ಸಾಮಾನ್ಯವಾಗಿ ಮದುವೆ ಕಾರ್ಯಕ್ರಮಗಳಲ್ಲಿ ವಧುವರರ ಗೆಳೆಯರು ಅಥವಾ ಸಂಬಂಧಿಕರು ತರ್ಲೆ ತಮಾಷೆಗಳನ್ನು ಮಾಡುತ್ತಿರುತ್ತಾರೆ. ಕೆಲವೊಬ್ಬರು ಪುರೋಹಿತರೊಂದಿಗೂ ತಮಾಷೆ ಮಾಡುವುದುಂಟು. ಆದರೆ ಈ ತರ್ಲೆ ತಮಾಷೆಗಳು ಯಾವುದೇ ಕಾರಣಕ್ಕೂ ಅತಿರೇಕಕ್ಕೆ ಹೋಗಬಾರದು. ಅತಿಯಾದರೆ ಅಮೃತವೂ ವಿಷವೆನ್ನುವಂತೆ ಅತಿರೇಕದ ತರ್ಲೆ ತಮಾಷೆಗಳು ಕೂಡಾ ನಮ್ಮ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ಸೂಕ್ತ ನಿದರ್ಶನವೆಂಬಂತೆ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ತಮಾಷೆಯ ನೆಪದಲ್ಲಿ ಯುವಕರ ಗುಂಪೊಂದು ಮದುವೆ ಮಂಟಪದಲ್ಲಿಯೇ ಪುರೋಹಿತರಿಗೆ ಅವಮಾನವನ್ನು ಮಾಡಿದ್ದಾರೆ. ಈ ದೃಶ್ಯವನ್ನು ಕಂಡು ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ಈ ಕುರಿತ ವಿಡಿಯೋವನ್ನು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಪುರೋಹಿತರೊಬ್ಬರಿಗೆ ಆದ ಈ ಅವಮಾನವನ್ನು ನೋಡಿ ಮನಸ್ಸಿಗೆ ತುಂಬಾ ನೋವಾಗಿದೆ. ಅವರು ಶುಭ ಕಾರ್ಯವನ್ನು ನಡೆಸಿಕೊಡುತ್ತಿರುವಾಗ ಈ ರೀತಿ ಏಕೆ ಮಾಡಬೇಕಿತ್ತು? ಕುಟುಂಬದ ಹಿರಿಯರು ಇದನ್ನು ಹೇಗೆ ಅನುಮತಿಸಿದರು?” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
Seeing this insult to a priest is very heartbreaking. How could people do this when he is performing Shubh Karyam, & how the Yajaman let this happen?
pic.twitter.com/2VOOP4j2Q9— K.Annamalai Ⓟⓐⓡⓞⓓⓨ (@Annamalai_K_) April 20, 2024
ವೈರಲ್ ವಿಡಿಯೋದಲ್ಲಿ ಮದುವೆ ಮಂಟಪದಲ್ಲಿ ಪುರೋಹಿತರೊಬ್ಬರು ವಧುವರರನ್ನು ಕೂರಿಸಿ ಪೂಜಾ ವಿಧಿವಿಧಾನಗಳನ್ನು ಸುಸೂತ್ರವಾಗಿ ನಡೆಸಿಕೊಡುತ್ತಿರುವ ವೇಳೆಯಲ್ಲಿ ಇಬ್ಬರು ಯುವಕರು ತಮಾಷೆಯ ನೆಪದಲ್ಲಿ ಪುರೋಹಿತರ ತಲೆಗೆ ಗೋಣಿ ಚೀಲವನ್ನು ಹಾಕುವ ದೃಶ್ಯವನ್ನು ಕಾಣಬಹುದು. ಇಷ್ಟು ಸಾಲದ್ದಕ್ಕೆ ಪುರೋಹಿತರ ಮೇಲೆ ಕುಂಕುಮ, ಅಕ್ಷತೆ, ಬೆಡ್ ಶೀಟ್ ಅಅನ್ನು ಕೂಡಾ ಎಸೆಯುತ್ತಾರೆ. ಪುರೋಹಿತರಿಗೆ ಇಷ್ಟೆಲ್ಲಾ ಅವಮಾನ ಮಾಡುತ್ತಿದ್ದರೂ ಅಲ್ಲಿ ನೆರೆದಿದ್ದವರು ಇದನ್ನು ಕಂಡು ನಗುತ್ತಿದ್ದರೇ ಹೊರತು, ಯಾರೊಬ್ಬರು ಯುವಕರನ್ನು ಹೀಗೆ ಮಾಡಬೇಡಿ ಎಂದು ತಡೆಯಲಿಲ್ಲ. ಕೊನೆಯಲ್ಲಿ ಅವಮಾನವನ್ನು ಸಹಿಸಲಾರದೆ ಪುರೋಹಿತರು ಮಂಟಪದಿಂದ ಎದ್ದು ಹೋಗಿದ್ದಾರೆ. ಪುರೋಹಿತರಿಗಾದ ಈ ಅವಮಾನ ಎಂತಹವರಿಗೂ ಬೇಸರ ತರಿಸುವಂತಿದೆ.
ಇದನ್ನೂ ಓದಿ: 100 ಕೊಠಡಿಗಳಿರುವ ವಿಶ್ವದ ಅತ್ಯಂತ ದುಬಾರಿ ಮನೆ ಹೇಗಿದೆ ನೋಡಿ
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 9 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಮ್ಮ ಕೈಯಲ್ಲಿ ಪುರೋಹಿತರಿಗೆ ಗೌರವ ಕೊಡಲು ಸಾಧ್ಯವಾಗದಿದ್ದರೆ, ದಯವಿಟ್ಟು ಅವರನ್ನು ಕರೆದು ಈ ರೀತಿ ಅವಮಾನ ಮಾಡಬೇಡಿʼ ಎಂದು ಕಿಡಿಕಾರಿದ್ದಾರೆ. ಇನ್ನೂ ಅನೇಕರು ಪುರೋಹಿತರಿಗಾದ ಅವಮಾನವನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ