ನಿಮ್ಮ ದೇಹ ಕ್ರಿಸ್ತನಿಗೆ ಸೇರಿದ್ದು: ಅಮೆರಿಕದಲ್ಲಿ ಗರ್ಭಪಾತ ನಿಷೇಧ ತೀರ್ಪಿನ ಹಿಂದೆ ಸಂಪ್ರದಾಯವಾದಿಗಳ ಪ್ರಭಾವ, ಮಹಿಳೆಯರಿಂದ ತೀವ್ರ ಪ್ರತಿಭಟನೆ
ಗರ್ಭಪಾತಕ್ಕೆ ಅವಕಾಶವಿಲ್ಲ ಎನ್ನುವ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮಹಿಳೆಯರು ಬೀದಿಗಳಿದು ಹೋರಾಡುತ್ತಿದ್ದಾರೆ.
ವಾಷಿಂಗ್ಟನ್: ವಿಶ್ವದ ಅತ್ಯಂತ ಪ್ರಗತಿಪರ ಮತ್ತು ಉದಾರವಾದಿ ನಿಲುವಿನ ದೇಶ ಎನಿಸಿರುವ ಅಮೆರಿಕ (America Protests Againt Court Ruling) ಇದೀಗ ಹೊತ್ತಿ ಉರಿಯುತ್ತಿದೆ. ಗರ್ಭಪಾತಕ್ಕೆ ಅವಕಾಶವಿಲ್ಲ ಎನ್ನುವ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮಹಿಳೆಯರು ಬೀದಿಗಳಿದು ಹೋರಾಡುತ್ತಿದ್ದಾರೆ. ಮಹಿಳೆಯ ದೇಹದ ಮೇಲಿನ ಹಕ್ಕು ಸಂಪೂರ್ಣವಾಗಿ ಆಕೆಗೆ ಸೇರಿದ್ದು ಎಂದು ಗರ್ಭಪಾತದ ಆಯ್ಕೆಯನ್ನು ಒಪ್ಪಿ, ರಾಷ್ಟ್ರವ್ಯಾಪಿ ಅದನ್ನು ಕಾನೂನುಬದ್ಧಗೊಳಿಸಿದ್ದ 1973ರ ಪ್ರಖ್ಯಾತ ರೋಯ್ ವರ್ಸಸ್ ವೇಡ್ (Roe vs Wade) ತೀರ್ಪನ್ನು ಅಮೆರಿಕದ ಸುಪ್ರೀಂಕೋರ್ಟ್ ಶುಕ್ರವಾರ (ಜೂನ್ 24) ರದ್ದುಗೊಳಿಸಿತ್ತು. 15 ವಾರಗಳ ನಂತರದ ಗರ್ಭಪಾತವನ್ನು ನಿಷೇಧಿಸುವ ಕಾನೂನನ್ನು ಎತ್ತಿ ಹಿಡಿದಿತ್ತು. ಸುಪ್ರೀಂಕೋರ್ಟ್ನ ಈ ನಡೆಯ ಹಿಂದೆ ಸಂಪ್ರದಾಯಪಾದಿಗಳ ಪ್ರಭಾವ ಕೆಲಸ ಮಾಡಿದೆ ಎಂದು ಪ್ರತಿಭಟನಾನಿರತ ಮಹಿಳೆಯರು ನೇರ ಆರೋಪ ಮಾಡುತ್ತಿದ್ದಾರೆ.
ಚರ್ಚ್ಗಳ ಪದಾಧಿಕಾರಿಗಳು ‘ನನ್ನ ದೇಹ ನನ್ನ ಆಯ್ಕೆ’ ಎನ್ನುವ ಮಹಿಳೆಯರ ಘೋಷಣೆಗಳನ್ನೇ ಸಾರಾಸಗಟಾಗಿ ನಿರಾಕರಿಸುತ್ತಿದ್ದಾರೆ. ‘ಇದು ನಿನ್ನ ದೇಹವಲ್ಲ, ನಿನ್ನ ದೇಹ ಕ್ರಿಸ್ತನಿಗೆ ಸೇರಿದ್ದು’ ಎಂದು ಪ್ರತಿಪಾದಿಸುತ್ತಿದ್ದಾರೆ. ‘ಅಮೆರಿಕದ ಸುಪ್ರೀಂಕೋರ್ಟ್ ಗರ್ಭಪಾತಕ್ಕೆ ಅವಕಾಶಕೊಡುವ 1973ರ ತೀರ್ಪು ರದ್ದುಗೊಳಿಸುವ ಮೂಲಕ ಸ್ವಾಗತಾರ್ಹ ಕೆಲಸ ಮಾಡಿದೆ. ನಮ್ಮ ಪ್ರಾರ್ಥನೆಗಳಿಗೆ ಉತ್ತರ ಸಿಕ್ಕಿದೆ’ ಎಂದು ಚರ್ಚ್ಗೆ ನಿಯಮಿತವಾಗಿ ಭೇಟಿ ಕೊಡುವ ವಿಲ್ಲಾನ್ಯುವಾ ಹೇಳಿದರು.
ಅಮೆರಿಕದ ಟೆಕ್ಸಾಸ್ ನಗರದಲ್ಲಿ ಗರ್ಭಪಾತದ ಪರ ಮತ್ತು ವಿರುದ್ಧವಿರುವವರು ಈ ಮೊದಲೂ ಹಲವು ಬಾರಿ ಚಳವಳಿಗಳನ್ನು ನಡೆಸಿದ್ದರು. ಗರ್ಭದಲ್ಲಿರುವ ಮಗುವಿನ ಹೃದಯ ಬಡಿತ ಕೇಳಿ ಬರುವ 6 ವಾರಗಳ ನಂತರ ಗರ್ಭಪಾತಕ್ಕೆ ಅವಕಾಶವಿಲ್ಲ ಎಂದು ಕಳೆದ ವರ್ಷವಷ್ಟೇ ಟೆಕ್ಸಾಸ್ನಲ್ಲಿ ಕಾನೂನು ಜಾರಿಯಾಗಿತ್ತು. ‘ಗರ್ಭಪಾತ ಮಾಡಿಸುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮಹಿಳೆ ಮತ್ತು ಮಕ್ಕಳ ವಿರುದ್ಧದ ಅಪರಾಧದಲ್ಲಿ ಭಾಗಿಯಾದವರಿಗೆ ಸಮಾನ’ ಎಂದು ಅಲ್ಲಿನ ಸಂಪ್ರದಾಯವಾದಿಗಳು ವಾದಿಸಿದ್ದರು.
ಅಮೆರಿಕದಲ್ಲಿ 2014ರ ಮಾಹಿತಿ ಪ್ರಕಾರ ಗರ್ಭಪಾತ ಮಾಡಿಸಿಕೊಂಡ ಒಟ್ಟು ಮಹಿಳೆಯರ ಪೈಕಿ ಶೇ 75ರಷ್ಟು ಮಂದಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದವರು. ಆರೋಗ್ಯದ ಕಾರಣಗಳಿಗಿಂತಲೂ ಮಕ್ಕಳನ್ನು ಸಾಕಲು ಆರ್ಥಿಕ ತ್ರಾಣ ಇಲ್ಲ ಎನ್ನುವ ಕಾರಣಕ್ಕೆ, ಸಂಗಾತಿಯು ಮಗುವಿನ ಹೊಣೆ ಹೊರಲು ತಯಾರಿಲ್ಲ ಎನ್ನುವ ಕಾರಣಕ್ಕೆ ಬಹುತೇಕ ಮಹಿಳೆಯರು ಗರ್ಭಪಾತದ ಮೂಲಕ ಮಗು ತೆಗೆಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು ಎಂದು ಹೇಳಲಾಗಿದೆ.
‘ಗರ್ಭಪಾತ ನಿಷೇಧ ಮಾಡುವ ಮೂಲಕ ಮಹಿಳೆಯರಿಗೆ ಉಪಕಾರ ಮಾಡಿದ್ದೇವೆ ಎನ್ನುವ ಧೋರಣೆಗೆ ನ್ಯಾಯಾಲಯ ಅಥವಾ ಸರ್ಕಾರ ಬರುವುದು ಬೇಡ. ಮೊದಲು ಮಹಿಳೆಯರಿಗೆ ಬೇಕಿರುವ ಭಾವನಾತ್ಮಕ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಐದು ಮಕ್ಕಳ ತಂದೆ ಕ್ಯಾವೆಲಿರ್ ಒತ್ತಾಯಿಸಿದರು.
ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮದ ಆತಂಕ
ಗರ್ಭಪಾತ ನಿಷೇಧಿಸುವ ಅಮೆರಿಕ ಸುಪ್ರೀಂಕೋರ್ಟ್ನ ತೀರ್ಪು ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಆತಂಕ ವ್ಯಕ್ತವಾಗಿದೆ. ಸುರಕ್ಷಿತ ರೀತಿಯಲ್ಲಿ ವೈದ್ಯಕೀಯ ಸಿಬ್ಬಂದಿಯ ನಿಗಾವಣೆಯಲ್ಲಿ ಗರ್ಭಪಾತ ಮಾಡಿಸಿಕೊಳ್ಳುವುದು ಸಾಧ್ಯವಾಗದಿದ್ದರೆ ಮಹಿಳೆಯರು ಅಸುರಿಕ್ಷಿತವಾದ ಬದಲಿ ಮಾರ್ಗಗಳ ಮೊರೆ ಹೋಗಬಹುದು. ಅದರಿಂದ ಮಹಿಳೆಯರ ಸಾವು ಹೆಚ್ಚಾಗಬಹುದು ಎಂದು ಅಮೆರಿಕದ ಹಲವರು ಹೇಳುತ್ತಿದ್ದಾರೆ.
‘ಪ್ರತಿವರ್ಷ ವಿಶ್ವದ ವಿವಿಧೆಡೆ 2.5 ಕೋಟಿ ಅಸುರಕ್ಷಿತ ಗರ್ಭಪಾತವಾಗುತ್ತಿದ್ದು, 37,000 ಮಹಿಳೆಯರು ಸಾಯುತ್ತಿದ್ದಾರೆ. ಅಮೆರಿಕ ಕೋರ್ಟ್ನ ತೀರ್ಮಾನದಿಂದ ಗರ್ಭಪಾತ ಸಂಪೂರ್ಣವಾಗಿ ನಿಲ್ಲುವುದಿಲ್ಲ. ಆದರೆ ಅಸುರಕ್ಷಿತ ಗರ್ಭಪಾತ ಹೆಚ್ಚಾಗಿ, ಮಹಿಳೆಯರ ಆರೋಗ್ಯಕ್ಕೆ ಗಂಡಾಂತರ ಒದಗುತ್ತದೆ’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕು ಸಂಸ್ಥೆಯ ಮುಖ್ಯಸ್ಥರಾಗಿರುವ ಮಿಚೆಲ್ ಬ್ಯಾಚೆಲೆಟ್ ಹೇಳಿದ್ದಾರೆ.
Published On - 10:45 am, Sun, 26 June 22