ವಾಷಿಂಗ್ಟನ್, ಮಾರ್ಚ್ 25: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸುಂಕ ಸಮರ ಮುಂದುವರಿಸಿದ್ದಾರೆ. ಏಪ್ರಿಲ್ 2ರಿಂದ ಅವರ ಪ್ರತಿಸುಂಕ (Retaliatory Tariffs) ಕ್ರಮ ಜಾರಿಗೆ ಬರುತ್ತಿದೆ. ಈಗ ವೆನುಜುವೇಲಾ ದೇಶದ ವಿರುದ್ಧ ಟ್ರಂಪ್ ಸುಂಕಾಸ್ತ್ರ ಹರಿಬಿಟ್ಟಿದ್ದಾರೆ. ಮಧ್ಯ ಅಮೆರಿಕದಲ್ಲಿರುವ ವೆನುಜುವೇಲಾ (Venezuela) ದೇಶದಿಂದ ಯಾರೇ ತೈಲ ಖರೀದಿಸಿದರೂ, ಆ ದೇಶದ ವಿರುದ್ಧ ಶೇ. 25ರಷ್ಟು ಸುಂಕ ಹೇರಲಾಗುವುದು ಎಂದು ಅಮೆರಿಕ ಅಧ್ಯಕ್ಷರು ಬೆದರಿಕೆ ಹಾಕಿದ್ದಾರೆ. ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ನಲ್ಲಿ (Truth Social) ಪೋಸ್ಟ್ ಹಾಕಿದ್ದು, ಏಪ್ರಿಲ್ 2ರಿಂದ ಈ ಕ್ರಮ ಜಾರಿಗೆ ಬರುತ್ತದೆ ಎಂದಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ರೂತ್ ಸೋಷಿಯಲ್ ಪೋಸ್ಟ್ನಲ್ಲಿ ವೆನುಜುವೇಲಾ ವಿರುದ್ಧ ತಮಗ್ಯಾಕೆ ಕೋಪ ಎಂಬುದನ್ನು ವಿವರಿಸಿದ್ದಾರೆ. ವೆನುಜುವೇಲಾ ದೇಶವು ಸಾವಿರಾರು ಅಪರಾಧಿಗಳು, ಲೂಟಿಕೋರರು, ಗ್ಯಾಂಗ್ಸ್ಟರ್ಗಳನ್ನು ಅಮೆರಿಕಕ್ಕೆ ಕಳುಹಿಸಿದೆ ಎನ್ನುವುದು ಟ್ರಂಪ್ ಅವರ ಆರೋಪ.
ಭೂಗತಪಾತಕಿಗಳು, ಕೊಲೆಗಾರರು, ವಂಚಕರನ್ನು ಲಕ್ಷಾಂತರ ಸಂಖ್ಯೆಯಲ್ಲಿ ವೆನುಜುವೇಲಾ ಉದ್ದೇಶಪೂರ್ವಕವಾಗಿ ಅಮೆರಿಕಕ್ಕೆ ಕಳುಹಿಸಿದೆ. ಅಮೆರಿಕಕ್ಕೆ ಬಂದ ಗ್ಯಾಂಗುಳಲ್ಲಿ ಟ್ರೆನ್ ಡೀ ಅರಾಗುವಾ ಎನ್ನುವುದೂ ಒಂದು. ವಿದೇಶೀ ಭಯೋತ್ಪಾದಕ ಸಂಸ್ಥೆಗಳ ಪಟ್ಟಿಯಲ್ಲಿ ಇದೂ ಇದೆ. ಈ ಅಂಶಗಳನ್ನು ಉಲ್ಲೇಖಿಸಿರುವ ಟ್ರಂಪ್ ಅವರು, ಇವರೆಲ್ಲರನ್ನೂ ವೆನುಜುವೇಲಾಗೆ ಮರಳಿಸುವ ಪ್ರಕ್ರಿಯೆಯಲ್ಲಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಣ್ಣ ಸಾಲಗಳಿಗೆ ಹೆಚ್ಚುವರಿ ಶುಲ್ಕ ಬೇಡ; ಪಿಎಸ್ಎಲ್ ಗುರಿ ಮುಟ್ಟಬೇಕು: ಬ್ಯಾಂಕುಗಳಿಗೆ ಆರ್ಬಿಐ ತಾಕೀತು
‘ಅಮೆರಿಕ ಹಾಗೂ ಅದರ ಸ್ವಾತಂತ್ರ್ಯದ ಕಲ್ಪನೆಗಳಿಗೆ ವೆನುಜುವೇಲಾ ಮಾರಕ ಎನಿಸಿದೆ. ಹೀಗಾಗಿ, ಈ ದೇಶದಿಂದ ಯಾರಾದರೂ ಕೂಡ ತೈಲವನ್ನೇ ಆಗಲೀ ಅಥವಾ ಅನಿಲವನ್ನೇ ಆಗಲಿ ಖರೀದಿಸಿದರೆ ಆ ದೇಶಕ್ಕೆ ಶೇ. 25ರಷ್ಟು ಟ್ಯಾರಿಫ್ ಹಾಕಲಾಗುತ್ತದೆ’ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.
ತೈಲ ಮತ್ತು ಅನಿಲವು ವೆನುಜುವೇಲಾದ ಪ್ರಮುಖ ರಫ್ತು ಸಂಪತ್ತು. ವಿಶ್ವದ ಹಲವು ದೇಶಗಳು ಇಲ್ಲಿಂದ ಕಚ್ಛಾ ತೈಲ ಖರೀದಿಸುತ್ತವೆ. ಆದರೆ, ವೆನುಜುವೇಲಾದ ಒಟ್ಟು ತೈಲ ರಫ್ತಿನಲ್ಲಿ ಶೇ. 68ರಷ್ಟು ಭಾಗವು ಚೀನಾಗೆ ಹೋಗುತ್ತದೆ. ಹೀಗಾಗಿ, ಟ್ರಂಪ್ ಅವರ ಅಸ್ತ್ರ ನೇರವಾಗಿ ಚೀನಾ ಮೇಲೆಯೇ ಬಿಟ್ಟಂತಿದೆ.
ಇದನ್ನೂ ಓದಿ: ಸರ್ಕಾರದಿಂದ ಎಸ್ಯುಸಿ ದರ ಮನ್ನಾ ಸಾಧ್ಯತೆ; ಏರ್ಟೆಲ್, ಜಿಯೋ, ವೊಡಾಫೋನ್ಗೆ ಸಾವಿರಾರು ಕೋಟಿ ರೂ ಉಳಿತಾಯ
ಚೀನಾದ ಸರಕುಗಳ ಮೇಲೆ ಟ್ರಂಪ್ ಅವರು ಶೇ. 20ರಷ್ಟು ಸುಂಕ ಹೇರಿದ್ದಾರೆ. ಈಗ ವೆನುಜುವೇಲಾದಿಂದ ಚೀನಾ ತೈಲ ಖರೀದಿ ಮುಂದುವರಿಸಿದಲ್ಲಿ ಹೆಚ್ಚುವರಿ ಶೇ. 25ರಷ್ಟು ಸುಂಕ ಹೇರಲಿದೆ ಅಮೆರಿಕ. ಹೀಗಾದಲ್ಲಿ, ಚೀನಾದ ಸರಕುಗಳು ಅಮೆರಿಕಕ್ಕೆ ರಫ್ತಾಗುವುದು ಬಹುತೇಕ ನಿಂತಂತಾಗುತ್ತದೆ.
ವೆನುಜುವೇಲಾ ದೇಶದ ತೈಲಕ್ಕೆ ಗ್ರಾಹಕರಾಗಿರುವ ದೇಶಗಳಲ್ಲಿ ಭಾರತವೂ ಇದೆ. ಆದರೆ, ಭಾರತದ ಒಟ್ಟಾರೆ ತೈಲ ಆಮದಿನಲ್ಲಿ ವೆನಿಜುವೆಲಾದ ಪಾಲು ಶೇ. 1.5ರಷ್ಟು ಮಾತ್ರ. ಹೀಗಾಗಿ, ಭಾರತಕ್ಕೆ ವೆನುಜುವೇಲಾದಿಂದ ತೈಲ ಖರೀದಿ ಕೈಬಿಟ್ಟರೂ ಯಾವ ಸಮಸ್ಯೆಯಾಗದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ