AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಿ ಒತ್ತಡಕ್ಕೆ ಭಾರತ ಬಗ್ಗುವುದಿಲ್ಲ; ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ಟ್ರಂಪ್‌ಗೆ ಪುಟಿನ್ ತಿರುಗೇಟು

ರಷ್ಯಾದಿಂದ ಭಾರತ ಕಚ್ಚಾ ತೈಲ ಖರೀದಿಸುತ್ತಿರುವುದನ್ನು ಅಮೆರಿಕ ಟೀಕಿಸುತ್ತಿರುವ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತದ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಇತ್ತೀಚಿನ ಜಾಗತಿಕ ಸಂಘರ್ಷಗಳ ಹಿನ್ನೆಲೆಯಲ್ಲಿ ಅಮೆರಿಕವು ರಷ್ಯಾದ ತೈಲದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲು ಯತ್ನಿಸುತ್ತಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೋ ಅವರು ಭಾರತಕ್ಕೆ ನೀಡಲಾಗಿದ್ದ ತಾತ್ಕಾಲಿಕ ತೈಲ ವಿನಾಯಿತಿಯನ್ನು ಆದಷ್ಟು ಬೇಗ ಕೊನೆಗೊಳಿಸುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರು, ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವುದಾಗಿ ತಮಗೆ ಭರವಸೆ ನೀಡಿದೆ ಎಂದು ಹೇಳಿಕೊಂಡಿದ್ದರು. ಈ ನಿಟ್ಟಿನಲ್ಲಿ ಭಾರತದ ಮೇಲೆ ಅಮೆರಿಕ ನಿರಂತರವಾಗಿ ಒತ್ತಡ ಹೇರುತ್ತಿದೆ.

ವಿದೇಶಿ ಒತ್ತಡಕ್ಕೆ ಭಾರತ ಬಗ್ಗುವುದಿಲ್ಲ; ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ಟ್ರಂಪ್‌ಗೆ ಪುಟಿನ್ ತಿರುಗೇಟು
Pm Narendra Modi And PutinImage Credit source: PTI
ಸುಷ್ಮಾ ಚಕ್ರೆ
|

Updated on: Jun 06, 2026 | 4:35 PM

Share

ಮಾಸ್ಕೋ, ಜೂನ್ 6: ರಷ್ಯಾದ ಜೊತೆಗಿನ ಸಹಕಾರವನ್ನು ಕಡಿಮೆ ಮಾಡುವಂತೆ ಭಾರತದ ಮೇಲೆ ನಿರಂತರ ಒತ್ತಡ ಹೇರುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತೀಕ್ಷ್ಣ ಸಂದೇಶ ರವಾನಿಸಿದ್ದಾರೆ. “ಭಾರತ ಎಂದಿಗೂ ಯಾವುದೇ ವಿದೇಶಿ ಶಕ್ತಿಯ ಆದೇಶಗಳಿಗೆ ಬಗ್ಗುವುದಿಲ್ಲ. ಭಾರತ ಸಾರ್ವಭೌಮ ರಾಷ್ಟ್ರವಾಗಿಯೇ ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ” ಎಂದು ಪುಟಿನ್ ಭಾರತದ ಪರ ಬ್ಯಾಟಿಂಗ್ ಮಾಡಿದ್ದಾರೆ.

ಪ್ರಮುಖ ಮುಖ್ಯಾಂಶಗಳು:

  • ವಿದೇಶಿ ಆದೇಶಗಳಿಗೆ ಭಾರತ ಬಗ್ಗುವುದಿಲ್ಲ ಎಂದ ಪುಟಿನ್
  • ಭಾರತವು ಸದಾ ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗನುಗುಣವಾಗಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದ ರಷ್ಯಾ
  • ಭಾರತದ ಪರ ಪುಟಿನ್ ಬ್ಯಾಟಿಂಗ್

ಸೇಂಟ್ ಪೀಟರ್ಸ್‌ಬರ್ಗ್ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆಯಲ್ಲಿ (SPIEF) ಮಾತನಾಡಿದ ಪುಟಿನ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಇದೇ ವೇಳೆ, ಭಾರತದ ಮೇಲೆ ಟ್ರಂಪ್ ಹೇರಿದ್ದ ನಿರ್ಬಂಧಗಳು ಅಮೆರಿಕಕ್ಕೇ ತಿರುಗುಬಾಣ ಆಗಲಿವೆ ಎಂದು ಎಚ್ಚರಿಸಿದರು. “ಭಾರತವು ಯಾವಾಗಲೂ ತನ್ನ ರಾಷ್ಟ್ರೀಯ ಹಿತಾಸಕ್ತಿ, ಸೂಕ್ತ ಬೆಲೆ ಮತ್ತು ತಂತ್ರಜ್ಞಾನದ ಲಾಭವನ್ನು ಆಧರಿಸಿಯೇ ತನ್ನ ಪಾಲುದಾರರನ್ನು ಆಯ್ಕೆ ಮಾಡಿಕೊಳ್ಳುತ್ತದೆ” ಎಂದು ಅವರು ಅಭಿಪ್ರಾಯವ್ಯಕ್ತಪಡಿಸಿದರು.

ಇದನ್ನೂ ಓದಿ: ಅಂದು ನಾನು ಇಲ್ಲದೇ ಹೋಗಿದ್ದರೆ ನೀವು ಜೈಲಿನಲ್ಲಿ ಇರುತ್ತಿದ್ದಿರಿ, ಈಗ ಎಲ್ಲರೂ ನಿಮ್ಮನ್ನು ದ್ವೇಷಿಸುತ್ತಿದ್ದಾರೆ, ನೆತನ್ಯಾಹು ಕೆಣಕಿದ ಟ್ರಂಪ್

ಭಾರತವು ಪ್ರಸ್ತುತ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಭಾರತ ಸರ್ಕಾರದ ಕಠಿಣ ಪರಿಶ್ರಮದ ಫಲ ಎಂದು ಪುಟಿನ್ ಬಣ್ಣಿಸಿದ್ದಾರೆ. ಡಿಜಿಟಲ್ ಆರ್ಥಿಕತೆ ಮತ್ತು ಸಾಫ್ಟ್‌ವೇರ್ ಉದ್ಯಮದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ಗೌರವಿಸಿದ್ದಾರೆ. ಅಲ್ಲದೆ ಮುಂಬರುವ ದಿನಗಳಲ್ಲಿ ಭಾರತ ಮತ್ತು ರಷ್ಯಾ ನಡುವಿನ ವ್ಯಾಪಾರ ವಹಿವಾಟು 100 ಬಿಲಿಯನ್ ಡಾಲರ್ ತಲುಪುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.

“ರಷ್ಯಾ ಜೊತೆಗಿನ ಸಹಕಾರ ಸೇರಿದಂತೆ ಕೆಲವು ವಿಷಯಗಳಲ್ಲಿ ಅಮೆರಿಕವು ಭಾರತದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದೆ. ಆದರೆ ,150 ಕೋಟಿ ಜನಸಂಖ್ಯೆ ಹೊಂದಿರುವ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಲು ಯತ್ನಿಸುವುದು ಸಂಪೂರ್ಣ ವ್ಯರ್ಥ ಶ್ರಮ ಎಂಬುದು ಈಗಲಾದರೂ ಎಲ್ಲರಿಗೂ ಅರ್ಥವಾಗಬೇಕು” ಎಂದು ಪುಟಿನ್ ಹೇಳಿದ್ದಾರೆ.

ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧಕ್ಕೆ ಬೀಳುತ್ತಾ ತೆರೆ? ಶಾಂತಿ ಮಾತುಕತೆಯ ಸುಳಿವು ನೀಡಿದ ಪುಟಿನ್

ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುತ್ತಿರುವುದಕ್ಕಾಗಿ ಭಾರತದ ಮೇಲೆ ಟ್ರಂಪ್ ಸರ್ಕಾರ ವಿಧಿಸಿದ್ದ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ಪುಟಿನ್ ಈ ಕಠಿಣ ಹೇಳಿಕೆಗಳನ್ನು ನೀಡಿದ್ದಾರೆ. ಭಾರತವು ರಷ್ಯಾದ ತೈಲವನ್ನು ಖರೀದಿಸುವ ಮೂಲಕ ಉಕ್ರೇನ್ ಯುದ್ಧಕ್ಕೆ ಧನಸಹಾಯ ನೀಡುತ್ತಿದೆ ಎಂದು ಆರೋಪಿಸಿದ್ದ ಟ್ರಂಪ್, ಭಾರತದ ಉತ್ಪನ್ನಗಳ ಮೇಲೆ ಶೇ. 25ರಷ್ಟು ಸುಂಕವನ್ನು ಹೇರಿದ್ದರು. ಆದರೆ, ಭಾರತವು ಈ ಆರೋಪವನ್ನು ಮೊದಲಿನಿಂದಲೂ ನಿರಾಕರಿಸುತ್ತಾ ಬಂದಿದೆ ಹಾಗೂ ಪಾಶ್ಚಿಮಾತ್ಯ ದೇಶಗಳೇ ಸ್ವತಃ ರಷ್ಯಾದಿಂದ ಗ್ಯಾಸ್ ಮತ್ತು ತೈಲವನ್ನು ಖರೀದಿಸುತ್ತಿರುವುದನ್ನು ಭಾರತ ಹಲವು ಬಾರಿ ಜಾಗತಿಕ ವೇದಿಕೆಯಲ್ಲಿ ಎತ್ತಿ ತೋರಿಸಿದೆ.

ಜಾಗತಿಕ ಒತ್ತಡಗಳ ನಡುವೆಯೂ ಭಾರತದ ವಿದೇಶಾಂಗ ಸಚಿವಾಲಯವು ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಭಾರತದ ಇಂಧನ ಭದ್ರತೆ ಮತ್ತು ದೇಶದ ಜನರಿಗೆ ಕೈಗೆಟುಕುವ ದರದಲ್ಲಿ ಇಂಧನ ನೀಡುವುದು ಭಾರತದ ಮೊದಲ ಆದ್ಯತೆಯಾಗಿದೆ ಎಂದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More