ಜೂನ್​ 1ರಿಂದ ಹಾಲ್​ಮಾರ್ಕ್​ ಕಡ್ಡಾಯ.. ಚಿನ್ನದ ಪರಿಶುದ್ಧತೆ, ಗುಣಮಟ್ಟ ದೃಢೀಕರಿಸಲು ಹಾಲ್​ಮಾರ್ಕ್​ ಅತ್ಯವಶ್ಯಕ!

ಜೂನ್ 1, 2021ರಿಂದ ಚಿನ್ನದ ಆಭರಣಗಳಿಗೆ ಮತ್ತು ಕಲಾಕೃತಿಗಳಿಗೆ ಹಾಲ್ ಮಾರ್ಕಿಂಗ್ ಕಡ್ಡಾಯಗೊಳಿಸುವುದಾಗಿ ಸರ್ಕಾರ ಮಂಗಳವಾರ ತಿಳಿಸಿದೆ.

  • TV9 Web Team
  • Published On - 8:20 AM, 14 Apr 2021
ಜೂನ್​ 1ರಿಂದ ಹಾಲ್​ಮಾರ್ಕ್​ ಕಡ್ಡಾಯ.. ಚಿನ್ನದ ಪರಿಶುದ್ಧತೆ, ಗುಣಮಟ್ಟ ದೃಢೀಕರಿಸಲು ಹಾಲ್​ಮಾರ್ಕ್​ ಅತ್ಯವಶ್ಯಕ!
ಸಾಂದರ್ಭಿಕ ಚಿತ್ರ

ದೆಹಲಿ: ಜೂನ್ 1, 2021ರಿಂದ ಚಿನ್ನದ ಆಭರಣಗಳಿಗೆ ಮತ್ತು ಕಲಾಕೃತಿಗಳಿಗೆ ಹಾಲ್ ಮಾರ್ಕಿಂಗ್ ಕಡ್ಡಾಯಗೊಳಿಸುವುದಾಗಿ ಸರ್ಕಾರ ಮಂಗಳವಾರ ತಿಳಿಸಿದೆ. ಚಿನ್ನದ ಗುಣಮಟ್ಟ ಕಾಪಾಡುವ ಸಲುವಾಗಿ ಹಾಲ್​ಮಾರ್ಕಿಂಗ್ ಅನುಸರಿಸುವುದು ಅದರ ಪರಿಶುದ್ಧತೆಯ ದೃಷ್ಟಿಯಿಂದ ಅತ್ಯುತ್ತಮ ನಿರ್ಧಾರ ಹಾಗೂ ಬೆಲೆ ಬಾಳುವ ಲೋಹವಾದ್ದರಿಂದ ಗುಣಮಟ್ಟ ಕಾಪಾಡಲು ಇದು ಅತ್ಯವಶ್ಯಕವೂ ಹೌದು.

2021 ರ ಜನವರಿ 15 ರಿಂದ ದೇಶಾದ್ಯಂತ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರವು 2019 ರ ನವೆಂಬರ್‌ನಲ್ಲಿ ಘೋಷಣೆ ಮಾಡಿತ್ತು. ಬ್ಯುರೋ ಆಫ್ ಇಂಡಿಯನ್ ಸ್ಯಾಂಡರ್ಡ್​ನಲ್ಲಿ (ಬಿಐಎಸ್) ಹಾಲ್ ಮಾರ್ಕಿಂಗ್ ಅಳವಡಿಸಿಕೊಳ್ಳಲು ನೋಂದಾಯಿಸಲು ಒಂದು ವರ್ಷ ಕಾಲಾವಕಾಶವನ್ನು ವ್ಯಾಪಾರಿಗಳಿಗೆ ನೀಡಿತ್ತು. ಆದರೆ ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಆಭರಣಕಾರರು ಹೆಚ್ಚಿನ ಸಮಯವನ್ನು ಕೇಳಿದ್ದರಿಂದ ಜೂನ್ 1 ರವರೆಗೆ ಅಂದರೆ ನಾಲ್ಕು ತಿಂಗಳು ಗಡುವನ್ನು ವಿಸ್ತರಿಸಲಾಯಿತು.

ಬಿಐಎಸ್ ಮಹಾನಿರ್ದೇಶಕ ಪ್ರಮೋದ್ ಕುಮಾರ್ ತಿವಾರಿ ಅವರು, ಜೂನ್ 1ರಿಂದ ನಾವು ಚಿನ್ನಕ್ಕೆ ಹಾಲ್ ಮಾರ್ಕಿಂಗ್ ಅಳವಡಿಕೆ ಕಡ್ಡಾಯಗೊಳಿಸಲು ಸಿದ್ಧರಿದ್ದೇವೆ. ಹಾಗೂ 34,647 ಆಭರಣಗಳನ್ನು ಬಿಐಎಸ್ ಜೊತೆ ನೋಂದಣಿ ಮಾಡಿದ್ದೇವೆ ಎಂದರು. ಬರುವ 2 ತಿಂಗಳಲ್ಲಿ 2 ಲಕ್ಷದವರೆಗೆ ಆಭರಣವನ್ನು ನೋಂದಣಿಗೆ ಒಳಪಡಿಸಲಿದ್ದೇವೆ ಎಂದು ಮಾಹಿತಿ ಹಂಚಿಕೊಂಡರು.

ಜೂನ್ ತಿಂಗಳಿನಿಂದ 14, 18, 22 ಕ್ಯಾರೆಟ್ ಚಿನ್ನದ ಮೇಲೆ ಹಾಲ್​ಮಾರ್ಕಿಂಗ್​ ಮಾಡಲಾಗುವುದು. ಬ್ರ್ಯಾಂಡೆಡ್ ಚಿನ್ನಾಭರಣ ಅಂಗಡಿಗಳಲ್ಲಿ ಈಗಾಗಲೇ ಹಾಲ್​ಮಾರ್ಕ್​ ಸಾಮಾನ್ಯವಾಗಿದೆ. ಸರ್ಕಾರ ಒಟ್ಟು 861 ಹಾಲ್​ಮಾರ್ಕಿಂಗ್​ ಕೇಂದ್ರಗಳನ್ನು ತೆರೆಯಲಿದ್ದು, ಮೊದಲಿಗೆ ಮೆಟ್ರೋ ನಗರಗಳಲ್ಲಿ ಚಿನ್ನದ ಹಾಲ್​ಮಾರ್ಕಿಂಗ್​ ಕಡ್ಡಾಯಗೊಳಿಸಲಿದೆ. ನಂತರದಲ್ಲಿ ಉಳಿದ ಕಡೆ ಕಡ್ಡಾಯವಾಗಲಿದೆ.

ಬಿಐಎಸ್ ಈಗಾಗಲೇ ಹಾಲ್ ಮಾರ್ಕಿಂಗ್ ಸ್ಕೀಮನ್ನು ಆರಂಭಿಸಿದ್ದು ಪ್ರಸ್ತುತ ಶೇ.‌40ರಷ್ಟು ಚಿನ್ನವನ್ನು ಹಾಲ್​ಮಾರ್ಕಿಂಗ್ ಮಾಡಲಾಗಿದೆ. ಬಿಐಎಸ್​ನ ಪ್ರಕಾರ ಹಾಲ್​ಮಾರ್ಕ್​ನಿಂದಾಗಿ ಕೆಳಮಟ್ಟದ ಚಿನ್ನ ನೀಡಿ ಜನರನ್ನು ಮೋಸಗೊಳಿಸುವುದನ್ನು ತಡೆಯಬಹುದು. ಜೊತೆಗೆ ಗ್ರಾಹಕರಿಗೆ ಪರಿಶುದ್ಧತೆಯ ಚಿನ್ನವನ್ನು ಪಡೆಯಲು ಸಹಾಯಕವಾಗುತ್ತದೆ.

ಭಾರತವು ಅತಿ ಹೆಚ್ಚು ಚಿನ್ನವನ್ನು ಆಮದು ಮಾಡಿಕೊಳ್ಳುವ ದೇಶವಾಗಿದ್ದು, ವಾರ್ಷಿಕವಾಗಿ 700-800 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ. ಚಿನ್ನದಲ್ಲಿ ಹಾಲ್​ಮಾರ್ಕಿಂಗ್​ ಇದ್ದರೆ ಗ್ರಾಹಕರು ಮರು ಮಾರಾಟ ಮಾಡಲು ಹೊರಟಾಗ ಮಾರುಕಟ್ಟೆ ದರವನ್ನೇ ಪಡೆಯಬಹುದು. ಹೀಗಾಗಿ ಚಿನ್ನದಲ್ಲಿ ಪರಿಶುದ್ಧತೆಯ ಜತೆಗೆ ಗುಣಮಟ್ಟವನ್ನು ದೃಢಪಡಿಸಿಕೊಳ್ಳಲು ಹಾಲ್​ಮಾರ್ಕ್​ ಅತ್ಯವಶ್ಯಕ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ ಹೀಗಿದೆ
22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,400 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯ ನಂತರ 150 ರೂಪಾಯಿಯಷ್ಟು ದರ ಇಳಿಕೆ ಕಂಡಿದೆ. 24 ಕ್ಯಾರೆಟ್​ನ 10 ಗ್ರಾಂ ಚಿನ್ನ 160 ರೂಪಾಯಿ ಇಳಿಕೆಯ ನಂತರ 47,350 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲಿಯೂ ಕೊಂಚ ಇಳಿಕೆ ಕಂಡು ಬಂದಿದ್ದು, 1 ಕೆಜಿ ಬೆಳ್ಳಿ 900 ರೂಪಾಯಿ ಇಳಿಕೆ ಕಂಡಿದೆ. ಇದೀಗ ದರ 66,300 ರೂಪಾಯಿ ಆಗಿದೆ.

ಇದನ್ನೂ ಓದಿ: Gold Rate Today: ಯುಗಾದಿ ಹಬ್ಬದ ಶುಭ ದಿನದಂದು ಚಿನ್ನ ಕೊಳ್ಳುವುದಾದರೆ ದರ ಹೀಗಿದೆ!

Gold Rate Today: ಯುಗಾದಿ ಹಬ್ಬಕ್ಕೆ ಚಿನ್ನದ ಉಡುಗೊರೆ; ಖರೀದಿಸುವ ಆಸೆ ಇದ್ದರೆ ದರ ವಿವರ ಇಲ್ಲಿದೆ!