Viral: ತಾಯಿ ರೀಲ್ಸ್ ಮಾಡುವುದರಲ್ಲಿ ಬ್ಯುಸಿಯಾಗಿದ್ದ ವೇಳೆ ರಸ್ತೆಯತ್ತ ಓಡಿ ಹೋದ ಕಂದಮ್ಮ; ಮುಂದೇನಾಯ್ತು ನೋಡಿ…
ದಿನದಿಂದ ದಿನಕ್ಕೆ ಜನರ ರೀಲ್ಸ್ ಹುಚ್ಚು ಹೆಚ್ಚಾಗುತ್ತಿದೆ. ಕೆಲ ಸಮಯಗಳ ಹಿಂದೆಯಷ್ಟೇ ಮಹಿಳೆಯೊಬ್ಬಳು ತನ್ನ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ತೆರೆದ ಬಾವಿಯಲ್ಲಿ ಕುಳಿತು ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಂತಹ ಸುದ್ದಿ ಭಾರೀ ವೈರಲ್ ಆಗಿತ್ತು. ಇದೀಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ರಸ್ತೆಯತ್ತ ತನ್ನ ಪುಟ್ಟ ಮಗು ಓಡಿ ಹೋಗುತ್ತಿದ್ದರೂ ಅದನ್ನು ಗಮನಿಸಿದ ಮಹಾತಾಯಿಯೊಬ್ಬಳು ರೀಲ್ಸ್ ಮಾಡುವುದರಲ್ಲಿಯೇ ನಿರತಳಾಗಿದ್ದಳು. ಇನ್ನೊಂದು ಮಗುವಿನ ಸಮಯ ಪ್ರಜ್ಞೆಯಿಂದ ಪುಟಾಣಿ ಅಪಾಯದಿಂದ ಪಾರಾಗಿದ್ದು, ಈ ದೃಶ್ಯ ಇದೀಗ ಸಖತ್ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾದ ಈ ಯುಗದಲ್ಲಿ ಜನರ ರೀಲ್ಸ್ ಹುಚ್ಚು ಕೂಡಾ ದಿನದಿಂದ ದಿನಕ್ಕೆ ತುಂಬಾನೇ ಹೆಚ್ಚಾಗುತ್ತಿದೆ. ಅದರಲ್ಲೂ ಕೆಲವರು ಫೇಮಸ್ ಆಗ್ಬೇಕು ಅಂತ ಚಿತ್ರ ವಿಚಿತ್ರ ರೀಲ್ಸ್‌ಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇದರ ಸಲುವಾಗಿ ಪ್ರಾಣಕ್ಕೆ ಅಪಾಯ ತಂದುಕೊಂಡವರೂ ಇದ್ದಾರೆ. ಇದೇ ರೀತಿ ಇಲ್ಲೊಬ್ಬಳು ತಾಯಿಯ ರೀಲ್ಸ್ ಚಟದಿಂದ ಮಗುವೊಂದು ಅಪತ್ತಿಗೆ ಸಿಲುಕಿದ್ದು, ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಹೌದು ತಾಯಿ ರೀಲ್ಸ್ ಮಾಡುವುದರಲ್ಲಿ ಬ್ಯುಸಿಯಾಗಿದ್ದ ವೇಳೆ ಆ ಮಗು ಸೀದಾ ವಾಹನಗಳು ಅಂತಿದ್ದಿತ್ತ ಚಲಿಸುತ್ತಿದ್ದ ರಸ್ತೆಯತ್ತ ಓಡಿ ಹೋಗಿದ್ದು, ಇನ್ನೊಬ್ಬ ಮಗನ ಸಮಯ ಪ್ರಜ್ಞೆಯಿಂದ ಆ ಪುಟಾಣಿ ಅಪಾಯದಿಂದ ಪಾರಾಗಿದೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಮಹಾತಾಯಿಯ ಬೇಜವಾಬ್ದಾರಿತನಕ್ಕೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ಮಹಿಳೆಯೊಬ್ಬಳು ತಾನು ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಬೇಕು ಎಂಬುವುದನ್ನೇ ಮರೆತು ರಸ್ತೆ ಬದಿಯಲ್ಲಿ ರೀಲ್ಸ್ ಮಾಡುತ್ತಿದ್ದ ವೇಳೆ ಆಕೆಯ ಪುಟಾಣಿ ಮಗುವೊಂದು ವಾಹನಗಳು ಸಂಚರಿಸುತ್ತಿದ್ದ ರಸ್ತೆಯತ್ತ ಸೀದಾ ಓಡಿಕೊಂಡು ಹೋಗಿದೆ. ತಕ್ಷಣವೇ ಇನ್ನೊಬ್ಬ ಮಗ ತಾಯಿಗೆ ಮಗು ರಸ್ತೆಯತ್ತ ಓಡಿ ಹೋಗುತ್ತಿದೆ ಎಂದು ಎಚ್ಚರಿಸುವ ಮೂಲಕ ತನ್ನ ಮುದ್ದು ತಂಗಿಯನ್ನು ಪ್ರಾಣಪಾಯದಿಂದ ಪಾರು ಮಾಡಿದ್ದಾನೆ.
Jitu_rajoriya ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ತಾಯಿಯೊಬ್ಬಳು ತನಗಿಬ್ಬರು ಮಕ್ಕಳಿದ್ದಾರೆ ಎಂಬುವುದನ್ನೇ ಮರೆತು ರಸ್ತೆ ಬದಿ ರೀಲ್ಸ್ ಮಾಡುತ್ತಾ ನಿಂತಿರುವ ದೃಶ್ಯವನ್ನು ಕಾಣಬಹುದು. ಈ ವೇಳೆ ಆಕೆಯ ಪುಟಾಣಿ ಮಗು ಸೀದಾ ರಸ್ತೆಯತ್ತ ಓಡಿ ಹೋಗಿದ್ದು, ದೊಡ್ಡ ಮಗ ಅಮ್ಮಾ ಪಾಪು ಓಡಿ ಹೋಗ್ತಿದೆ ನೋಡು ಎಂದಾಗ ಎಚ್ಚರಗೊಂಡ ತಾಯಿ ಓಡಿ ಹೋಗಿ ಮಗುವನ್ನು ಕಾಪಾಡಿದ್ದಾಳೆ.
ಇದನ್ನೂ ಓದಿ: ಕಸದೊಂದಿಗೆ ನಿಮ್ಮ ಪಿಂಡ ಪ್ರದಾನವನ್ನು ಇಲ್ಲೇ ಮಾಡುವ; ವೈರಲ್ ಆಯ್ತು ಬ್ಯಾನರ್
ಡಿಸೆಂಬರ್ 8 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.8 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆಕೆ ವಿದೇಶದಲ್ಲಿ ಈ ರೀತಿ ಹುಚ್ಚಾಟ ಮಾಡಿದ್ರೆ ಇದೀಗ ಕಂಬಿ ಹಿಂದೆ ಇರುತ್ತಿದ್ದಳುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬಹಳಷ್ಟು ಜನ ತಮ್ಮ ಮಕ್ಕಳಿಗಿಂದ ಮೊಬೈಲ್ ಮೇಲೆ ಹೆಚ್ಚಿನ ಗಮನ ವಹಿಸುತ್ತಾರೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ರೀಲ್ಸ್ ಚಟ ಮಾರಕವಾಗಿ ಪರಿಣಮಿಸಿದೆʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ