AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿದ್ದ ಪತಿ

ಅಮೆರಿಕದ ವರ್ಜೀನಿಯಾದಲ್ಲಿ ಪತ್ನಿ ಮಮತಾ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ವಿಲೇವಾರಿ ಮಾಡಿದ್ದಾಗಿ ಪತಿ ನರೇಶ್ ಭಟ್ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾರೆ. ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬುದು ನರೇಶ್ ವಾದ. ಆದರೆ, ಪ್ರಾಸಿಕ್ಯೂಷನ್ ಕೊಲೆ ಆರೋಪ ಮಾಡಿದೆ. ಈ ಘಟನೆ ಭಾರತೀಯ ಸಮುದಾಯದಲ್ಲಿ ಆಘಾತ ಮೂಡಿಸಿದೆ. ಪ್ರಕರಣದ ವಿಚಾರಣೆ ಮುಂದುವರಿದಿದೆ.

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿದ್ದ ಪತಿ
ಆರೋಪಿ
ನಯನಾ ರಾಜೀವ್
|

Updated on: Nov 06, 2026 | 1:15 PM

Share

ವರ್ಜೀನಿಯಾ, ನವೆಂಬರ್ 06: ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿರುವುದಾಗಿ ಪತಿ ನ್ಯಾಯಾಲಯದೆದುರು ಒಪ್ಪಿಕೊಂಡಿರುವ ಘಟನೆ ಅಮೆರಿಕದ ವರ್ಜೀನಿಯಾದಲ್ಲಿ ನಡೆದಿದೆ. ಭಾರತ ಮೂಲದ ನರೇಶ್ ಭಟ್ ಎಂಬುವವರು ಪತ್ನಿಯ ನಾಪತ್ತೆ ಮತ್ತು ಕೊಲೆ ಪ್ರಕರಣದ ಆರೋಪ ಎದುರಿಸುತ್ತಿದ್ದಾರೆ. ತಮ್ಮ ಪತ್ನಿ ಮಮತಾ ಸಾವಿನ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡಿರುವ ನರೇಶ್, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಹೇಳಿಕೊಂಡಿದ್ದಾನೆ. ಆಕೆಯ ಮೃತದೇಹವನ್ನು ಗರಗಸದಿಂದ ತುಂಡು ತುಂಡು ಮಾಡಿದ್ದಾಗಿ ಹಾಗೂ ಕಸದ ಚೀಲಗಳಲ್ಲಿ ಹಾಕಿ ಎಸೆದಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆದರೆ ಪತ್ನಿಯ ಸಾವಿಗೆ ತಾನು ಕಾರಣ ಎಂಬ ಆರೋಪವನ್ನು ಆತ ನಿರಾಕರಿಸಿದ್ದಾನೆ. ಆಕೆಯ ಸಾವಿನ ನಿಜವಾದ ಕಾರಣ ಮತ್ತು ಘಟನೆ ನಡೆದ ಸಂದರ್ಭದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದೆ.

ಘಟನೆ ನಡೆದಿದ್ದು ಹೇಗೆ?

ನರೇಶ್ ಭಟ್ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಯ ಪ್ರಕಾರ, 2024ರ ಜುಲೈ 29ರ ರಾತ್ರಿ ಪತ್ನಿ ಮಮತಾ ತಮ್ಮ ಮಗಳೊಂದಿಗೆ ಮಲಗಲು ಹೋಗಿದ್ದರು. ಮರುದಿನ ಬೆಳಗಿನ ಜಾವ ಸುಮಾರು 4 ಗಂಟೆಗೆ ಎಚ್ಚರವಾದಾಗ, ಮಮತಾ ಹಾಸಿಗೆಯ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಿದ್ದಾಗಿ ತಿಳಿಸಿದ್ದಾನೆ. ಆಕೆಯ ಸುತ್ತ ವಾಂತಿ, ಮಾತ್ರೆಗಳು ಮತ್ತು ಸೆಲ್ಫೋಸ್ ಎಂಬ ವಿಷಕಾರಿ ಕೀಟನಾಶಕದ ಪ್ಯಾಕೆಟ್ ಇತ್ತು ಎಂದು ಹೇಳಿದ್ದಾರೆ.

ಪತ್ನಿಯನ್ನು ಬದುಕಿಸಲು ಸುಮಾರು ಒಂದು ಗಂಟೆ ಸಿಪಿಆರ್ ಸೇರಿದಂತೆ ಹಲವು ಪ್ರಯತ್ನಗಳನ್ನು ಮಾಡಿದ್ದಾಗಿ ನರೇಶ್ ಹೇಳಿದ್ದಾರೆ. ಆದರೆ ಆಕೆ ಮೃತಪಟ್ಟಿರುವುದು ಖಚಿತವಾದ ಬಳಿಕ ಪೊಲೀಸರಿಗೆ ಕರೆ ಮಾಡದೆ, ಮೃತದೇಹವನ್ನು ಹೇಗೆ ವಿಲೇವಾರಿ ಮಾಡುವುದು ಎಂಬ ಬಗ್ಗೆ ಯೋಚಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಆರಂಭದಲ್ಲಿ ಪೊಟೊಮ್ಯಾಕ್ ನದಿಗೆ ಎಸೆಯುವ ಆಲೋಚನೆ ಬಂದಿತ್ತು ಎಂದೂ ತಿಳಿಸಿದ್ದಾರೆ.

ಗರಗಸ ಬಳಸಿ ದೇಹವನ್ನು ತುಂಡು ಮಾಡಲು ಯತ್ನ

ನರೇಶ್ ಹೇಳಿಕೆಯ ಪ್ರಕಾರ, ಮೃತದೇಹವನ್ನು ಕಸದ ಬುಟ್ಟಿಯಲ್ಲಿ ಹಾಕಲು ಪ್ರಯತ್ನಿಸಿದಾಗ ಅದು ಒಳಗೆ ಸೇರಲಿಲ್ಲ. ಹೀಗಾಗಿ ಗರಗಸ ಬಳಸಿ ಕಾಲುಗಳನ್ನು ದೇಹದಿಂದ ಬೇರ್ಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಧ್ಯವಾಗದ ಕಾರಣ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿದ್ದಾರೆ.

ನಂತರ ಮೃತದೇಹವನ್ನು ಕಸದ ಚೀಲಗಳಲ್ಲಿ ಹಾಕಿ ವಿವಿಧ ಸ್ಥಳಗಳಲ್ಲಿನ ಕಸದ ಕಂಟೇನರ್‌ಗಳಿಗೆ ಎಸೆದಿರುವುದಾಗಿ ತನಿಖಾ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: 15-20 ದಿನಗಳಿಂದ ಒಬ್ಬೊಬ್ಬರನ್ನೇ ಕರೆಸಿ ಕೊಲೆ! ‘ಠಾಣಾ ವರದಿ’ ಎಂಬ ಪತ್ರಿಕೆಯನ್ನೂ ನಡೆಸುತ್ತಿದ್ದ ಸೈಕೋ ಕಿಲ್ಲರ್

ಪೊಲೀಸರಿಗೆ ಅನುಮಾನ ಬಂದಿದ್ದು ಹೇಗೆ?

ಮಮತಾ 2024ರ ಜುಲೈ 29ರಂದು ಕೊನೆಯ ಬಾರಿಗೆ ವಿಡಿಯೋ ಕಾಲ್‌ನಲ್ಲಿ ಕಾಣಿಸಿಕೊಂಡಿದ್ದರು. ಆಗಸ್ಟ್ 1ರಂದು ಅವರು ಕೆಲಸಕ್ಕೆ ಹಾಜರಾಗದ ಕಾರಣ ಸಹೋದ್ಯೋಗಿಗಳು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗಸ್ಟ್ 5ರಂದು ನರೇಶ್ ಪತ್ನಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.

ತನಿಖೆ ನಡೆಸಿದ ಪೊಲೀಸರಿಗೆ ದಂಪತಿಯ ಮನೆಯ ಮಲಗುವ ಕೋಣೆ ಮತ್ತು ಸ್ನಾನಗೃಹದಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದವು. ಅಲ್ಲದೆ, ಕೂದಲಿನ ತುಣುಕುಗಳು ಮತ್ತು ರಕ್ತದ ಗುರುತುಗಳಿದ್ದ ಗರಗಸವನ್ನೂ ವಶಪಡಿಸಿಕೊಳ್ಳಲಾಗಿತ್ತು. ನರೇಶ್ ಅವರನ್ನು 2024ರ ಆಗಸ್ಟ್ 22ರಂದು ಬಂಧಿಸಲಾಗಿತ್ತು.

ಪ್ರಾಸಿಕ್ಯೂಷನ್ ವಾದವೇನು?

ನರೇಶ್ ಪತ್ನಿಯನ್ನು ಕೊಂದು, ಮೃತದೇಹವನ್ನು ತುಂಡು ಮಾಡಿ ವಿವಿಧ ಕಸದ ಕಂಟೇನರ್‌ಗಳಲ್ಲಿ ಎಸೆದಿದ್ದಾರೆ ಎಂಬುದು ಪ್ರಾಸಿಕ್ಯೂಷನ್ ಆರೋಪ. ವಿಚಾರಣೆ ವೇಳೆ ಮನೆಯಲ್ಲಿದ್ದ ರಕ್ತದ ಮಾದರಿಗಳು, ಗರಗಸದಲ್ಲಿದ್ದ ರಕ್ತದ ಗುರುತುಗಳು ಮತ್ತು ಸಿಸಿಟಿವಿ ದೃಶ್ಯಗಳನ್ನು ಸಾಕ್ಷ್ಯವಾಗಿ ಮಂಡಿಸಲಾಗಿದೆ. ನರೇಶ್ ಕಸದ ಚೀಲಗಳನ್ನು ವಿವಿಧ ಕಂಟೇನರ್‌ಗಳಿಗೆ ಎಸೆಯುತ್ತಿರುವ ದೃಶ್ಯಗಳನ್ನೂ ನ್ಯಾಯಾಲಯಕ್ಕೆ ತೋರಿಸಲಾಗಿದೆ. ಮಮತಾ ಅವರ ಸಹೋದರ ಕೂಡ ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡಿದ್ದಾರೆ.

ನರೇಶ್ ವಿರುದ್ಧ ಮೂರು ಪ್ರಮುಖ ಆರೋಪಗಳಿವೆ

-ಫಸ್ಟ್​ ಡಿಗ್ರಿ ಮರ್ಡರ್: ಅತ್ಯಂತ ಗಂಭೀರ ಆರೋಪ. ಸಾಬೀತಾದರೆ ವರ್ಜೀನಿಯಾ ಕಾನೂನಿನಡಿ ಜೀವಾವಧಿ ಶಿಕ್ಷೆ ವಿಧಿಸಬಹುದು. – ಮೃತದೇಹವನ್ನು ಮರೆಮಾಚುವುದು: ಮೃತದೇಹವನ್ನು ಪತ್ತೆಯಾಗದಂತೆ ವಿಲೇವಾರಿ ಮಾಡಿದ ಆರೋಪ. – ಮೃತದೇಹವನ್ನು ಅಪವಿತ್ರಗೊಳಿಸುವುದು: ಮೃತದೇಹವನ್ನು ತುಂಡು ಮಾಡಿದ ಆರೋಪ. ನರೇಶ್ ಈ ಮೂರು ಆರೋಪಗಳಿಗೂ ತಪ್ಪಿತಸ್ಥನಲ್ಲ ಎಂದು ಹೇಳಿಕೊಂಡಿದ್ದಾನೆ. ಪತ್ನಿಯ ಸಾವು ಆತ್ಮಹತ್ಯೆಯಿಂದ ಸಂಭವಿಸಿದೆ ಎಂಬುದು ಅವರ ವಾದ. ಆದರೆ ಪ್ರಾಸಿಕ್ಯೂಷನ್ ಇದನ್ನು ಒಪ್ಪುತ್ತಿಲ್ಲ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More