Bajaj: ಬಜೆಟ್ ಬೆಲೆಯ ಬಜಾಜ್ ಪ್ಲಾಟಿನಾ 110 ಎಬಿಎಸ್ ಆವೃತ್ತಿ ಬಿಡುಗಡೆ
ಬಜಾಜ್ ಆಟೋ ಕಂಪನಿಯು ತನ್ನ ಹೊಸ ಪ್ಲಾಟಿನಾ 110 ಎಬಿಎಸ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಆವೃತ್ತಿಯು ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ದ್ವಿಚಕ್ರ ವಾಹನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬಜಾಜ್ ಆಟೋ(Bajaj Auto) ಕಂಪನಿಯು ತನ್ನ ಹೊಸ ಪ್ಲಾಟಿನಾ 110 ಎಬಿಎಸ್(Platina 110 ABS) ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 72,224 ಬೆಲೆ ಹೊಂದಿದೆ. ಹೊಸ ಬೈಕ್ ಮಾದರಿಯು 110 ಸಿಸಿ ವಿಭಾಗದಲ್ಲಿ ಎಬಿಎಸ್ ಸೌಲಭ್ಯ ಹೊಂದಿದ ಮೊದಲ ಮಾದರಿಯಾಗಿ ಗುರುತಿಸಿಕೊಂಡಿದ್ದು, ಎಬಿಎಸ್ ಜೊತೆಗೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ಹೊಸ ಪ್ಲಾಟಿನಾ 110 ಎಬಿಎಸ್ ಆವೃತ್ತಿಯಲ್ಲಿ ಸಾಮಾನ್ಯ ಮಾದರಿಯಲ್ಲಿರುವಂತೆ 115.45 ಸಿಸಿ, ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು 4-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 8.44 ಹಾರ್ಸ್ ಪವರ್ ಮತ್ತು 9.81 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದರೊಂದಿಗೆ ಹೊಸ ಬೈಕಿನಲ್ಲಿ ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ಎಬಿಎಸ್ ಸೌಲಭ್ಯ ನೀಡಿರುವ ಬಜಾಜ್ ಕಂಪನಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.
ಇದನ್ನೂ ಓದಿ: ಹೊಸ ಸುಜುಕಿ ಬರ್ಗಮನ್ ಸ್ಟ್ರೀಟ್ ಇಎಕ್ಸ್ ವೆರಿಯೆಂಟ್ ಭಾರತದಲ್ಲಿ ಬಿಡುಗಡೆ
ಹೊಸ ಫೀಚರ್ಸ್
ಪ್ಲಾಟಿನಾ 110 ಎಬಿಎಸ್ ಮಾದರಿಗಾಗಿ ಬಜಾಜ್ ಕಂಪನಿಯು ಹೊಸ ಡಿಜಿಟಲ್ ಕನ್ಸೋಲ್ ಜೋಡಣೆ ಮಾಡಲಾಗಿದ್ದು, ಸ್ಪೀಡೋ ಮೀಟರ್ ಜೊತೆಗೆ ಗೇರ್ ಸೂಚಕ ಮತ್ತು ಎಬಿಎಸ್ ಸೂಚಕಗಳನ್ನು ಇದರಲ್ಲಿ ನೋಡಬಹುದಾಗಿದೆ. ಇದರೊಂದಿಗೆ ಹೊಸ ಬೈಕ್ ಮಾದರಿಯು ಎಬೊನಿ ಬ್ಲ್ಯಾಕ್, ಗ್ಲೋಸ್ ಪ್ಯೂಟರ್ ಗ್ರೇ, ಕಾಕ್‌ಟೈಲ್ ವೈನ್ ರೆಡ್ ಮತ್ತು ಸ್ಯಾಫೈರ್ ಬ್ಲೂ ಎಂಬ ನಾಲ್ಕು ಬಣ್ಣಗಳ ಆಯ್ಕೆ ಹೊಂದಿದ್ದು, ಹೀರೋ ಸ್ಪ್ಲೆಂಡರ್ ಪ್ಲಸ್, ಹೋಂಡಾ ಸಿಡಿ 110 ಡ್ರೀಮ್ ಮತ್ತು ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.
Published On - 7:53 pm, Tue, 20 December 22