Finance Commission: ನೀತಿ ಆಯೋಗ್ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗರಿಯಾ 16ನೇ ಹಣಕಾಸು ಆಯೋಗದ ಮುಖ್ಯಸ್ಥರಾಗಿ ನೇಮಕ
Arvind Panagariya Appointment: ನೀತಿ ಆಯೋಗ್ನ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಅವರನ್ನು ಸರ್ಕಾರ 16 ನೇ ಹಣಕಾಸು ಆಯೋಗದ ಮುಖ್ಯಸ್ಥ ಸ್ಥಾನಕ್ಕೆ ನೇಮಕ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾಗಳ ಮಧ್ಯೆ ತೆರಿಗೆ ಹಂಚಿಕೆ ಸೂತ್ರವನ್ನು ಹಣಕಾಸು ಆಯೋಗ ಶಿಫಾರಸು ಮಾಡುತ್ತದೆ. 16ನೇ ಹಣಕಾಸು ಆಯೋಗ ಮಾಡುವ ತೆರಿಗೆ ಹಂಚಿಕೆ ಶಿಫಾರಸುಗಳು 2026ರ ಏಪ್ರಿಲ್ನಿಂದ 5 ವರ್ಷಗಳವರೆಗೆ ಜಾರಿಯಾಗುತ್ತವೆ.

ನವದೆಹಲಿ, ಡಿಸೆಂಬರ್ 31: ನೀತಿ ಆಯೋಗ್ನ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಅವರನ್ನು ಸರ್ಕಾರ 16 ನೇ ಹಣಕಾಸು ಆಯೋಗದ ಮುಖ್ಯಸ್ಥ ಸ್ಥಾನಕ್ಕೆ (16th Finance commission chairman) ನೇಮಕ ಮಾಡಿದೆ. ಭಾರತೀಯ ಅಮೆರಿಕನ್ ಆರ್ಥಿಕ ತಜ್ಞರಾಗಿರುವ ಅರವಿಂದ್ ಪನಗರಿಯಾ 2015ರ ಜನವರಿಯಿಂದ 2017ರ ಆಗಸ್ಟ್ ತಿಂಗಳವರೆಗೆ ನೀತಿ ಆಯೋಗ್ನಲ್ಲಿ ಸೇವೆ ಸಲ್ಲಿಸಿದ್ದರು. ಫೈನಾನ್ಸ್ ಕಮಿಷನ್ ಮುಖ್ಯಸ್ಥ ಸ್ಥಾನಕ್ಕೆ ಪನಗರಿಯಾ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹೊರಡಿಸಿದ್ದ ಆದೇಶವನ್ನು ಹಣಕಾಸು ಇಲಾಖೆ ಇಂದು ಭಾನುವಾರ (ಡಿ. 31) ಅಧಿಸೂಚನೆ ಹೊರಡಿಸಿದೆ.
16ನೇ ಹಣಕಾಸು ಆಯೋಗದ ಕಾರ್ಯದರ್ಶಿ ಸ್ಥಾನಕ್ಕೆ ಋತ್ವಿಕ್ ರಂಜನಮ್ ಪಾಂಡೆ ಅವರನ್ನು ನೇಮಕ ಮಾಡಲಾಗಿದೆ. ಪಾಂಡೆ ಅವರು ಈ ಹಿಂದೆ ಕಂದಾಯ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಇನ್ನು, ಆಯೋಗದ ಇತರ ಸದಸ್ಯರ ಹೆಸರನ್ನು ಪ್ರತ್ಯೇಕವಾಗಿ ಘೋಷಿಸುವ ಸಾಧ್ಯತೆ ಇದೆ. ಆಯೋಗದ ಛೇರ್ಮನ್ ಅರವಿಂದ್ ಪನಗರಿಯಾ ರಾಜಸ್ಥಾನ ಮೂಲದವರಾಗಿದ್ದು, ಸದ್ಯ ಅಮೆರಿಕದ ವಿವಿಯೊಂದರಲ್ಲಿ ಇವರು ಪೊಲಿಟಿಕಲ್ ಎಕನಾಮಿಕ್ಸ್ ಬೋಧಿಸುತ್ತಿದ್ದಾರೆ.
ಇದನ್ನೂ ಓದಿ: Savings: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೆಚ್ಚು ಬಡ್ಡಿ, ಜೊತೆಗೆ ಅದರ ವಿವಿಧ ಪ್ರಯೋಜನಗಳೇನು ತಿಳಿಯಿರಿ…
ಹಣಕಾಸು ಆಯೋಗದ ಜವಾಬ್ದಾರಿ ಏನಿರಲಿದೆ?
ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ತೆರಿಗೆ ಆದಾಯದ ಹಂಚಿಕೆಗೆ ಸೂತ್ರ ರೂಪಿಸುವುದು ಹಣಕಾಸು ಆಯೋಗದ ಜವಾಬ್ದಾರಿ. ಐದು ವರ್ಷಕ್ಕೆಂದು ಆಯೋಗ ತೆರಿಗೆ ಹಂಚಿಕೆ ಸೂತ್ರಗಳನ್ನು ಶಿಫಾರಸು ಮಾಡುತ್ತದೆ. ಸರ್ಕಾರ ಈ ಶಿಫಾರಸುಗಳ ಆಧಾರದ ಮೇಲೆ ತೆರಿಗೆ ಹಂಚಿಕೆ ಮಾಡುತ್ತದೆ.
16ನೇ ಹಣಕಾಸು ಆಯೋಗ ಮಾಡುವ ಶಿಫಾರಸುಗಳು 2026ರ ಏಪ್ರಿಲ್ನಿಂದ ಜಾರಿ ಆಗುತ್ತವೆ. ಈಗ ನೇಮಕ ಮಾಡಲಾಗಿರುವ ಈ ಆಯೋಗವು 2025ರ ಅಕ್ಟೋಬರ್ 31ರವರೆಗೆ ಮಾತ್ರ ಅಸ್ತಿತ್ವದಲ್ಲಿರುತ್ತದೆ. ಅಷ್ಟರೊಳಗೆ ಸರ್ಕಾರಕ್ಕೆ ತೆರಿಗೆ ಹಂಚಿಕೆಯ ಸೂತ್ರಗಳನ್ನು ಶಿಫಾರಸು ಮಾಡಬೇಕಾಗುತ್ತದೆ.
ಇದನ್ನೂ ಓದಿ: Year Ender 2023: ಹಿಂಡನ್ಬರ್ಗ್ ರಿಪೋರ್ಟ್ನಿಂದ ಇಂಡಿಗೋವರೆಗೆ; 2023ರಲ್ಲಿ ಭಾರತೀಯ ಕಾರ್ಪೊರೇಟ್ ಲೋಕದ ಪ್ರಮುಖ ವಿದ್ಯಮಾನಗಳು
ಈಗ ಆಗುತ್ತಿರುವ ತೆರಿಗೆ ಹಂಚಿಕೆ ಸೂತ್ರವನ್ನು 15ನೇ ಹಣಕಾಸು ಆಯೋಗ ರೂಪಿಸಿತ್ತು. 2017ರ ನವೆಂಬರ್ನಲ್ಲಿ ಈ ಆಯೋಗದ ರಚನೆಯಾಗಿತ್ತು. ಎನ್ ಕೆ ಸಿಂಗ್ ಮುಖ್ಯಸ್ಥರಾಗಿದ್ದರು. ಇದರ ವ್ಯಾಪ್ತಿಯನ್ನು ಐದು ವರ್ಷದ ಬದಲು ಆರು ವರ್ಷಕ್ಕೆ ಹೆಚ್ಚಿಸಲಾಗಿತ್ತು. 2025-26ರವರೆಗೆ ಇದರ ಶಿಫಾರಸುಗಳು ಜಾರಿಯಲ್ಲಿರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ