ಆಪರೇಷನ್ ಸಿಂಧೂರ್ ವೇಳೆ ಧ್ವಂಸಗೊಂಡಿದ್ದ ಜೈಶ್ ಪ್ರಧಾನ ಕಚೇರಿ ರೆಡಿ, ಮತ್ತೆ ಚುರುಕಾಯ್ತು ಜೆಇಎಂ ಉಗ್ರ ಜಾಲ

ಆಪರೇಷನ್ ಸಿಂಧೂರ್ ನಂತರ ಧ್ವಂಸವಾಗಿದ್ದ ಜೈಶ್-ಎ-ಮೊಹಮ್ಮದ್ (JeM) ಪ್ರಧಾನ ಕಚೇರಿ ಬಹಾವಲ್ಪುರದಲ್ಲಿ ಪಾಕ್ ನೆರವಿನಿಂದ 15 ತಿಂಗಳಲ್ಲಿ ಪುನರ್ನಿರ್ಮಾಣಗೊಂಡಿದೆ. 25 ಕೋಟಿ ರೂ. ವೆಚ್ಚದಲ್ಲಿ ಐಷಾರಾಮಿ ಮರುನಿರ್ಮಾಣಗೊಂಡು, ಶಸ್ತ್ರಾಸ್ತ್ರ ಸಂಗ್ರಹ, ಡ್ರೋನ್ ಕಾರ್ಯಾಚರಣೆ ಹಾಗೂ ಭಾರತ ವಿರೋಧಿ ಪ್ರಚಾರಕ್ಕೆ ಸಿದ್ಧವಾಗಿದೆ. ಭಾರತವು ಯಾವುದೇ ಪ್ರಚೋದನೆಗೆ ಮರು ದಾಳಿ ನಡೆಸಲು ಸನ್ನದ್ಧವಾಗಿದೆ ಎಂದು ಎಚ್ಚರಿಕೆ ನೀಡಿದೆ.

ಆಪರೇಷನ್ ಸಿಂಧೂರ್ ವೇಳೆ ಧ್ವಂಸಗೊಂಡಿದ್ದ ಜೈಶ್ ಪ್ರಧಾನ ಕಚೇರಿ ರೆಡಿ, ಮತ್ತೆ ಚುರುಕಾಯ್ತು ಜೆಇಎಂ ಉಗ್ರ ಜಾಲ
ಪಾಕಿಸ್ತಾನ

Updated on: Aug 24, 2026 | 10:23 AM

ಇಸ್ಲಾಮಾಬಾದ್, ಆಗಸ್ಟ್ 24: ಭಯೋತ್ಪಾದನೆ(Terrorism)ಗೆ ಕುಮ್ಮಕ್ಕು ನೀಡುವುದನ್ನು ಪಾಕಿಸ್ತಾನ ಎಂದಿಗೂ ನಿಲ್ಲಿಸುವುದಿಲ್ಲ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ‘ಆಪರೇಷನ್ ಸಿಂಧೂರ್’ ಮೂಲಕ ಧ್ವಂಸಗೊಳಿಸಿದ್ದ ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಬಹಾವಲ್ಪುರ ಪ್ರಧಾನ ಕಚೇರಿ ‘ಮರ್ಕಜ್ ಸುಭಾನಲ್ಲಾ’ ಕೇವಲ 15 ತಿಂಗಳಲ್ಲಿ ಮತ್ತೆ ತಲೆ ಎತ್ತಿದೆ.

ದಾಳಿಯ ಕುರುಹುಗಳನ್ನೆಲ್ಲಾ ಮುಚ್ಚಿಹಾಕಿ ಹೊಸದಾಗಿ ನಿರ್ಮಿಸಲಾಗಿರುವ ಈ ಭಯೋತ್ಪಾದಕ ಕೇಂದ್ರದ ವಿಡಿಯೋ ಹಾಗೂ ಸ್ಯಾಟಲೈಟ್ ಚಿತ್ರಗಳು ಬಹಿರಂಗವಾಗಿವೆ. ಆಪರೇಷನ್ ಸಿಂಧೂರ್ ದಾಳಿಯ ಬಳಿಕ ಪಾಕಿಸ್ತಾನ ಸರ್ಕಾರವು ಜೈಶ್ ಸಂಘಟನೆಗೆ ಸುಮಾರು 25 ಕೋಟಿ ಪಾಕಿಸ್ತಾನಿ ರೂಪಾಯಿ (PKR) ನಗದು ನೆರವು ನೀಡಿದೆ ಎಂದು ಗುಪ್ತಚರ ವರದಿಗಳು ತಿಳಿಸಿವೆ.

ಇದರಲ್ಲಿ ಸುಮಾರು 11 ಕೋಟಿ ರೂ. ವೆಚ್ಚ ಮಾಡಿ ಬಾಂಬ್ ದಾಳಿಗೆ ಸೀಳಿಹೋಗಿದ್ದ ಸೆಂಟ್ರಲ್ ಹಾಲ್, ನೆಲಸಮವಾಗಿದ್ದ ಗುಮ್ಮಟಗಳು ಹಾಗೂ ಮದರಸಾ ಅಲ್-ಸಬೀರ್ ಸಂಕೀರ್ಣವನ್ನು ಆಮದು ಮಾಡಿಕೊಂಡ ಅಮೃತಶಿಲೆ ಮತ್ತು ಹೊಸ ಪ್ಲ್ಯಾಸ್ಟರಿಂಗ್ ಮೂಲಕ ಅದ್ದೂರಿಯಾಗಿ ಮರುನಿರ್ಮಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಮೌಲಾನಾ ಮಸೂದ್ ಅಜರ್‌ನನ್ನು ಸದ್ಯ ಕಾರ್ಯಾಚರಣೆಗಳಿಂದ ದೂರವಿರಿಸಲಾಗಿದೆ.

ಮತ್ತಷ್ಟು ಓದಿ: ಹಿಂದೂಗಳನ್ನು ಸುಲಭವಾಗಿ ಕೊಲ್ಲಬಹುದು: ಬಾಂಗ್ಲಾದಲ್ಲಿ ಅಲ್-ಖೈದಾ ನಂಟು ಹೊಂದಿರುವ ಹರುನ್ ಇಝಾರ್ ಬಹಿರಂಗ ಬೆದರಿಕೆ

ಪ್ರಸ್ತುತ ಈ ಪುನರ್ನಿರ್ಮಿತ ಉಗ್ರ ನೆಲೆಯ ಕಮಾಂಡ್ ಮಸೂದ್ ಅಜರ್‌ನ ಸಹೋದರರಾದ ತಲ್ಹಾ ಅಲ್-ಸೈಫ್ ಮತ್ತು ಮೊಹಿನುದ್ದೀನ್ ಔರಂಗಜೇಬ್ ಕೈಯಲ್ಲಿದೆ. ಮಸೂದ್ ಅಜರ್ ಮತ್ತು ರೌಫ್ ಅಸ್ಗರ್ ಸದ್ಯ ಸಿಂಧ್ ಪ್ರಾಂತ್ಯದ ನವಾಬ್‌ಶಾ ಜಿಲ್ಲೆಯಲ್ಲಿ ಪಾಕ್ ಸರ್ಕಾರದ ಬಿಗಿ ಭದ್ರತೆಯ ಆಶ್ರಯದಲ್ಲಿದ್ದಾರೆ.

ಭಾರತದ ಸಹಿಷ್ಣುತೆ ಮತ್ತು ಔದಾರ್ಯವನ್ನು ನಮ್ಮ ದೌರ್ಬಲ್ಯವೆಂದು ತಿಳಿಯಬಾರದು. ಭಾರತ ರಿಸ್ಕ್ ತೆಗೆದುಕೊಂಡು ಶತ್ರು ಶಿಬಿರಗಳ ಮೇಲೆ ಯಾವುದೇ ಪರಿಣಾಮ ಲೆಕ್ಕಿಸದೆ ಮತ್ತೆ ತೀವ್ರವಾಗಿ ದಾಳಿ ನಡೆಸಲು ಸದಾ ಸಿದ್ಧ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಂದೇಶ ರವಾನಿಸಿದ್ದಾರೆ.

ಮತ್ತೊಂದು ದಾಳಿಯ ಮುನ್ಸೂಚನೆ: ಗಡಿಯಾಚೆಗಿನ ಉಗ್ರ ಶಿಬಿರಗಳು ಮತ್ತೆ ಸಕ್ರಿಯಗೊಂಡರೆ, ಭಾರತವು ಯಾವುದೇ ಮುಲಾಜಿಲ್ಲದೆ ಮತ್ತೊಮ್ಮೆ ಗಡಿಯಾಚೆ ನುಗ್ಗಿ ಸರ್ಜಿಕಲ್, ವಾಯುದಾಳಿ ನಡೆಸುವ ಎಚ್ಚರಿಕೆಯನ್ನು ಈಗಾಗಲೇ ಜಾಗತಿಕ ವೇದಿಕೆಯಲ್ಲಿ ಸ್ಪಷ್ಟಪಡಿಸಿದೆ.

ನವೀಕೃತ ಮರ್ಕಜ್ ಸುಭಾನಲ್ಲಾ ಸಂಕೀರ್ಣದಲ್ಲಿ ಶಸ್ತ್ರಾಸ್ತ್ರ ಸಂಗ್ರಹದ ಜೊತೆಗೆ, ಗಡಿಯಾಚೆಗೆ ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡಲು ಡ್ರೋನ್ ನಿಯಂತ್ರಣ ಕೊಠಡಿಗಳು ಹಾಗೂ ಭಾರತ ವಿರೋಧಿ ಪ್ರಚಾರಕ್ಕಾಗಿ ಪ್ರತ್ಯೇಕ ಸೈಬರ್ ಸೆಲ್ ಅನ್ನು ಸ್ಥಾಪಿಸಲಾಗಿದೆ.

ನಿಯಂತ್ರಣ ರೇಖೆ (LoC) ಮತ್ತು ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಭಾರತೀಯ ರಕ್ಷಣಾ ಪಡೆಗಳು ತನ್ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಮತ್ತು ಸರ್ವೈಲೆನ್ಸ್ ಡ್ರೋನ್‌ಗಳನ್ನು ಸಜ್ಜುಗೊಳಿಸಿದ್ದು, ಗಡಿಯಾಚೆಯಿಂದ ಯಾವುದೇ ಪ್ರಚೋದನೆ ಕಂಡುಬಂದರೂ ತಕ್ಷಣವೇ ಹೊಸ ವಾಯುದಾಳಿ ನಡೆಸಲು ಮುಕ್ತ ಅನುಮತಿ ನೀಡಲಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:22 am, Mon, 24 August 26

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us