AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಜ್ತಬಾ ಖಮೇನಿ ಆರೋಗ್ಯವಾಗಿದ್ದಾರೆ: 8 ತಿಂಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರಲು ಅಸಲಿ ಕಾರಣ ಬಹಿರಂಗ

ಇರಾನ್‌ನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಸಂಪೂರ್ಣ ಆರೋಗ್ಯವಾಗಿದ್ದು, ಸಕ್ರಿಯವಾಗಿ ದೇಶದ ಆಡಳಿತ ನಡೆಸುತ್ತಿದ್ದಾರೆ. ಕಳೆದ 8 ತಿಂಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರಲು ಅಮೆರಿಕ ಮತ್ತು ಇಸ್ರೇಲ್‌ನಿಂದ ಬಂದ ಹತ್ಯೆಯ ಬೆದರಿಕೆಯೇ ಕಾರಣ. ಅವರು ಭದ್ರತೆಯ ಕಾರಣಗಳಿಗಾಗಿ ನೆರಳಿನಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಅಧ್ಯಕ್ಷರೊಂದಿಗೆ ಸಭೆ ನಡೆಸಿ, ಆಡಳಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹಿರಿಯ ರಾಜತಾಂತ್ರಿಕರು ಸ್ಪಷ್ಟಪಡಿಸಿದ್ದಾರೆ.

ಮೊಜ್ತಬಾ ಖಮೇನಿ ಆರೋಗ್ಯವಾಗಿದ್ದಾರೆ: 8 ತಿಂಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರಲು ಅಸಲಿ ಕಾರಣ ಬಹಿರಂಗ
ಮೊಜ್ತಬಾ ಖಮೇನಿ Image Credit source: Getty Images
ನಯನಾ ರಾಜೀವ್
|

Updated on: Oct 23, 2026 | 3:00 PM

Share

ಟೆಹ್ರಾನ್, ಅಕ್ಟೋಬರ್ 23: ತಂದೆ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಇರಾನ್‌ನ ಸರ್ವೋಚ್ಚ ನಾಯಕರಾಗಿ ಅಧಿಕಾರ ವಹಿಸಿಕೊಂಡಿರುವ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿದ್ದ ವದಂತಿಗಳಿಗೆ ಇರಾನ್ ಹಿರಿಯ ರಾಜತಾಂತ್ರಿಕರು ತೆರೆ ಎಳೆದಿದ್ದಾರೆ. “ಮೊಜ್ತಬಾ ಖಮೇನಿ ಸಂಪೂರ್ಣ ಆರೋಗ್ಯವಾಗಿದ್ದಾರೆ ಮತ್ತು ದೇಶದ ಆಡಳಿತವನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ” ಎಂದು ಸರ್ವೋಚ್ಚ ನಾಯಕನ ಪ್ರತಿನಿಧಿ ಹಾಗೂ ಹಿರಿಯ ರಾಜತಾಂತ್ರಿಕ ಅಬ್ದುಲ್ ಮಜೀದ್ ಹಕೀಮ್ ಇಲಾಹಿ ತಿಳಿಸಿದ್ದಾರೆ.

ಫೆಬ್ರವರಿ 28 ರಂದು ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಂದಿನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದರು. ಆ ನಂತರ ಅಧಿಕಾರ ವಹಿಸಿಕೊಂಡ ಮೊಜ್ತಬಾ ಖಮೇನಿ, ಕಳೆದ ಎಂಟು ತಿಂಗಳುಗಳಿಂದ ಸಾರ್ವಜನಿಕ ವೇದಿಕೆಗಳಲ್ಲಿ ಪ್ರತ್ಯಕ್ಷವಾಗಿ ಕಾಣಿಸಿಕೊಳ್ಳದೆ ಕೇವಲ ಲಿಖಿತ ಸಂದೇಶಗಳ ಮೂಲಕವೇ ಸಂವಹನ ನಡೆಸುತ್ತಿರುವುದು ಜಾಗತಿಕ ವಲಯದಲ್ಲಿ ಅವರ ಆರೋಗ್ಯ ಹಾಗೂ ಸುರಕ್ಷತೆಯ ಬಗ್ಗೆ ತೀವ್ರ ಅನುಮಾನಗಳನ್ನು ಹುಟ್ಟುಹಾಕಿತ್ತು.

ಸಂಪೂರ್ಣ ಆರೋಗ್ಯವಾಗಿದ್ದಾರೆ: ಅಬ್ದುಲ್ ಮಜೀದ್ ಹಕೀಮ್ ಇಲಾಹಿ ಮಾತನಾಡಿ, ಮೊಜ್ತಬಾ ಖಮೇನಿ ಅತ್ಯುತ್ತಮ ಆರೋಗ್ಯ ಹೊಂದಿದ್ದಾರೆ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಕಳೆದ ವಾರವಷ್ಟೇ ಅವರೊಂದಿಗೆ ಬರೋಬ್ಬರಿ 7 ಗಂಟೆಗಳ ಕಾಲ ಮಹತ್ವದ ಸಭೆ ನಡೆಸಿದ್ದಾರೆ. ಸಂಸತ್ತಿನ ಸ್ಪೀಕರ್ ಕೂಡ ಅವರ ಜೊತೆ ನಿರಂತರ ಮಾತುಕತೆಯಲ್ಲಿದ್ದಾರೆ. ಅವರ ಆರೋಗ್ಯದ ಬಗ್ಗೆ ಹರಡುತ್ತಿರುವ ಊಹಾಪೋಹಗಳೆಲ್ಲವೂ ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಇಸ್ರೇಲ್ ಮತ್ತು ಇರಾನ್ ನಡುವೆ ಕದನ ವಿರಾಮ ಘೋಷಣೆ, ಇಲ್ಲೂ ಟ್ರಂಪ್ ಮಧ್ಯಸ್ಥಿಕೆಯೇ?

ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು: ಜುಲೈನಲ್ಲಿ ನಡೆದ ತಂದೆ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಮೊಜ್ತಬಾ ಇರಲಿಲ್ಲ ಎಂಬ ವರದಿಗಳನ್ನು ತಳ್ಳಿಹಾಕಿದ ಅವರು, “ಭದ್ರತಾ ಕಾರಣಗಳಿಂದಾಗಿ ಅವರು ಮಾಧ್ಯಮಗಳ ಕ್ಯಾಮೆರಾ ಮುಂದೆ ಬರಲಿಲ್ಲವಷ್ಟೇ. ಆದರೆ ಅವರು ತಮ್ಮ ಸಹೋದರರೊಂದಿಗೆ ಅಂತ್ಯಕ್ರಿಯೆಯಲ್ಲಿ ಉಪಸ್ಥಿತರಿದ್ದರು. ನಾನೂ ಆ ಸಂದರ್ಭದಲ್ಲಿ ಅಲ್ಲಿಯೇ ಇದ್ದೆ. ಕೆಲವೊಮ್ಮೆ ಅವರು ರಾತ್ರಿ ವೇಳೆ ಸಾಮಾನ್ಯ ಜನರ ನಡುವೆ ಪ್ರದರ್ಶನಗಳಲ್ಲೂ ಭಾಗವಹಿಸುತ್ತಾರೆ” ಎಂದರು.

ಇಸ್ರೇಲ್ ಮತ್ತು ಅಮೆರಿಕದಿಂದ ಸಂಭಾವ್ಯ ಹತ್ಯೆಯ ಬೆದರಿಕೆ ಇರುವುದರಿಂದಲೇ ಅವರು ಭೂಗತವಾಗಿದ್ದುಕೊಂಡು ಭದ್ರತೆಯ ನೆರಳಿನಲ್ಲೇ ಆಡಳಿತ ನಡೆಸುತ್ತಿದ್ದಾರೆ. ಮಿಲಿಟರಿ ರಹಸ್ಯ ಕಾರ್ಯಾಚರಣೆಗಳು, ಆರ್ಥಿಕ ಯೋಜನೆಗಳು ಮತ್ತು ಯುದ್ಧತಂತ್ರದ ಪ್ರತಿಯೊಂದು ಅಂತಿಮ ನಿರ್ಧಾರಗಳನ್ನು ಖಮೇನಿ ಅವರೇ ತೆಗೆದುಕೊಳ್ಳುತ್ತಿದ್ದಾರೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ. ಎನ್​ಡಿಟಿವಿಗೆ ಅಬ್ದುಲ್ ಮಜೀದ್ ಈ ಕುರಿತು ಮಾಹಿತಿ ನೀಡಿದ್ದಾರೆ.

ಅಮೆರಿಕದ ಗೊಂದಲ ಮತ್ತು ಟ್ರಂಪ್ ಹೇಳಿಕೆಗೆ ತಿರುಗೇಟು ಡೊನಾಲ್ಡ್ ಟ್ರಂಪ್ ಹೇಳಿಕೆ: ಅಮೆರಿಕ-ಇರಾನ್ ಸಂಘರ್ಷ ಎಂಟನೇ ತಿಂಗಳಿಗೆ ಕಾಲಿಟ್ಟಿರುವ ನಡುವೆ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ನ ಉನ್ನತ ನಾಯಕರೆಲ್ಲರೂ ದಾಳಿಗಳಲ್ಲಿ ಹತರಾಗಿದ್ದಾರೆ. ಈಗ ಆ ದೇಶವನ್ನು ಯಾರು ಮುನ್ನಡೆಸುತ್ತಿದ್ದಾರೆ, ಯಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದರು. ನಾವು ಇರಾನ್ ಅಧ್ಯಕ್ಷ ಮತ್ತು ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸುತ್ತಿದ್ದರೂ, ಇರಾನ್ ಅಧಿಕಾರ ರಚನೆಯಲ್ಲಿ ಅವರಿಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರವಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿದ್ದರು.

ಈ ಹೇಳಿಕೆಗಳನ್ನು ಇರಾನ್ ವಿದೇಶಾಂಗ ಸಚಿವಾಲಯ ಬಲವಾಗಿ ತಳ್ಳಿಹಾಕಿದೆ. ಇರಾನ್‌ನ ಸಾಂವಿಧಾನಿಕ ಆಡಳಿತ ವ್ಯವಸ್ಥೆ ಮತ್ತು ನಿರ್ಧಾರ ಕೈಗೊಳ್ಳುವ ಹಂತಗಳ ಬಗ್ಗೆ ಅಮೆರಿಕಕ್ಕೆ ಸಂಪೂರ್ಣ ಅರಿವಿದೆ. ಸುಪ್ರೀಂ ಲೀಡರ್ ಮಾರ್ಗದರ್ಶನದಲ್ಲೇ ಇರಾನ್ ಸರ್ಕಾರ ಮತ್ತು ಸೇನೆ ಕಾರ್ಯನಿರ್ವಹಿಸುತ್ತಿವೆ ಎಂದು ಸ್ಪಷ್ಟಪಡಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More