AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಓಯ್ ಬೆಕ್ಕಣ್ಣ ನಾನು ನಿನ್ ಮನೆಗೆ  ಬರ್ಲಾ;  ಬೆಕ್ಕನ್ನು ಹಿಂಬಾಲಿಸಿದ ತುಂಟ  ಹಕ್ಕಿ…

ಪ್ರಾಣಿ ಮತ್ತು ಪಕ್ಷಿ ಸಾಮ್ರಾಜ್ಯದ ಕುತೂಹಲಕಾರಿ, ತಮಾಷೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ.  ಈಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು,  ಪುಟ್ಟ ಹಕ್ಕಿಯೊಂದು, ಬೆಕ್ಕನ್ನು ಚುಡಾಯಿಸುತ್ತಾ, ಆ ಬೆಕ್ಕನೇ  ಹಿಂಬಾಲಿಸುತ್ತಾ ಹೋಗಿದೆ. ಈ ಹಾಸ್ಯಮಯ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. 

Viral Video: ಓಯ್ ಬೆಕ್ಕಣ್ಣ ನಾನು ನಿನ್ ಮನೆಗೆ  ಬರ್ಲಾ;  ಬೆಕ್ಕನ್ನು ಹಿಂಬಾಲಿಸಿದ ತುಂಟ  ಹಕ್ಕಿ…
ಮಾಲಾಶ್ರೀ ಅಂಚನ್​
| Edited By: |

Updated on: Jan 09, 2024 | 12:23 PM

Share

ಬೆಕ್ಕುಗಳು ತುಂಬಾ ಚತುರ ಪ್ರಾಣಿ. ತನ್ನ ಬುದ್ಧಿವಂತಿಕೆಯಿಂದ ಇಲಿ, ಸಣ್ಣಪುಟ್ಟ ಪಕ್ಷಿಗಳನ್ನು ಕ್ಷಣಾರ್ಧದಲ್ಲಿ ಬೇಟೆಯಾಡುತ್ತವೆ. ಅದರಲ್ಲೂ ಈ ಬೆಕ್ಕುಗಳು ಮನೆಯ ಹೊರಗಡೆ ನೆಮ್ಮದಿಯಾಗಿ ವಿಹರಿಸುತ್ತಿರುವ ಸಮಯದಲ್ಲಿ ಅವುಗಳ ಕಣ್ಣಿಗೆ ಹಕ್ಕಿಗಳು ಏನಾದ್ರೂ ಕಾಣಿಸಿಕೊಂಡ್ರೆ, ಆ ಹಕ್ಕಿಗಳ ಕಥೆ ಮುಗಿಯಿತೆಂದೆ ಅರ್ಥ.  ಹೀಗೆ ಸಾಮಾನ್ಯವಾಗಿ ಬೆಕ್ಕುಗಳು ಪಕ್ಷಿಗಳು, ಇಲಿ, ಜಿರಳೆಗಳ ಜೊತೆಗೆ ಚೆಲ್ಲಾಟವಾಡುತ್ತದೆ. ಆದ್ರೆ ಇಲ್ಲೊಂದು ಜಾಣ ಮ್ಯಾಗ್ಪಿ ಹಕ್ಕಿ ಮಾತ್ರ ಬೆಕ್ಕನ್ನು ಚುಡಾಯಿಸುತ್ತಾ, ಬೆಕ್ಕಿನ ಜೊತೆಗೆಯೇ ಚೆಲ್ಲಾಟವಾಡಿದೆ.  ಬೆಕ್ಕು ಮತ್ತು  ಮ್ಯಾಗ್ಪಿ ಹಕ್ಕಿಯ ಈ ಹಾಸ್ಯಮಯ ವಿಡಿಯೋ ಇದೀಗ  ಸಿಕ್ಕಾಪಟ್ಟೆ ವೈರಲ್ ಆಗಿದೆ.

@gunsnrosesgirl3 ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹರಿಬಿಡಲಾಗಿದ್ದು, ʼನಟನೆ ಮಾಡುತ್ತಾ ಮ್ಯಾಗ್ಪಿ ಹಕ್ಕಿ ಬೆಕ್ಕನ್ನು ಹಿಂಬಾಲಿಸುವ ಪರಿ ನೋಡಿʼ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವಿಡಿಯೋದಲ್ಲಿ ಮ್ಯಾಗ್ಪಿ ಹಕ್ಕಿ, ಬೆಕ್ಕಮ್ಮನ್ನು ಮೆಲ್ಲಗೆ ಹಿಂಬಾಲಿಸುತ್ತ ಹೋಗುವ ತಮಾಷೆಯ ದೃಶ್ಯಾವಳಿಯನ್ನು ಕಾಣಬಹುದು.

ವೈರಲ್ ವಿಡಿಯೋದಲ್ಲಿ ಬೆಕ್ಕೊಂದು ರಸ್ತೆ ಬದಿಯಲ್ಲಿ  ತನ್ನ ಪಾಡಿಗೆ ಮನೆಯ ಕಡೆಗೆ ನಡೆದುಕೊಂಡು ಹೋಗ್ತಾ ಇತ್ತು. ಈ ಬೆಕ್ಕನ್ನು ಗಮನಿಸಿದ ಮ್ಯಾಗ್ಪಿ ಹಕ್ಕಿಯೊಂದು, ಈ ಬೆಕ್ಕಿನ ಜೊತೆಗೆ ಸ್ವಲ್ಪ ಚೇಷ್ಟೆ ಆಟವನ್ನು ಆಡ್ಬೇಕಲ್ವಾ ಅಂತ ಯೋಚಿಸಿ, ಕಾಂಪೌಂಡ್ ನಿಂದ ಈಚೆ ಹಾರಿ ಬಂದು ಮೆಲ್ಲಗೆ ಆ ಬೆಕ್ಕನ್ನೇ ಹಿಂಬಾಸುತ್ತಾ ಹೋಗುತ್ತೆ, ನನ್ನನ್ನು ಯಾರೋ ಹಿಂಬಾಲಿಸುತ್ತಿರುವಂತೆ ಕಾಣುತ್ತಿದೆ, ಸರಿ ಯಾರಿರಬಹುದೆಂದು  ಬೆಕ್ಕು ಹಿಂತಿರುಗಿ ನೋಡುವಾಗ, ಈ ಚಾಲಾಕಿ ಹಕ್ಕಿ ಅತ್ತ ಕಡೆ ನೋಡುತ್ತಾ ನನಗೇನು ಗೊತ್ತೇ ಇಲ್ಲಪ್ಪಾ, ನಾನು ಯಾರನ್ನು ಹಿಂಬಾಲಿಸುತ್ತಿಲ್ಲ ಅನ್ನುವಂತೆ ನಾಟಕವಾಡುತ್ತದೆ. ನಂತರ ಬೆಕ್ಕು ಹಿಂತಿರುಗಿ ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತೆ.  ಮಾರ್ಜಾಲದ ಹಿಂದೆ  ಈ ಹಕ್ಕಿಯೂ ಮೆಲ್ಲ ಮೆಲ್ಲಗೆ ಹೆಜ್ಜೆಯನ್ನಿಡುತ್ತಾ ಹೋಗುತ್ತೆ. ಈ ಹಕ್ಕಿ ನನ್ನನ್ನೇ ಹಿಂಬಾಲಿಸುತ್ತಿದೆ ಎಂದು ತಿಳಿದ ಬೆಕ್ಕು  ಕೋಪಗೊಂಡು ನನ್ನ ಹಿಂದೆ ಬರ್ಬೇಡಾ ಎಂದು ಹಕ್ಕಿಯನ್ನು ಓಡಿಸಲು ಪ್ರಯತ್ನಿಸುತ್ತದೆ.  ನನ್ನ ಹಿಂದೆ ಬರ್ಬೇಡಾ ಎಂದು ಹಕ್ಕಿಯನ್ನು ಓಡಿಸಿದರೂ, ನಾನಂತೂ ನಿನಗೆ ಚೇಷ್ಟೇ ಮಾಡ್ತಾನೆ ಇರ್ತೀನಿ ಅಂತ  ಬೆಕ್ಕಣ್ಣನಿಗೆ ಸ್ವಲ್ಪ ಕೋಪ ಬರಿಸುತ್ತಾ, ಮ್ಯಾಗ್ಪಿ ಹಕ್ಕಿಯು ಬೆಕ್ಕಣ್ಣನನ್ನು  ಹಿಂಬಾಲಿಸುತ್ತಾ  ಹೋಗುವ ಹಾಸ್ಯಮಯ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಬರ್ಡ್ ಮ್ಯಾನ್ ಸುಮೇಧ್ ವಾಘಮಾರೆ ಜತೆ ವಿಶೇಷ ವಿಡಿಯೋ ಹಂಚಿಕೊಂಡ ಸಚಿನ್ 

ಡಿಸೆಂಬರ್  08 ರಂದು ಹಂಚಿಕೊಳ್ಳಲಾದ ಈ ವಿಡಿಯೋ 8 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ.  ಒಬ್ಬ ಬಳಕೆದಾರರು ʼಮ್ಯಾಗ್ಪಿ ಹಕ್ಕಿ ನಾಟಕವಾಡುತ್ತಾ ಬೆಕ್ಕನ್ನು ಹಿಂಬಾಲಿಸುವ ದೃಶ್ಯವಂತೂ ತುಂಬಾ ಹಾಸ್ಯಮಯವಾಗಿದೆʼ ಎಂದು ಹೇಳಿದ್ದಾರೆ.  ಇನೊಬ್ಬ ಬಳಕೆದಾರು ʼಅಲ್ಲೇ ಎಲ್ಲೋ ಮ್ಯಾಗ್ಪಿ ಹಕ್ಕಿಯ ಗೂಡು ಇರಬಹುದು, ತನ್ನ ಮರಿಗಳಿಗೆ ಈ ಬೆಕ್ಕಿನಿಂದ ಅಪಾಯವಾಗಬಹುದೆಂಬ ಕಾರಣಕ್ಕೆ, ಬೆಕ್ಕನ್ನು ಓಡಿಸಲು ಪ್ರಯತ್ನಿಸುತ್ತಿರಬಹುದುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹಕ್ಕಿಯೇ ಬೆಕ್ಕನ್ನು ಬೇಟೆಯಾಡಲು ಹೋಗುತ್ತಿದೆʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ