ನನಗೆ ಕೆಲಸ ಬೇಕು; ದುಬೈನ ಟ್ರಾಫಿಕ್ ಸಿಗ್ನಲ್ಗಳಲ್ಲಿ ರೆಸ್ಯೂಮ್ನೊಂದಿಗೆ ಚಾಕೋಲೇಟ್ ಹಂಚಿದ್ದಾನೆ ಈ ವ್ಯಕ್ತಿ
Dubai : ಜೀವನದಲ್ಲಿ ಒಂದಿಲ್ಲಾ ಒಂದು ಹಂತದಲ್ಲಿ ನಾವೆಲ್ಲರೂ ನಿಮ್ಮ ಈ ಸ್ಥಿತಿಗೆ ಮುಖಾಮುಖಿಯಾದವರೇ. ಧೃತಿಗೆಡಬೇಡಿ, ಇದು ಅದ್ಭುತ ಪರಿಕಲ್ಪನೆ. ನಿಮ್ಮಿಂದ ನಾನು ಸ್ಫೂರ್ತಿ ಪಡೆದೆ, ಖಂಡಿತ ಒಳ್ಳೆಯ ಕೆಲಸ ಸಿಗುತ್ತದೆ ಎಂದಿದ್ದಾರೆ ನೆಟ್ಟಿಗರೊಬ್ಬರು.
Viral : ಓದಿದ ಮಾತ್ರಕ್ಕೆ, ಅನುಭವ ಇದ್ದ ಮಾತ್ರಕ್ಕೆ ಎಲ್ಲರಿಗೂ ಒಳ್ಳೆಯ ಕೆಲಸ ಸಿಕ್ಕೇ ಸಿಗುತ್ತದೆ ಎಂದು ಹೇಳಲಾಗದು. ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ನಿರ್ವಾತ ಸಂದರ್ಭವನ್ನು ಎದುರಿಸಿರುತ್ತಾರೆ. ಆಗ ತಮ್ಮನ್ನು ತಾವು ಎತ್ತಿ ಹಿಡಿದುಕೊಳ್ಳಲು ಏನಾದರೂ ಉಪಾಯ ಕಂಡುಕೊಂಡು ಮತ್ತೆ ಶಕ್ತಿ ತಂದುಕೊಳ್ಳುತ್ತಿರುತ್ತಾರೆ. ಹಿಂದೊಮ್ಮೆ ಯುವತಿಯೊಬ್ಬಳು ಕೇಕ್ ಮೇಲೆ ತನ್ನ ರೆಸ್ಯೂಮ್ ಮುದ್ರಿಸಿ ಕಂಪೆನಿಯೊಂದಕ್ಕೆ ಕಳಿಸಿದ್ದ ವರದಿಯನ್ನು ಓದಿದ್ದಿರಿ. ಈಗ ದುಬೈನಲ್ಲಿ ಒಬ್ಬಾತ ಟ್ರಾಫಿಕ್ ಸಿಗ್ನಲ್ಗಳಲ್ಲಿ ತನ್ನ ರೆಸ್ಯೂಮ್ ಜೊತೆ ಪುಟ್ಟ ಟಿಪ್ಪಣಿ ಬರೆದು ಅದರೊಂದಿಗೆ ಚಾಕೋಲೇಟ್ ಇಟ್ಟು ಹಂಚುತ್ತಿರುವುದು ವೈರಲ್ ಆಗಿದೆ. ನೆಟ್ಟಿಗರು ಇದನ್ನು ಅಚ್ಚರಿಯಿಂದ ನೋಡುತ್ತಿದ್ದಾರೆ.
ಕಂಪೆನಿಗಳ ಆಡಳಿತ ಮಂಡಳಿಯ ಗಮನ ಸೆಳೆಯಲು ರೆಸ್ಯೂಮ್ನೊಂದಿಗೆ ಕವರಿಂಗ್ ಲೆಟರ್ಗಳನ್ನು ಬರೆಯುವುದು ಸಾಮಾನ್ಯವಾದ ಕ್ರಮ. ಆದರೆ ದುಬೈನ ನವಾರ್ ಮೌಖಾಲಲಾತಿ ಎಂಬಾತ ಆನ್ಲೈನ್ ಮೂಲಕ ಉದ್ಯೋಗವನ್ನು ಹುಡುಕಿಕೊಳ್ಳುವಲ್ಲಿ ಸೋತಾಗ ಜನರ ಗಮನ ಸೆಳೆಯಲು ಹೀಗೊಂದು ಉಪಾಯ ಹೂಡಿದ.
‘ನನಗೆ ಕೆಲಸ ಸಿಗುವಲ್ಲಿ ನೀವು ಸಹಾಯ ಮಾಡಿದರೆ ನಾನು ನಿಮಗೆ ಕೃತಜ್ಞ. ನಿಮ್ಮ ಈ ದಿನ ಪ್ರೀತಿ ಮತ್ತು ಖುಷಿಯಿಂದ ಕೂಡಿರಲಿ ಎಂದು ಹಾರೈಸುತ್ತೇನೆ’ ಎಂಬ ಟಿಪ್ಪಣಿಯೊಂದಿಗೆ ತನ್ನ ಹೆಸರು, ಫೋನ್ ನಂಬರ್ ಬರೆದು ರೆಸ್ಯೂಮ್ನೊಂದಿಗೆ ಚಾಕೋಲೇಟ್ ಇಟ್ಟು ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತು ಜನರಿಗೆ ಹಂಚತೊಡಗಿದ. ‘ಲಿಂಕ್ಡಿನ್ನ ಮೂಲಕ ಕೆಲಸ ಗಿಟ್ಟಿಸಲು ನಾನು ವಿಫಲಗೊಂಡೆ. ಹಾಗಾಗಿ ದುಬೈ ಸಿಗ್ನಲ್ಗಳಲ್ಲಿ ಹೀಗೆ ರೆಸ್ಯೂಮ್ ಅನ್ನು ಹಂಚಲು ಪ್ರಾರಂಭಿಸಿದೆ’ ಎಂದು ನೋಟ್ ಬರೆದು ಲಿಂಕ್ಡಿನ್ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾನೆ.
ಮೌಖಾಲಲಾತಿ ತನ್ನ ರೆಸ್ಯೂಮ್ನಲ್ಲಿ ಅಲ್ ಜರ್ಕಾ ವಿಶ್ವವಿದ್ಯಾಲಯದಿಂದ ಶಿಕ್ಷಣ ಪೂರೈಸಿರುವುದಾಗಿ ಹೇಳಿಕೊಂಡಿದ್ದಾನೆ. ಅರೇಬಿಕ್ ಮತ್ತು ಇಂಗ್ಲಿಷ್ ಭಾಷೆಗಳನ್ನು ಬಲ್ಲವನಾಗಿದ್ದಾನೆ. ವಿವಿಧ ಕಂಪೆನಿಗಳಲ್ಲಿ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡಿದ್ದಾನೆ. ನೂರಾರು ಜನರು ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ.
ನಿಮಗೆ ಒಳ್ಳೆಯದಾಗಲಿ. ನಿಮ್ಮ ಸಂಕಲ್ಪ ಖಂಡಿತ ಈಡೇರುತ್ತದೆ ಎಂದಿದ್ದಾರೆ ಹಲವಾರು ಜನರು. ನಿಜಕ್ಕೂ ನಿಮಗಾಗಿ ಎಲ್ಲೋ ಒಂದೆಡೆ ಕೆಲಸ ಕಾದಿದೆ ಎಂದು ನನಗನ್ನಿಸುತ್ತಿದೆ ಒಳ್ಳೆಯದಾಗಲಿ ಎಂದಿದ್ದಾರೆ ಮತ್ತೊಬ್ಬರು. ನಾವೆಲ್ಲರೂ ನಿಮ್ಮ ಈ ಹಂತವನ್ನು ಜೀವನದಲ್ಲಿ ಒಮ್ಮೆಯಾದವರೂ ಅನುಭವಿಸಿದವರೇ ಧೃತಿಗೆಡಬೇಡಿ. ಇದು ಅದ್ಭುತ ಪರಿಕಲ್ಪನೆ. ನಿಮ್ಮಿಂದ ನಾನು ಸ್ಫೂರ್ತಿ ಪಡೆದೆ ಈ ವಿಷಯವಾಗಿ ಎಂದಿದ್ದಾರೆ ಇನ್ನೂ ಒಬ್ಬರು.
ನಿಮಗೆನು ಅನ್ನಿಸುತ್ತದೆ ಇದನ್ನು ಓದುತ್ತಿದ್ದಂತೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:01 pm, Thu, 10 November 22