ಫ್ಲೈದುಬೈ ವಿಮಾನದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ; ತನಿಖೆ ಕೈಗೆತ್ತಿಕೊಂಡ ಎನ್‌ಐಎ
ಸೆಪ್ಟೆಂಬರ್ 30ರಂದು ದುಬೈನಿಂದ ಹೊರಟಿದ್ದ 'ಫ್ಲೈದುಬೈ' ವಿಮಾನದ ಕಾಕ್‌ಪಿಟ್‌ನಲ್ಲಿ ಓಮನ್ ದೇಶದ ಕೋ-ಪೈಲಟ್ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ಹಲ್ಲೆ ನಡೆಸಿ, ವಿಮಾನವನ್ನು ಅಪಹರಿಸಲು ಅಥವಾ ಪತನಗೊಳಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಎಫ್‌ಐಆರ್ ದಾಖಲಿಸಿದೆ. ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಎನ್‌ಐಎ ಈ ತನಿಖೆಯನ್ನು ಕೈಗೆತ್ತಿಕೊಂಡಿದೆ. ಸೆಪ್ಟೆಂಬರ್ 30ರಂದು 174 ಪ್ರಯಾಣಿಕರು ಮತ್ತು 6 ಜನ ಸಿಬ್ಬಂದಿಯೊಂದಿಗೆ ದುಬೈನಿಂದ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ಈ ಘಟನೆ ನಡೆದಿತ್ತು. ಅಬುಧಾಬಿಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ನವದೆಹಲಿ, ಅಕ್ಟೋಬರ್ 10: ಕಳೆದ ತಿಂಗಳು ಫ್ಲೈದುಬೈ ಪ್ಯಾಸೆಂಜರ್ ವಿಮಾನದ ಕಾಕ್‌ಪಿಟ್‌ನಲ್ಲಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ನಡೆದ ಹಲ್ಲೆಯ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕೃತವಾಗಿ ಕೈಗೆತ್ತಿಕೊಂಡಿದೆ. ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿ ಓಮನ್ ಮೂಲದ ಕೋ-ಪೈಲಟ್ ಭಾರತೀಯ ಪೈಲಟ್ ಮೇಲೆ ಹಲ್ಲೆ ನಡೆಸಿದ್ದರು. ತಾವು ಜೀವನ್ಮರಣದ ನಡುವೆ ಹೋರಾಡುತ್ತಿದ್ದರೂ 174 ಪ್ರಯಾಣಿಕರ ಜೀವ ಕಾಪಾಡಿದ್ದ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ ಜಗತ್ತಿನಾದ್ಯಂತ ಪ್ರಶಂಸೆ ವ್ಯಕ್ತವಾಗಿತ್ತು.
2016ರ ಅಕ್ಟೋಬರ್ 9ರಂದು ವಿಮಾನ ಅಪಹರಣ ತಡೆ ಕಾಯ್ದೆ ಮತ್ತು ಕಠಿಣ ಕಾನೂನುಬಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ದಾಳಿಯು ವಿಮಾನವನ್ನು ಅಪಹರಿಸುವ ಅಥವಾ ಪತನಗೊಳಿಸುವ ಸ್ಪಷ್ಟ ಯತ್ನವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫ್ಲೈದುಬೈ ವಿಮಾನದಲ್ಲಿ ಅಂದು ನಡೆದಿದ್ದೇನು?:
ಎನ್‌ಐಎ ದಾಖಲಿಸಿರುವ ಎಫ್‌ಐಆರ್ ಪ್ರಕಾರ, ಸೆಪ್ಟೆಂಬರ್ 30ರಂದು ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ಎಫ್‌ಜೆ1073 ವಿಮಾನದಲ್ಲಿ ಈ ಘಟನೆ ನಡೆದಿದೆ. ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ಕಾಕ್‌ಪಿಟ್ ಒಳಗೆಯೇ ಕೋ-ಪೈಲಟ್ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದರು.
NIA registers case to probe mid-air cockpit attack on Captain Smit Machchhar aboard Flydubai flight: NIA Officials
— ANI (@ANI) October 10, 2026
ಇದು ವಿಮಾನವನ್ನು ಅಪಹರಿಸುವ ಅಥವಾ ಅಪಘಾತಕ್ಕೀಡು ಮಾಡುವ ಗಂಭೀರ ಯತ್ನವಾಗಿದೆ ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ. ಈ ಘಟನೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರೊಂದಿಗೆ ಮಾತನಾಡಿದ್ದರು.
ಯಾರು ಈ ಸ್ಮಿತ್ ಮಚ್ಚರ್?:
39 ವರ್ಷ ವಯಸ್ಸಿನ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ದುಬೈನಲ್ಲಿ ಫ್ಲೈದುಬೈ ಸಂಸ್ಥೆಯನ್ನು ಸೇರಿಕೊಂಡಿದ್ದು, ತಮ್ಮ ಇಬ್ಬರು ಮಕ್ಕಳೊಂದಿಗೆ ಅಲ್ಲಿ ವಾಸಿಸುತ್ತಿದ್ದಾರೆ. ಮುಂಬೈನ ಘಾಟ್ಕೋಪರ್ ಪೂರ್ವದಲ್ಲಿ ವ್ಯಾಪಾರ ಹಿನ್ನೆಲೆಯುಳ್ಳ ಕುಟುಂಬದಲ್ಲಿ ಬೆಳೆದ ಅವರು, 2011ರಲ್ಲಿ ಸ್ಪೈಸ್‌ಜೆಟ್ ಸೇರಿದ್ದಲ್ಲದೆ 11 ವರ್ಷಗಳ ಕಾಲ ಅಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸಿದ್ದರು. ಅವರ ಕುಟುಂಬವು ಮೂಲತಃ ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಸಾವರ್ಕುಂಡ್ಲಾದವರು. ಆದರೆ ಸ್ಮಿತ್ ಮಚ್ಚರ್ ಜನಿಸುವ ಮುನ್ನವೇ ಅವರ ತಂದೆ ಮುಂಬೈಗೆ ಬಂದ ನೆಲೆಸಿದ್ದರು. ಅವರ ತಂದೆ ಉಪೇಂದ್ರ ಮಚ್ಚರ್ ಮತ್ತು ತಾಯಿ ಗೀತಾ ಮಚ್ಚರ್. ಸ್ಮಿತ್ ಮಚ್ಚರ್ ಅವರ ಪತ್ನಿ ಸೋನಲ್. ಈ ದಂಪತಿಗೆ ಐದು ವರ್ಷದ ಜೀವಾ ಎಂಬ ಮಗಳು ಮತ್ತು ಎರಡು ವರ್ಷದ ಕೃಶ್ ಎಂಬ ಮಗನಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




