AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನ ಮುರಿದುಬಿತ್ತು ಎಂದೇ ಭಾವಿಸಿದ್ದೆ: ಸಹ-ಪೈಲಟ್‌ನಿಂದ ಮಾರಣಾಂತಿಕ ಹಲ್ಲೆ, ಸಾವಿನ ದವಡೆಯಿಂದ ಪಾರಾದ ಕ್ಯಾಪ್ಟನ್ ಅನುಭವ ಕಥನ

ಫ್ಲೈದುಬೈ ವಿಮಾನದಲ್ಲಿ ಸಹ-ಪೈಲಟ್‌ನಿಂದ ತೀವ್ರ ಹಲ್ಲೆಗೊಳಗಾದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ತಮ್ಮ ಭೀಕರ ಅನುಭವ ಹಂಚಿಕೊಂಡಿದ್ದಾರೆ. ವಿಮಾನ 17,000 ಅಡಿ ಕುಸಿಯುತ್ತಿದ್ದಾಗಲೂ ಧೈರ್ಯದಿಂದ ಹೋರಾಡಿ 170ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿದರು. ಇದು 9/11 ಮಾದರಿಯ ಭಯೋತ್ಪಾದಕ ಸಂಚು ಎಂದು ತನಿಖಾ ಸಂಸ್ಥೆಗಳು ಹೇಳಿವೆ. ಗುಣಮುಖರಾಗಿ ಮತ್ತೆ ಹಾರಲು ಸ್ಮಿತ್ ಕಾತುರರಾಗಿದ್ದಾರೆ.

ವಿಮಾನ ಮುರಿದುಬಿತ್ತು ಎಂದೇ ಭಾವಿಸಿದ್ದೆ: ಸಹ-ಪೈಲಟ್‌ನಿಂದ ಮಾರಣಾಂತಿಕ ಹಲ್ಲೆ, ಸಾವಿನ ದವಡೆಯಿಂದ ಪಾರಾದ ಕ್ಯಾಪ್ಟನ್ ಅನುಭವ ಕಥನ
ಸ್ಮಿತ್ Image Credit source: PTI
ನಯನಾ ರಾಜೀವ್
|

Updated on: Oct 19, 2026 | 10:22 AM

Share

ಅಬುಧಾಬಿ, ಅಕ್ಟೋಬರ್ 19: ಸೆಪ್ಟೆಂಬರ್ 30 ರಂದು ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ಬೋಯಿಂಗ್ 737 ವಿಮಾನದಲ್ಲಿ (FZ1073) ಸಹ-ಪೈಲಟ್‌ನಿಂದ ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡಿದ್ದ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚರ್, ತಾವು ಎದುರಿಸಿದ ಕಷ್ಟದ ಕ್ಷಣಗಳನ್ನು ಬಹಿರಂಗಪಡಿಸಿದ್ದಾರೆ. ಅಬುಧಾಬಿಯ ಜಾಯೆದ್ ಮಿಲಿಟರಿ ಆಸ್ಪತ್ರೆಯಲ್ಲಿ ಗುಣಮುಖರಾಗುತ್ತಿರುವ ಅವರು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ಸಾವಿನಂಚಿನಿಂದ ತಾವೂ ಪಾರಾಗಿ, ವಿಮಾನದಲ್ಲಿದ್ದ 170ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿದ ರೋಚಕ ಕ್ಷಣಗಳನ್ನು ವಿವರಿಸಿದ್ದಾರೆ.

ಪ್ರಾರ್ಥನೆಯ ನೆಪದಲ್ಲಿ ದಾಳಿ

ವಿಮಾನದಲ್ಲಿದ್ದ ಇನ್ನೊಬ್ಬ ಆಫ್-ಡ್ಯೂಟಿ ಕ್ಯಾಪ್ಟನ್ ಕಾಕ್‌ಪಿಟ್‌ನಿಂದ ಹೊರಹೋದ ನಂತರ, ಸಹ-ಪೈಲಟ್ ಪ್ರಾರ್ಥನೆ ಮಾಡುವುದಾಗಿ ಹೇಳಿ ನನ್ನ ಸೀಟಿನ ಹಿಂಭಾಗದಲ್ಲಿ ಕುಳಿತ. ನಾನು ಲ್ಯಾಂಡಿಂಗ್ ವಿವರಗಳನ್ನು ಕಂಪ್ಯೂಟರ್‌ನಲ್ಲಿ ಪರಿಶೀಲಿಸುತ್ತಿದ್ದಾಗ, ಏಕಾಏಕಿ ತಲೆಯ ಹಿಂಭಾಗಕ್ಕೆ ಕೊಡಲಿಯಂತಹ ಆಯುಧದಿಂದ ಬಲವಾದ ಹೊಡೆತ ಬಿದ್ದಿತು. ಮೊದಲಿಗೆ ವಿಮಾನದ ಮೇಲ್ಛಾವಣಿಯೇ ತಲೆಯ ಮೇಲೆ ಕುಸಿಯಿತೇನೋ ಎಂದು ಭಾವಿಸಿದೆ. ಆದರೆ ಹೊಡೆತಗಳು ನಿಲ್ಲದಿದ್ದಾಗ, ನನ್ನ ಸಹೋದ್ಯೋಗಿಯೇ ನನ್ನ ಮೇಲೆ ದಾಳಿ ಮಾಡುತ್ತಿರುವುದು ತಿಳಿಯಿತು ಎಂದಿದ್ದಾರೆ.

ದೃಷ್ಟಿ ಮಂದ, ಬಾಗಿಲು ತೆರೆಯಲು ಪರದಾಟ

ಹೊಡೆತಗಳಿಂದಾಗಿ ತಲೆಗೆ ತೀವ್ರ ರಕ್ತಸ್ರಾವವಾಗಿ ಕಣ್ಣುಗಳು ಕತ್ತಲೆಯಾದವು. ತಕ್ಷಣವೇ ಸೀಟ್‌ಬೆಲ್ಟ್ ಕಳಚಿ, ಜೀವ ಉಳಿಸಿಕೊಳ್ಳಲು ಪ್ರತಿರೋಧ ತೋರಿದರು. ಪ್ರಜ್ಞೆ ತಪ್ಪುವ ಮುನ್ನವೇ ಹೇಗೋ ಮಾಡಿ ಕಾಕ್‌ಪಿಟ್ ಬಾಗಿಲು ತೆರೆಯುವ ಸ್ವಿಚ್ ಒತ್ತಿ ಹೊರಗಿದ್ದ ಸಿಬ್ಬಂದಿಗೆ ಕೂಗಿ ಕರೆದಿದ್ದರು.

ಇದನ್ನೂ ಓದಿ: ಸ್ಮಿತ್ ಮಚ್ಚರ್ ಮೇಲೆ ದಾಳಿ ಬಳಿಕ ಸಹ-ಪೈಲಟ್‌ನ ಆಘಾತಕಾರಿ ಮಾತು: ನೆತನ್ಯಾಹು ಹೇಳಿದ್ದೇನು?

17,000 ಅಡಿ ಕೆಳಕ್ಕೆ ಧುಮುಕಿದ ವಿಮಾನ

ದಾಳಿಕೋರ ಸಹ-ಪೈಲಟ್ ವಿಮಾನವನ್ನು ದಿಢೀರನೆ ಕೆಳಮುಖವಾಗಿ ತಿರುಗಿಸಿದ್ದರಿಂದ ಎಂಜಿನ್ ಸದ್ದು ಕಡಿಮೆಯಾಗಿ ವಿಮಾನವು ಕೇವಲ ಒಂದು ನಿಮಿಷದಲ್ಲಿ ಸುಮಾರು 17,000 ಅಡಿ ಪಾತಾಳಕ್ಕೆ ಕುಸಿಯಿತು. ಇನ್ನು ನಾವು ಬದುಕುಳಿಯುವುದಿಲ್ಲ ಎಂದು ಆ ಕ್ಷಣದಲ್ಲಿ ನನಗನ್ನಿಸಿತ್ತು. ಆದರೆ ನನ್ನ ಪುತ್ರ, ಪುತ್ರಿಯನ್ನು ನೆನಪಿಸಿಕೊಂಡು ಕೊನೆಯ ಉಸಿರಿರುವವರೆಗೂ ಹೋರಾಡಲು ನಿರ್ಧರಿಸಿದೆ ಎಂದು ಸ್ಮಿತ್ ನೆನಪಿಸಿಕೊಂಡಿದ್ದಾರೆ.

ಸಿಬ್ಬಂದಿ ಮತ್ತು ಪ್ರಯಾಣಿಕರ ಸಾಹಸ:

ಬಾಗಿಲು ತೆರೆದ ಕೂಡಲೇ ಕಾಕ್‌ಪಿಟ್‌ಗೆ ಧಾವಿಸಿದ ಪ್ರಯಾಣಿಕರು ಮತ್ತು ಕ್ಯಾಬಿನ್ ಸಿಬ್ಬಂದಿ ದಾಳಿಕೋರನನ್ನು ನಿಯಂತ್ರಿಸಿದರು. ವಿಮಾನದಲ್ಲಿದ್ದ ಮತ್ತೊಬ್ಬ ಆಫ್-ಡ್ಯೂಟಿ ಕ್ಯಾಪ್ಟನ್ ವಿಮಾನದ ನಿಯಂತ್ರಣವನ್ನು ತೆಗೆದುಕೊಂಡು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದರು.

ಹಾರಾಟದ ಮೇಲಿನ ನನ್ನ ಪ್ರೀತಿ ಕಡಿಮೆಯಾಗಿಲ್ಲ

ಆಸ್ಪತ್ರೆಯ ಹಾಸಿಗೆಯಿಂದ ನಗುಮುಖದಿಂದಲೇ ಮಾತನಾಡಿದ ಕ್ಯಾಪ್ಟನ್ ಸ್ಮಿತ್, ನನ್ನ ಪ್ರಾಣ ಉಳಿಸಿದ ಸಿಬ್ಬಂದಿ, ಪ್ರಯಾಣಿಕರು ಹಾಗೂ ಅತ್ಯುತ್ತಮ ಚಿಕಿತ್ಸೆ ನೀಡಿದ ಯುಎಇ ಸರ್ಕಾರಕ್ಕೆ ನಾನು ಸದಾ ಚಿರಋಣಿ. ಇಷ್ಟೆಲ್ಲಾ ಭೀಕರ ಅನುಭವವಾದರೂ ವಾಯುಯಾನದ ಮೇಲಿನ ನನ್ನ ಪ್ರೀತಿ ಸ್ವಲ್ಪವೂ ಕಡಿಮೆಯಾಗಿಲ್ಲ. ಆದಷ್ಟು ಬೇಗ ಸಂಪೂರ್ಣ ಗುಣಮುಖನಾಗಿ, ಮತ್ತೆ ಪೈಲಟ್ ಯೂನಿಫಾರ್ಮ್ ಧರಿಸಿ ಆಕಾಶಕ್ಕೆ ಹಾರಲು ಕಾತರನಾಗಿದ್ದೇನೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

ಅಪಹರಣ ಮತ್ತು ಆತ್ಮಹತ್ಯಾ ದಾಳಿಯ ಯತ್ನ: ತನಿಖಾ ಸಂಸ್ಥೆಗಳ ಪ್ರಕಾರ, ದಾಳಿ ನಡೆಸಿದ ಒಮಾನ್ ಮೂಲದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ, ವಿಮಾನವನ್ನು ಅಪಹರಿಸಿ ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದ ಮೇಲೆ ಅಪ್ಪಳಿಸಿ 9/11 ಮಾದರಿಯ ಆತ್ಮಹತ್ಯಾ ದಾಳಿ ನಡೆಸಲು ಸಂಚು ರೂಪಿಸಿದ್ದ ಎನ್ನಲಾಗಿದೆ.

ಈ ಭಯೋತ್ಪಾದನಾ ಸಂಚಿಗೆ ಸಂಬಂಧಿಸಿದಂತೆ ಯುಎಇ ಪೊಲೀಸರು ಈಗಾಗಲೇ ತನಿಖೆ ತೀವ್ರಗೊಳಿಸಿದ್ದು, ಈ ಸಂಚಿನಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಇತರ ಇಬ್ಬರು ಪೈಲಟ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
ನಮಗೆ ತಮಿಳುನಾಡು ಅನುಮತಿ ಬೇಡ, ಸಹಕಾರ ಬೇಕಷ್ಟೇ: ವಿಜಯ್​ಗೆ ಡಿಕೆಶಿ ಕೌಂಟರ್
ನಮಗೆ ತಮಿಳುನಾಡು ಅನುಮತಿ ಬೇಡ, ಸಹಕಾರ ಬೇಕಷ್ಟೇ: ವಿಜಯ್​ಗೆ ಡಿಕೆಶಿ ಕೌಂಟರ್
ಹೆಚ್​​ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ
ಹೆಚ್​​ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಹಾಸನಾಂಬೆ ದರ್ಶನ ಪಡೆದ ಹೆಚ್​ಡಿಕೆ ದಂಪತಿ
ಹಾಸನಾಂಬೆ ದರ್ಶನ ಪಡೆದ ಹೆಚ್​ಡಿಕೆ ದಂಪತಿ
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ