AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paris Olympics 2024: ಟಿ ಶರ್ಟ್, ಸರಳ ಕನ್ನಡಕ, ಕಿಸೆಯೊಳಗೆ ಕೈ; ಬೆಳ್ಳಿಗೆ ಗುರಿಯಿಟ್ಟ 51 ವರ್ಷದ ಯೂಸುಫ್ ಡಿಕೇಚ್ ಈಗ ಸೋಷಿಯಲ್ ಮೀಡಿಯಾ ಸೆನ್ಸೇಷನ್

Paris Olympics 2024: ಟರ್ಕಿಯ ಗೋಕ್ಸಾನ್ ನಗರದಲ್ಲಿ ಜನಿಸಿದ ಡಿಕೇಚ್ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಡಿಕೆಕ್ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಅವರು 2008 ರಿಂದ ಪ್ರತಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 2001 ರಲ್ಲಿ ಶೂಟಿಂಗ್ ಪ್ರಾರಂಭಿಸಿದ ಅವರು ಪಿಸ್ತೂಲ್ ಸ್ಪರ್ಧೆಗಳ ಹಲವು ವಿಭಾಗಗಳಲ್ಲಿ ಅವರು ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ.

Paris Olympics 2024: ಟಿ ಶರ್ಟ್, ಸರಳ ಕನ್ನಡಕ, ಕಿಸೆಯೊಳಗೆ ಕೈ; ಬೆಳ್ಳಿಗೆ ಗುರಿಯಿಟ್ಟ 51 ವರ್ಷದ ಯೂಸುಫ್ ಡಿಕೇಚ್ ಈಗ ಸೋಷಿಯಲ್ ಮೀಡಿಯಾ ಸೆನ್ಸೇಷನ್
ಯೂಸುಫ್ ಡಿಕೇಚ್
ಪೃಥ್ವಿಶಂಕರ
|

Updated on:Aug 02, 2024 | 1:45 PM

Share

ನಿಮ್ಮ ತಲೆಯಿಂದ ಪ್ಯಾರಿಸ್ ಒಲಿಂಪಿಕ್ಸ್ ತೆಗೆದುಹಾಕಿ ಈ ವ್ಯಕ್ತಿಯನ್ನು ಒಮ್ಮೆ ದಿಟ್ಟಿಸಿ ನೋಡಿ… ಇವರನ್ನು ಗಮನಿಸಿದ ನಮಗೆ ಹಾಗೂ ನಿಮಗೆ ಮೊದಲ ನೋಟದಲ್ಲಿ ಮೊದಲು ನೆನಪಿಗೆ ಬರುವುದೇನೆಂದರೆ.. 50 ವರ್ಷದ ಮಧ್ಯ ವಯಸ್ಕರೊಬ್ಬರು ಮುಂಜಾನೆ ಎದ್ದವರೇ ಜಾಗಿಂಗ್​ಗಾಗಿ ಪಾರ್ಕಿಗೆ ಹೊರಟವರು ಕೈಗೆ ಸಿಕ್ಕ ಪಿಸ್ತೂಲ್ ಹಿಡಿದು ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಬಂದಿದ್ದಾರೇನೋ ಎಂಬುದು. ಆದರೆ ಟರ್ಕಿ ದೇಶದ ಈ ಶೂಟರ್ ಒಲಿಂಪಿಕ್ಸ್ ಅಂಗಳದಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಈವೆಂಟ್​ನಲ್ಲಿ ಬೆಳ್ಳಿ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಆ ಶೂಟರ್ ಮತ್ತ್ಯಾರು ಅಲ್ಲ.. 51 ವರ್ಷದ ಟರ್ಕಿ ದೇಶದ ಯೂಸುಫ್ ಡಿಕೇಚ್.

ವಿಶೇಷವಾಗಿ ವಿನ್ಯಾಸಗೊಳಿಸಿದ ವಸ್ತ್ರ

ವಾಸ್ತವವಾಗಿ ಎಲ್ಲಾ ಕ್ರೀಡೆಯಲ್ಲೂ ಅದಕ್ಕೆ ಸೂಕ್ತವಾದ ಉಡುಗೆಗಳನ್ನು ತೊಟ್ಟರೆ ಆ ಸ್ಪರ್ಧೆಯಲ್ಲಿ ಭಾಗವಹಿಸಲು ಹೆಚ್ಚು ಅನುಕೂಲವಾಗುತ್ತದೆ. ಅದರಂತೆ ಶೂಟಿಂಗ್​ನಲ್ಲೂ ಸಹ ಅದಕ್ಕೆಯಾದ್ದಂತಹ ವಸ್ತ್ರವನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಈಗಾಗಲೇ ಭಾರತಕ್ಕೆ ಎರಡು ಕಂಚಿನ ಪದಕ ಗೆದ್ದುಕೊಟ್ಟಿರುವ ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಕೂಡ ಶೂಟಿಂಗ್​ಗಾಗಿಯೇ ವಿನ್ಯಾಸಗೊಳಿಸಿರುವ ರಕ್ಷಾಕವಚದಂತಹ ಜಾಕೆಟ್, ಅತ್ಯಾಧುನಿಕ ಕನ್ನಡಕ, ಜೊತೆಗೆ ಹೊರಗಿನ ಶಬ್ದ ಕೇಳಿಸದಂತೆ ಇಯರ್ ಡಿಫೆಂಡರ್​ಗಳನ್ನೂ ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ, ಯೂಸುಫ್ ಡಿಕೇಚ್ ವಿಷಯದಲ್ಲಿ ಮಾತ್ರ ಇದೆಲ್ಲ ಸಂಪೂರ್ಣ ವಿಭಿನ್ನ.

ಟಿ ಶರ್ಟ್​ ಸರಳ ಕನ್ನಡಕ

10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಈವೆಂಟ್​ನಲ್ಲಿ ತಮ್ಮ ಜೋಡಿಯಾಗಿದ್ದ ಶೆವ್ವಾಲ್ ಇಲೈಡಾ ತರ್ಹಾನ್ ಮೇಲೆ ಹೇಳಿದಂತೆ ಶೂಟಿಂಗಾಗಿ ಬೇಕಾದ ಎಲ್ಲ ಉಪಕರಣಗಳನ್ನು ಧರಿಸಿ ಸ್ಪರ್ಧೆಗಿಳಿದಿದ್ದರೆ ಜೋಸೆಫ್ ಡಿಕೇಚ್ ಮಾತ್ರ ಟರ್ಕಿ ದೇಶದ ಹೆಸರಿರುವ ಒಂದು ಟಿ ಶರ್ಟ್ ಹಾಗೂ ಸರಳ ಕನ್ನಡಕ ಹಾಕಿಕೊಂಡೇ ಸ್ಪರ್ಧೆಗಿಳಿದಿದ್ದರು. ಅಷ್ಟೇ ಅಲ್ಲ, ಇತರ ಶೂಟರ್‌ಗಳಂತೆ ಇನ್ನೊಂದು ಕಣ್ಣನ್ನೂ ಸಹ ಅವರು ಮುಚ್ಚಿರಲಿಲ್ಲ. ಒಂದು ಕೈಯನ್ನು ಜೇಬಿಗೆ ಹಾಕಿಕೊಂಡು ಬೆಳ್ಳಿ ಪದಕಕ್ಕೆ ಗುರಿ ಇಟ್ಟರು. ಶೂಟಿಂಗ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್ ಇತಿಹಾಸದಲ್ಲಿ ಟರ್ಕಿ ದೇಶಕ್ಕೆ ಇದು ಮೊದಲ ಪದಕವಾಗಿದೆ. ಆದರೆ ಈ ಪದಕಕ್ಕಿಂತ ಹೆಚ್ಚಾಗಿ ಯೂಸುಫ್ ಡಿಕೇಚ್ ತಮ್ಮ ಸ್ಟೈಲ್​ನಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ. ಇವರನ್ನು ನೋಡಿದರೆ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಭಾಗವಹಿಸಲು ಬಂದಿದ್ದಾರೆ ಎಂದು ಯಾರೂ ಹೇಳಲಾರರು.

ಯೂಸುಫ್ ಡಿಕೇಚ್ ಯಾರು?

ಟರ್ಕಿಯ ಗೋಕ್ಸಾನ್ ನಗರದಲ್ಲಿ ಜನಿಸಿದ ಡಿಕೇಚ್ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಡಿಕೇಚ್ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಅವರು 2008 ರಿಂದ ಪ್ರತಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 2001 ರಲ್ಲಿ ಶೂಟಿಂಗ್ ಪ್ರಾರಂಭಿಸಿದ ಅವರು ಪಿಸ್ತೂಲ್ ಸ್ಪರ್ಧೆಗಳ ಹಲವು ವಿಭಾಗಗಳಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ.

2006 ರಲ್ಲಿ, ನಾರ್ವೆಯಲ್ಲಿ ನಡೆದ ಮಿಲಿಟರಿ ವಿಶ್ವ ಚಾಂಪಿಯನ್‌ಶಿಪ್‌ನ 25 ಮೀಟರ್ ಸೆಂಟರ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಡಿಕೇಚ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು. 2014ರಲ್ಲಿ ನಡೆದ ಶೂಟಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನವನ್ನು ಹೊರತುಪಡಿಸಿ ಒಂದು ಬೆಳ್ಳಿ ಮತ್ತು ಒಂದು ಕಂಚು ಗೆದ್ದಿದ್ದರು. ಕಳೆದ ವರ್ಷ ಬಾಕುದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಿಶ್ರ ತಂಡ ಸ್ಪರ್ಧೆಯಲ್ಲಿ ಯೂಸುಫ್ ಡಿಕೇಚ್ ಬೆಳ್ಳಿ ಗೆದ್ದಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:42 pm, Fri, 2 August 24