Share Market: ಈ 4 ಅಂಶಗಳಿಂದ ಥರಗುಟ್ಟಿದ ಷೇರುಪೇಟೆ; ಸೆನ್ಸೆಕ್ಸ್ 1105 ಪಾಯಿಂಟ್ಸ್, ನಿಫ್ಟಿ 383 ಪಾಯಿಂಟ್ಸ್ ಕುಸಿತ

Share Market: ಈ 4 ಅಂಶಗಳಿಂದ ಥರಗುಟ್ಟಿದ ಷೇರುಪೇಟೆ; ಸೆನ್ಸೆಕ್ಸ್ 1105 ಪಾಯಿಂಟ್ಸ್, ನಿಫ್ಟಿ 383 ಪಾಯಿಂಟ್ಸ್ ಕುಸಿತ
ಸಾಂದರ್ಭಿಕ ಚಿತ್ರ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ 1100 ಪಾಯಿಂಟ್ಸ್ ಕುಸಿಯುವುದಕ್ಕೆ ಕಾರಣವಾದ ನಾಲ್ಕು ಅಂಶಗಳು ಯಾವುವು ಎಂಬುದರ ಬಗ್ಗೆ ವಿವರಣೆ ಇಲ್ಲಿದೆ.

TV9kannada Web Team

| Edited By: Srinivas Mata

Jan 27, 2022 | 11:38 AM

ಭಾರತದ ದೇಶೀಯ ಷೇರು ಮಾರುಕಟ್ಟೆಯಲ್ಲಿ (Stock Market) ಜನವರಿ 27ನೇ ತಾರೀಕಿನ ಗುರುವಾರದಂದು ಮಾರಾಟದ ಒತ್ತಡ ಕಂಡುಬಂತು. ಇದೇ ರೀತಿಯ ಸನ್ನಿವೇಶ ಏಷ್ಯಾದ ಇತರ ಮಾರುಕಟ್ಟೆಗಳಲ್ಲೂ ಇದ್ದದ್ದನ್ನು ಭಾರತದಲ್ಲೂ ಕಂಡಂತಾಗಿದೆ. ಅಮೆರಿಕದ ಫೆಡರಲ್ ರಿಸರ್ವ್ (ಕೇಂದ್ರ ಬ್ಯಾಂಕ್) ಅಧ್ಯಕ್ಷರಾದ ಜೆರೋಮ್ ಪೊವೆಲ್ ಜನವರಿ 26ರಂದು ಕೇಂದ್ರ ಬ್ಯಾಂಕ್​ನ ಹಣಕಾಸು ನೀತಿಯ ಬಗ್ಗೆ ಅಭಿಪ್ರಾಯ ತಿಳಿಸಿದ ಮೇಲೆ ಈ ಬೆಳವಣಿಗೆ ಆಗಿದೆ. ಗುರುವಾರದ ಬೆಳಗ್ಗೆ ಸೆಷನ್​ನಲ್ಲಿ ನಿಫ್ಟಿ-50 ಸೂಚ್ಯಂಕವು 280 ಪಾಯಿಂಟ್ಸ್ ಅಥವಾ ಶೇ 1.6ರಷ್ಟು ನೆಲ ಕಚ್ಚಿ 16,997 ಪಾಯಿಂಟ್ಸ್ ಮುಟ್ಟಿತು, ಇನ್ನು ಬಿಎಸ್​ಇ ಸೆನ್ಸೆಕ್ಸ್ 826 ಪಾಯಿಂಟ್ಸ್ ಅಥವಾ ಶೇ 1.4ರಷ್ಟು ಕೆಳಗೆ ಇಳಿದು, 57,031 ಪಾಯಿಂಟ್ಸ್ ಮುಟ್ಟಿತು. ಅಮೆರಿಕದ ಫೆಡ್ ರಿಸರ್ವ್ ಅಭಿಪ್ರಾಯದ ಪ್ರಕಾರ, ಸದ್ಯಕ್ಕೆ ಬಡ್ಡಿ ದರವನ್ನು ಯಥಾ ಸ್ಥಿತಿಯಲ್ಲಿ ಇರಿಸಲಾಗಿದೆ ಮತ್ತು ಸದ್ಯದಲ್ಲೇ ಇದನ್ನು ಹೆಚ್ಚಿಸುವುದು “ಸೂಕ್ತ”. ಪೊವೆಲ್​ರ ಈ ಅಭಿಪ್ರಾಯವು ಮುಂದಿನ ದಿನಗಳಲ್ಲಿ ಹಣಕಾಸು ನೀತಿಯನ್ನು ಬಿಗಿಗೊಳಿಸಲಿದೆ ಎಂಬುದು ಹೂಡಿಕೆದಾರರಲ್ಲಿ ಚಿಂತೆಯೊಡ್ಡಿದೆ.

ನೀತಿ ನಿರೂಪಣೆಯ ಪತ್ರಿಕಾಗೋಷ್ಠಿ ನಂತರ ಮಾತನಾಡಿದ ಪೊವೆಲ್, ಅಮೆರಿಕದಲ್ಲಿನ ಪ್ರಬಲವಾದ ಕಾರ್ಮಿಕರ ಮಾರುಕಟ್ಟೆ ದಶಕಗಳಲ್ಲೇ ಅತಿ ಹೆಚ್ಚಿನ ಹಣದುಬ್ಬರದ ಅಪಾಯ ತಂದಿದೆ. ಆದ್ದರಿಂದ ಬಡ್ಡಿ ದರವನ್ನು ಏರಿಸುವುದಕ್ಕೆ ಕೇಂದ್ರ ಬ್ಯಾಂಕ್​ಗೆ ಬಹಳ ಅವಕಾಶ ಇದೆ. ಇದರ ಜತೆಗೆ ಹಿನ್ನೆಲೆಯಲ್ಲಿ ಬ್ಯಾಲೆನ್ಸ್​ ಶೀಟ್ ಕುಗ್ಗುತ್ತಿದೆ. “ಕಾರ್ಮಿಕ ಮಾರುಕಟ್ಟೆಗೆ ಆತಂಕ ಆಗದಂತೆ ಬಡ್ಡಿ ದರ ಏರಿಕೆ ಮಾಡುವ ಅವಕಾಶ ಇದೆ ಎಂದು ನಾನಂದುಕೊಳ್ಳುತ್ತೇನೆ,” ಎಂಬುದಾಗಿ ಪೊವೆಲ್ ಹೇಳಿದ್ದಾರೆ. ಅಮೆರಿಕದ ಕೇಂದ್ರೀಯ ಬ್ಯಾಂಕ್ ಹಣಕಾಸು ನೀತಿ ಘೋಷಣೆಯ ಆತಂಕ ಒತ್ತಟ್ಟಿಗಿರಲಿ, ಇದನ್ನು ಹೊರತುಪಡಿಸಿ, ಭಾರತದ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿರುವ ನಾಲ್ಕು ಅಂಶಗಳು ಹೀಗಿವೆ:

ತೈಲ ಬೆಲೆ 90 ಡಾಲರ್: ಜಾಗತಿಕ ಕಚ್ಚಾ ತೈಲ ಬೆಲೆ ಬ್ಯಾರೆಲ್​ಗೆ 90 ಡಾಲರ್​ ಅನ್ನು ಜನವರಿ 26ರಂದು ದಾಟಿದೆ. ಪೂರ್ವ ಯುರೋಪ್​ನಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಪರಿಣಾಮ ಇದು. ಬ್ರೆಂಟ್ ಫ್ಯೂಚರ್ಸ್ ಕಚ್ಚಾ ತೈಲ ದರವು ಏಳು ವರ್ಷಕ್ಕಿಂತ ಹೆಚ್ಚು ಸಮಯದ ಗರಿಷ್ಠ ಮೊತ್ತವನ್ನು ಕಂಡಿದೆ. ಈ ರೀತಿ ಜಾಗತಿಕ ಕಚ್ಚಾ ತೈಲ ದರದ ಬೆಲೆ ಏರಿಕೆಯು ದೇಶೀಯ ಆರ್ಥಿಕತೆಗೆ ಸವಾಲಾಗಿ, ಹಣದುಬ್ಬರ ಜಾಸ್ತಿಯಾಗುವುದಕ್ಕೆ ಕಾರಣ ಆಗಿದೆ. ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾ ಇರಿಸಿಕೊಂಡಿರುವ ಶೇ 4ರ ಮಧ್ಯಮಾವಧಿ ಗುರಿಯನ್ನೂ ಹಣದುಬ್ಬರ ದರವು ಮೀರಿದೆ.

ಭೌಗೋಳಿಕ ರಾಜಕೀಯ ಉದ್ವಿಗ್ನತೆ: ಉಕ್ರೇನ್ ಮತ್ತು ರಷ್ಯಾದ ಮಧ್ಯೆಯ ತಿಕ್ಕಾಟ ಈಗ ಭೌಗೋಳಿಕ ರಾಜಕೀಯ ಕೇಂದ್ರ ಬಿಂದು ಆಗಿದೆ. ಏಕೆಂದರೆ, ಅದರಲ್ಲಿ ಈಗ ನಾರ್ಥ್ ಅಟ್ಲಾಂಟಿಕ್ ಟ್ರೀಟ್ ಆರ್ಗನೈಸೇಷನ್ಸ್ (NATO) ಮಧ್ಯಪ್ರವೇಶಿಸಿದೆ. ಉಕ್ರೇನ್ ಗಡಿಯಲ್ಲಿ ರಷ್ಯಾವು 1 ಲಕ್ಷಕ್ಕೂ ಹೆಚ್ಚು ತುಕಡಿಯನ್ನು ನಿಯೋಜಿಸಿದೆ. ಈಗಾಗಲೇ ನ್ಯಾಟೋದ ಮಿತ್ರ ರಾಷ್ಟ್ರ ಅಮೆರಿಕವು ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನ ಹೇರುವ ಬಗ್ಗೆ ಎಚ್ಚರಿಕೆ ನೀಡಿದೆ. ರಷ್ಯಾದ ಮೇಲೆ ನಿರ್ಬಂಧ ಹೇರಿದಲ್ಲಿ ಆಗ ಅದರ ತೈಲ ರಫ್ತಿನ ಮೇಲೂ ಪರಿಣಾಮ ಆಗಿ, ಜಾಗತಿಕ ಮಾರುಕಟ್ಟೆಗೆ ಹೊಡೆತ ಬೀಳುತ್ತದೆ. ಆ ಮೂಲಕ ತೈಲ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಬಜೆಟ್ ಪೂರ್ವ ಆತಂಕಗಳು: ಕೇಂದ್ರ ಬಜೆಟ್ 2022-23 ಫೆಬ್ರವರಿ 1ರಂದು ಮಂಡನೆ ಆಗಲಿದೆ. ಆ ಘೋಷಣೆ ಹಿನ್ನೆಲೆಯಲ್ಲಿ ಹೂಡಿಕೆದಾರರು ಆತಂಕಗೊಂಡಿದ್ದಾರೆ. ದೀರ್ಘಾವಧಿ ಬಂಡವಾಳ ಗಳಿಕೆ ಮೇಲಿನ ತೆರಿಗೆ ಪರಿಷ್ಕರಣೆ ಮಾಡಬಹುದು ಎಂಬ ವದಂತಿ ಈ ವಾರ ಹರಿದಾಡುತ್ತಿದೆ. ಸದ್ಯಕ್ಕೆ ಈಕ್ವಿಟಿ ಹೂಡಿಕೆ ಮೇಲೆ ಸರ್ಕಾರದಿಂದ ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆ ಶೇ 10ರಷ್ಟು ವಿಧಿಸಲಾಗುತ್ತಿದೆ.

ಗಳಿಕೆಯಲ್ಲಿ ಅಚ್ಚರಿಯ ಕೊರತೆ: ಡಿಸೆಂಬರ್​ಗೆ ಕೊನೆಯಾದಂತೆ ಹೊರಬಂದ ತ್ರೈಮಾಸಿಕ ಫಲಿತಾಂಶಗಳಲ್ಲಿ ಈ ತನಕ ಭಾರತದ ಕಾರ್ಪೊರೇಟ್​ಗಳು ಹೂಡಿಕೆದಾರರನ್ನು ಉತ್ತೇಜಿಸುವಂಥ ಫಲಿತಾಂಶವನ್ನೇನೂ ನೀಡಿಲ್ಲ. ಹೆಚ್ಚಿನ ಇನ್​ಪುಟ್​ ವೆಚ್ಚದಿಂದ ಮಾರ್ಜಿನ್​ ಮೇಲೆ ಆಗುವ ಪರಿಣಾಮದಿಂದಾಗಿ ಮುಂದಿನ ಹಣಕಾಸು ವರ್ಷಕ್ಕೆ ವಿಶ್ಲೇಷಕರು ಲಾಭದ ಪ್ರಮಾಣ ನಿರೀಕ್ಷಿಸುವುದನ್ನು ಕಡಿತ ಮಾಡುವಂತೆ ಆಗಿದೆ.

ಈ ವರದಿ ಸಿದ್ಧ ಆಗುವ ಹೊತ್ತಿಗೆ ಸೆನ್ಸೆಕ್ಸ್ 1105.68 ಪಾಯಿಂಟ್ಸ್ ಹಾಗೂ ನಿಫ್ಟಿ 321.10 ಪಾಯಿಂಟ್ಸ್ ನೆಲ ಕಚ್ಚಿ, ವಹಿವಾಟು ನಡೆಸುತ್ತಿತ್ತು.

ಇದನ್ನೂ ಓದಿ: Union Budget 2022: 10 ವರ್ಷದಲ್ಲಿ ಬಜೆಟ್​ ದಿನದಂದು ಷೇರುಪೇಟೆ ಸೂಚ್ಯಂಕಗಳ ಪರ್ಫಾರ್ಮೆನ್ಸ್ ಹೇಗಿತ್ತು?

Follow us on

Related Stories

Most Read Stories

Click on your DTH Provider to Add TV9 Kannada