Russia Ukraine War: ಉಕ್ರೇನ್​ ಮರುವಶಪಡಿಸಿಕೊಂಡ ನಗರದ ಸಾಮೂಹಿಕ ಸಮಾಧಿಯಲ್ಲಿ 440 ಶವಗಳು ಪತ್ತೆ

ಇದು ವಿಮೋಚನೆಗೊಂಡ ಪ್ರದೇಶಗಳಲ್ಲಿ ಪತ್ತೆಯಾದ ಅತಿದೊಡ್ಡ ಸಮಾಧಿ ಸ್ಥಳಗಳ ಪೈಕಿ ಒಂದು.

Russia Ukraine War: ಉಕ್ರೇನ್​ ಮರುವಶಪಡಿಸಿಕೊಂಡ ನಗರದ ಸಾಮೂಹಿಕ ಸಮಾಧಿಯಲ್ಲಿ 440 ಶವಗಳು ಪತ್ತೆ
ರಷ್ಯಾ ಉಕ್ರೇನ್ ಸಂಘರ್ಷದಲ್ಲಿ ಹಲವು ಮಹತ್ವದ ಬೆಳವಣಿಗೆಗಳು ನಡೆದಿವೆ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Sep 16, 2022 | 8:04 AM

ಕೀವ್: ರಷ್ಯಾ ಗಡಿಯಲ್ಲಿ ಇರುವ ಪೂರ್ವ ಉಕ್ರೇನ್​ನ (East Ukraine) ಇಜಿಯಂ ನಗರದಲ್ಲಿ (Izyum City) 440ಕ್ಕೂ ಹೆಚ್ಚು ಶವಗಳಿರುವ ಸಾಮೂಹಿಕ ಸಮಾಧಿಯೊಂದನ್ನು ಉಕ್ರೇನ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇತ್ತೀಚೆಗಷ್ಟೇ ಈ ನಗರವನ್ನು ರಷ್ಯಾದ ಪಡೆಗಳಿಂದ ಉಕ್ರೇನ್ ಮರುವಶಪಡಿಸಿಕೊಂಡಿತ್ತು (Russia Ukriane Conflict). ಸಮಾಧಿಯಲ್ಲಿ ಹೂತು ಹಾಕಿರುವ ಪ್ರತಿ ಶವದ ವಿಧಿವಿಜ್ಞಾನ ತನಿಖೆ ನಡೆಸಲಾಗುವುದು ಎಂದು ಖಾರ್ಕಿವ್ ಪ್ರದೇಶದ ಮುಖ್ಯ ಪೊಲೀಸ್ ತನಿಖಾಧಿಕಾರಿ ಸೆರ್ಹಿ ಬೋಲ್ವಿನೊವ್ ಸ್ಕೈ ನ್ಯೂಸ್​ಗೆ ಸುದ್ದಿಸಂಸ್ಥೆಗೆ ತಿಳಿಸಿದರು.

‘ಇದು ವಿಮೋಚನೆಗೊಂಡ ಪ್ರದೇಶಗಳಲ್ಲಿ ಪತ್ತೆಯಾದ ಅತಿದೊಡ್ಡ ಸಮಾಧಿ ಸ್ಥಳಗಳ ಪೈಕಿ ಒಂದು. ಒಂದೇ ಸ್ಥಳದಲ್ಲಿ 440 ಶವಗಳನ್ನು ಹೂಳಲಾಗಿದೆ. ಫಿರಂಗಿದಳದ ಬೆಂಕಿಯಿಂದಾಗಿ ಕೆಲವರು ಸತ್ತಿದ್ದರೆ, ವಾಯುದಾಳಿಯಿಂದಾಗಿ ಇನ್ನಷ್ಟು ಜನರು ಸಾವನ್ನಪ್ಪಿರಬಹುದು’ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ವಾರಾಂತ್ಯದಲ್ಲಿ ಇಜಿಯಂನಲ್ಲಿದ್ದ ಸಾವಿರಾರು ರಷ್ಯನ್ ಸೈನಿಕರು ಪಲಾಯನ ಮಾಡಿದ್ದರು.

ಇಷ್ಟೊ ದೊಡ್ಡಮಟ್ಟದ ಸಾವುನೋವಿಗೆ ರಷ್ಯಾ ನೇರ ಹೊಣೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಹೇಳಿದ್ದಾರೆ. ರಾಜಧಾನಿ ಕೀವ್ ಹೊರವಲಯದಲ್ಲಿ ಬುಚಾ ನಗರದಲ್ಲಿ ಕಳೆದ ಫೆಬ್ರುವರಿ ಅಂತ್ಯದಲ್ಲಿ ರಷ್ಯಾ ಪಡೆಗಳು ಆಕ್ರಮಣ ಮಾಡಿದ ಆರಂಭಿಕ ಹಂತಗಳಲ್ಲಿ ಆಗಿದ್ದ ನರಮೇಧಕ್ಕೆ ಇಜಿಯಂನ ಸಾಮೂಹಿಕ ಸಮಾಧಿಯನ್ನು ಅವರು ಹೋಲಿಸಿದ್ದಾರೆ.

‘ರಷ್ಯಾ ದೇಶವು ನಾಗರಿಕರನ್ನು ಗುರಿಯಾಗಿಸಿಕೊಂಡು ಯುದ್ಧಾಪರಾಧಗಳನ್ನು ಮಾಡುತ್ತಿದೆ. ಹೆಜ್ಜೆಯಿಟ್ಟ ಸ್ಥಳದಲ್ಲೆಲ್ಲಾ ಸಾವಿನ ಛಾಯೆ ಬಿಟ್ಟು ಹೋಗುತ್ತಿದೆ. ಇದಕ್ಕೆ ರಷ್ಯಾ ತಾನೇ ಸ್ವತಃ ಜವಾಬ್ದಾರಿ ಹೊರಬೇಕು’ ಎಂದು ಝೆಲೆನ್​ಸ್ಕಿ ಆಗ್ರಹಿಸಿದರು. ‘ನಾಗರಿಕನ್ನು ಕೊಂದಿಲ್ಲ’ ಎಂದು ರಷ್ಯಾ ಈ ಮೊದಲು ಹಲವು ಬಾರಿ ಸ್ಪಷ್ಟನೆ ನೀಡಿತ್ತು.

ಉಕ್ರೇನ್​ಗೆ 6 ಕೋಟಿ ಡಾಲರ್ ಶಸ್ತ್ರಾಸ್ತ್ರ ಪ್ಯಾಕೇಜ್ ಘೋಷಿಸಿದ ಅಮೆರಿಕ

ವಾಷಿಂಗ್​ಟನ್: ರಷ್ಯಾದ ಆಕ್ರಮಣದ ವಿರುದ್ಧ ದಿಟ್ಟ ಪ್ರತಿದಾಳಿ ನಡೆಸುತ್ತಿರುವ ಉಕ್ರೇನ್​ ನೆರವಿಗೆ ಮತ್ತೆ ಅಮೆರಿಕ ಧಾವಿಸಿದೆ. ಉಕ್ರೇನ್​ಗೆ ಹೆಚ್ಚುವರಿ ಮಿಲಿಟರಿ ನೆರವು ಒದಗಿಸಲು 6 ಕೋಟಿ ಡಾಲರ್​ ಮೊತ್ತದ ಹೊಸ ಪ್ಯಾಕೇಜ್ ಅನ್ನು ಅಮೆರಿಕದ ಶ್ವೇತಭವನ ಗುರುವಾರ (ಸೆ 15) ಗುರುವಾರ ಅನುಮೋದಿಸಿದೆ.

ಉಕ್ರೇನ್​ಗೆ ಅಗತ್ಯ ಯುದ್ಧೋಪಕರಣಗಳು, ಸೇವೆ ಮತ್ತು ಸೈನಿಕ ತರಬೇತಿಯನ್ನು ಈ ಮೊತ್ತದಲ್ಲಿ ಒದಗಿಸಲಾಗುವುದು. ಉಕ್ರೇನ್​ಗೆ ಒದಗಿಸಲಿರುವ ಹೊಸ ಯುದ್ಧೋಪಕರಣಗಳ ಬಗ್ಗೆ ಅಮೆರಿಕ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಯುದ್ಧವು ಆರಂಭವಾದ ನಂತರ ಈವರೆಗೆ ಅಮೆರಿಕ 15 ಶತಕೋಟಿ ಡಾಲರ್​ಗೂ ಹೆಚ್ಚಿನ ಮೊತ್ತದ ಸೇನಾ ನೆರವು ನೀಡಿದೆ.

ಉಕ್ರೇನ್ ಸೇನೆಯು ರಷ್ಯಾದ ಪಡೆಗಳ ವಿರುದ್ಧ ಚುರುಕಿನ ಪ್ರತಿದಾಳಿ ಆರಂಭಿಸಿ ಸಾವಿರಾರು ಕಿಲೋಮೀಟರ್ ಪ್ರದೇಶವನ್ನು ಮರುವಶಪಡಿಸಿಕೊಂಡಿದೆ. ಈ ಬೆಳವಣಿಗೆಯ ನಂತರ ಅಮೆರಿಕ ಮತ್ತೊಂದು ಸುತ್ತಿನ ನೆರವು ಒದಗಿಸಲು ಮುಂದಾಗಿರುವುದು ಮಹತ್ವ ಪಡೆದಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada