Viral Video : ಉಕ್ರೇನಿಯನ್ ಯೋಧ ಮತ್ತವನ ಗೆಳತಿಯ ಈ ಅಪೂರ್ವ ಕ್ಷಣಗಳು…
Trending : ಯುದ್ಧಾನಂತರ ವಿಷಾದ, ದುಃಖ, ತುಮುಲಕ್ಕೆ ಬಿದ್ದ ಮನಸ್ಸುಗಳಿಗೆ ಬೇಕಿರುವುದು ‘ನಮ್ಮವರು’ ಎಂಬ ಪ್ರೀತಿ, ಭರವಸೆ. ಈ ದಿಕ್ಕಿನತ್ತ ಉಕ್ರೇನಿಯನ್ ಯೋಧರು ತಮ್ಮ ಬದುಕಿನ ಪುಟಗಳನ್ನು ಸುಂದರವಾಗಿಸಿಕೊಳ್ಳುವತ್ತ ಸಾಗುತ್ತಿದ್ದಾರೆ.
Viral Video : ರಷ್ಯಾ-ಉಕ್ರೇನ್ ಯುದ್ಧದ ಸಂಘರ್ಷ, ಸಾವುನೋವುಗಳ ವಿಷಾದದ ಮಧ್ಯೆಯೇ ಕೆಲ ಸಂತೋಷದ ಕ್ಷಣಗಳು ಅರಳಲಾರಂಭಿಸಿವೆ. ಇದರಿಂದಾಗಿ ಆ ನೆಲದಲ್ಲಿ ಬದುಕಿನ ಬಗ್ಗೆ ಭರವಸೆ ಹುಟ್ಟಲಾರಂಭಿಸಿದೆ. ವೈರಲ್ ಆಗುತ್ತಿರುವ ಈ ಕೆಳಗಿನ ಪೋಸ್ಟ್ನಲ್ಲಿ ಉಕ್ರೇನಿಯನ್ ಯೋಧನೊಬ್ಬನು ಮಂಡಿಯೂರಿ ಕುಳಿತು ಗುಲಾಬಿಯನ್ನು ತನ್ನ ಗೆಳತಿಗೆ ಕೊಟ್ಟು ಪ್ರೇಮನಿವೇದನೆ ಮಾಡಿಕೊಳ್ಳುತ್ತಾನೆ. ಅದನ್ನು ಸ್ವೀಕರಿಸುವ ಗೆಳತಿ ಅಚ್ಚರಿ, ಖುಷಿಯಿಂದ ಹನಿಗಣ್ಣಾಗುತ್ತಾಳೆ. ಭಾವುಕರಾದ ಅವರಿಬ್ಬರೂ ತಬ್ಬಿಕೊಂಡು ಮುತ್ತು ಕೊಟ್ಟುಕೊಳ್ಳುತ್ತ ವಿಶ್ವಾಸ, ಭರವಸೆಯನ್ನು ಪರಸ್ಪರ ಗಟ್ಟಿ ಮಾಡಿಕೊಳ್ಳುತ್ತಾರೆ. ಹಿನ್ನೆಲೆಯಲ್ಲಿ ಸೈರನ್ ಮೊಳಗುತ್ತದೆ. ಖುಷಿಯ ತೀವ್ರಭಾವವನ್ನು ಹಿಡಿದಿಟ್ಟಿರುವ ಈ ಕ್ಷಣಗಳು ಯಾರನ್ನೂ ಮೃದುಗೊಳಿಸುವಂಥವು. ಇದ್ದುದರಲ್ಲಿಯೇ ತುಸು ಸಂಭ್ರಮ ಸೃಷ್ಟಿಯಾಗಲೆಂದು ಅವನ ಸ್ನೇಹಿತರು ಬಲೂನುಗಳನ್ನು ಹಿಡಿದು ನಿಂತಿರುವುದನ್ನು ನೋಡಿದಾಗ ಬರೆಯಲು ಪದಗಳಿಲ್ಲ.
ಉಕ್ರೇನಿಯನ್ ಸಚಿವಾಲಯದ ಆಂತರಿಕ ವ್ಯವಹಾರಗಳ ಸಲಹೆಗಾರ ಆ್ಯಂಟನ್ ಗೆರಾಶ್ಚೆಂಕೊ ಅವರ ಟ್ವಿಟರ್ ಖಾತೆಯಲ್ಲಿರುವ ಈ ವೀಡಿಯೋದ ಒಕ್ಕಣೆ ಹೀಗಿದೆ, “ಇದು ಈ ಹೊತ್ತಿನ ವಾಸ್ತವ; ಜನರನ್ನು ರಕ್ಷಿಸಿದ ನಂತರ ನಾವು ಯುದ್ಧ ಮತ್ತು ಸಂತುಲಿತ ಬದುಕಿನ ಬಗ್ಗೆ ಹಾಸ್ಯ ಮಾಡುತ್ತೇವೆ. ಜನರನ್ನು ರಕ್ಷಿಸಿ ಅಪಾಯದಿಂದ ಹೊರಬಂದ ಈ ಯೋಧ ತನ್ನ ಹುಡುಗಿಗೆ ಪ್ರೇಮನಿವೇದನೆ ಮಾಡಿಕೊಳ್ಳುವ ಮೂಲಕ ಬದುಕಿನ ಖುಷಿಯನ್ನು ಅನುಭವಿಸುತ್ತಿದ್ದಾನೆ. ಹಾದು ಹೋಗುತ್ತಿರುವ ಸೈರನ್ ಕೇಳಿಸುತ್ತಿದೆಯೇ? ದುಃಖವು ಕರಗಿ ಆನಂದವನ್ನು ಇದು ಸೂಚಿಸುವಂತಿದೆ.’’
ಅನೇಕರು ಈ ಟ್ವೀಟ್ ಹಂಚಿಕೊಂಡಿದ್ದಾರೆ. ಈ ಜೋಡಿಗೆ ಶುಭ ಹಾರೈಸಿದ್ದಾರೆ. ಈ ಸಂದರ್ಭವನ್ನು ಸುರಕ್ಷಿತವಾಗಿ ನಿಭಾಯಿಸಿದ್ದಕ್ಕೆ ಅಗ್ನಿಶಾಮಕ ದಳದವರಿಗೆ ನೆಟ್ಟಿಗರು ಅಭಿನಂದನೆ ತಿಳಿಸಿದ್ದಾರೆ. ಬಹುಮುಖ್ಯವಾಗಿ, ಸೈರನ್ ಮೊಳಗಿರುವುದು ಈ ಸನ್ನಿವೇಶಕ್ಕೆ ವಿಶೇಷ ಅರ್ಥವನ್ನು ಕಲ್ಪಿಸಿಕೊಳ್ಳಲು ವಿವಿಧ ಆಯಾಮವನ್ನು ನೀಡಿರುವುದನ್ನು ಸೂಕ್ಷ್ಮವಾಗಿ ಗಮನಿಸಿ.
This is our life now – we joke about "war-life balance".
This rescuer was saving people, now he is proposing. The siren wails for danger, now it sounds in joy.
It is all intertwined, and no one's life is untouched by war in Ukraine. pic.twitter.com/Bzh2nG7VjQ
— Anton Gerashchenko (@Gerashchenko_en) July 29, 2022
ಫೆಬ್ರವರಿಯಲ್ಲಿ ರಷ್ಯಾ ತಮ್ಮ ದೇಶವನ್ನು ಆಕ್ರಮಿಸಿದಾಗಿನಿಂದ ಹಲವಾರು ಉಕ್ರೇನಿಯನ್ ಜೋಡಿಗಳು ತಡಮಾಡದೆ ನಿಶ್ಚಿತಾರ್ಥಕ್ಕೆ ಒಳಗಾಗಿವೆ. ಅನೇಕರ ಮದುವೆಗಳೂ ನಡೆದಿವೆ. ಇಂಥ ವಿಷಾದ, ದುಃಖ, ತುಮುಲಕ್ಕೆ ಬಿದ್ದ ಮನಸ್ಸುಗಳಿಗೆ ಬೇಕಿರುವುದು ‘ನಮ್ಮವರು’ ಎಂಬ ಪ್ರೀತಿ, ಭರವಸೆ. ಆ ದಿಕ್ಕಿನತ್ತ ಉಕ್ರೇನಿಯನ್ ಯೋಧರು ತಮ್ಮ ಬದುಕಿನ ಪುಟಗಳನ್ನು ಸುಂದರವಾಗಿಸಿಕೊಳ್ಳುವತ್ತ ಸಾಗುತ್ತಿದ್ದಾರೆ. ಬಂಧ ಕೊಡುವ ಭರವಸೆ ಬಹಳ ದೊಡ್ಡದು.
Published On - 12:40 pm, Thu, 4 August 22