
ನವದೆಹಲಿ: ಉತ್ತರ ಪ್ರದೇಶದ (Uttar Pradesh) ಇಟಾವಾ ಜಿಲ್ಲೆಯ ಭರ್ತಾನ ರೈಲು ನಿಲ್ದಾಣದಲ್ಲಿ ರೈಲಿನಡಿಗೆ ಸಿಲುಕಿದ ಪ್ರಯಾಣಿಕರೊಬ್ಬರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Video Viral) ಆಗಿದೆ. ಆತನ ಮೇಲೆ ರೈಲು (Train) ಸಂಪೂರ್ಣವಾಗಿ ಹಾದುಹೋಗಿದ್ದರೂ ಆತ ಬದುಕುಳಿದಿದ್ದಾರೆ. ರೈಲು ಬರುತ್ತಿರುವಾಗಲೇ ಆ ವ್ಯಕ್ತಿ ಪ್ಲಾಟ್ಫಾರ್ಮ್ ಮತ್ತು ಹಳಿಗಳ ನಡುವಿನ ಜಾಗದಲ್ಲಿ ಬಿದ್ದರು. ಆಗ ರೈಲು ಬಂದು ಆತನ ಮೇಲೆ ಹಾದು ಹೋಯಿತು.
ಈ ದೃಶ್ಯ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ನ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಆದರೆ, ಅಚ್ಚರಿಯ ರೀತಿಯಲ್ಲಿ ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಗ್ರಾದಿಂದ ಹೊರಟಿದ್ದ ಸೂಪರ್ಫಾಸ್ಟ್ ಇಂಟರ್ಸಿಟಿ ಎಕ್ಸ್ಪ್ರೆಸ್ ಮಂಗಳವಾರ ಬೆಳಗ್ಗೆ 9.45ರ ಸುಮಾರಿಗೆ ಭರ್ತಾನ ರೈಲು ನಿಲ್ದಾಣವನ್ನು ತಲುಪಿದಾಗ ಪ್ಲಾಟ್ಫಾರ್ಮ್ ನಂ.2ರಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: Viral Video: ಉದ್ಘಾಟನೆ ವೇಳೆಯೇ ಕುಸಿದು ಬಿದ್ದ ಬೃಹತ್ ಸೇತುವೆ; ವಿಡಿಯೋ ವೈರಲ್
ರೈಲು ಬರುತ್ತಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಆ ವ್ಯಕ್ತಿ ಚಲಿಸುತ್ತಿರುವ ರೈಲನ್ನು ಹತ್ತಲು ಯತ್ನಿಸಿದ್ದಾರೆ. ಈ ವೇಳೆ ಅವರು ರೈಲ್ವೆ ಹಳಿಗಳ ಮೇಲೆ ಬಿದ್ದಿದ್ದಾರೆ. ಹಳಿ ಮತ್ತು ಪ್ಲಾಟ್ಫಾರ್ಮ್ ನಡುವಿನ ಜಾಗದಲ್ಲಿ ಸಿಲುಕಿದ ಆ ವ್ಯಕ್ತಿಯ ಮೇಲೆ ರೈಲು ಹಾದುಹೋಗಿದೆ.
ಪ್ಲಾಟ್ಫಾರ್ಮ್ನಲ್ಲಿ ನೆರೆದಿದ್ದ ಅಪಾರ ಜನಸ್ತೋಮ ಕ್ಯಾಮರಾದಲ್ಲಿ ಈ ಇಡೀ ಘಟನೆಯನ್ನು ಸೆರೆಹಿಡಿದಿದ್ದಾರೆ. ರೈಲು ಅವರ ಮೇಲೆ ಹಾದುಹೋದ ನಂತರ, ಆ ವ್ಯಕ್ತಿ ಎದ್ದು, ಹಳಿಗಳ ಮೇಲೆ ಬಿದ್ದಿದ್ದ ತನ್ನ ವಸ್ತುಗಳನ್ನು ತೆಗೆದುಕೊಂಡು ಎದ್ದಿದ್ದಾರೆ. ಆಗ ಆತ ಕೈಗಳನ್ನು ಜೋಡಿಸಿ ಅಲ್ಲಿದ್ದವರಿಗೆ ನಮಸ್ಕಾರ ಮಾಡಿದ್ದಾರೆ.