ಸ್ಟಾಲಿನ್ ಕಾಲದ ಕೃತಕ ಕ್ಷಾಮ ನೆನಪಿಸಿಕೊಂಡು ಬಡ ದೇಶಗಳಿಗೆ ಆಹಾರ ಪೂರೈಸಲು ಮುಂದಾದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ

‘ಒಮ್ಮೆ ಅವರು ಹಸಿವಿನಿಂದ ನಮ್ಮನ್ನು ಮುಗಿಸಬೇಕು ಎಂದುಕೊಂಡಿದ್ದರು. ಈಗ ಕತ್ತಲು ಮತ್ತು ಚಳಿಯಲ್ಲಿ ನಾವೆಲ್ಲರೂ ಸಾಯಬೇಕು ಎಂದು ಬಯಸುತ್ತಿದ್ದಾರೆ’ ಎಂದು ಝೆಲೆನ್​ಸ್ಕಿ ಹೇಳಿದರು.

ಸ್ಟಾಲಿನ್ ಕಾಲದ ಕೃತಕ ಕ್ಷಾಮ ನೆನಪಿಸಿಕೊಂಡು ಬಡ ದೇಶಗಳಿಗೆ ಆಹಾರ ಪೂರೈಸಲು ಮುಂದಾದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ
ರಷ್ಯಾ-ಉಕ್ರೇನ್ ಯುದ್ಧದಿಂದ ಈಜಿಪ್ಟ್ ಸೇರಿದಂತೆ ಹಲವು ದೇಶಗಳು ಸಂಕಷ್ಟಕ್ಕೆ ಸಿಲುಕಿವೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 27, 2022 | 8:09 AM

ಕೀವ್: ರಷ್ಯಾ ಅದೆಷ್ಟು ಬಾರಿ ಬೇಕಾದರೂ ನಮ್ಮ ಮೇಲೆ ದಾಳಿ ಮಾಡಬಹುದು. ನಾವು ಅದನ್ನು ಎದುರಿಸುತ್ತೇವೆ, ಹಿಮ್ಮೆಟ್ಟಿಸುತ್ತೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ದೇಶದ ಜನರಿಗೆ ಭರವಸೆ ನೀಡಿದರು. ಸೋವಿಯತ್ ನಾಯಕ ಜೊಸೆಫ್ ಸ್ಟಾಲಿನ್ ಕಾಲದಲ್ಲಿ ಕಾಣಿಸಿಕೊಂಡಿದ್ದ ಕೃತಕ ಕ್ಷಾಮದಿಂದ ಉಕ್ರೇನ್​ನ ಲಕ್ಷಾಂತರ ಜನರು ಮೃತಪಟ್ಟ ದುರಂತದ 90ನೇ ವಾರ್ಷಿಕೋತ್ಸವದಲ್ಲಿ ಝೆಲೆನ್​ಸ್ಕಿ ಮಾತನಾಡಿದರು. ‘ಒಮ್ಮೆ ಅವರು ಹಸಿವಿನಿಂದ ನಮ್ಮನ್ನು ಮುಗಿಸಬೇಕು ಎಂದುಕೊಂಡಿದ್ದರು. ಈಗ ಕತ್ತಲು ಮತ್ತು ಚಳಿಯಲ್ಲಿ ನಾವೆಲ್ಲರೂ ಸಾಯಬೇಕು ಎಂದು ಬಯಸುತ್ತಿದ್ದಾರೆ. ಆದರೆ ನಾವೆಂದಿಗೂ ಹಿಮ್ಮೆಟ್ಟಲಾರೆವು. ಅದೆಷ್ಟು ಬಾರಿ ದಾಳಿ ಮಾಡಿದರೂ ನಾವು ಹೋರಾಟ ನಿಲ್ಲಿಸುವುದಿಲ್ಲ’ ಎಂದು ಹೇಳಿದರು. ಈ ಸಂಬಂಧ ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಿರುವ ವಿಡಿಯೊ ಸಂದೇಶವನ್ನು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಕ್ಷಾಮ ಮತ್ತು ಬರಗಾಲದ ಕಾರಣದಿಂದ ಆಹಾರ ಧಾನ್ಯಗಳ ಕೊರತೆ ಎದುರಿಸುತ್ತಿರುವ ದೇಶಗಳಿಗೆ ನೆರವಾಗಲು ಉಕ್ರೇನ್ ಸಿದ್ಧವಾಗಿದೆ. ಇಥಿಯೋಪಿಯಾ, ಸುಡಾನ್, ದಕ್ಷಿಣ ಸುಡಾನ್, ಸೊಮಾಲಿಯಾ ಮತ್ತು ಯೆಮೆನ್ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳಿಗೆ 15 ಕೋಟಿ ಅಮೆರಿಕನ್ ಡಾಲರ್ ಮೊತ್ತದಷ್ಟು ಆಹಾರ ಧಾನ್ಯಗಳನ್ನು ರಫ್ತು ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ. ನಮ್ಮ ಬಂದರುಗಳಿಂದ 60 ಹಡಗುಗಳನ್ನು ಕಳಿಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಹೇಳಿದ್ದಾರೆ.

ಇದೇ ವೇಳೆ ಉಕ್ರೇನ್​ಗೆ ಬೆಂಬಲ ಸೂಚಿಸುತ್ತಿರುವ ಹಂಗೇರಿ, ಬೆಲ್ಜಿಯಂ, ಪೊಲೆಂಡ್, ಲಿಥುಯೇನಿಯಾ, ಜರ್ಮನಿ ಮತ್ತು ಫ್ರಾನ್ಸ್​ ದೇಶಗಳ ಸರ್ಕಾರಗಳ ಮುಖ್ಯಸ್ಥರು ಮಾತನಾಡಿದರು. ಉಕ್ರೇನ್​ ಮೇಲಿನ ರಷ್ಯಾ ದಾಳಿ ಆರಂಭವಾದ ನಂತರ ಜಾಗತಿಕ ಆಹಾರ ಬಿಕ್ಕಟ್ಟು ಕಾಣಿಸಿಕೊಂಡಿದ್ದು, ಉಕ್ರೇನ್ ಬಂದರುಗಳಿಂದ ರಫ್ತಾಗಿದ್ದ ಆಹಾರ ಧಾನ್ಯಗಳ ಪ್ರಮಾಣವು ಸುಮಾರು 1 ಕೋಟಿ ಟನ್​ಗಳಷ್ಟು ಕಡಿಮೆಯಾಗಿದೆ. ಇದರಿಂದ ಹಲವು ದೇಶಗಳು ಸಂಕಷ್ಟಕ್ಕೆ ಸಿಲುಕಿವೆ.

ಯುದ್ಧ ಕೈದಿಗಳ ವಿನಿಮಯ

ರಷ್ಯಾ ಮತ್ತು ಉಕ್ರೇನ್ ನಡುವೆ ಮತ್ತೊಂದು ಸುತ್ತಿನ ಯುದ್ಧಕೈದಿಗಳ ವಿನಿಮಯ ನಡೆಯಿತು. ಇತ್ತೀಚೆಗಿನ ಬೆಳವಣಿಗೆಯಲ್ಲಿ ಎರಡೂ ದೇಶಗಳು ತಲಾ 50 ಯುದ್ಧಕೈದಿಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡವು. ಕಳೆದ ಫೆಬ್ರುವರಿಯಿಂದ ನಡೆಯುತ್ತಿರು ಸಂಘರ್ಷದಲ್ಲಿ ಈವರೆಗೆ 1,000ಕ್ಕೂ ಹೆಚ್ಚು ಯುದ್ಧಕೈದಿಗಳನ್ನು ಎರಡೂ ದೇಶಗಳು ಪರಸ್ಪರ ವಿನಿಮಯ ಮಾಡಿಕೊಂಡಿವೆ.

ತೀವ್ರಗೊಂಡ ಚಳಿಗಾಲ, ಕರೆಂಟ್-ನೀರು ಬಂದ್

ರಷ್ಯಾದ ಸತತ ಕ್ಷಿಪಣಿ ದಾಳಿಗಳಿಂದ ಉಕ್ರೇನ್​ನಲ್ಲಿ ವಿದ್ಯುತ್ ಉತ್ಪಾದನೆ ಮತ್ತು ವಿತರಣೆ ಅಸ್ತವ್ಯಸ್ತಗೊಂಡಿದೆ. ಚಳಿಗಾಳಿ ತೀವ್ರಗೊಂಡಿದ್ದರೂ ಹೀಟರ್​ಗಳನ್ನು ಬಳಸಲು ಜನರಿಗೆ ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ನೀರು ಪೂರೈಕೆಯೂ ಸಾಧ್ಯವಾಗುತ್ತಿಲ್ಲ. ವಿದ್ಯುತ್ ವಿತರಣೆ ಸುಧಾರಿಸದಿದ್ದರೆ ಇದೇ ಕಾರಣಕ್ಕೆ ಸಾಯುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

Published On - 8:09 am, Sun, 27 November 22