AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

China VS Taiwan: ಆರ್ಥಿಕ ನಿರ್ಬಂಧದ ಮೂಲಕ ತೈವಾನ್​ನ ಸೆಮಿಕಂಡಕ್ಟರ್ ಉದ್ಯಮಕ್ಕೆ ಪೆಟ್ಟು ಕೊಡಲು ಚೀನಾ ಚಿಂತನೆ; ಭಾರತದಲ್ಲಿ ಆತಂಕದ ಕಾರ್ಮೋಡ

ತೈವಾನ್ ವಿರುದ್ಧ ಕಠಿಣ ಕ್ರಮಕ್ಕೆ ಚೀನಾ ಮುಂದಾದರೆ ಉಕ್ರೇನ್ ಯುದ್ಧದಿಂದ ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿರುವ ಜಗತ್ತು ಮತ್ತಷ್ಟು ಸಂಕಷ್ಟಕ್ಕೆ ಜಾರಲಿದೆ.

China VS Taiwan: ಆರ್ಥಿಕ ನಿರ್ಬಂಧದ ಮೂಲಕ ತೈವಾನ್​ನ ಸೆಮಿಕಂಡಕ್ಟರ್ ಉದ್ಯಮಕ್ಕೆ ಪೆಟ್ಟು ಕೊಡಲು ಚೀನಾ ಚಿಂತನೆ; ಭಾರತದಲ್ಲಿ ಆತಂಕದ ಕಾರ್ಮೋಡ
ಅಮೆರಿಕ ಪ್ರಜಾಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೊಪಿ Image Credit source: ಏಜೆನ್ಸಿ
TV9 Web
| Edited By: |

Updated on: Aug 03, 2022 | 10:23 AM

Share

ತೈಪೆ: ಅಮೆರಿಕ ಪ್ರಜಾಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೊಪಿ (US House Speaker Nancy Pelosi) ತೈವಾನ್ (Taiwan) ಭೇಟಿಯನ್ನು ಚೀನಾ (China) ಪ್ರಬಲವಾಗಿ ವಿರೋಧಿಸಿದೆ. ತೈವಾನ್ ದ್ವೀಪಕ್ಕೆ ಮುತ್ತಿಗೆ ಹಾಕುವ ರೀತಿಯಲ್ಲಿ ಸಮರಾಭ್ಯಾಸ ನಡೆಸುತ್ತಿದೆ. ಯಾವಾಗ ಬೇಕಾದರೂ ಕಚ್ಚಲು ಸಿದ್ಧವಿರುವ ಬುಸುಗುಡುವ ಹಾವಿನಂತೆ ಚೀನಾ ವರ್ತಿಸುತ್ತಿದ್ದು, ಉಕ್ರೇನ್ ಯುದ್ಧದಿಂದ ಕಂಗೆಟ್ಟಿರುವ ಜಗತ್ತಿನಲ್ಲಿ ಮತ್ತೊಂದು ಯುದ್ಧದ ಕಾರ್ಮೋಡ ಆವರಿಸಿಕೊಳ್ಳುತ್ತಿದೆ. ತೈವಾನ್ ಜಲಸಂಧಿಯಲ್ಲಿ ಭದ್ರತೆ ಹೆಚ್ಚಿಸುತ್ತಿದ್ದೇವೆ ಎಂದು ಹೇಳಿಕೊಂಡಿರುವ ಚೀನಾದ ನಡೆಯನ್ನು ತೈವಾನ್ ಅತ್ಯಂತ ಎಚ್ಚರಿಕೆಯಿಂದ ಪರಿಶೀಲಿಸುತ್ತಿದೆ. ತೈವಾನ್​ನ ವಾಯುರಕ್ಷಣಾ ಗಡಿಯೊಳಗೆ ಚೀನಾದ 21 ಮಿಲಿಟರಿ ವಿಮಾನಗಳು ಮುನ್ನುಗ್ಗಿ ಬಂದಿದ್ದವು. ಕೇವಲ ಬೆದರಿಕೆ ಹಾಕುವುದಷ್ಟೇ ಚೀನಾದ ಉದ್ದೇಶವಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ತೈವಾನ್ ವಿಚಾರದಲ್ಲಿ ಅಮೆರಿಕ ಹಸ್ತಕ್ಷೇಪ ವಿರೋಧಿಸುತ್ತಿರುವ ಚೀನಾ ತೈವಾನ್ ಆರ್ಥಿಕತೆಯ ಮುಖ್ಯ ಅಂಶವಾಗಿರುವ ಸೆಮಿಕಂಡಕ್ಟರ್ ಉದ್ಯಮಕ್ಕೆ ಪೆಟ್ಟುಕೊಡಲು ಮುಂದಾಗಿದೆ. ನೈಸರ್ಗಿಕ ಮರಳು ಪೂರೈಕೆಗೆ ನಿರ್ಬಂಧ ವಿಧಿಸಲು ಚಿಂತನೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಈ ಕುರಿತು ಆದೇಶ ಹೊರಬೀಳುವ ಸಾಧ್ಯತೆಯಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಇಂಥದ್ದೊಂದು ಕಠಿಣ ಕ್ರಮಕ್ಕೆ ಚೀನಾ ಮುಂದಾದರೆ ಉಕ್ರೇನ್ ಯುದ್ಧದಿಂದ ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿರುವ ಜಗತ್ತು ಮತ್ತಷ್ಟು ಸಂಕಷ್ಟಕ್ಕೆ ಜಾರಲಿದೆ. ಕಂಪ್ಯೂಟರ್ ಆಧರಿತ ಸೇವಾ ವಲಯದಿಂದ ಗಮನಾರ್ಹ ಆದಾಯ ಪಡೆಯುವ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ಸಂಕಷ್ಟದ ಸುಳಿಗೆ ಸಿಲುಕುತ್ತವೆ. ಚೀನಾದ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಹಲವು ದೇಶಗಳು ಉದ್ವಿಗ್ನತೆ ಶಮನಗೊಳಿಸಲು ಶ್ರಮಿಸುತ್ತಿವೆ.

ಅಮೆರಿಕ ಪ್ರಜಾಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೊಪಿ ತೈವಾನ್ ಭೇಟಿಯ ಕುರಿತು ಪ್ರತಿಕ್ರಿಯಿಸಿರುವ ಚೀನಾ ಅಧ್ಯಕ್ಷ ಷಿ-ಜಿನ್​ಪಿಂಗ್, ‘ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದಷ್ಟೇ ಹೇಳಿದ್ದಾರೆ. ಇದು ಅವರ ಮೊದಲ ಪ್ರತಿಕ್ರಿಯೆಯಾಗಿದೆ. ನ್ಯಾನ್ಸಿ ಪೆಲೊಪಿ ಭೇಟಿಯನ್ನು ಚೀನಾ ನಾಯಕರು ಖಂಡತುಂಡವಾಗಿ ವಿರೋಧಿಸುತ್ತಿದೆ. ಈ ಭೇಟಿಯ ಮೂಲಕ ಚೀನಾವನ್ನು ಅಮೆರಿಕ ಕೆರಳಿಸುತ್ತಿದೆ. ತೈವಾನ್ ಜಲಸಂಧಿಯಲ್ಲಿ ಮಿಲಿಟರಿ ಚಟುವಟಿಕೆಗಳಿಗೆ ಇದು ಕಾರಣವಾಗಬಹುದು ಎಂದು ಚೀನಾ ಕಟುವಾಗಿ ಪ್ರತಿಕ್ರಿಯಿಸಿದ್ದು, ಅಗತ್ಯಬಿದ್ದರೆ ಮಿಲಿಟರಿ ಕಾರ್ಯಾಚರಣೆಗೂ ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದೆ.

ತೈವಾನ್ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಬೇಕು ಎಂದು ಅಮೆರಿಕ ಸಲಹೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಚೀನಾ ತೈವಾನ್​ ಸುತ್ತಲೂ ಸಮರಾಭ್ಯಾಸಕ್ಕೆ ಮುಂದಾಗಿದೆ. ‘ನೌಕಾಪಡೆ, ವಾಯುಪಡೆ ಮತ್ತು ಭೂಸೇನೆಯ ಜಂಟಿ ಸಮಾರಾಭ್ಯಾಸ ಮಾಡಲು ನಾವು ಮುಂದಾಗಿದ್ದೇವೆ’ ಎಂದು ಚೀನಾ ಸೇನೆ ಹೇಳಿದೆ. ಈ ಸಮರಾಭ್ಯಾಸದಲ್ಲಿ ದೂರಗಾಮಿಯಲ್ಲಿ ಶಸ್ತ್ರಾಸ್ತ್ರಗಳು ಬಳಕೆಯಾಗಲಿವೆ. ಚೀನಾದಿಂದ ತೈವಾನ್ ಭೂಪ್ರದೇಶವನ್ನು ಬೇರ್ಪಡಿಸುವ ತೈವಾನ್ ಜಲಸಂಧಿಯಲ್ಲಿ ಈ ಕಾರ್ಯಾಚರಣೆ ನಡೆಯುತ್ತಿರುವುದು ವಿಶೇಷ. ತೈವಾನ್​ ಅನ್ನು ಚೀನಾ ತನ್ನ ಅವಿಭಾಜ್ಯ ಅಂಗ ಎಂದು ಹೇಳಿಕೊಳ್ಳುತ್ತಿದೆ. ಆದರೆ ತೈವಾನ್ ತನ್ನನ್ನು ತಾನು ಸ್ವತಂತ್ರ ದೇಶೆ ಎಂದು ಕರೆದುಕೊಳ್ಳುತ್ತಿದ್ದು, ಚೀನಾದಿಂದ ಅಂತರ ಕಾಯ್ದುಕೊಳ್ಳುತ್ತಿದೆ.

ತೈವಾನ್​ ಗಡಿಯಿಂದ ಕೇವಲ 20 ಕಿಮೀ ದೂರದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಯುತ್ತಿದ್ದು, ಸಹಜವಾಗಿಯೇ ತೈವಾನ್​ನಲ್ಲಿ ಆತಂಕದ ವಾತಾವರಣ ನಿರ್ಮಿಸಿದೆ. ಇಂದಲ್ಲ ನಾಳೆ ತೈವಾನ್​ ದ್ವೀಪವನ್ನು ಬಲ ಪ್ರಯೋಗದಿಂದ ತನ್ನಲ್ಲಿ ವಿಲೀನಗೊಳಿಸಿಕೊಳ್ಳಲಾಗುವುದು ಎಂದು ಚೀನಾ ಹಲವು ಬಾರಿ ಹೇಳಿದೆ. ಚೀನಾದ ನಡೆಯಿಂದ ತೈವಾನ್​ನಲ್ಲಿ ಆತಂಕ ಮೂಡಿದ್ದು, ಸಾರ್ವಜನಿಕರಲ್ಲಿ ಸುರಕ್ಷೆಯ ಭಾವ ಮೂಡಿಸಲು ಸರ್ಕಾರ ಯತ್ನಿಸಿದೆ. ‘ನಮ್ಮ ನೆರೆ ರಾಷ್ಟ್ರದ ಎಲ್ಲ ನಡೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಸೂಕ್ತಕಾಲದಲ್ಲಿ ಸರಿಯಾದ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ತೈವಾನ್​ನ ರಕ್ಷಣಾ ಇಲಾಖೆ ಹೇಳಿದೆ.

ನಮ್ಮ ಸೈನಿಕರು ಮಿಲಿಟರಿ ಪೋಸ್ಟ್​ಗಳಲ್ಲಿ ಗಟ್ಟಿಯಾಗಿ ನಿಲ್ಲಲಿದ್ದಾರೆ. ಅಲ್ಲಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸಾರ್ವಜನಿಕರು ಶಾಂತಿಯುತವಾಗಿ ವರ್ತಿಸಬೇಕು. ಅಗತ್ಯಬಿದ್ದಾಗ ಸೇನೆಗೆ ಸಹಕರಿಸಬೇಕು. ಚೀನಾದ ಸಮರಾಭ್ಯಾಸವು ನಮ್ಮ ಮುಖ್ಯ ಬಂದರುಗಳಿಗೆ ಆತಂಕ ತಂದೊಡ್ಡಿದೆ. ಅಷ್ಟೇ ಅಲ್ಲ, ಪ್ರಾದೇಶಿಕ ಶಾಂತಿ, ಸ್ಥಿರತೆಗೂ ಬೆದರಿಕೆ ಹಾಕಿದೆ ಎಂದು ತೈವಾನ್ ತಿಳಿಸಿದೆ.

ತೈವಾನ್ ವಿಚಾರದಲ್ಲಿ ಅಮೆರಿಕದ ಹಸ್ತಕ್ಷೇಪ ಖಂಡಿಸಿರುವ ಚೀನಾ, ತೈವಾನ್ ವಿರುದ್ಧ ಹಲವು ಆರ್ಥಿಕ ನಿರ್ಬಂಧಗಳನ್ನು ಜಾರಿಗೊಳಿಸಲು ಮುಂದಾಗಿದೆ. ತೈವಾನ್​ ಆರ್ಥಿಕತೆಯ ಬೆನ್ನೆಲುಬಾಗಿರುವ ಸೆಮಿಕಂಡಕ್ಟರ್​ಗಳ ತಯಾರಿಕೆಗೆ ಅತಿಮುಖ್ಯ ಕಚ್ಚಾವಸ್ತುವಾಗಿರುವ ‘ನೈಸರ್ಗಿಕ ಮರಳು’ ಪೂರೈಕೆ ನಿರ್ಬಂಧಿಸುವುದಾಗಿ ಹೇಳಿದೆ. ಚೀನಾದ ಈ ಕ್ರಮದಿಂದ ತೈವಾನ್ ಮಾತ್ರವೇ ಅಲ್ಲದೆ ಇಡೀ ಜಗತ್ತಿನ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.