ಬ್ಯಾಂಕಿಂಗ್ ಮತ್ತು ಹಣಕಾಸು ಅಕ್ರಮಗಳಿಗೆ (Banking Frauds) ಸಂಬಂಧಿಸಿ ಜಾಗೃತಿ ಮೂಡಿಸುವ ಸಲುವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡಿದೆ. ಚಿತ್ರಕಥೆ ಮೂಲಕ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಪುಸ್ತಕವೊಂದನ್ನು ಕೆಲ ಸಮಯ ಹಿಂದೆ ಆರ್ಬಿಐ ಹೊರತಂದಿತ್ತು. ವಂಚನೆಯ ನಲವತ್ತು ಮುಖಗಳನ್ನು ಅದರಲ್ಲಿ ಪರಿಚಯಿಸಿ ‘ರಾಜು ಮತ್ತು ನಲ್ವತ್ತು ಕಳ್ಳರು (Raju and the forty thieves)’ ಎಂಬ ಶೀರ್ಷಿಕೆಯಡಿ ಜಾಗೃತಿ ಮೂಡಿಸುವ ಯತ್ನ ಅದರಲ್ಲಿ ಮಾಡಲಾಗಿದೆ.
ಲಿಂಕ್ಗಳನ್ನು ಕಳುಹಿಸುವ ಮೂಲಕ ವಂಚಕರು ಹೇಗೆ ಗ್ರಾಹಕರನ್ನು ಮೋಸಗೊಳಿಸಬಹುದು ಎಂಬುದನ್ನು ಆರ್ಬಿಐ ಮೊದಲ ಚಿತ್ರಕಥೆಯಲ್ಲಿ ವಿವರಿಸಿದೆ.
ರಾಜು ಮತ್ತು ನಲ್ವತ್ತು ಕಳ್ಳರು ಭಾಗ – 1
ಒಂದು ದಿನ ರಾಜು ಎಂಬ ವ್ಯಕ್ತಿಯ ಮೊಬೈಲ್ಗೆ ಸಂದೇಶವೊಂದು ಬರುತ್ತದೆ. ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿಯನ್ನು ಎರಡು ದಿನಗಳ ಒಳಗಾಗಿ ಅಪ್ಡೇಟ್ ಮಾಡದಿದ್ದರೆ ಅಕೌಂಟ್ ಬ್ಲಾಕ್ ಆಗಲಿದೆ. ಈ ಲಿಂಕ್ ಕ್ಲಿಕ್ ಮಾಡಿ ಕೆವೈಸಿ ಅಪ್ಡೇಟ್ ಮಾಡಿ ಎಂಬ ಸಂದೇಶವಾಗಿತ್ತದು. ರಾಜು ಆ ಲಿಂಕ್ ಅನ್ನು ಕ್ಲಿಕ್ ಮಾಡುತ್ತಾರೆ. ಆದರೆ, ಕೆವೈಸಿ ಅಪ್ಡೇಟ್ ಮಾಡಲು ಸಾಧ್ಯವಾಗುವುದಿಲ್ಲ. ತಕ್ಷಣ ಅವರ ಮೊಬೈಲ್ಗೆ ಒಂದು ಕರೆ ಬರುತ್ತದೆ. ಬಳಿಕ ಸಂಭಾಷಣೆ ಹೀಗೆ ನಡೆಯುತ್ತದೆ;
ರಾಜು: ಬ್ಯಾಂಕ್ ಖಾತೆಯಲ್ಲಿರುವ ಎಲ್ಲ ಹಣ ಬ್ಲಾಕ್ ಆಗುತ್ತದೆಯೇ? ನಾನು ಕೆವೈಸಿ ಅಪ್ಡೇಟ್ ಮಾಡಬೇಕಿದೆ.
ವಂಚಕ: ನಾನು XYZ ಇಂಥ ಬ್ಯಾಂಕ್ನಿಂದ ಕರೆ ಮಾಡುತ್ತಿದ್ದೇನೆ. ಕೆವೈಸಿ ಅಪ್ಡೇಟ್ ಮಾಡುವಲ್ಲಿ ಸಮಸ್ಯೆ ಎದುರಿಸುತ್ತಿದ್ದೀರಾ?
ರಾಜು: ಹೌದು ಲಿಂಕ್ ಕೆಲಸ ಮಾಡುತ್ತಿಲ್ಲ.
ವಂಚಕ: ವೆಬ್ಸೈಟ್ ಹೆಚ್ಚಿನ ಲೋಡ್ ಎದುರಿಸುತ್ತಿರಬಹುದು. ನಾನು ಮ್ಯಾನುವಲ್ ಆಗಿ ನಿಮ್ಮ ವಿವರ ಅಪ್ಡೇಟ್ ಮಾಡುತ್ತೇನೆ. ನಿಮ್ಮ ಯೂಸರ್ನೇಮ್, ಪಾಸ್ವರ್ಡ್ ಹಾಗೂ ಒಟಿಪಿ (ವನ್ ಟೈಮ್ ಪಾಸ್ವರ್ಡ್) ಕಳುಹಿಸಿ.
ರಾಜು: ಎಲ್ಲ ವಿವರ ನಿಮಗೆ ಮೆಸೇಜ್ ಮಾಡಿದ್ದೇನೆ.
ವಂಚಕ: ನಿಮ್ಮ ಕೆವೈಸಿ ವಿವರ ಯಶಸ್ವಿಯಾಗಿ ಅಪ್ಡೇಟ್ ಮಾಡಲಾಗಿದೆ.
ರಾಜು: ಥ್ಯಾಂಕ್ ಯೂ
ಇದಾದ ಕೆಲವೇ ಕ್ಷಣಗಳಲ್ಲಿ ರಾಜು ಮೊಬೈಲ್ಗೆ 50,000 ರೂ. ಖಾತೆಯಿಂದ ಡ್ರಾ ಆಗಿರುವ ಬಗ್ಗೆ ಸಂದೇಶ ಬರುತ್ತದೆ. ರಾಜು ತಕ್ಷಣ ಅಪರಿಚಿತ ಸಂಖ್ಯೆಗೆ (ಈ ಹಿಂದೆ ಕೆವೈಸಿ ವಿವರಕ್ಕಾಗಿ ಯೂಸರ್ನೇಮ್, ಪಾಸ್ವರ್ಡ್ ಕಳುಹಿಸಿದ ಸಂಖ್ಯೆ) ಕರೆ ಮಾಡುತ್ತಾರೆ. ಆದರೆ ಆ ವ್ಯಕ್ತಿ ಕರೆ ಸ್ವೀಕಾರ ಮಾಡುವುದೇ ಇಲ್ಲ. ಆಗ ರಾಜುಗೆ ತಪ್ಪಿನ ಅರಿವಾಗುತ್ತದೆ.
ಇರಲಿ ಎಚ್ಚರ
ಹೀಗೆ ಅಪರಿಚಿತ ಸಂಖ್ಯೆಗಳಿಂದ ಬರುವ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಅಥವಾ ಆ ಲಿಂಕ್ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಿ. ಕೆವೈಸಿ ಅಪ್ಡೇಟ್ ಮಾಡಬೇಕಿದ್ದರೆ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಧಿಕೃತ ಸಿಬ್ಬಂದಿ ಜತೆ ಮಾತ್ರವೇ ವ್ಯವಹರಿಸಿ. ಯೂಸರ್ ನೇಮ್, ಪಾಸ್ವರ್ಡ್, ಒಟಿಪಿಗಳನ್ನು ಯಾವುದೇ ಕಾರಣಕ್ಕೂ ಇತರರ ಜತೆ ಹಂಚಿಕೊಳ್ಳಬೇಡಿ. ವಂಚನೆಗೆ ಒಳಗಾದಲ್ಲಿ ತಕ್ಷಣವೇ ಹತ್ತಿರದ ಸೈಬರ್ ಕ್ರೈಂ ಠಾಣೆಗೆ ಭೇಟಿ ನೀಡಿ ದೂರು ನೀಡಿ ಎಂದು ಗ್ರಾಹಕರಿಗೆ ಆರ್ಬಿಐ ಎಚ್ಚರಿಕೆ ನೀಡಿದೆ.
(ಮಾಹಿತಿ ಮತ್ತು ಕೃಪೆ – ಆರ್ಬಿಐ)
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:36 pm, Mon, 24 October 22