗಿದೆ. ಇದಕ್ಕೂ ಮುನ್ನ ನಾರ್ಮನ್ ಪ್ರಿಚರ್ಡ್ 1900ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟಿದ್ದರು. ಇದರ ನಂತರ, ನೀರಜ್ 2022 ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ಅಂಜು ಬಾಬಿ ಜಾರ್ಜ್ ನಂತರ ಈ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರರಾದರು.
8. ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ, ಭಾರತೀಯ ಆಟಗಾರರು ಅಥ್ಲೆಟಿಕ್ಸ್ನಲ್ಲಿ 8 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ ಒಂದು ಚಿನ್ನ, ನಾಲ್ಕು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳು ಸೇರಿವೆ. ತೇಜಸ್ವಿನ್ ಶಂಕರ್ ಹೈಜಂಪ್ ಮತ್ತು ಶ್ರೀಶಂಕರ್ ಮುರಳಿ ಲಾಂಗ್ ಜಂಪ್‌ನಲ್ಲಿ ಇತಿಹಾಸ ಸೃಷ್ಟಿಸುವ ಮೂಲಕ ಪದಕ ಗೆದ್ದಿದ್ದಾರೆ. ಇದೇ ವೇಳೆ ಟ್ರಿಪಲ್ ಜಂಪ್‌ನಲ್ಲಿ ಭಾರತಕ್ಕೆ ಎರಡು ಪದಕಗಳು ಲಭಿಸಿವೆ. ಅಲ್ದೋಸ್ ಪಾಲ್ ಚಿನ್ನ ಮತ್ತು ಅಬ್ದುಲ್ಲಾ ಅಬೂಬಕರ್ ಬೆಳ್ಳಿ ಪಡೆದರು.
Published On - 7:28 pm, Wed, 10 August 22