Virus Hunters: ಬಾವಲಿಗಳನ್ನು ಹಿಡಿದು ಮುಂದಿನ ಸಾಂಕ್ರಾಮಿಕ ರೋಗಕ್ಕೆ ತಡೆಯೊಡ್ಡುತ್ತಿರುವ ‘ವೈರಸ್ ಹಂಟರ್ಸ್’
ಬಾವಲಿಗಳ ವರ್ತನೆ, ಅವುಗಳಲ್ಲಿರುವ ಸಾಮಾನ್ಯ ವೈರಾಣುಗಳ ಮಾದರಿಯನ್ನು ಸತತವಾಗಿ ಅಭ್ಯಾಸ ಮಾಡುವ ಮೂಲಕ ನಾವು ಮುಂದಿನ ದಿನಗಳಲ್ಲಿ ಸ್ಫೋಟಗೊಳ್ಳಬಹುದಾದ ಮಾರಕ ವೈರಾಣುಗಳ ಮಾಹಿತಿಯನ್ನೂ ತಿಳಿದುಕೊಳ್ಳಬಹುದು ಎನ್ನುತ್ತಾರೆ ಅವರು.
ಮನಿಲಾ (ಫಿಲಿಪೈನ್ಸ್): ದೊಡ್ಡ ಬಲೆಗೆ ಸಿಲುಕಿದ ಬಾವಲಿಗಳನ್ನು ಅವುಗಳ ಬಾಗಿದ ಉಗುರುಗಳು ಮತ್ತು ರೆಕ್ಕೆಗಳಿಂದ ಬಿಡಿಸಿ, ನಾಜೂಕಾಗಿ ಮೇಲೆತ್ತಲು ಹಣೆಯ ಮೇಲೆ ದೀಪಗಳನ್ನು ಕಟ್ಟಿಕೊಂಡ ಸಂಶೋಧಕರು ಕತ್ತಲ ಗುಹೆಗಳಲ್ಲಿ ಹೆಜ್ಜೆ ಹಾಕುತ್ತಿದ್ದರು. ಬಟ್ಟೆ ಚೀಲಗಳಲ್ಲಿ ಬಾವಲಿಗಳನ್ನು ಸಂಚಾರಿ ಪ್ರಯೋಗಾಲಯಗಳಿಗೆ ಕೊಂಡೊಯ್ದು, ಅಲ್ಲಿಯೇ ಅವುಗಳನ್ನು ಅಳತೆ ಮಾಡಿ, ಜೊಲ್ಲು ಮತ್ತು ಹಿಕ್ಕೆಯ ಮಾದರಿಯನ್ನು ಇವರು ಸಂಗ್ರಹಿಸುತ್ತಾರೆ. ಪ್ರತಿ ಬಾವಲಿಯ ವಿವರವನ್ನೂ ಪ್ರತ್ಯೇಕವಾಗಿ ಮತ್ತು ನಿಖರವಾಗಿ ನಮೂದಿಸಿಕೊಂಡ ನಂತರ ಅವುಗಳನ್ನು ಮತ್ತೆ ಕಾಡಿಗೆ ಬಿಡುತ್ತಾರೆ.
ಈ ಸಂಶೋಧಕರು ತಮ್ಮನ್ನು ತಾವು ‘ವೈರಸ್ ಹಂಟರ್ಸ್’ (ವೈರಾಣು ಬೇಟೆಗಾರರು) ಎಂದು ಕರೆದುಕೊಳ್ಳುತ್ತಾರೆ. ಸಾವಿರಾರು ಬಾವಲಿಗಳನ್ನು ಹಿಡಿದು, ಸಂಶೋಧನೆಗಾಗಿ ಮಾದರಿ ಸಂಗ್ರಹಿಸುವುದು ಇವರ ಕೆಲಸ. ವಿಶ್ವದ ವಿವಿಧ ದೇಶಗಳಲ್ಲಿ 28 ಲಕ್ಷ ಜನರ ಸಾವಿಗೆ ಕಾರಣವಾದ ಕೋವಿಡ್-19ರಂಥ ಮಹಾಪಿಡುಗು ಮತ್ತೊಮ್ಮೆ ಕಾಣಿಸಿಕೊಳ್ಳದಂತೆ ತಡೆಯುವುದು ಇವರ ಉದ್ದೇಶ.
ಜಪಾನ್ ಸರ್ಕಾರದ ಅನುದಾನದಿಂದ ಲಾಸ್ ಬನೋಸ್ನ ಫಿಲಿಪೈನ್ಸ್ ವಿಶ್ವವಿದ್ಯಾಲಯವು ಈ ಮಹತ್ವದ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಮುಂದಿನ ಮೂರು ವರ್ಷಗಳ ಕಾಲಾವಧಿಯಲ್ಲಿ ಕೊರೊನಾ ವೈರಾಣುವಿನ ಪ್ರತಿ ನಡೆಯನ್ನೂ ಸೂಕ್ಷ್ಮವಾಗಿ ಈ ತಜ್ಙರು ವಿಶ್ಲೇಷಿಸಲಿದ್ದಾರೆ. ವಾತಾವರಣದ ಸ್ಥಿತಿಗತಿ, ಉಷ್ಣಾಂಶ ಮತ್ತು ಸರಳವಾಗಿ ಹರಡುವ ರೀತಿ ಮತ್ತು ಮಾನವ ಹಸ್ತಕ್ಷೇಪದ ವಿಚಾರಗಳೂ ಇದರಲ್ಲಿ ಸೇರಿವೆ.
ಮನುಷ್ಯರಲ್ಲಿ ಸೋಂಕಿಗೆ ಕಾರಣವಾಗಬಹುದಾದ ಕೊರೊನಾ ವೈರಾಣುಗಳ ಪ್ರಭೇದಗಳನ್ನು ಪತ್ತೆಹಚ್ಚಲು ನಾವು ಯತ್ನಿಸುತ್ತಿದ್ದೇವೆ ಎಂದು ಪರಿಸರಶಾಸ್ತ್ರಜ್ಞ ಫಿಲಿಪ್ ಅಲ್ವಯ್ಲಾ ಹೇಳುತ್ತಾರೆ. ಬಾವಲಿಗಳ ಮೇಲೆ ಅಧ್ಯಯನ ನಡೆಸುತ್ತಿರುವ ತಂಡದ ನಾಯಕರಾಗಿಯೂ ಇವರು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ನಮಗೆ ವೈರಸ್ ಬಗ್ಗೆ ಸರಿಯಾಗಿ ತಿಳಿದರೆ ಅದು ಎಲ್ಲಿಂದ ಬರುತ್ತದೆ? ಅದನ್ನು ಒಂದು ನಿರ್ದಿಷ್ಟ ಭೂವ್ಯಾಪ್ತಿಗೆ ಸೀಮಿತಗೊಳಿಸುವುದು ಹೇಗೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಅವರು.
ಪ್ರಯೋಗಾಲಯಗಳಲ್ಲಿ ಕೆಲಸ ಮಾಡುವುದರ ಹೊರತಾಗಿ ಈ ಸಂಶೋಧನೆಯು ಸುದೀರ್ಘ ಕ್ಷೇತ್ರಭೇಟಿಗಳನ್ನೂ, ದಟ್ಟಕಾಡಿನಲ್ಲಿ ಸುದೀರ್ಘ ಸತತ ನಡಿಗೆ ಮತ್ತು ರಾತ್ರಿಗಳನ್ನು ಪರ್ವತಗಳ ಮೇಲೆ ಕಳೆಯಬೇಕಾದ ಅನಿವಾರ್ಯತೆಯನ್ನೂ ತಂದೊಡ್ಡಿದೆ. ಎಷ್ಟೋ ರಾತ್ರಿಗಳನ್ನು ಈ ತಂಡ ಬೆಟ್ಟಗಳ ಮೇಲಿನ ಬಂಡೆಗಳಲ್ಲಿ, ದೊಡ್ಡ ಮರಗಳ ಬೊಡ್ಡೆಗಳಲ್ಲಿ ಕಳೆದಿದ್ದೂ ಉಂಟು.
ಗುಹೆಗಳಲ್ಲಿರುವ ಬಾವಲಿಗಳ ಗುಂಪುಗಳನ್ನು ಗುರುತಿಸಿ ಅವು ಹೊರಬರುವ ಮಾರ್ಗದಲ್ಲಿ ಬಲೆಗಳನ್ನು ಹರಡಲಾಗುತ್ತದೆ. ಬಾವಲಿಗಳನ್ನು ಹಿಡಿದು, ಅವುಗಳ ದೇಹಗಳಿಂದ ಸಂಶೋಧನೆಗೆ ಬೇಕಿರುವ ಮಾದರಿಗಳನ್ನು (ಸ್ಯಾಂಪಲ್ಗಳನ್ನು) ಟಾರ್ಚ್ ಬೆಳಕಿನಲ್ಲಿ ಸಂಗ್ರಹಿಸುತ್ತಾರೆ. ಪ್ರತಿ ಬಾವಲಿಗಳನ್ನೂ ಅಲುಗಾಡದಂತೆ ಹಿಡಿದುಕೊಳ್ಳುವುದೂ ದೊಡ್ಡಸವಾಲು. ಅವುಗಳ ಚಿಕ್ಕ ಬಾಯಿಯಿಂದ ಜೊಲ್ಲು ಸಂಗ್ರಹಿಸುವುದು, ಪ್ಲಾಸ್ಟಿಕ್ ರೂಲರ್ಗಳನ್ನು ಬಳಸಿ ಅವುಗಳ ರೆಕ್ಕೆಗಳನ್ನು ಅಳೆಯುವುದು ಈ ಕೆಲಸದಲ್ಲಿ ಮಹತ್ವದ ಜವಾಬ್ದಾರಿ ಎನಿಸಿದೆ. 1,300ಕ್ಕೂ ಹೆಚ್ಚು ಬಾವಲಿಗಳ ಪ್ರಭೇದಗಳು ಮತ್ತು 20 ಬಾವಲಿಗಳ ಕುಟುಂಬದಲ್ಲಿ ಯಾವುದು ಸೋಂಕನ್ನು ಹೆಚ್ಚು ಹರಡುತ್ತದೆ ಎಂದು ಕಂಡುಕೊಳ್ಳುವುದು ಸುಲಭವಲ್ಲ.
ಬಾವಲಿಗಳಲ್ಲಿರುವ ವೈರಾಣುಗಳಿಂದ ಸೋಂಕು ಹರಡಬಾರದು ಎನ್ನುವ ಮುನ್ನೆಚ್ಚರಿಕೆಯಿಂದ ಬಾವಲಿಗಳನ್ನು ಹಿಡಿಯುವಾಗ ವಿಶೇಷ ಉಡುಗೆ, ಮಾಸ್ಕ್ ಮತ್ತು ಕೈಗವಸು ಧರಿಸುತ್ತಾರೆ. ‘ಕೊರೊನಾ ಅಂದ್ರೆ ನಿಜಕ್ಕೂ ಭಯವಾಗುತ್ತೆ’ ಎನ್ನುತ್ತಾರೆ ತಂಡದ ನಾಯಕರಾದ ಅಲ್ವಿಯೊಲಾ ಅವರ ಸಹಾಯಕ ಎಡಿಸನ್ ಕೊಸಿಸ್ಕೊ. ‘ಯಾವ ಬಾವಲಿಯಲ್ಲಿ ಈಗಾಗಲೇ ವೈರಾಣು ಇದೆ ಎಂಬುದು ನಿಮಗೆ ಎಂದಿಗೂ ಗೊತ್ತಾಗುವುದಿಲ್ಲ’ ಎನ್ನುತ್ತಾರೆ ಅವರು.
‘ಮನುಷ್ಯರಿಗೆ ದಾಟಬಲ್ಲ ಕೊರೊನಾದಂಥ ಇನ್ಯಾವುದಾದರೂ ವೈರಾಣು ಬಾವಲಿಗಳಲ್ಲಿ ಇದೆಯೇ ಎಂಬುದನ್ನು ಪತ್ತೆಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಮಗೆ ಕೋವಿಡ್ನಂಥ ರೋಗ ಹರಡಬಲ್ಲ ಮತ್ತೊಂದು ವೈರಾಣು ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ’ ಎನ್ನುತ್ತಾರೆ ಅವರು
ಸಂಶೋಧಕರ ಕೈಗೆ ಈವರೆಗೆ ಸಿಕ್ಕಿರುವ ಬಹುತೇಕ ಬಾವಲಿಗಳು ಕುದುರೆಪಾದದ ಬಾವಲಿಗಳೇ (ಹಾರ್ಸ್ಶೂ ಬ್ಯಾಟ್ಸ್) ಆಗಿವೆ. ಈ ಬಾವಲಿಗಳಿಂದಲೇ ಕೊರೊನಾ ವೈರಾಣು ಹರಡಿತು ಎನ್ನುವುದು ಜನಜನಿತ ವಿದ್ಯಮಾನ. ಕೊರೊನಾ ವೈರಾಣುವಿನ ಅತ್ಯಂತ ಹತ್ತಿರದ ಪ್ರಭೇದವೂ ಇದೇ ಬಾವಲಿಗಳಲ್ಲಿತ್ತು. SARS-CoV-2 ವೈರಾಣುವನ್ನು ಪತ್ತೆಹಚ್ಚುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಯತ್ನದಲ್ಲಿ ಕುದುರೆಪಾದದ ಬಾವಲಿಗಳು ಎರಡು ಬಾರಿ ಮುಖ್ಯ ಭೂಮಿಕೆಗೆ ಬಂದಿದ್ದವು.
ರೋಗಕಾರಕಗಳನ್ನು ಹೊತ್ತು ಸಾಗಿಸಿದರೂ ಬಾವಲಿಗಳ ಆರೋಗ್ಯದಲ್ಲಿ ವ್ಯತ್ಯಾಸವಾಗುವುದಿಲ್ಲ. ಆದರೆ ಅವೇ ರೋಗಕಾರಕಗಳು ಮನುಷ್ಯರು ಅಥವಾ ಇತರ ಪ್ರಾಣಿಗಳ ದೇಹ ಹೊಕ್ಕರೆ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಬಾವಲಿಗಳ ಮೂಲಕವೇ ಎಬೋಲಾ, SARS, MERS ಮತ್ತು ಇತರ ಕೊರೊನಾ ವೈರಾಣು ಪ್ರಭೇದಗಳು ಈ ಹಿಂದೆ ಹರಡಿದ ಉದಾಹರಣೆಗಳಿವೆ. ವನ್ಯಜೀವಿಗಳೊಂದಿಗೆ ಸಂಬಂಧ ಹೆಚ್ಚಾದಷ್ಟೂ ರೋಗ ಹರಡುವ ಭೀತಿಯೂ ಹೆಚ್ಚಾಗುತ್ತದೆ ಎಂದು ಬಾವಲಿಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಕಿರ್ಕ್ ತಾರರೆ ಹೇಳುತ್ತಾರೆ.
ಬಾವಲಿಗಳ ವರ್ತನೆ, ಅವುಗಳಲ್ಲಿರುವ ಸಾಮಾನ್ಯ ವೈರಾಣುಗಳ ಮಾದರಿಯನ್ನು ಸತತವಾಗಿ ಅಭ್ಯಾಸ ಮಾಡುವ ಮೂಲಕ ನಾವು ಮುಂದಿನ ದಿನಗಳಲ್ಲಿ ಸ್ಫೋಟಗೊಳ್ಳಬಹುದಾದ ಮಾರಕ ವೈರಾಣುಗಳ ಮಾಹಿತಿಯನ್ನೂ ತಿಳಿದುಕೊಳ್ಳಬಹುದು ಎನ್ನುತ್ತಾರೆ ಅವರು.
ಇದನ್ನೂ ಓದಿ: Oxford University: ಕೊರೊನಾ ವೈರಸ್ ಬಗ್ಗೆ ಅಧ್ಯಯನ ನಡೆಸುತ್ತಿರುವ ಆಕ್ಸ್ಫರ್ಡ್ ಮೇಲೆ ಹ್ಯಾಕರ್ಸ್ ದಾಳಿ
ಇದನ್ನೂ ಓದಿ: ಹೊಸ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳೇನು? ಇಲ್ಲಿದೆ ಮಾಹಿತಿ