Viral : ಚಾಟ್ ಜಿಪಿಟಿ ಸಲಹೆ ಪಡೆದು 30 ದಿನಗಳಲ್ಲಿ ಹತ್ತು ಲಕ್ಷ ಸಾಲ ತೀರಿಸಿದ ಮಹಿಳೆ
ಇತ್ತೀಚೆಗಿನ ದಿನಗಳಲ್ಲಿ ವೈಯುಕ್ತಿಕ ಸಮಸ್ಯೆಯಿಂದ ಹಿಡಿದು ಉದ್ಯೋಗ ಸೇರಿದಂತೆ ಇನ್ನಿತ್ತರ ಸಮಸ್ಯೆಗಳಿಗೆ ಚಾಟ್ ಜಿಪಿಟಿಯಿಂದ ಸಲಹೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಮಹಿಳೆಯೊಬ್ಬಳು ಕ್ರೆಡಿಟ್ ಕಾರ್ಡ್ ಸಾಲವನ್ನು ತೀರಿಸಲು ಚಾಟ್ ಜಿಪಿಟಿ ಸಲಹೆ ಪಡೆದುಕೊಂಡಿದ್ದಾಳೆ. ಕೊನೆಗೆ ಮೂವತ್ತು ದಿನಗಳಲ್ಲಿ ಹತ್ತು ಲಕ್ಷಕ್ಕೂ ಅಧಿಕ ಸಾಲವನ್ನು ಮರುಪಾವತಿ ಮಾಡಿದ್ದಾಳೆ. ಅಷ್ಟಕ್ಕೂ ಈ ಮಹಿಳೆ ಮಾಡಿದ್ದೇನು? ಕ್ರೆಡಿಟ್ ಕಾರ್ಡ್ ಸಾಲ ತೀರಿಸಲು ಹೇಗೆ ಸಾಧ್ಯವಾಯಿತು? ಎನ್ನುವ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಏನೇ ಸಮಸ್ಯೆ ಎದುರಾದ್ರೂ ಅದಕ್ಕೆ ಪರಿಹಾರ ಹುಡುಕೋದು ಬಹಳ ಮುಖ್ಯ. ತಮ್ಮ ಆತ್ಮೀಯರ ಸಲಹೆ ಪಡೆದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾಲವೊಂದಿತ್ತು. ಈಗ ಕಾಲ ಬದಲಾಗಿದೆ ಬಿಡಿ. ಸಮಸ್ಯೆಗೆ ಪರಿಹಾರ ಅಂದ್ರೆ ಮೊದಲು ನೆನಪಾಗೋದೇ ಈ ಚಾಟ್ ಜಿಪಿಟಿ (Chat GPT). ಈ ಚಾಟ್ ಜಿಪಿಟಿ ಹತ್ರ ಕೇಳಿದ್ರೆ ಸಮಸ್ಯೆ ಎಂತಹದ್ದೇ ಇರಲಿ, ಸಲಹೆ ನೀಡುವ ಮೂಲಕ ಶೀಘ್ರ ಪರಿಹಾರ ನೀಡುತ್ತದೆ. ಇದೀಗ ಈ ಚಾಟ್ ಜಿಪಿಟಿ ಸಲಹೆ ಪಡೆದು ಅಮೆರಿಕದ (America) 35 ವರ್ಷದ ಮಹಿಳೆ ಜೆನ್ನಿಫರ್ ಅಲೆನ್ (Jennifer Allan) ಎಂಬ ಮಹಿಳೆ ತನ್ನ ವೈಯುಕ್ತಿಕ ಸಾಲವನ್ನು ತೀರಿಸಿದ್ದಾಳೆ. ಚಾಟ್ ಜಿಪಿಟಿ ನೀಡಿದ ಸಲಹೆಯನ್ನು ಪಾಲಿಸಿ ಕೇವಲ ಮೂವತ್ತು ದಿನಗಳಲ್ಲಿ ಬರೋಬ್ಬರಿ 10.3 ಲಕ್ಷ ರೂಪಾಯಿ ಕ್ರೆಡಿಟ್ ಕಾರ್ಡ್ ಸಾಲವನ್ನು ತೀರಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಈ ಕುರಿತಾದ ಸುದ್ದಿಯೊಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹೌದು, 12,000 ಡಾಲರ್ ಅಂದರೆ 10 ಲಕ್ಷ ರೂಪಾಯಿ ಕ್ರೆಡಿಟ್ ಕಾರ್ಡ್ ಸಾಲವನ್ನು ತೀರಿಸಲು ಚಾಟ್ ಜಿಪಿಟಿಯೂ ಈಕೆಗೆ ನೆರವಾಗಿದೆ. ತನ್ನ ಆದಾಯ ಚೆನ್ನಾಗಿಯೇ ಇತ್ತು. ಆದ್ರೆ ಹೇಗೆ ಅದನ್ನು ನಿರ್ವಹಿಸಬೇಕು ಅನ್ನೋದು ಈಕೆಗೆ ಗೊತ್ತಿರಲಿಲ್ಲ. ತಾಯಿಯಾದ ಬಳಿಕವಂತೂ ಖರ್ಚು ಹೆಚ್ಚಾಗಿತ್ತು. ಬಂದ ಆದಾಯವು ನೀರಿನಂತೆ ಖರ್ಚು ಆಗುತ್ತಲೇ ಇತ್ತು. ಕೊನೆಗೆ ಐಷಾರಾಮಿ ಬದುಕಿಗಾಗಿ ಕ್ರೆಡಿಟ್ ಕಾರ್ಡ್ ಸಾಲ ಹೆಚ್ಚಾಯಿತು ಎನ್ನುವ ಈಕೆಯೂ ಮೊದಲು ಚಾಟ್ ಜಿಪಿಟಿ ಮೊರೆ ಹೋಗಿದ್ದಾಳೆ.
ಕೊನೆಗೆ ಚಾಟ್ ಜಿಪಿಟಿಯಲ್ಲಿ ಮೂವತ್ತು ದಿನಗಳ ಪರ್ಸನಲ್ ಫೈನಾನ್ಸ್ ಚಾಲೆಂಜ್ ಸ್ವೀಕರಿಸಿದ್ದಾಳೆ. ಹೀಗಾಗಿ ಪ್ರತಿದಿನ ಜೆನ್ನಿಫರ್‌ಗೆ ಪರಿಣಾಮಕಾರಿ ಪ್ಲಾನ್ ಬಗ್ಗೆ ಚಾಟ್ ಜಿಪಿಟಿ ಸಲಹೆ ನೀಡುತ್ತಾ ಬಂದಿತು. ಈ ವೇಳೆಯಲ್ಲಿ ಸೈಡ್ ಇನ್ ಕಮ್ ಗಳಿಸುವುದು ಹೇಗೆ, ಬೇಡವಾದ ಖರ್ಚು ವೆಚ್ಚಗಳನ್ನು ಹೇಗೆ ಸರಿದೂಗಿಸುವುದು, ಬ್ಯಾಂಕ್ ನಲ್ಲಿ ಯಾವುದಾದ್ರೂ ಉಳಿತಾಯ ಇದ್ಯಾ ಹೀಗೆ ನಾನಾ ರೀತಿಯ ಸಲಹೆ ನೀಡಿತು. ಈ ವೇಳೆಯಲ್ಲಿ ತನ್ನ ಉಳಿತಾಯ ಖಾತೆಯಲ್ಲಿ ಬರೋಬ್ಬರಿ 10,000 ಡಾಲರ್ ಅಂದರೆ ಎಂಟು ಲಕ್ಷ ರೂ ಇರುವುದು ತಿಳಿಯಿತು.
ಇದನ್ನೂ ಓದಿ :Viral : ಮನೆಕೆಲಸದಾಕೆಯ ಕುಟುಂಬದ ಆದಾಯ 1 ಲಕ್ಷಕ್ಕೂ ಅಧಿಕ, ಆದ್ರೂ ಟ್ಯಾಕ್ಸ್ ಕಟ್ಟಲ್ಲ ಎಂದ ಮಹಿಳೆ
ಅಷ್ಟೇ ಅಲ್ಲದೇ, ಚಾಟ್ ಜಿಪಿಟಿ ಸಲಹೆಯಂತೆ ಪ್ಯಾಂಟ್ರಿ ಊಟದ ವ್ಯವಸ್ಥೆ ಮಾಡಿದ್ಲು, ಇದ್ರಿಂದ 50 ಸಾವಿರದಷ್ಟು ಹಣವನ್ನು ಉಳಿತಾಯ ಮಾಡಿದ್ದಾಳೆ. ಹೀಗೆ ಚಾಟ್ ಜಿಪಿಟಿ ನೀಡಿದ ಸಲಹೆಯಂತೆ ಸರಿಸುಮಾರು ಹತ್ತು ಲಕ್ಷ ರೂಪಾಯಿ ಸಾಲವನ್ನು ತೀರಿಸಿದ್ದಾಳಂತೆ. ನನಗೆ ನಿಜಕ್ಕೂ ಖುಷಿಯಾಗಿದೆ. ನನ್ನ ಸಾಲದ ಅರ್ಧದಷ್ಟು ಭಾಗವನ್ನು ನಾನು ತೀರಿಸಿದ್ದೇನೆ ಎಂದು ಸೋಶಿಯಲ್ ಮೀಡಿಯಾದ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರು ಕೂಡ ಕಾಮೆಂಟ್ ಮಾಡಿ ಸಲಹೆಗಾಗಿ ಚಾಟ್ ಜಿಪಿಟಿ ಆಯ್ಕೆ ಮಾಡಿಕೊಂಡು ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:24 pm, Sun, 6 July 25