ಹಿಂದೂ ಜೋಡಿ ಮದುವೆಗೆ ಅಡ್ಡಿ ಪಡಿಸಿದ ಮಳೆ, ವೇದಿಕೆ ಬಿಟ್ಟುಕೊಟ್ಟ ಮುಸ್ಲಿಂ ಜೋಡಿ
ಎಲ್ಲರೂ ಅದ್ದೂರಿಯಾಗಿ ಮದುವೆಯಾಗಬೇಕೆಂದು ಎಂದು ಬಯಸುವುದು ಸಹಜ. ಹೀಗಾಗಿ ಮದುವೆಗೆ ಜೋರಾಗಿ ತಯಾರಿ ಮಾಡುತ್ತಾರೆ. ಹೀಗಿರುವಾಗ ಮದುವೆ ದಿನ ಮಳೆ ಏನಾದ್ರೂ ಬಂದರೆ ಮಳೆಗೆ ಹಿಡಿ ಶಾಪ ಹಾಕುತ್ತ ಅದೇಗೋ ಮದುವೆ ಮಾಡಿ ಮುಗಿಸುವುದಿದೆ. ಆದರೆ ಹಿಂದೂ ಜೋಡಿಯ ಮದುವೆಗೆ ಮಳೆಯೂ ಅಡ್ಡಿಪಡಿಸಿದೆ. ಕೊನೆಗೆ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದ ಮುಸ್ಲಿಂ ಜೋಡಿಯೂ, ಮದುವೆ ಶಾಸ್ತ್ರಗಳನ್ನು ಮಾಡಲು ಹಿಂದೂ ಜೋಡಿಗೆ ಮದುವೆ ಮಂಟಪವನ್ನೇ ಬಿಟ್ಟು ಕೊಟ್ಟಿದೆ. ಹಾಗಾದ್ರೆ ಈ ಅಪರೂಪದ ಘಟನೆ ನಡೆದಿರುವುದು ಎಲ್ಲಿ? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಪುಣೆ : ಮೇ 23 : ನಾವೆಲ್ಲರೂ ಮಾತು ಮಾತಿಗೆ ಈ ಕಾಲದಲ್ಲಿ ಮಾನವೀಯತೆ, ಸಾಮರಸ್ಯ, ಸೌಹಾರ್ದತೆ ಕಾಣಲು ಸಿಗುವುದಿಲ್ಲ ಎನ್ನುತ್ತೇವೆ. ಆದರೆ ನಮ್ಮ ಸುತ್ತಮುತ್ತಲಿನಲ್ಲೇ ಒಬ್ಬರ ಕಷ್ಟಕ್ಕೆ ಮಿಡಿಯುವ, ಸೌಹಾರ್ದತೆ ಸಾರುವ ಘಟನೆಗಳು ನಡೆಯುತ್ತದೆ. ಇದೀಗ ಒಂದೇ ವೇದಿಕೆಯಲ್ಲಿ ಮುಸ್ಲಿಂ ಹಾಗೂ ಹಿಂದೂ ಜೋಡಿ (muslim and hindu couple) ಗಳು ಹೊಸ ಜೀವನಕ್ಕೆ ಕಾಲಿಟ್ಟಿದ್ದು, ಇದಕ್ಕೆ ಸಂಬಂಧ ಫೋಟೋಗಳು ಸೋಶಿಯಲ್ ಮೀಡಿಯಾ (social media) ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಜೋರಾಗಿ ಸುರಿದ ಮಳೆಯಿಂದಾಗಿ ಒಂದೇ ಮದುವೆ ಮಂಟಪದಲ್ಲಿ ಹಿಂದೂ ಹಾಗೂ ಮುಸ್ಲಿಂ ಜೋಡಿಗಳ ಅಪರೂಪದ ಮದುವೆಯೊಂದು ಪುಣೆ (Pune) ಯಲ್ಲಿ ನಡೆದಿದೆ.
ಹೌದು, ಪುಣೆಯ ವನವಾಡಿಯ ರಾಜ್ಯ ಮೀಸಲು ಪೊಲೀಸ್ ಪಡೆ ಮೈದಾನದ ಬಳಿಯ ಅಲಂಕಾರನ್ ಲಾನ್ಸ್‌ನಲ್ಲಿ ಸಂಕೃತಿ ಕವಾಡೆ ಮತ್ತು ನರೇಂದ್ರ ಗಲಾಂಡೆ ಹಿಂದೂ ಜೋಡಿಯ ಮದುವೆಯೂ ಮಂಗಳವಾರ ಸಂಜೆ 6.56ಕ್ಕೆ ನಡೆಯಬೇಕಿತ್ತು. ಆದರೆ ಸಂಜೆಯ ವೇಳೆಯಲ್ಲಿ ಬಾರಿ ಮಳೆ ಸುರಿದಿದ್ದು ಮದುವೆಗೆ ಅಡ್ಡಿಯಾಗಿದೆ. ಮುಂದೇನು ಮಾಡಬೇಕೆಂದು ತೋಚದೆ ಒಂದು ಕ್ಷಣ ವಧು ವರನ ಕಡೆಯವರು ಕಂಗಲಾಗಿದ್ದಾರೆ.
ಹೀಗಿರುವಾಗ ಅಲ್ಲೇ ಪಕ್ಕದ ಸಭಾಂಗಣವೊಂದರಲ್ಲಿ ಮುಸ್ಲಿಂ ಜೋಡಿ ವಲಿಮಾ’ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆಯಲ್ಲಿ ಅವರ ಬಳಿ ಹಿಂದೂ ವಿವಾಹ ಶಾಸ್ತ್ರಕ್ಕೆ ಒಳಾಂಗಣದಲ್ಲಿ ಮಾಡಲು ಅನುಮತಿ ಕೋರಿದ್ದು ಅದಕ್ಕೆ ಅವರು ಕೂಡ ಖುಷಿಯಿಂದಲೇ ಸಮ್ಮತಿ ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ, ಒಂದು ಗಂಟೆಗೂ ಹೆಚ್ಚು ಕಾಲ ವೇದಿಕೆಯನ್ನು ಹಿಂದೂ ಜೋಡಿಯ ವಿವಾಹಕ್ಕೆ ಬಿಟ್ಟು ಕೊಟ್ಟಿದ್ದಾರೆ. ಈ ಮೂಲಕ ಒಂದೇ ವೇದಿಕೆಯಲ್ಲಿ ಹಿಂದೂ ಮುಸ್ಲಿಂ ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಂಡಿಯಾ ಟುಡೇಗೆ ಪ್ರತಿಕ್ರಿಯಿಸಿದ ವಧುವಿನ ಸಂಬಂಧಿ ಶಾಂತಾರಾಮ್ ಕವಾಡೆ, ಮುಸ್ಲಿಂ ಸಮುದಾಯವು ನಮಗೆ ಸಭಾಂಗಣ ಬಿಟ್ಟು ಕೊಡುವ ಮೂಲಕ ವಿವಾಹ ಸಮಾರಂಭವು ಸುಗಮವಾಗಿ ನಡೆಯಲು ಅವಕಾಶ ಮಾಡಿಕೊಟ್ಟಿತು. ಸಂಪ್ರದಾಯ ಬದ್ದವಾಗಿ ಮದುವೆಯೂ ನಡೆಯಿತು. ಕೊನೆಯಲ್ಲಿ ಎರಡು ಕುಟುಂಬಗಳ ಸದಸ್ಯರು ಒಟ್ಟಿಗೆ ಊಟ ಮಾಡಿದೆವು ಎಂದಿದ್ದಾರೆ.
ಇದನ್ನೂ ಓದಿ : ಒಂದಲ್ಲ ಎರಡಲ್ಲ ಬರೋಬ್ಬರಿ 96 ಚಮಚಗಳನ್ನು ದೇಹದ ಮೇಲೆ ಬೀಳದಂತೆ ಬ್ಯಾಲೆನ್ಸ್ ಮಾಡಿ, ಹಳೆಯ ರೆಕಾರ್ಡ್ ಬ್ರೇಕ್ ಮಾಡಿದ ವ್ಯಕ್ತಿ
ವಧುವಿನ ತಂದೆ ಚೇತನ್ ಕವಾಡೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಳೆ ಬಂದು ಏನು ಮಾಡಬೇಕೆಂದು ತಿಳಿಯದ ವೇಳೆಯಲ್ಲಿ ಕಾಝಿ ಕುಟುಂಬವು ನಮ್ಮ ಮಗಳ ಮದುವೆಗೆ ಸ್ಥಳಾವಕಾಶ ಮಾಡಿ ಕೊಟ್ಟಿದ್ದಾರೆ. ಜಾತಿ ಮತ್ತು ಧರ್ಮ ಎಲ್ಲವನ್ನು ಮೀರಿ ಎರಡು ಜೋಡಿಗಳು ಒಂದೇ ವೇದಿಕೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಸಾಮರಸ್ಯದ ಸುಂದರ ಕ್ಷಣ. ಇದನ್ನು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:49 pm, Fri, 23 May 25








