
ಬೆಂಗಳೂರು, ಸೆಪ್ಟೆಂಬರ್ 6: ಭಾರತದಲ್ಲಿನ ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್ ಭಾನುವಾರ ಬೆಂಗಳೂರಿನಲ್ಲಿ ನಡೆದ ಅಮೆರಿಕ ರಾಯಭಾರ ಕಚೇರಿಯ ರಾಷ್ಟ್ರೀಯ ದಿನದ ಸ್ವಾಗತ ಸಮಾರಂಭದಲ್ಲಿ ಅಮೆರಿಕದ ಸ್ವಾತಂತ್ರ್ಯದ 250ನೇ ವರ್ಷಾಚರಣೆಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಅವರು ಟ್ರಸ್ಟ್ (TRUST) ಫೆಲೋಶಿಪ್‌ಗೆ ಚಾಲನೆ ನೀಡಿದರು. ಹಾಗೇ, ಅಮೆರಿಕ-ಭಾರತ ಸಹಭಾಗಿತ್ವದ ಮೂಲಕ ಅಮೆರಿಕದ ಉದ್ಯೋಗಿಗಳು ಮತ್ತು ಉದ್ಯಮಗಳಿಗೆ ಸ್ಪಷ್ಟ ಹಾಗೂ ನೇರ ಪ್ರಯೋಜನಗಳನ್ನು ಒದಗಿಸುವ ಟ್ರಂಪ್ ಆಡಳಿತದ ಬದ್ಧತೆಯನ್ನು ಪುನರುಚ್ಚರಿಸಿದರು.
ಈ ವೇಳೆ ಅತಿಥಿಗಳನ್ನುದ್ದೇಶಿಸಿ ಮಾತನಾಡಿದ ರಾಯಭಾರಿ ಗೋರ್, ಪ್ರತಿ ವಾರವೂ ನಮ್ಮ ರಾಯಭಾರ ಕಚೇರಿ ಸ್ಪಷ್ಟ ಹಾಗೂ ನೈಜ ಫಲಿತಾಂಶಗಳನ್ನು ನೀಡಲು ಶ್ರಮಿಸುತ್ತಿದೆ. ಭಾರತದಲ್ಲಿ ನಿಜವಾಗಿಯೂ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಸಾಕಾರಗೊಳಿಸಿ, ನೈಜ ಫಲಿತಾಂಶಗಳನ್ನು ನೀಡಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.
ಟ್ರಸ್ಟ್ (TRUST) ಫೆಲೋಶಿಪ್‌ಗೆ ಚಾಲನೆ:
ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್ ಈ ಸಂದರ್ಭದಲ್ಲಿ TRUST ಫೆಲೋಶಿಪ್‌ಗೆ ಚಾಲನೆ ನೀಡಿದರು. ಇದು ಕೃತಕ ಬುದ್ಧಿಮತ್ತೆ (ಎಐ), ಸೆಮಿಕಂಡಕ್ಟರ್‌ಗಳು, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಜೈವಿಕ ತಂತ್ರಜ್ಞಾನ ಸೇರಿದಂತೆ ಮಹತ್ವದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅತ್ಯುನ್ನತ ಸಂಶೋಧನೆ ನಡೆಸಲು ಅಮೆರಿಕ ಮತ್ತು ಭಾರತದ ಪ್ರಮುಖ ಸಂಶೋಧಕರನ್ನು ಒಗ್ಗೂಡಿಸುವ ಹೊಸ ಸಾರ್ವಜನಿಕ-ಖಾಸಗಿ ಸಹಭಾಗಿತ್ವವಾಗಿದೆ.
ಇದನ್ನೂ ಓದಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ, ತಾತ್ವಿಕವಾಗಿ ಅಂತಿಮ; ಕಾನೂನು ಅಂಶಗಳು ಅಂತಿಮಗೊಳ್ಳುವುದಷ್ಟೇ ಬಾಕಿ: ರಾಯಭಾರಿ ಸೆರ್ಗಿಯೋ ಗೋರ್
ಈ ಫೆಲೋಶಿಪ್‌ನ್ನು ಕ್ರಿಸ್ ಗೋಪಾಲಕೃಷ್ಣನ್ ಮತ್ತು ಮಜುಂದಾರ್-ಶಾ ಫಿಲಾಂಥ್ರಪಿ ಸಂಸ್ಥೆಯ ಕಿರಣ್ ಮಜುಂದಾರ್-ಶಾ ಅವರ ಕೊಡುಗೆಯೊಂದಿಗೆ, ಐಐಟಿ ಮದ್ರಾಸ್, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಹಭಾಗಿತ್ವದಲ್ಲಿ ಜಾರಿಗೊಳಿಸಲಾಗುತ್ತಿದೆ.
ಈ ತಿಂಗಳಿನಿಂದ ಆರಂಭವಾಗುವ ಕಾರ್ಯಕ್ರಮದಡಿ, ಅಮೆರಿಕದ ಪೋಸ್ಟ್‌ಡಾಕ್ಟರಲ್ ಸಂಶೋಧಕರು ಮತ್ತು ವೃತ್ತಿಜೀವನದ ಆರಂಭಿಕ ಹಂತದಲ್ಲಿರುವ ಬೋಧಕ ಸಿಬ್ಬಂದಿಗೆ, ಭಾರತೀಯ ಸಂಸ್ಥೆಗಳೊಂದಿಗೆ 12 ತಿಂಗಳ ಕಾಲ ಸಹಯೋಗದ ಸಂಶೋಧನಾ ಯೋಜನೆಗಳನ್ನು ಕೈಗೊಳ್ಳಲು ಫೆಲೋಶಿಪ್ ಭತ್ಯೆ ನೀಡಲಾಗುತ್ತದೆ.
TRUST ಫೆಲೋಶಿಪ್ ಇನ್ನಷ್ಟು ನಾಯಕರು ಮುಂದೆ ಬಂದು ಕೈಜೋಡಿಸಲು ಪ್ರೇರೇಪಿಸುವ ದಾರಿಯಾಗಬೇಕು ಎಂಬುದು ನನ್ನ ಆಶಯ. ಇದರಿಂದ ಹೆಚ್ಚಿನ ಫೆಲೋಗಳು ಕಾರ್ಯಕ್ರಮಕ್ಕೆ ಸೇರ್ಪಡೆಯಾಗುತ್ತಾರೆ ಮತ್ತು ಹೆಚ್ಚಿನ ಮಹತ್ವದ ಆವಿಷ್ಕಾರಗಳು ಮಾರುಕಟ್ಟೆಗೆ ಬರಲು ಸಾಧ್ಯವಾಗುತ್ತದೆ. ಈ ಕಾರ್ಯಕ್ರಮವನ್ನು ಇನ್ನಷ್ಟು ಬೆಳೆಸಲು ನಮಗೆ ಸಹಾಯ ಮಾಡಿ ಎಂಬುದು ನನ್ನ ಮನವಿ ಎಂದು ಅಮೆರಿಕದ ರಾಯಭಾರಿ ಗೋರ್ ಹೇಳಿದ್ದಾರೆ.
ಇದನ್ನೂ ಓದಿ: ಇರಾನ್ ವಿರುದ್ಧದ ಯುದ್ಧ ಗೆದ್ದರೆ ಪೆಟ್ರೋಲ್ ಬೆಲೆ ಗ್ಯಾಲನ್‌ಗೆ 2 ಡಾಲರ್‌ಗಿಂತ ಕಡಿಮೆ: ಅಮೆರಿಕ ಅಧ್ಯಕ್ಷ ಟ್ರಂಪ್ ಭವಿಷ್ಯ
ಅಮೆರಿಕದ ಉದ್ಯಮಗಳಿಗೆ ಬೆಂಬಲ ವಿಸ್ತರಣೆ:
ಅಮೆರಿಕದ ರಾಯಭಾರಿ ಗೋರ್ ಅವರು ಬೆಂಗಳೂರಿನಲ್ಲಿ ಅಮೆರಿಕದ ವಾಣಿಜ್ಯ ಸೇವಾ ಕಚೇರಿಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವುದಾಗಿ ಘೋಷಿಸಿದರು. ದಕ್ಷಿಣ ಭಾರತದಲ್ಲಿ ಅಮೆರಿಕದ ಕಂಪನಿಗಳು ಸ್ಪರ್ಧಿಸಿ ತಮ್ಮ ವ್ಯವಹಾರವನ್ನು ವಿಸ್ತರಿಸಲು ನೆರವಾಗುವ ಉದ್ದೇಶದಿಂದ ರಫ್ತು ಸಲಹೆ, ಮಾರುಕಟ್ಟೆ ಮಾಹಿತಿ ಹಾಗೂ ಪರಿಶೀಲಿತ ಸ್ಥಳೀಯ ಪಾಲುದಾರರೊಂದಿಗೆ ಸಂಪರ್ಕ ಸೇರಿದಂತೆ ಹೆಚ್ಚಿನ ಬೆಂಬಲವನ್ನು ಒದಗಿಸಲಾಗುವುದು ಎಂದರು.
ಅಮೆರಿಕದ ಉದ್ಯಮಗಳಿಗೆ ಈ ಮಾರುಕಟ್ಟೆಯಲ್ಲಿ ಇನ್ನಷ್ಟು ಬಲವಾದ ಬೆಂಬಲ, ನಿಖರವಾದ ಮಾರುಕಟ್ಟೆ ಮಾಹಿತಿ ಮತ್ತು ಹೆಚ್ಚಿನ ಅವಕಾಶಗಳ ಅಗತ್ಯವಿದೆ. ಈ ವಿಸ್ತರಣೆಯು ಅದನ್ನೇ ಒದಗಿಸುತ್ತದೆ. ಇದರರ್ಥ ಅಮೆರಿಕದ ರಫ್ತು ಹೆಚ್ಚಳ, ಅಮೆರಿಕನ್ನರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಮತ್ತು ಬೆಂಗಳೂರಿನ ಬೆಳವಣಿಗೆಯಲ್ಲಿ ಅಮೆರಿಕದ ಕಂಪನಿಗಳು ನೇರವಾಗಿ ಪಾಲ್ಗೊಳ್ಳುವುದಾಗಿದೆ ಎಂದೂ ರಾಯಭಾರಿ ಗೋರ್ ಹೇಳಿದರು.
ಅಮೆರಿಕದ ಸ್ವಾತಂತ್ರ್ಯದ 250ನೇ ವರ್ಷಾಚರಣೆಯ ಅಂಗವಾಗಿ ಬೆಂಗಳೂರಿನ ಹಲವು ಪ್ರಮುಖ ಕಟ್ಟಡಗಳನ್ನು ಕೆಂಪು, ಬಿಳಿ ಮತ್ತು ನೀಲಿ ಬಣ್ಣದ ದೀಪಗಳಿಂದ ಅಲಂಕರಿಸಲಾಯಿತು. ಇವುಗಳಲ್ಲಿ ಬೋಯಿಂಗ್ ಮತ್ತು ಕಾಲಿನ್ಸ್ ಏರೋಸ್ಪೇಸ್ ಸೇರಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ