PBKS vs SRH: ಪಂಜಾಬ್ ಅಜೇಯ ಓಟ; ಸನ್ರೈಸರ್ಸ್ಗೆ ಮೂರನೇ ಸೋಲು
PBKS vs SRH IPL 2026: ಐಪಿಎಲ್ 2026 ರ 17 ನೇ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತು. ಹೈದರಾಬಾದ್ 219 ರನ್ ಗಳಿಸಿದರೂ, ಅವರ ಕಳಪೆ ಬೌಲಿಂಗ್ ಪಂಜಾಬ್‌ಗೆ ಗೆಲುವು ಸುಲಭಗೊಳಿಸಿತು. ಪ್ರಿಯಾಂಶ್ ಆರ್ಯ, ಪ್ರಭ್ಸಿಮ್ರಾನ್ ಸಿಂಗ್, ಹಾಗೂ ಶ್ರೇಯಸ್ ಅಯ್ಯರ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಪಂಜಾಬ್ 3ನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.

ಐಪಿಎಲ್ 2026 (IPL 2026) ಟೂರ್ನಮೆಂಟ್‌ನ 17 ನೇ ಪಂದ್ಯದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ (SRH vs PBKS) ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 219 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 6 ವಿಕೆಟ್‌ಗಳ ಜಯ ಸಾಧಿಸಿತು. ಎಂದಿನಂತೆ ಈ ಪಂದ್ಯದಲ್ಲೂ ಸನ್‌ರೈಸರ್ಸ್ ಹೈದರಾಬಾದ್‌ನ ಬೌಲಿಂಗ್ ತೀರ ಕಳಪೆಯಾಗಿತ್ತು. ಹೀಗಾಗಿ ಪಂಜಾಬ್ ಕಿಂಗ್ಸ್ ಪವರ್‌ಪ್ಲೇನಲ್ಲಿಯೇ ಅರ್ಧದಷ್ಟು ಪಂದ್ಯವನ್ನು ಗೆದ್ದುಕೊಂಡಿತ್ತು. ಅಂತಿಮವಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸುವ ಮೂಲಕ, ಪಂಜಾಬ್ ಕಿಂಗ್ಸ್ ಟೂರ್ನಿಯಲ್ಲಿ ತಮ್ಮ ಮೂರನೇ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ, ಪಂಜಾಬ್ ಕಿಂಗ್ಸ್ 7 ಅಂಕಗಳನ್ನು ಹೊಂದಿದ್ದು, ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ತಲುಪಿದರೆ, ರಾಜಸ್ಥಾನ ರಾಯಲ್ಸ್ 8 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
ಹೈದರಾಬಾದ್ಗೆ ಅಬ್ಬರದ ಆರಂಭ
ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಜೋಡಿ ತಂಡಕ್ಕೆ ಆಕ್ರಮಣಕಾರಿ ಆರಂಭ ನೀಡಿತು. ಈ ಜೋಡಿ ಮೊದಲ ವಿಕೆಟ್‌ಗೆ 120 ರನ್‌ಗಳ ಜೊತೆಯಾಟ ನೀಡಿತು. ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 74 ರನ್ ಗಳಿಸಿದರೆ, ಟ್ರಾವಿಸ್ ಹೆಡ್ 23 ಎಸೆತಗಳಲ್ಲಿ 38 ರನ್ ಗಳಿಸಿದರು. ಆದಾಗ್ಯೂ ಇವರಿಬ್ಬರ ವಿಕೆಟ್ ಪತನದ ಬಳಿಕ ಸನ್‌ರೈಸರ್ಸ್ ಬ್ಯಾಟಿಂಗ್ ಕುಸಿಯಿತು. ನಾಯಕ ಇಶಾನ್ ಕಿಶನ್ 17 ಎಸೆತಗಳಲ್ಲಿ 27 ರನ್ ಗಳಿಸಿದರೆ, ಹೆನ್ರಿಕ್ ಕ್ಲಾಸೆನ್ 33 ಎಸೆತಗಳನ್ನು ಎದುರಿಸಿ 39 ರನ್ ಗಳಿಸಿದರು. ಇದು ರನ್ ರೇಟ್ ಹೆಚ್ಚಿಸುವಲ್ಲಿ ಹೆಚ್ಚು ಸಹಾಯ ಮಾಡಲಿಲ್ಲ. ಅನಿಕೇತ್ ವರ್ಮಾ 18 ರನ್ ಗಳಿಸಿದರೆ, ಸಲೀಲ್ ಅರೋರಾ 9 ರನ್ ಗಳಿಸಿದರು. ನಿತೀಶ್ ಕುಮಾರ್ ರೆಡ್ಡಿ ಔಟಾಗದೆ 0 ರನ್ ಮತ್ತು ಹರೀಶ್ ದುಬೆ ಔಟಾಗದೆ 1 ರನ್ ಗಳಿಸಿದರು.
PBKS vs SRH IPL 2026 Highlights: ಸನ್‌ರೈಸರ್ಸ್ ವಿರುದ್ಧ ಪಂಜಾಬ್‌ಗೆ 6 ವಿಕೆಟ್ ಜಯ
ಪಂಜಾಬ್ ಪರ ಮೂವರ ಅರ್ಧಶತಕ
220 ರನ್‌ಗಳ ಗುರಿ ಬೆನ್ನಟ್ಟಿದ ಪಂಜಾಬ್ ಪರ ಪ್ರಿಯಾಂಶ್ ಆರ್ಯ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಜೋಡಿ ಮೊದಲ ವಿಕೆಟ್‌ಗೆ 6.2 ಓವರ್‌ಗಳಲ್ಲಿ 99 ರನ್‌ಗಳ ಪಾಲುದಾರಿಕೆಯನ್ನು ನೀಡಿತು. ಪ್ರಿಯಾಂಶ್ ಆರ್ಯ 20 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ 57 ರನ್ ಗಳಿಸಿದರೆ, ಪ್ರಭ್ಸಿಮ್ರಾನ್ ಸಿಂಗ್ 25 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 51 ರನ್ ಬಾರಿಸಿದರು. ಕೂಪರ್ ಕೊನೊಲಿ ಕೇವಲ 11 ರನ್‌ಗಳಿಗೆ ಔಟಾದರು. ಅದರ ನಂತರ, ನಾಯಕ ಶ್ರೇಯಸ್ ಅಯ್ಯರ್ ಮತ್ತು ನೆಹಾಲ್ ವಧಾರ ಇನ್ನಿಂಗ್ಸ್ ಜವಾಬ್ದಾರಿ ವಹಿಸಿಕೊಂಡರು. ಇಬ್ಬರ ಅರ್ಧಶತಕದ ಪಾಲುದಾರಿಕೆಯಿಂದಾಗಿ ಪಂಜಾಬ್‌ನ ಗೆಲುವಿನ ಹಾದಿ ಸುಲಭವಾಯಿತು. ಶ್ರೇಯಸ್ ಅಯ್ಯರ್ 24 ಎಸೆತಗಳಲ್ಲಿ ಅರ್ಧಶತಕ ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡುವಲ್ಲಿ ಅಮೂಲ್ಯ ಕೊಡುಗೆ ನೀಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




