Pervez Musharraf Profile: ಭಾರತದಲ್ಲಿ ಹುಟ್ಟಿ ಭಾರತ ವಿರುದ್ಧವೇ ಕೊನೆಯವರೆಗೂ ಬದ್ಧವೈರತ್ವ ಸಾಧಿಸಿದ ಮುಷರಫ್ ಜೀವನಕಥೆ

India born Pervez Musharraf's important life incidents: ಭಾರತದಲ್ಲಿ ಜನಿಸಿದ ಪರ್ವೇಜ್ ಮುಷರಫ್ ಪಾಕಿಸ್ತಾನದ ಅಧ್ಯಕ್ಷರಾಗುವ ಹಂತಕ್ಕೆ ಹೋದ ಅವರ ಪ್ರಯಾಣ ರೋಚಕವಾಗಿದೆ. ಕಾಶ್ಮೀರ ಸಮಸ್ಯೆಗೆ 4 ಅಂಶಗಳ ಸೂತ್ರ ಮುಂದಿಟ್ಟಿದ್ದ ಅವರು ಕಾಶ್ಮೀರೀ ದಿನದಂದೇ ನಿಧನರಾಗಿದ್ದಾರೆ. ಅವರ ಜೀವನ ಕೆಲ ಮಹತ್ವದ ಘಟನೆಗಳ ವಿವರ ಇಲ್ಲಿದೆ:

Pervez Musharraf Profile: ಭಾರತದಲ್ಲಿ ಹುಟ್ಟಿ ಭಾರತ ವಿರುದ್ಧವೇ ಕೊನೆಯವರೆಗೂ ಬದ್ಧವೈರತ್ವ ಸಾಧಿಸಿದ ಮುಷರಫ್ ಜೀವನಕಥೆ
ಪರ್ವೇಜ್ ಮುಷರಫ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 05, 2023 | 1:37 PM

ಪಾಕಿಸ್ತಾನದ ಮಾಜಿ ಸೇನಾಧಿಕಾರಿ ಮತ್ತು ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (Pervez Musharraf Death) ಫೆಬ್ರುವರಿ 5ರಂದು ಸಾವನ್ನಪ್ಪಿದ್ದಾರೆ. ಬಹಳ ದಿನಗಳಿಂದ ಅನಾರೋಗ್ಯಪೀಡಿತರಾಗಿದ್ದ ಮುಷರಫ್ ಅವರು ರಾವಲಪಿಂಡಿಯ ಸೇನಾ ಆಸ್ಪತ್ರೆಯೊಂದರಲ್ಲಿ ಅಸುನೀಗಿದರು. 1943 ಆಗಸ್ಟ್ 11ರಂದು ಜನಿಸಿದ ಮುಷರಫ್ ಪಾಕಿಸ್ತಾನದ 7ನೇ ಸೇನಾ ಮುಖ್ಯಸ್ಥ ಮತ್ತು 10ನೇ ಅಧ್ಯಕ್ಷರಾಗಿದ್ದರು. ಸಾಯುವವರೆಗೂ ಹಲವು ಗುರುತರ ಆರೋಪಗಳನ್ನು ಹೊಂದಿದ್ದ ಮುಷರಫ್ ಹುಟ್ಟಿದ್ದು ಭಾರತದಲ್ಲಿ. ಆದರೆ, ಕಾರ್ಗಿಲ್ ಯುದ್ಧದ ರೂವಾರಿಯಾಗುವ (Kargil war) ಮೂಲಕ ಪಾಕಿಸ್ತಾನ ಭಾರತದ ಬೆನ್ನಿಗೆ ಚೂರಿ ಹಾಕಲು ಅವರು ಕಾರಣರಾಗಿದ್ದು ಹೌದು. ಜಮ್ಮು ಮತ್ತು ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ತಮ್ಮಿಡೀ ವೃತ್ತಿಜೀವನದಲ್ಲಿ ಕುಮ್ಮಕ್ಕು ನೀಡುತ್ತಾ ಬಂದಿದ್ದ ಮುಷರಫ್, ಪಾಕಿಸ್ತಾನದ ಐಕ್ಯತಾ ದಿನದಂದೇ ಅಸು ನೀಗಿದ್ದಾರೆ.

ಭಾರತದಲ್ಲಿ ಜನನ

ಪರ್ವೇಜ್ ಮುಷರಫ್ 1943ರಲ್ಲಿ ಭಾರತದ ದೆಹಲಿಯಲ್ಲಿ ಜನಸಿದವರು. ಭಾರತದ ವಿಭಜನೆಯಾಗಿ ಪಾಕಿಸ್ತಾನ ರಚನೆಯಾದಾಗ ಮುಷರಫ್ ಕುಟುಂಬ ದೆಹಲಿಯಿಂದ ಕರಾಚಿಗೆ ವಲಸೆ ಹೋಯಿತು. ಅವರ ತಂದೆ ರಾಜತಾಂತ್ರಿಕ ಅಧಿಕಾರಿಯಾಗಿ ಟರ್ಕಿಯಲ್ಲಿದ್ದರು. 1949ರಿಂದ 1956ರವರೆಗೂ ಮುಷರಫ್ ಟರ್ಕಿ ದೇಶದ ಇಸ್ತಾಂಬುಲ್ ನಗರದಲ್ಲಿ ಬೆಳೆದರು.

ನಂತರ ಪಾಕಿಸ್ತಾನದ ಕ್ವೆಟ್ಟಾದಲ್ಲಿ ಸೇನಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ಲಂಡನ್​ನ ಪ್ರತಿಷ್ಠಿತ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸಂಸ್ಥೆಯಲ್ಲಿ ಕಲಿತರು. ಇದಾದ ಬಳಿಕ ಸೇನೆ ಸೇರಿದ ಅವರು ವಿವಿಧ ಸ್ತರಗಳಲ್ಲಿ ಕೆಲಸ ಮಾಡಿದರು. ಭಾರತದೊಂದಿಗಿನ ಹಲವು ಯುದ್ಧಗಳಲ್ಲಿ ಭಾಗವಹಿಸಿದರು.

ಮುಷರಫ್ ವರ್ಸಸ್ ಷರೀಫ್

ಇದು ನಿಜಕ್ಕೂ ಕುತೂಹಲ ಮೂಡಿಸುವ ಸಂಗತಿ. ಪರ್ವೇಜ್ ಮುಷರಫ್ 1998ರಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥರಾದರು. ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡಿದ್ದು ಅಂದಿನ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರೆಯೇ.

ಅದಾಗಿ ಒಂದು ವರ್ಷಕ್ಕೆ, ಅಂದರೆ 1999ರಲ್ಲಿ ಪಾಕಿಸ್ತಾನ ಭಾರತದ ಭಾಗವಾಗಿದ್ದ ಕಾರ್ಗಿಲ್ ಪ್ರದೇಶವನ್ನು ವಶಪಡಿಸಿಕೊಳ್ಳಲು ಎರಗಿ ಹೋಗುತ್ತದೆ. ಆದರೆ, ಭಾರತೀಯ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ಪಾಕಿಸ್ತಾನೀಯರನ್ನು ಹಿಮ್ಮೆಟ್ಟಿಸುತ್ತಾರೆ.

ಇದನ್ನೂ ಓದಿ: Pervez Musharraf Death: ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

ಆಗ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಮತ್ತು ಭಾರತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮಧ್ಯೆ ಶಾಂತಿ ಪ್ರಕ್ರಿಯೆ ಒಂದು ತಾರ್ಕಿಕ ಅಂತ್ಯ ಮುಟ್ಟುವ ಸಾಧ್ಯತೆ ಕಾಣಿಸಿತ್ತು. ಆದರೆ, ಕಾರ್ಗಿಲ್ ಯುದ್ಧ ಶಾಂತಿಯನ್ನು ಹಾಳು ಮಾಡಿತು. ಪಾಕಿಸ್ತಾನ ಸೇನೆ ಕಾರ್ಗಿಲ್ ಮೇಲೆ ಆಕ್ರಮಣ ಮಾಡಲು ಪ್ರಮುಖ ಸಂಚುಕಾರ ಎಂದರೆ ಮುಷರಫ್. ಈ ಕಾರ್ಗಿಲ್ ಯುದ್ಧ ಘಟನೆ ಬಳಿಕ ಪಾಕಿಸ್ತಾನದ ಮೇಲೆ ಅಂತಾರಾಷ್ಟ್ರೀಯ ಸಮುದಾಯ ಮುಗಿಬಿದ್ದಿತು. ಆಗ ಮುಷರಫ್ 1999, ಅಕ್ಟೋಬರ್ 12ರಂದು ವಿದೇಶಕ್ಕೆ ಹೋಗಿದ್ದಾಗ ಪ್ರಧಾನಿ ಷರೀಫ್ ಮುಷರಫ್​ರನ್ನು ಉಚ್ಚಾಟಿಸಿದರು. ಕರಾಚಿಗೆ ಮುಷರಫ್​ರನ್ನು ಹೊತ್ತುಬರುತ್ತಿದ್ದ ವಿಮಾನವನ್ನು ತಡೆಯಲು ಯತ್ನಿಸಿದರು. ಆದರೆ, ಪಾಕಿಸ್ತಾನ ಸೇನೆ ಇದಕ್ಕೆ ಅವಕಾಶ ಕೊಡಲಿಲ್ಲ. ಏರ್​ಪೋರ್ಟ್ ಮಾತ್ರವಲ್ಲದೇ ಪ್ರಮುಖ ಸರ್ಕಾರಿ ಯಂತ್ರಗಳ ಕಚೇರಿಗಳನ್ನು ಮಿಲಿಟರಿ ಪಡೆ ತನ್ನ ಹತೋಟಿಗೆ ಪಡೆದು ಪ್ರಧಾನಿ ನವಾಜ್ ಷರೀಪ್​ರನ್ನೇ ಪದಚ್ಯುತಗೊಳಿಸಿದರು. ಬಳಿಕ ಮುಷರಫ್​ರನ್ನು ಮಿಲಿಟರಿ ಆಡಳಿತದ ನಾಯಕನಾಗಿ ಆರಿಸಲಾಯಿತು. ಬಳಿಕ ಮುಷರಫ್ ಪಾಕಿಸ್ತಾನದ ಸಂಸತ್ತನ್ನು ವಿಸರ್ಜಿಸಿ, ಸಂವಿಧಾನವನ್ನು ಅಮಾನತುಗೊಳಿಸಿ ಆಡಳಿತ ನಡೆಸಿದರು.

2002ರಲ್ಲಿ ಸಂವಿಧಾನವನ್ನು ಪುನಃಸ್ಥಾಪಿಸಿ, ಸಾರ್ವತ್ರಿಕ ಚುನಾವಣೆ ನಡೆಸಿದರು. ಅದರಲ್ಲಿ ಅವರ ನೇತೃತ್ವದ ಪಕ್ಷ ಬಹುಮತ ಪಡೆದು, ಅವರು ಪಾಕಿಸ್ತಾನದ ಅಧ್ಯಕ್ಷರಾದರು. ಆದರೆ 2007ರಲ್ಲಿ ಅವರು ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಯತ್ನಿಸಿದಾಗ ಅಲ್ಲಿನ ಸುಪ್ರೀಂ ಕೋರ್ಟ್ ವಿರೋಧಿಸಿತು. ಸೇನಾಧಿಕಾರಿ ಸ್ಥಾನದಲ್ಲಿದ್ದುಕೊಂಡು ಅಧ್ಯಕ್ಷರಾಗುವುದಕ್ಕೆ ಕೋರ್ಟ್ ಒಪ್ಪಲಿಲ್ಲ. ಮುಖ್ಯನ್ಯಾಯಮೂರ್ತಿಯನ್ನು ಅಮಾನತುಗೊಳಿಸಬೇಕೆಂಬ ಮುಷರಫ್ ಮನವಿಯನ್ನೂ ಕೋರ್ಟ್ ಪುರಸ್ಕರಿಸಲಿಲ್ಲ.

ಸಂವಿಧಾನ ಅಮಾನತು

ಮುಷರಫ್ ಪುನರಾಯ್ಕೆಯಾದ ಚುನಾವಣೆಯ ಫಲಿತಾಂಶದ ಘೋಷಣೆಯನ್ನು ಮುಂದೂಡಲಾಯಿತು. ಭಯೋತ್ಪಾದನೆ ಹೆಚ್ಚುತ್ತಿದೆ ಎಂಬ ಕಾರಣವೊಡ್ಡಿ ನವೆಂಬರ್ ತಿಂಗಳಲ್ಲಿ ಮುಷರಫ್ ಪಾಕಿಸ್ತಾನದಲ್ಲಿ ತುರ್ತು ಸ್ಥಿತಿ ಹೇರಿದರು. ಸಂವಿಧಾನವನ್ನು ಮತ್ತೆ ಅಮಾನತಿನಲ್ಲಿಟ್ಟರು. ಮುಖ್ಯನ್ಯಾಯಮೂರ್ತಿ ಸೇರಿದಂತೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನು ಪದಚ್ಯುತಗೊಳಿಸಿದರು. ರಾಜಕೀಯ ಎದುರಾಳಿಗಳನ್ನು ಬಂಧಿಸಿದರು. ಮಾಧ್ಯಮಗಳನ್ನು ನಿರ್ಬಂಧಿಸಿದರು.

ಇದನ್ನೂ ಓದಿ: Pakistan Crisis: ಸರ್ಕಾರಿ ನೌಕರರ ಸಂಬಳ ಕಡಿತ, ಪೆಟ್ರೋಲ್ ಮೇಲೆ ಸುಂಕ ಹೆಚ್ಚಳ; ಪಾಕಿಸ್ತಾನಕ್ಕೆ ಕಠಿಣ ಷರತ್ತು ವಿಧಿಸಿದ ಐಎಂಎಫ್

2008ರಲ್ಲಿ ಚುನಾವಣೆಯಲ್ಲಿ ನವಾಜ್ ಷರೀಫ್ ಮತ್ತು ಅಸಿಫ್ ಅಲಿ ಜರ್ದಾರಿ ಅವರ ಮೈತ್ರಿಕೂಟ ಗೆದ್ದಿತು. ನಂತರ ಅಧ್ಯಕ್ಷ ಮುಷರಫ್ ಮೇಲೆ ಸಂಸತ್​ನಲ್ಲಿ ವಾಗ್ದಂಡನೆ ಪ್ರಕ್ರಿಯೆ ನಡೆಯುತ್ತದೆ. ಒತ್ತಡ ತಾಳಲಾರದೆ ಮುಷರಫ್ 2008 ಆಗಸ್ಟ್ 18ರಂದು ರಾಜೀನಾಮೆ ನೀಡುತ್ತಾರೆ.

2007ರಲ್ಲಿ ಸಂವಿಧಾನವನ್ನು ಅಮಾನತುಗೊಳಿಸಿದ ಕ್ರಮವು ಮುಷರಫ್​ಗೆ ಕಂಟಕವಾಗಿ ಪರಿಣಮಿಸುತ್ತದೆ. 2014ರಲ್ಲಿ ಮುಷರಫ್ ತಪ್ಪೆಸಗಿದ್ದು ಸಾಬೀತಾಗುತ್ತದೆ. ಅದಾದ ಬಳಿಕ ಅವರಿಗೆ ಅಮೈಲೋಡೋಸಿಸ್ ಎಂಬ ಅಪರೂಪದ ಕಾಯಿಲೆ ಇರುವುದು ಗೊತ್ತಾಗುತ್ತದೆ. 2016ರಿಂದ ಅವರು ದುಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇದು ಮಾರಣಾಂತಿಕ ಕಾಯಿಲೆಯಾದ್ದರಿಂದ ಮುಷರಫ್ ಹೆಚ್ಚು ದಿನ ಬದುಕುವುದಿಲ್ಲ ಎನ್ನುವುದು ಮೊದಲೇ ಖಾತ್ರಿಯಾಗಿತ್ತು.

ಕಾಶ್ಮೀರಕ್ಕೆ ಮುಷರಫ್ 4 ಸೂತ್ರಗಳು

ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಕಂಟಕವಾಗಿರುವ ಜಮ್ಮು ಮತ್ತು ಕಾಶ್ಮೀರ ಸಮಸ್ಯೆಗೆ ಪರ್ವೇಜ್ ಮುಷರಫ್ ನಾಲ್ಕು ಅಂಶಗಳ ಸೂತ್ರವನ್ನು ಹೊಂದಿದ್ದರು. ಅವರ ನಾಲ್ಕು ಅಂಶಗಳು ಈ ಕೆಳಕಂಡಂತಿವೆ:

1) ಜಮ್ಮು ಮತ್ತು ಕಾಶ್ಮೀರದಿಂದ ಎರಡೂ ದೇಶಗಳು ಹಂತ ಹಂತವಾಗಿ ಮಿಲಿಟರಿ ಉಪಸ್ಥಿತಿಯನ್ನು ಹಿಂಪಡೆಯುವುದು

2) ಕಾಶ್ಮೀರದ ಗಡಿಯಲ್ಲಿ ಯಾವುದೇ ಬದಲಾವಣೆ ಮಾಡದಿರುವುದು

3) ಸಂಪೂರ್ಣ ಸ್ವಾತಂತ್ರ್ಯ ಇಲ್ಲದೆಯೇ ಕಾಶ್ಮೀರಕ್ಕೆ ಸ್ವಯಂ ಆಡಳಿತದ ವ್ಯವಸ್ಥೆ

4) ಭಾರತ, ಪಾಕಿಸ್ತಾನ ಮತ್ತು ಕಾಶ್ಮೀರ ಈ ಮೂರು ಪಕ್ಷಗಳು ಜಂಟಿಯಾಗಿ ಜಮ್ಮು ಮತ್ತು ಕಾಶ್ಮೀರದ ಆಡಳಿತದ ಮೇಲುಸ್ತುವಾರಿ ನೋಡಿಕೊಳ್ಳುವುದು.

ಅವರು ಅಧ್ಯಕ್ಷರಾಗಿದ್ದಾಗ ಅಂದಿನ ಭಾರತ ಪ್ರಧಾನಿ ವಾಜಪೇಯಿ ಬಳಿ ಈ ಅಂಶಗಳನ್ನು ಮುಂದಿಟ್ಟಿದ್ದರು. ಅದಕ್ಕೆ ವಾಜಪೇಯಿ ಒಪ್ಪಿದರಾದರೂ ಒಪ್ಪಂದ ಸಾಕಾರಗೊಳ್ಳಲಿಲ್ಲ.

ಕಾಶ್ಮೀರೀ ದಿನದಂದು ಸಾವು

ಭಾರತದ ಆಡಳಿತದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಮತ್ತು ಕಾಶ್ಮೀರಿಗರ ಬಲಿದಾನವನ್ನು ಗೌರವಿಸುವುದಕ್ಕಾಗಿ ಪಾಕಿಸ್ತಾನದಲ್ಲಿ ಫೆಬ್ರುವರಿ 5ರಂದು ಕಾಶ್ಮೀರ್ ಐಕ್ಯತಾ ದಿನ ಅಥವಾ ಕಾಶ್ಮೀರ್ ದಿನ ಎಂದು ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ಕಾಶ್ಮೀರ ವಿಚಾರವನ್ನು ತನ್ನ ರಾಜಕೀಯದಲ್ಲಿ ಪ್ರಮುಖ ದಾಳವಾಗಿಸಿಕೊಂಡು ಬಂದಿದ್ದ ಪರ್ವೇಜ್ ಮುಷರಫ್ ಇದೀಗ ಅದೇ ಕಾಶ್ಮೀರ್ ದಿನದಂದೇ ಕೊನೆಯುಸಿರು ಎಳೆದಿದ್ದಾರೆ.

Published On - 1:37 pm, Sun, 5 February 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್