Viral : ಕನ್ನಡ ಭಾಷೆ ಗೊತ್ತಿಲ್ಲ, ಚಾಟ್ ಜಿಪಿಟಿ ಬಳಸಿ ಆಟೋ ಚಾಲಕನ ಜೊತೆಗೆ ಚೌಕಾಸಿ ಮಾಡಿದ ಯುವಕ
ಇಂದಿನ ಯುವಜನತೆ ಬಹಳ ಬುದ್ಧಿವಂತರು, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಷ್ಟು ನಿಪುಣರಾಗಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕನ್ನಡ ಭಾಷೆ ಮಾತಾನಾಡಲು ಬಾರದ ಯುವಕನೊಬ್ಬನು ಚಾಟ್ ಜಿಪಿಟಿ ಬಳಸಿ ಆಟೋ ಚಾಲಕನ ಜೊತೆಗೆ ಚೌಕಾಸಿ ಮಾಡಿದ್ದಾನೆ. ಹೌದು, ಬೆಂಗಳೂರಿನಲ್ಲಿ ಯುವಕನೊಬ್ಬನು ಚಾಟ್ ಜಿಪಿಟಿ ಬಳಸಿ ಸಂವಹನ ನಡೆಸಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಈತನ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ.

ಬೆಂಗಳೂರು (Bengaluru) ಅದೆಷ್ಟೋ ಜನರಿಗೆ ಆಸರೆಯಾಗಿದೆ. ಲೆಕ್ಕವಿಲ್ಲದಷ್ಟು ಜನರು ದೂರದ ಊರು, ಜಿಲ್ಲೆ, ರಾಜ್ಯದಿಂದ ಉದ್ಯೋಗ ಅರಸಿಕೊಂಡು ಇಲ್ಲಿಗೆ ಬಂದು ಇಲ್ಲೇ ನೆಲೆಸಿದ್ದಾರೆ. ಇನ್ನು ಕೆಲವರು ತಮ್ಮ ವಿದ್ಯಾಭ್ಯಾಸಕ್ಕಾಗಿ ಇಲ್ಲಿ ಉಳಿದುಕೊಂಡಿದ್ದಾರೆ. ಹೀಗಾಗಿ ಕನ್ನಡಿಗರಿಗಿಂತ ಇಲ್ಲಿರುವ ಅರ್ಧದಷ್ಟು ಜನರು ಪರಭಾಷಿಕರೇ ಆಗಿದ್ದಾರೆ. ಹೀಗಾಗಿ ಹೆಚ್ಚಿನವರಿಗೆ ಕನ್ನಡ ಭಾಷೆ (kannada language) ಮಾತನಾಡಲು ಬರುವುದಿಲ್ಲ. ಆದರೆ ಆಟೋ ಅಥವಾ ಕ್ಯಾಬ್ ನಲ್ಲಿ ಪ್ರಯಾಣಿಸುವಾಗ ಚಾಲಕನ ಜೊತೆಗೆ ವ್ಯವಹರಿಸಲು ಭಾಷೆಯೇ ಬರುವುದಿಲ್ಲ ಎನ್ನುವುದೇ ದೊಡ್ಡ ಸಮಸ್ಯೆಯಾಗುತ್ತದೆ. ಇದೀಗ ಯುವಕನೊಬ್ಬನು, ಕನ್ನಡ ಭಾಷೆಯ ಬರದ ಕಾರಣ ಆಟೋ ಚಾಲಕನ ಜೊತೆಗೆ ವ್ಯವಹರಿಸಲು ಚಾಟ್ ಜಿಪಿಟಿ(Chat GPT) ಬಳಸಿ ತಮ್ಮ ಸಮಸ್ಯೆಗೆ ಸುಲಭ ಪರಿಹಾರ ಕಂಡುಕೊಂಡಿದ್ದಾನೆ.
ಈ ವಿಡಿಯೋವನ್ನು sajaanmahto.ai ಹೆಸರಿನ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಯುವಕನೊಬ್ಬನು ಚಾಟ್ ಜಿಪಿಟಿ ಬಳಸುವುದನ್ನು ನೋಡಬಹುದು. ಪ್ರಾರಂಭದಲ್ಲಿ ಹಾಯ್ ಚಾಟ್ ಜಿಪಿಟಿ, ಬೆಂಗಳೂರಿನಲ್ಲಿರುವ ಆಟೋ ಚಾಲಕನೊಂದಿಗೆ ಮಾತುಕತೆ ನಡೆಸಲು ನೀವು ನನಗೆ ಸಹಾಯ ಮಾಡಬೇಕು. ಆಟೋ ಚಾಲಕ ಶುಲ್ಕ 200 ಎಂದು ಹೇಳುತ್ತಿದ್ದಾನೆ. ಆದರೆ ನಾನು ವಿದ್ಯಾರ್ಥಿ ಎಂದು ಹೇಳುತ್ತಿದ್ದು, ದಯವಿಟ್ಟು100 ಗೆ ಮಾತುಕತೆ ನಡೆಸಿ ಎಂದು ಹೇಳುತ್ತಿರುವುದನ್ನು ನೋಡಬಹುದು.
ಇದನ್ನೂ ಓದಿ : ಅಂಧ ವ್ಯಕ್ತಿಯ ಗಾಯನಕ್ಕೆ ಮನಸೋತ ರೈಲ್ವೆ ಸಹಪ್ರಯಾಣಿಕರು, ವಿಡಿಯೋ ವೈರಲ್
ಈ ವೇಳೆಯಲ್ಲಿ ಚಾಟ್ ಜಿಪಿಟಿಯೂ ಸ್ಥಳೀಯ ಕನ್ನಡ ಭಾಷೆಯಲ್ಲಿ ಚಾಲಕನೊಂದಿಗೆ ಚಾಲಕನೊಂದಿಗೆ ಮಾತುಕತೆ ನಡೆಸಿದೆ. ಅಣ್ಣಾ, ನಾನು ಪ್ರತಿದಿನ ಪ್ರಯಾಣಿಸುವ ಮಾರ್ಗ ಇದು ಮತ್ತು ನಾನು ವಿದ್ಯಾರ್ಥಿ ದಯವಿಟ್ಟು 100 ಗೆ ಬನ್ನಿ ಎನ್ನುವುದನ್ನು ಇಲ್ಲಿ ನೋಡಬಹುದು. ಕೊನೆಗೆ ಆಟೋ ಚಾಲಕನು ನಾನು 200 ಎಂದು ಹೇಳಿದ್ದೆ, ಆ ಬಳಿಕ 150 ರೂಪಾಯಿಗೆ ಇಳಿಸಿದೆ. ಆದರೆ ಚಾರ್ಜ್ 100 ರೂಪಾಯಿ ಎಂದರೆ ಸಾಧ್ಯವಿಲ್ಲ, ನೀವು ತಿಳಿದುಕೊಳ್ಳಿ ಅಣ್ಣ, 30 ಕಡಿಮೆ ಮಾಡಿದೆ ಎಂದು ಆಟೋಚಾಲಕನು ವಿವರಿಸಿದ್ದಾನೆ. ಕೊನೆಗೆ 120 ಓಕೆ, ಹೊಂದಾಣಿಕೆ ಮಾಡಿಕೊಂಡದ್ದಕ್ಕೆ ಧನ್ಯವಾದಗಳು ಎಂದು ಚಾಟ್ ಜಿಪಿಟಿ ವಾಯ್ಸ್ ಮೆಸೇಜ್ ನಲ್ಲಿ ಹೇಳುತ್ತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವೊಂದು 23 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ಈ ಯುವಕನ ಬುದ್ಧಿವಂತಿಕೆಯನ್ನು ಮೆಚ್ಚಿಕೊಳ್ಳುವ ಮೂಲಕ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು, ಕನ್ನಡ ಮಾತನಾಡಲು ಬರುವುದಿಲ್ಲ ಎನ್ನುವ ಸಮಸ್ಯೆಯೇ ಪರಿಹಾರವಾಯ್ತು ಎಂದಿದ್ದಾರೆ. ಇನ್ನೊಬ್ಬರು, ಎಐ ಆಧಾರಿತ ಚಾಟ್ ಜಿಪಿಟಿ ಭಾಷಾ ಮಾದರಿಯನ್ನು ಹೇಗೆ ಬಳಸಬೇಕು ಎನ್ನುವುದನ್ನು ನೀವು ಚೆನ್ನಾಗಿ ತಿಳಿದುಕೊಂಡಿದ್ದೀರಿ ಎಂದಿದ್ದಾರೆ. ಇನ್ನೊಬ್ಬರು, ನಾನು ಕೂಡ ಬೀದಿ ಬದಿ ವ್ಯಾಪಾರಿಗಳೊಂದಿಗೆ ವ್ಯವಹರಿಸಲು ಚಾಟ್ ಜಿಪಿಟಿ ಬಳಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








