AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Auto Tips: ಕಾರಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕುತ್ತಿದ್ದೀರಾ? ಇಷ್ಟು ದಂಡ ಬೀಳಬಹುದು, ನಿಯಮ ತಿಳಿಯಿರಿ

ಕಾರಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಚಾಲನೆ ಮಾಡುವುದು ಕೇವಲ ಸುತ್ತಮುತ್ತಲಿನವರಿಗೆ ತೊಂದರೆ ಉಂಟುಮಾಡುವುದಷ್ಟೇ ಅಲ್ಲ, ಟ್ರಾಫಿಕ್ ನಿಯಮಗಳ ಉಲ್ಲಂಘನೆಗೂ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ 1,000ರಿಂದ 10,000ವರೆಗೆ ದಂಡ ವಿಧಿಸುವ ಅವಕಾಶವಿದೆ. ಸೈಲೆನ್ಸ್ ಝೋನ್ ಮತ್ತು ಮಾರ್ಪಡಿಸಿದ ಮ್ಯೂಸಿಕ್ ಸಿಸ್ಟಂ ಬಳಕೆಯಲ್ಲೂ ಎಚ್ಚರ ಅಗತ್ಯ.

Auto Tips: ಕಾರಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕುತ್ತಿದ್ದೀರಾ? ಇಷ್ಟು ದಂಡ ಬೀಳಬಹುದು, ನಿಯಮ ತಿಳಿಯಿರಿ
Car Music
ಮಾಲಾಶ್ರೀ ಅಂಚನ್​
| Edited By: |

Updated on: Sep 24, 2026 | 12:16 PM

Share

ಮುಖ್ಯಾಂಶಗಳು

  • ಕಾರಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕಿದರೆ ದಂಡ ಬೀಳುತ್ತಾ?
  • ಡ್ರೈವಿಂಗ್ ವೇಳೆ ಮ್ಯೂಸಿಕ್‌ಗೆ ಈ ನಿಯಮ ಗೊತ್ತಿರಲಿ!
  • ಕಾರಿನ ಮ್ಯೂಸಿಕ್‌ಗೆ ರೂ. 10 ಸಾವಿರದವರೆಗೆ ದಂಡ?

ಕಾರಿನಲ್ಲಿ (Car) ಪ್ರಯಾಣಿಸುವಾಗ ಇಷ್ಟದ ಹಾಡುಗಳನ್ನು ಕೇಳುವುದು ಬಹುತೇಕ ಎಲ್ಲರಿಗೂ ಇಷ್ಟ. ಅದರಲ್ಲೂ ದೀರ್ಘ ಪ್ರಯಾಣದ ವೇಳೆ ಮ್ಯೂಸಿಕ್ ಹಾಕಿಕೊಂಡು ಹೋಗುವವರಿದ್ದಾರೆ. ಕೆಲವರು ಕಾರಿನ ಕಿಟಕಿ ತೆರೆದು ಜೋರಾಗಿ ಹಾಡು ಹಾಕುತ್ತಾರೆ. ಇನ್ನೂ ಕೆಲವರು ದೊಡ್ಡ ಸ್ಪೀಕರ್‌, ಸಬ್‌ವೂಫರ್‌, ಆ್ಯಂಪ್ಲಿಫೈಯರ್‌ಗಳನ್ನು ಅಳವಡಿಸಿಕೊಂಡು ಕಾರಿನ ಮ್ಯೂಸಿಕ್ ಸಿಸ್ಟಂ ಅನ್ನು ಮಾರ್ಪಡಿಸುತ್ತಾರೆ. ಆದರೆ ಹೀಗೆ ಮಾಡುವುದರಿಂದ ದಂಡ ಕಟ್ಟಬೇಕಾದ ಪರಿಸ್ಥಿತಿ ಬರಬಹುದು.

ಜೋರಾಗಿ ಮ್ಯೂಸಿಕ್ ಹಾಕಿದರೆ ಏಕೆ ಸಮಸ್ಯೆ?

ಕಾರಿನಲ್ಲಿ ಅತಿಯಾದ ಶಬ್ದದಲ್ಲಿ ಮ್ಯೂಸಿಕ್ ಹಾಕುವುದರಿಂದ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗುವುದಷ್ಟೇ ಅಲ್ಲ, ಚಾಲಕನ ಗಮನವೂ ಬೇರೆಡೆಗೆ ಹರಿಯಬಹುದು. ಕಾರಿನೊಳಗೆ ಮ್ಯೂಸಿಕ್ ತುಂಬಾ ಜೋರಾಗಿದ್ದರೆ ಸುತ್ತಲಿನ ವಾಹನಗಳ ಹಾರ್ನ್‌ ಕೇಳಿಸದೇ ಹೋಗಬಹುದು. ಅಷ್ಟೇ ಅಲ್ಲ, ಆ್ಯಂಬುಲೆನ್ಸ್ ಅಥವಾ ಅಗ್ನಿಶಾಮಕ ವಾಹನದ ಸೈರನ್‌ ಕೂಡ ಕೇಳಿಸದಿರುವ ಸಾಧ್ಯತೆ ಇದೆ. ಇದರಿಂದ ತುರ್ತು ಸಂದರ್ಭದಲ್ಲಿ ಅಪಘಾತದ ಅಪಾಯ ಹೆಚ್ಚಬಹುದು.

ಎಷ್ಟು ದಂಡ ಬೀಳಬಹುದು?

ವರದಿ ಪ್ರಕಾರ, ಶಬ್ದ ಮಾಲಿನ್ಯ ಮತ್ತು ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದರೆ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 190(2) ಅಡಿಯಲ್ಲಿ ಕ್ರಮ ಕೈಗೊಳ್ಳಬಹುದು. ಮೊದಲ ಬಾರಿ ಸಿಕ್ಕಿಬಿದ್ದಾಗ ರೂ. 1,000ರಿಂದ ರೂ. 10,000ವರೆಗೆ ದಂಡ ವಿಧಿಸುವ ಅವಕಾಶವಿದೆ. ಜೋರಾದ ಮ್ಯೂಸಿಕ್‌ನಿಂದ ಚಾಲನೆಗೆ ಅಡ್ಡಿಯಾಗುತ್ತಿದೆ ಎಂದು ಪೊಲೀಸರು ಪರಿಗಣಿಸಿದರೆ, ಸೆಕ್ಷನ್ 184 ಅಡಿಯಲ್ಲಿಯೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಆದರೆ ದಂಡದ ಮೊತ್ತ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನುಗುಣವಾಗಿ ಬದಲಾಗಬಹುದು.

ಸೈಲೆನ್ಸ್ ಝೋನ್‌ನಲ್ಲಿ ಹೆಚ್ಚು ಎಚ್ಚರ

ಆಸ್ಪತ್ರೆ, ಶಾಲೆ, ಕಾಲೇಜು ಮತ್ತು ನ್ಯಾಯಾಲಯದ ಸುತ್ತಮುತ್ತಲಿನ ಪ್ರದೇಶಗಳನ್ನು ಸೈಲೆನ್ಸ್ ಝೋನ್ ಎಂದು ಗುರುತಿಸಲಾಗುತ್ತದೆ. ಇಂತಹ ಪ್ರದೇಶಗಳಲ್ಲಿ ಶಬ್ದಕ್ಕೆ ಸಂಬಂಧಿಸಿದ ನಿಯಮಗಳು ಹೆಚ್ಚು ಕಟ್ಟುನಿಟ್ಟಾಗಿರುತ್ತವೆ. ವರದಿಯಲ್ಲಿ ಸೈಲೆನ್ಸ್ ಝೋನ್‌ಗಳಲ್ಲಿ ಹಗಲಿನ ವೇಳೆ 50 ಡೆಸಿಬಲ್ ಮತ್ತು ರಾತ್ರಿ 40 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದದ ಮಿತಿಯನ್ನು ಉಲ್ಲೇಖಿಸಲಾಗಿದೆ. ಕಾರಿನ ಮ್ಯೂಸಿಕ್ ಹೊರಗಿನವರಿಗೆ ಸ್ಪಷ್ಟವಾಗಿ ಕೇಳಿಸುವಷ್ಟು ಜೋರಾಗಿದ್ದರೆ ಕ್ರಮ ಎದುರಾಗಬಹುದು.

Mahindra Thar OG: ಹೊಸ ಅವತಾರದಲ್ಲಿ ಮಹೀಂದ್ರ ಥಾರ್ OG ಬಿಡುಗಡೆ; ವಿನ್ಯಾಸ, ಎಂಜಿನ್, ಸುರಕ್ಷತೆಯಲ್ಲಿ ದೊಡ್ಡ ಬದಲಾವಣೆ

ಮಾರ್ಪಡಿಸಿದ ಮ್ಯೂಸಿಕ್ ಸಿಸ್ಟಂ ಕೂಡ ಸಮಸ್ಯೆಯಾಗಬಹುದು

ಕಾರಿನಲ್ಲಿರುವ ಕಂಪನಿಯ ಮೂಲ ಮ್ಯೂಸಿಕ್ ಸಿಸ್ಟಂ ಸಾಮಾನ್ಯವಾಗಿ ವಾಹನದ ನಿಗದಿತ ಮಾನದಂಡಗಳಿಗೆ ಅನುಗುಣವಾಗಿರುತ್ತದೆ. ಆದರೆ ನಂತರ ದೊಡ್ಡ ಆ್ಯಂಪ್ಲಿಫೈಯರ್‌, ಸಬ್‌ವೂಫರ್‌ ಅಥವಾ ಹೆಚ್ಚುವರಿ ಸ್ಪೀಕರ್‌ಗಳನ್ನು ಅಳವಡಿಸಿ ಶಬ್ದವನ್ನು ಹೆಚ್ಚಿಸಿದರೆ ಸಮಸ್ಯೆಯಾಗಬಹುದು. ಯಾವುದೇ ಮಾರ್ಪಾಡು ಮಾಡುವ ಮುನ್ನ ಅದು ವಾಹನದ ನಿಯಮಗಳಿಗೆ ಅನುಗುಣವಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಅಗತ್ಯ.

ದಂಡ ತಪ್ಪಿಸಲು ಏನು ಮಾಡಬೇಕು?

ಕಾರಿನಲ್ಲಿ ಮ್ಯೂಸಿಕ್ ಕೇಳುವಾಗ ಅದರ ಶಬ್ದವು ರಸ್ತೆಯಲ್ಲಿರುವ ಇತರರಿಗೆ ತೊಂದರೆಯಾಗದಷ್ಟು ಇರಲಿ. ಸಾಧ್ಯವಾದಷ್ಟು ಕಿಟಕಿಗಳನ್ನು ಮುಚ್ಚಿಕೊಂಡು ಮ್ಯೂಸಿಕ್ ಕೇಳುವುದು ಉತ್ತಮ. ಸೈಲೆನ್ಸ್ ಝೋನ್‌ಗಳಲ್ಲಿ ಮ್ಯೂಸಿಕ್ ಆಫ್ ಮಾಡುವುದು ಅಥವಾ ತುಂಬಾ ಕಡಿಮೆ ಶಬ್ದದಲ್ಲಿ ಕೇಳುವುದು ಸೂಕ್ತ. ಮುಖ್ಯವಾಗಿ, ವಾಹನ ಚಾಲನೆ ಮಾಡುವಾಗ ಸುತ್ತಲಿನ ಹಾರ್ನ್‌, ಸೈರನ್‌ ಮತ್ತು ಇತರ ವಾಹನಗಳ ಶಬ್ದ ಕೇಳಿಸುವಷ್ಟು ಪ್ರಮಾಣದಲ್ಲಿ ಮಾತ್ರ ಮ್ಯೂಸಿಕ್ ಇರಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More