ಮುರ್ಸಿ ಹೆಣ್ಣು ಮಕ್ಕಳ ತುಟಿಯಲ್ಲಿ ಅಡಗಿದೆ ಸೌಂದರ್ಯ, ಇವ್ರು ತುಟಿ ಅಂದ ಹೆಚ್ಚಿಸಲು ಏನ್ ಮಾಡ್ತಾರೆ ಗೊತ್ತಾ?
ಇವತ್ತಿಗೂ ಕೂಡ ಕೆಲವು ಜನರು ವಿಚಿತ್ರ ಪದ್ಧತಿಗಳನ್ನು ಕಣ್ಣುಮುಚ್ಚಿಕೊಂಡು ಪಾಲಿಸುತ್ತಿದ್ದಾರೆ. ಹೌದು, ಕೆಲವು ಬುಡಕಟ್ಟು ಜನಾಂಗದವರು ಬದುಕುವ ರೀತಿ ನೋಡಿದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಈ ಮುರ್ಸಿ ಬುಡಕಟ್ಟು ಜನಾಂಗದಲ್ಲಿ ಪ್ರಾಯಕ್ಕೆ ಬಂದ ಹುಡುಗಿಯರು ತಮ್ಮ ಕೆಳ ತುಟಿಗಳನ್ನು ಕತ್ತರಿಸಿ ಮಣ್ಣಿನ ತಟ್ಟೆಗಳನ್ನು ಹಾಕುವ ಆಚರಣೆಯಿದೆ. ಅಷ್ಟಕ್ಕೂ ಈ ರೀತಿಯ ಆಚರಣೆಯ ಹಿಂದಿನ ಉದ್ದೇಶವೇನು? ಎನ್ನುವ ಮಾಹಿತಿ ನೀವು ತಿಳಿದುಕೊಳ್ಳಲೇಬೇಕು.

ನಾವಿಂದು ಅಭಿವೃದ್ಧಿಯ ಜೊತೆ ಜೊತೆಗೆ ಆಧುನಿಕತೆಯೊಂದಿಗೆ ಬೆಸೆದು ಕೊಂಡಿದ್ದೇವೆ. ಹೀಗಾಗಿ ನಮ್ಮ ಬದುಕುವ ರೀತಿಯೇ ಸಂಪೂರ್ಣ ಬದಲಾಗಿದೆ. ಆದರೆ ಕೆಲವು ಜನರು ಬದುಕುವ ರೀತಿ, ತಮ್ಮ ಜೀವನಶೈಲಿಯನ್ನು ನೋಡಿದ್ರೆ ಅಯ್ಯೋ ಈ ರೀತಿ ಜನರು ಇರ್ತಾರಾ ಎಂದೆನಿಸದೇ ಇರದು. ಆಧುನಿಕತೆಯ ಸ್ಪರ್ಶವೇ ಇಲ್ಲದೇ ತಮ್ಮದೇ ವಿಚಿತ್ರ ಪದ್ಧತಿ, ಸಂಪ್ರದಾಯಗಳನ್ನು ಪಾಲಿಸಿಕೊಂಡು ಬದುಕುತ್ತಿರುವವರು ಹಲವರು ಇದ್ದಾರೆ. ಅಂತಹವರ ಸಾಲಿಗೆ ಸೇರಿದವರೇ ಮುರ್ಸಿ ಬುಡಕಟ್ಟು (mursi tribe) ಜನಾಂಗದವರು. ಹೌದು, ಈ ಮುರ್ಸಿ ಬುಡಕಟ್ಟಿನ ಹೆಣ್ಣು ಮಕ್ಕಳು ಸೌಂದರ್ಯವನ್ನು ಹೆಚ್ಚಿಸುವ ರೀತಿಯೇ ಭಿನ್ನ. ಈ ಜನಾಂಗದ ಹೆಣ್ಣು ಮಕ್ಕಳ ಸೌಂದರ್ಯವೂ ತುಟಿಯಿಂದಲೇ ನಿರ್ಧಾರವಾಗುತ್ತದೆ, ಅದೇಗೆ ಅಂತೀರಾ? ಇಲ್ಲಿದೆ ಮಾಹಿತಿ.
ಇಥಿಯೋಪಿಯಾದ ಓಮೋ ಕಣಿವೆಯಲ್ಲಿರುವ ಮುರ್ಸಿ ಬುಡಕಟ್ಟು ವಿಚಿತ್ರ ಪದ್ಧತಿಯಿಂದ ಗಮನ ಸೆಳೆಯುತ್ತಾರೆ. ಈ ಜನಾಂಗದವರು ಹುಡುಗಿಯರ ಕೆಳ ತುಟಿಗಳನ್ನು ಕತ್ತರಿಸಿ ಮಣ್ಣಿನ ತಟ್ಟೆಗಳನ್ನು ತುಟಿಗಳಿಗೆ ಸೇರಿಸುತ್ತಾರೆ. ತುಟಿಯ ಆಕಾರದಿಂದ ಇವರ ಘನತೆ, ಸ್ಥಾನಮಾನಗಳು ಹೆಚ್ಚಾಗುತ್ತದೆಯಂತೆ. ಈ ಸಂಪ್ರದಾಯವನ್ನು ಇವತ್ತಿಗೂ ಪಾಲಿಸಿಕೊಂಡು ಬರುತ್ತಿದ್ದು ಇದು ಇವರ ಫ್ಯಾಷನ್ ಎಂದರೆ ತಪ್ಪಾಗಲಾರದು.
ಹೌದು, ಅಗಲವಾದ ತುಟಿಗಳನ್ನು ಹೊಂದುವುದು ಸೌಂದರ್ಯದ ಪ್ರತೀಕವಂತೆ. ಹೆಣ್ಣು ಮಕ್ಕಳಿಗೆ ಸುಮಾರು ಹದಿನೈದು ವರ್ಷ ತುಂಬುತ್ತಿದ್ದಂತೆ ಆಕೆಯ ಕೆಳ ತುಟಿಯ ಬಳಿ ಇರುವ ಎರಡು ಹಲ್ಲುಗಳನ್ನು ತೆಗೆದು, ಕೆಳ ತುಟಿಯನ್ನು ಸಣ್ಣದಾಗಿ ಕತ್ತರಿಸಿ ಅದಕ್ಕೆ ಹದಿನಾರು ಇಂಚು ಅಗಲದ ಮರದ ಅಥವಾ ಜೇಡಿಮಣ್ಣಿನ ತಟ್ಟೆಯನ್ನು ಹಾಕುವ ಪದ್ಧತಿಯಿದೆ. ನೋವಿನಿಂದ ಕೂಡಿದ ಪದ್ಧತಿಯಾಗಿದ್ದು, ಇದುವೇ ಸೌಂದರ್ಯದ ಪ್ರತೀಕ ಎಂದು ನಂಬಲಾಗುತ್ತದೆ. ಇನ್ನು ವಯಸ್ಸು ಹೆಚ್ಚಾದಂತೆ ಈ ತಟ್ಟೆಯಾಕಾರದಲ್ಲಿ ಬದಲಾವಣೆಯಾಗುತ್ತಾ ಹೋಗುತ್ತದೆ. ದೊಡ್ಡ ದೊಡ್ಡ ತಟ್ಟೆಗಳನ್ನು ಹಾಕಿಕೊಳ್ಳಲಾಗುತ್ತದೆ.
ಹೌದು, ಈ ವಿಚಿತ್ರ ಆಚರಣೆ ಶುರುವಾದದ್ದು ಆಫ್ರಿಕಾದಲ್ಲಿ ಗುಲಾಮಗಿರಿಯ ಯುಗದಲ್ಲಿ ಎನ್ನಲಾಗಿದೆ. ಆ ಸಂದರ್ಭದಲ್ಲಿ ವ್ಯಾಪಾರಿಗಳು ಈ ಪ್ರದೇಶದಲ್ಲಿ ಸುತ್ತಾಡುವಾಗ ಸುಂದರ ಮಹಿಳೆಯರ ಮೇಲೆ ಕಣ್ಣು ಹಾಕುತ್ತಿದ್ದು, ಮಹಿಳೆಯರನ್ನು ಸೆರೆಹಿಡಿಯುತ್ತಿದ್ದರಂತೆ. ಈ ವ್ಯಾಪಾರಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕೆಳ ತುಟಿಗಳನ್ನು ಕತ್ತರಿಸಿ ತಮ್ಮ ಮುಖವನ್ನೇ ವಿಕಾರವನ್ನಾಗಿಸಲು ಶುರು ಮಾಡಿದರು. ಪ್ರಾರಂಭದಲ್ಲಿ ತಮ್ಮ ರಕ್ಷಣೆಗಾಗಿ ಈ ರೀತಿ ಮಾಡಿಕೊಂಡರೂ ಕಾಲಕ್ರಮೇಣವಾಗಿ ಇದೊಂದು ಆಚರಣೆಯಾಗಿಯೇ ಮುಂದುವರೆಯಿತು. ಕೊನೆಗೆ ಇದು ಈ ಬುಡಕಟ್ಟಿನ ಮಹಿಳೆಯರ ಸೌಂದರ್ಯದ ಪ್ರತೀಕ ಎನ್ನುವಂತಾಯಿತು.
ಇದನ್ನೂ ಓದಿ : ಮಹಿಳೆಯರನ್ನು ಮೆಚ್ಚಿಸಲು ಈ ಪುರುಷರು ಮಾಡ್ತಾರೆ ವಿಶೇಷ ನೃತ್ಯ, ಏನಿದು ವಿಶಿಷ್ಟ ಆಚರಣೆ?
ಒಬ್ಬ ಮಹಿಳೆಯೂ ತುಟಿಗೆ ಹಾಕಲಾದ ತಟ್ಟೆ ದೊಡ್ಡದಾದಷ್ಟೂ ಆಕೆಯೂ ಸ್ಥಾನಮಾನವು ಹೆಚ್ಚಾಗುತ್ತದೆ. ತಟ್ಟೆಯ ಗಾತ್ರದ ಆಧಾರದ ಮೇಲೆ ಆಕೆಯೂ ಪಡೆಯುವ ವರದಕ್ಷಿಣೆಯನ್ನು ನಿರ್ಧರಿಸಲಾಗುತ್ತದೆಯಂತೆ. ಹುಡುಗಿಯೂ ಮದುವೆ ಮಾಡುವ ಸಂದರ್ಭದಲ್ಲಿ ತುಟಿಗಳ ಆಧಾರದ ಮೇಲೆ ವರನಿಂದ ಇಂತಿಷ್ಟು ವರದಕ್ಷಿಣೆಯನ್ನು ಕೇಳುವುದಿದೆ. ಒಂದು ವೇಳೆ ತುಟಿಗೆ ಹಾಕಲಾದ ತಟ್ಟೆಯ ಆಕಾರವು ದೊಡ್ಡದಾಗಿದ್ದರೆ ವಧುವಿನ ತಂದೆ ವರನಿಂದ 60 ಹಸುಗಳನ್ನು ವರದಕ್ಷಿಣೆಯಾಗಿ ಕೇಳುವ ಹಕ್ಕನ್ನು ಹೊಂದಿರುತ್ತಾರೆ. ತುಟಿ ಸಣ್ಣದಾಗಿದ್ದರೆ 40 ಹಸುಗಳನ್ನು ವರದಕ್ಷಿಣೆಯಾಗಿ ಕೇಳಬಹುದಂತೆ. ನಮಗೆಲ್ಲಾ ವಿಚಿತ್ರ ಪದ್ಧತಿ ಎನಿಸಿದರೂ ತುಟಿಗೆ ಹಾಕಲಾದ ಅಗಲವಾದ ತಟ್ಟೆಗಳೇ ಈ ಹೆಣ್ಣು ಮಕ್ಕಳ ತುಟಿಯ ಅಂದವನ್ನು ಹೆಚ್ಚಿಸುವುದಂತೆ. ಹೀಗಾಗಿ ಇಲ್ಲಿನ ಮಹಿಳೆಯರು ಈ ಪದ್ಧತಿಯನ್ನು ಇಂದಿಗೂ ಅನುಸರಿಸಿಕೊಂಡು ಬರುತ್ತಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ