ನಾರ್ವೆಯಲ್ಲಿ ಹೊಸ ಇತಿಹಾಸ ಬರೆದ ಆರ್ ಪ್ರಜ್ಞಾನಂದ
R Praggnanandhaa: ಭಾರತದ 20 ವರ್ಷದ ಚೆಸ್ ಯುವ ಪ್ರತಿಭೆ ಆರ್ ಪ್ರಜ್ಞಾನಂದ ಜಾಗತಿಕ ಚೆಸ್ ಜಗತ್ತಿನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ವಿಶ್ವದ ಅತ್ಯಂತ ಕಠಿಣ ಹಾಗೂ ಪ್ರತಿಷ್ಠಿತ ಟೂರ್ನಿಗಳಲ್ಲೊಂದಾದ 'ನಾರ್ವೆ ಚೆಸ್ 2026' (Norway Chess 2026) ಚಾಂಪಿಯನ್‌ಶಿಪ್ ಮುಡಿಗೇರಿಸಿಕೊಳ್ಳುವ ಮೂಲಕ, ಈ ಐತಿಹಾಸಿಕ ಟ್ರೋಫಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾರತದ 20 ವರ್ಷದ ಚೆಸ್ ಚತುರ ಆರ್ ಪ್ರಜ್ಞಾನಂದ (R Praggnanandhaa) ನಾರ್ವೆ ಚೆಸ್ 2026 (Norway Chess 2026) ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಓಸ್ಲೋದಲ್ಲಿ ನಡೆದ ಅಂತಿಮ ಸುತ್ತಿನ ರೋಚಕ ಪಂದ್ಯದಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಭರ್ಜರಿ ಜಯ ಸಾಧಿಸಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಸೋಲಿನಿಂದ ಗೆಲುವಿಗೆ:
ಟೂರ್ನಿಯ ಮಧ್ಯಭಾಗದಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯ ಕೊನೆಯ ಸ್ಥಾನಕ್ಕೆ ಕುಸಿದಿದ್ದ ಪ್ರಜ್ಞಾನಂದ, ನಂತರ ತೋರಿದ ಆಟ ಅಸಾಧಾರಣವಾಗಿತ್ತು. ಕ್ಲಾಸಿಕಲ್ ಚೆಸ್ ಮಾದರಿಯಲ್ಲಿ ಸತತ 4 ಪಂದ್ಯಗಳನ್ನು ಗೆಲ್ಲುವ ಮೂಲಕ ಅದ್ಭುತ ಕಂಬ್ಯಾಕ್ ಮಾಡಿದರು:
- ಅಲಿರೆಝಾ ಫಿರೌಜ್ಜಾ (ಫ್ರಾನ್ಸ್) ವಿರುದ್ಧ ಜಯ
- ಮ್ಯಾಗ್ನಸ್ ಕಾರ್ಲ್‌ಸನ್ (ವಿಶ್ವದ ನಂ. 1 ಆಟಗಾರ) ವಿರುದ್ಧ ಐತಿಹಾಸಿಕ ಜಯ
- ಡಿ ಗುಕೇಶ್ (ಹಾಲಿ ವಿಶ್ವ ಚಾಂಪಿಯನ್) ವಿರುದ್ಧ ಗೆಲುವು
- ವಿನ್ಸೆಂಟ್ ಕೀಮರ್ (ಜರ್ಮನಿ) ವಿರುದ್ಧ ಅಂತಿಮ ಸುತ್ತಿನಲ್ಲಿ ರೋಚಕ ವಿಜಯ
ಅಂತಿಮ ಸುತ್ತಿನ ಪಂದ್ಯಕ್ಕೆ ಮುನ್ನ ವೆಸ್ಲಿ ಸೋ ಅರ್ಧ ಅಂಕದ ಮುನ್ನಡೆಯಲ್ಲಿದ್ದರು. ಆದರೆ ವೆಸ್ಲಿ ಸೋ ತಮ್ಮ ಪಂದ್ಯವನ್ನು ಡ್ರಾ ಮಾಡಿಕೊಂಡರೆ, ಪ್ರಜ್ಞಾನಂದ ಅವರು ಕೀಮರ್ ವಿರುದ್ಧ ನೇರ ಕ್ಲಾಸಿಕಲ್ ಜಯದೊಂದಿಗೆ 3 ಪೂರ್ಣ ಅಂಕಗಳನ್ನು ಗಳಿಸಿ ಟ್ರೋಫಿಯನ್ನು ಎತ್ತಿಹಿಡಿದರು.
ನಾರ್ವೆ ಚೆಸ್ 2026 ಅಂತಿಮ ಅಂಕಪಟ್ಟಿ:
ವಿಶ್ವದ ಅಗ್ರ ಆರು ಆಟಗಾರರ ನಡುವೆ ನಡೆದ ಈ ಕಠಿಣ ಟೂರ್ನಿಯ ಅಂತಿಮ ಅಂಕ ಪಟ್ಟಿ ಹೀಗಿದೆ:
- ಆರ್ ಪ್ರಜ್ಞಾನಂದ (ಭಾರತ)- 18 ಅಂಕಗಳು
- ವೆಸ್ಲಿ ಸೋ (ಅಮೆರಿಕ )- 17 ಅಂಕಗಳು
- ಅಲಿರೆಝ ಫಿರೌಜ್ಜಾ (ಫ್ರಾನ್ಸ್) 15.5- ಅಂಕಗಳು
- ಮ್ಯಾಗ್ನಸ್ ಕಾರ್ಲ್‌ಸನ್ (ನಾರ್ವೆ)- 13 ಅಂಕಗಳು
- ವಿನ್ಸೆಂಟ್ ಕೀಮರ್ (ಜರ್ಮನಿ)- 11 ಅಂಕಗಳು
- ಡಿ ಗುಕೇಶ್ (ಭಾರತ)- 8 ಅಂಕಗಳು
ಕಾರ್ಲ್ಸನ್ಗೆ ‘ಡಬಲ್’ ಶಾಕ್!
ಈ ಟೂರ್ನಿಯಲ್ಲಿ ಪ್ರಜ್ಞಾನಂದ ಮಾಡಿದ ಮತ್ತೊಂದು ದೊಡ್ಡ ದಾಖಲೆಯೆಂದರೆ, ವಿಶ್ವದ ನಂ. 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಅವರದ್ದೇ ತವರು ನೆಲದಲ್ಲಿ ಒಂದೇ ಟೂರ್ನಿಯಲ್ಲಿ ಎರಡು ಬಾರಿ ಕ್ಲಾಸಿಕಲ್ ಚೆಸ್‌ನಲ್ಲಿ ಸೋಲಿಸಿದ್ದು (ಒಮ್ಮೆ ಬಿಳಿ ದಾಳಗಳೊಂದಿಗೆ, ಮತ್ತೊಮ್ಮೆ ಕಪ್ಪು ದಾಳಗಳೊಂದಿಗೆ).
ಈ ರೀತಿಯ ‘ಕ್ಲಾಸಿಕಲ್ ಡಬಲ್’ ಸಾಧನೆಯನ್ನು ಕಾರ್ಲ್‌ಸನ್ ವಿರುದ್ಧ 19 ವರ್ಷಗಳ ಹಿಂದೆ (2007 ರಲ್ಲಿ) ಭಾರತದ ದಿಗ್ಗಜ ವಿಶ್ವನಾಥನ್ ಆನಂದ್ ಮಾಡಿದ್ದರು. ಇದೀಗ ಪ್ರಜ್ಞಾನಂದ ಆ ಅಪರೂಪದ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇದನ್ನೂ ಓದಿ: ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
ತಾಯಿಯ ಫೋನ್ ಕರೆ ತಂದ ಅದೃಷ್ಟ!
ಪ್ರಶಸ್ತಿ ಗೆದ್ದ ನಂತರ ಮಾತನಾಡಿದ ಪ್ರಜ್ಞಾನಂದ, ತಾವು ಸತತ ಸೋಲುಗಳಿಂದ ಕಂಗಾಲಾಗಿದ್ದಾಗ ಅವರ ತಾಯಿ ನಾಗಲಕ್ಷ್ಮಿ ಅವರು ಮಾಡಿದ ಒಂದು ಫೋನ್ ಕರೆ ತಮ್ಮಲ್ಲಿ ಹೊಸ ಭರವಸೆ ತುಂಬಿತು. ಅಲ್ಲದೆ ಆಟದ ಮೇಲಿನ ಗಮನವನ್ನು ಮರಳಿ ತರಲು ಸಹಾಯ ಮಾಡಿತು ಎಂದು ಬಹಿರಂಗಪಡಿಸಿದ್ದಾರೆ. ಆ ಒಂದು ಪ್ರೇರಣೆಯೇ ಸತತ 4 ಪಂದ್ಯಗಳ ಗೆಲುವಿಗೆ ಕಾರಣವಾಯಿತ ಎಂದು ಪ್ರಜ್ಞಾನಂದ, ಸಂತಸ ವ್ಯಕ್ತಪಡಿಸಿದ್ದಾರೆ.




