ಎಳನೀರಿಗೆ ಆನ್ಲೈನ್ ಗಿಂತ ನಮ್ಮಲ್ಲಿ ಕಡಿಮೆ ಬೆಲೆ : ಆಯ್ಕೆ ನಿಮ್ಮದು
ಈಗಿನ ಕಾಲದಲ್ಲಿ ಬುದ್ಧಿ ಉಪಯೋಗಿಸದೇ ಇದ್ದರೆ ಬದುಕಲು ತುಂಬಾನೇ ಕಷ್ಟ ಇದೆ. ಅದರಲ್ಲಿಯೂ ನೀವೇನಾದ್ರು ವ್ಯಾಪಾರ ವ್ಯವಹಾರ ಮಾಡುತ್ತಿದ್ದರೆ ವಿಭಿನ್ನ ರೀತಿಯಲ್ಲಿ ಜಾಹೀರಾತು ಕೊಟ್ಟರೆ ಮಾತ್ರ ಗ್ರಾಹಕರು ನಿಮ್ಮತ್ತ ತಿರುಗಿ ನೋಡುತ್ತಾರೆ. ಆದರೆ ಇದೀಗ ಎಳನೀರು ಮಾರಾಟಗಾರರೊಬ್ಬರು ಆನ್ಲೈನ್ ಪ್ಲಾಟ್ ಫಾರ್ಮ್ ಗಳಿಗೆ ಸೆಡ್ಡು ಹೊಡೆಯುವಂತೆ ಜಾಹೀರಾತು ನೀಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುವ ಮೂಲಕ ಈ ಜಾಹೀರಾತು ಎಲ್ಲರ ಗಮನ ಸೆಳೆಯುತ್ತಿದೆ.

ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ವ್ಯಾಪಾರಿಗಳು ತಮ್ಮ ವ್ಯಾಪಾರ ಚೆನ್ನಾಗಿ ಆಗಲು ಕ್ರಿಯೇಟಿವ್ ಮಾರುಕಟ್ಟೆ ತಂತ್ರ (creative marketing techniques) ಗಳನ್ನು ಅನುಸರಿಸುತ್ತಾರೆ. ಈ ಮೂಲಕ ತಮ್ಮ ಉತ್ಪನ್ನ (product) ಗಳು ಮಾರುಕಟ್ಟೆಯಲ್ಲಿ ಒಂದೊಳ್ಳೆ ಹೆಸರು ಗಳಿಸಿಕೊಳ್ಳಬೇಕು ಹಾಗೂ ಗ್ರಾಹಕರಿಗೆ ಹತ್ತಿರವಾಗಬೇಕೆಂದು ಬಯಸುತ್ತಾರೆ. ಅದಲ್ಲದೇ ಗ್ರಾಹಕರನ್ನು ತಮ್ಮತ್ತ ಸೆಳೆಯಲು ವಿಭಿನ್ನ ರೀತಿಯ ತಂತ್ರಗಳನ್ನು ಅನುಸರಿಸುವುದನ್ನು ನೀವು ನೋಡಿರಬಹುದು. ಆದರೆ ಬೆಂಗಳೂರಿನ ಸ್ಥಳೀಯ ಎಳನೀರು ವ್ಯಾಪಾರಿ (coconut vendor) ಯೊಬ್ಬರು, ವಿಭಿನ್ನ ಮಾರುಕಟ್ಟೆ ತಂತ್ರವನ್ನು ಅನುಸರಿಸುವ ಮೂಲಕ ಆಕರ್ಷಕ ಜಾಹೀರಾತನ್ನು ನೀಡಿದ್ದಾರೆ. ಈ ಜಾಹೀರಾತಿನ ಪೋಸ್ಟ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ಇವರ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ.
stockmarketofficial.in ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಪೋಸ್ಟ್ ನಲ್ಲಿ ಎಳನೀರು ಮಾರಾಟಗಾರರೊಬ್ಬರು ಆಕರ್ಷಕ ಜಾಹೀರಾತನ್ನು ನೀಡಿರುವುದನ್ನು ನೋಡಬಹುದು. ಜೆಪ್ಟೋ, ಬ್ಲಿಂಕಿಟ್ ಮತ್ತು ಬಿಗ್‌ಬಾಸ್ಕೆಟ್ ನಂತಹ ಪ್ಲಾಟ್ ಫಾರ್ಮ್ ಗಳಲ್ಲಿ ಎಳನೀರು ಬೆಲೆಯನ್ನು ಹೋಲಿಕೆ ಮಾಡಿ ನಮ್ಮಲ್ಲಿ ಎಳನೀರು ಕಡಿಮೆ ಬೆಲೆಗೆ ದೊರೆಯುತ್ತದೆ ಎಂದು ಬರೆಯಲಾಗಿದೆ. ಹೌದು, ಕಾಗದದ ಮೇಲೆ ಜೆಪ್ಟೋ ಮತ್ತು ಬ್ಲಿಂಕಿಟ್‌ನಲ್ಲಿ ಎಳನೀರು 80 ರೂಪಾಯಿಗೆ ದೊರೆಯುತ್ತದೆ. ಇನ್ನು ಬಿಗ್ ಬಾಸ್ಕೆಟ್ ನಲ್ಲಿ ಎಳನೀರಿನ ಬೆಲೆ 70 ರೂಪಾಯಿ, ಆದರೆ ನಮಲ್ಲಿ ಕೇವಲ 55 ರೂ ಗೆ ಎಳನೀರು ಲಭ್ಯ ಎಂದು ಉಲ್ಲೇಖಿಸಿದ್ದಾರೆ. ಆನ್ಲೈನ್ ಗಿಂತ ನಮ್ಮಲ್ಲಿ ಅತ್ಯಂತ ಕಡಿಮೆ ಬೆಲೆ ಎಳನೀರು ಸಿಗುತ್ತದೆ ಎನ್ನುವ ಮೂಲಕ ಗ್ರಾಹಕರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ : ಚಲಿಸುತ್ತಿದ್ದ ಬೈಕ್ ನಲ್ಲೇ ಜೋಡಿ ಹಕ್ಕಿಗಳ ರೊಮ್ಯಾನ್ಸ್, ವಿಡಿಯೋ ವೈರಲ್
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
View this post on Instagram
ಈ ಪೋಸ್ಟ್ ವೊಂದು ಐವತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಸ್ಥಳೀಯ ಎಳನೀರು ಮಾರಾಟಗಾರನ ಬುದ್ಧಿವಂತಿಕೆಯನ್ನು ಮೆಚ್ಚಿಕೊಳ್ಳುವ ಮೂಲಕ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ಪರ್ಫೆಕ್ಟ್ ಎಂದಿದ್ದಾರೆ. ಇನ್ನೊಬ್ಬರು, ಹೈದರಾಬಾದ್ ನಲ್ಲಿ ಕೇವಲ 35 ರೂಪಾಯಿಗೆ ಎಳನೀರು ಸಿಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಜಾಹೀರಾತಿಗಾಗಿ ಒಂದು ರೂಪಾಯಿ ಖರ್ಚು ಮಾಡಿಲ್ಲ. ಆದ್ರೆ ಈತನ ತಂತ್ರ ನಿಜಕ್ಕೂ ಮೆಚ್ಚುವಂತಿದೆ ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:37 am, Sun, 25 May 25








